ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಡಾ.ಬಿ. ಆರ್ ಅಂಬೇಡ್ಕರ್ ಪುಣ್ಯತಿಥಿಯ ಪ್ರಯುಕ್ತ ಮಹಾಪರಿನಿರ್ವಾಣ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಸಂಸ್ಥೆಯ ಹಳೆಯ ವಿದ್ಯಾರ್ಥಿ ಹಾಗೂ ಪುತ್ತೂರಿನ ವಕೀಲ ಶ್ರೀ ತೇಜಸ್ ಕೊಂಬೆಟ್ಟು ಮಹಾಪರಿನಿರ್ವಾಣ ದಿನದ ಮಹತ್ವದ ಕುರಿತು ಮಾತನಾಡಿ, ಡಾ.ಬಿ. ಆರ್ ಅಂಬೇಡ್ಕರ್ ರವರ ಜೀವನ ಶೈಲಿ, ಅವರ ರಾಷ್ಟ್ರೀಯ ಚಿಂತನೆಗಳು ಎಲ್ಲರಿಗೂ ಸ್ಪೂರ್ತಿ ಎಂದರು. ಅವರು ಉತ್ತಮ ನ್ಯಾಯವಾದಿ ಆಗಿದ್ದು, ಸಮಾಜದಲ್ಲಿದ್ದ ಲಿಂಗ ತಾರತಮ್ಯದ ಕುರಿತಾಗಿ ಧ್ವನಿ ಎತ್ತಿದವರಲ್ಲಿ ಒಬ್ಬರಾಗಿದ್ದಾರೆ. ಜೊತೆಗೆ ರಾಷ್ಟ್ರ ವಿಭಜನೆಯ ಸಂದರ್ಭದಲ್ಲಿ ತಮ್ಮ ನಿಲುವನ್ನು ಪ್ರತಿಪಾದಿಸುತ್ತಾ ವಿಶೇಷವಾದ ಹೋರಾಟ ನಡೆಸಿದವರು ಎಂದು ಹೇಳಿದರು.
ವೇದಿಕೆಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲೆ ಅಕ್ಷತಾ ಎ.ಪಿ., ಮಹಾವಿದ್ಯಾಲಯದ ಎಸ್ ಸಿ. ಎಸ್. ಟಿ. ಸಮಿತಿಯ ಸಂಘಟಕರಾದ ಕು. ಶೈನಿ ವಿಜೇತಾ ಮತ್ತು ತಿಲಕ್ ಟಿ. ಉಪಸ್ಥಿತರಿದ್ದರು. ದ್ವಿತೀಯ ಬಿ.ಎ.ಎಲ್.ಎಲ್.ಬಿ. ವಿದ್ಯಾರ್ಥಿನಿಯರಾದ ಕು. ಶ್ರದ್ಧಾ ಪಂಡಿತ್ ಪ್ರಾರ್ಥಿಸಿ, ಕು.ಅಕ್ಷತಾ ಸ್ವಾಗತಿಸಿ, ನಿರೂಪಿಸಿದರು. ಕು.ವರ್ಷಾ ವಂದಿಸಿದರು. ಕಾನೂನು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.