ನೆಲ್ಯಾಡಿ: ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದ ರಾಮನಗರದಲ್ಲಿರುವ ನಾವಲ್ಲಿ ಶ್ರೀ ನಾಗದೇವರು, ಅಮೆತ್ತಿಮಾರುಗುತ್ತು ಶ್ರೀ ರಕ್ತೇಶ್ವರಿ, ಶ್ರೀ ಗುಳಿಗ ದೈವ, ನಾವಲ್ಲಿ ಶ್ರೀ ಪಂಜುರ್ಲಿ, ಶ್ರೀ ಕಲ್ಲುರ್ಟಿ ಮತ್ತು ಪಾತ್ರಾಜೆ ಶ್ರೀ ಪಂಜುರ್ಲಿ ದೈವಗಳ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಕೆಮ್ಮಿಂಜೆ ಶ್ರೀ ನಾಗೇಶ ತಂತ್ರಿಗಳ ಶುಭಾಶೀರ್ವಾದದೊಂದಿಗೆ ವೆಂಕಟೇಶ ಭಟ್‌ರವರ ಮಾರ್ಗದರ್ಶನದೊಂದಿಗೆ ಶ್ರೀವತ್ಸ ಭಟ್‌ರವರ ವೈದಿಕ ನೇತೃತ್ವದಲ್ಲಿ ಡಿ.9ರಂದು ನಡೆಯಿತು. ವಾರ್ಷಿಕೋತ್ಸವದ ಅಂಗವಾಗಿ ಭಜನೆ, ಯಕ್ಷಗಾನ ತಾಳಮದ್ದಳೆ, ಸನ್ಮಾನ ಕಾರ್ಯಕ್ರಮವೂ ನಡೆಯಿತು.
ಬೆಳಿಗ್ಗೆ ಶ್ರೀ ಮಹಾಗಣಪತಿ ಹೋಮ, ನಂತರ ನಾವಲ್ಲಿ ಶ್ರೀ ನಾಗದೇವರಿಗೆ ತಂಬಿಲ ಸೇವೆ ನಡೆಯಿತು. ನಂತರ ಪಾತ್ರಾಜೆ ಶ್ರೀ ಪಂಜುರ್ಲಿ ದೈವ, ನಾವಲ್ಲಿ ಶ್ರೀ ಪಂಜುರ್ಲಿ, ಶ್ರೀ ಕಲ್ಲುರ್ಟಿ ದೈವ, ಅಮೆತ್ತಿಮಾರುಗುತ್ತು ಶ್ರೀ ರಕ್ತೇಶ್ವರಿ, ಶ್ರೀ ಗುಳಿಗ ದೈವಗಳಿಗೆ ತಂಬಿಲ ಸೇವೆ ನಡೆಯಿತು. ಮಧ್ಯಾಹ್ನ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ಬೆಳಿಗ್ಗೆ ಕೌಕ್ರಾಡಿ ಗ್ರಾಮದ ದೋಂತಿಲ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಗೌರವಾರ್ಪಣೆ:
ತಲೆಮಾರುಗಳಿಂದ ಶ್ರೀ ರಕ್ತೇಶ್ವರಿ ಪರಿವಾರ ದೈವಗಳ ವೈದಿಕ ಸೇವಾ ಕಾರ್ಯಕ್ರಮ ಮಾಡಿಕೊಂಡು ಬಂದಿರುವ ಗಡಿಗಲ್ಲು ವೈದಿಕ ಮನೆತನದ ವೆಂಕಟೇಶ ಭಟ್‌ರವರಿಗೆ ಈ ಸಂದರ್ಭದಲ್ಲಿ ಗೌರವಾರ್ಪಣೆ ಮಾಡಲಾಯಿತು. ಅಮೆತ್ತಿಮಾರುಗುತ್ತು ಕುಟುಂಬದ ಹಿರಿಯರಾದ ಕೊಂಬಿಲ ಉಗ್ಗಪ್ಪ ಶೆಟ್ಟಿ, ನಾಲ್ಗುತ್ತು ರಮೇಶ ಗೌಡ ಹಾಗೂ ಕೂಡುಕಟ್ಟಿನ ಪ್ರಮುಖರು ಸೇರಿ ವೆಂಕಟೇಶ ಭಟ್‌ರವರಿಗೆ ಶಾಲು, ಹಾರಾರ್ಪಣೆ, ಸ್ಮರಣಿಕೆ, ನೆನಪಿನ ಕಾಣಿಕೆ, ಫಲ ಪುಷ್ಪಗಳನ್ನು ನೀಡಿ ಗೌರವಿಸಿ ಆಶೀರ್ವಾದ ಪಡೆದುಕೊಂಡರು.
ಯಕ್ಷ ಸನ್ಮಾನ:
ಖ್ಯಾತ ಯಕ್ಷಗಾನ ಕಲಾವಿದ ದಿವಾಕರ ಆಚಾರ್ಯ ಹಳೆನೇರೆಂಕಿಯವರಿಗೆ ದೈವಸ್ಥಾನದ ವತಿಯಿಂದ ಯಕ್ಷ ಸನ್ಮಾನ ನಡೆಯಿತು. ದಿವಾಕರ ಆಚಾರ್ಯರಿಗೆ ವಿನಾಯಕ ಯಕ್ಷಗಾನ ಮಂಡಳಿಯ ಮಾಜಿ ಅಧ್ಯಕ್ಷ, ಹಿರಿಯ ಕಲಾವಿದ ದಿವಂಗತ ವಾಸಪ್ಪ ಗೌಡರ ಸ್ಮರಣಾರ್ಥ ಅವರ ಪುತ್ರ ಯಶೋಧರ ಗೌಡ ನಾಲ್ಗುತ್ತುರವರ ಉಪಸ್ಥಿತಿಯಲ್ಲಿ ಜಯರಾಮ ಗೌಡ ನಾಲ್ಗುತ್ತುರವರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಸನ್ಮಾನಿತರನ್ನು ಪರಿಚಯಿಸಿ ಅಭಿನಂದನೆ ಸಲ್ಲಿಸಿದ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಉಪನ್ಯಾಸಕ ಗುಡ್ಡಪ್ಪ ಬಲ್ಯರವರು, ದಿವಾಕರ ಆಚಾರ್ಯರವರು ನಡೆ ನುಡಿಯಲ್ಲಿ ಸಂಸ್ಕಾರ ಬೆಳೆಸಿಕೊಂಡು ವಿನಯವಂತರಾಗಿ ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದಾರೆ. ಯಕ್ಷಗಾನದ ಹಿಮ್ಮೇಳ ಮತ್ತು ಮುಮ್ಮೇಳದಲ್ಲೂ ಸಾಧನೆಯನ್ನು ಮಾಡಿದ್ದಾರೆ. ಯಕ್ಷಗಾನದ ಯಾವುದೇ ಪಾತ್ರಗಳನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿ ಪಾತ್ರಕ್ಕೆ ಜೀವ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ. ವೃತ್ತಿಯೊಂದಿಗೆ ಯಕ್ಷಗಾನವನ್ನು ಪ್ರವೃತ್ತಿಯನ್ನಾಗಿ ಮಾಡಿಕೊಂಡು ಕಲಾ ಸೇವೆ ಮಾಡುತ್ತಿರುವ ದಿವಾಕರ ಆಚಾರ್ಯರನ್ನು ದೈವಗಳ ಸನ್ನಿಧಿಯಲ್ಲಿ ಸನ್ಮಾನಿಸುತ್ತಿರುವುದು ಅತ್ಯಂತ ಯೋಗ್ಯವಾಗಿದೆ ಎಂದರು. ಸನ್ಮಾನ ಸ್ವೀಕರಿಸಿದ ದಿವಾಕರ ಆಚಾರ್ಯರವರು ಮಾತನಾಡಿ, ಶ್ರೀ ದೈವಗಳ ವಾರ್ಷಿಕ ಪ್ರತಿಷ್ಠಾ ದಿನಾಚರಣೆಯಂದು ಈ ಯಕ್ಷ ವೇದಿಕೆಯಲ್ಲಿ ಸನ್ಮಾನಿಸುತ್ತಿರುವುದು ನನ್ನ ಜೀವನದ ಯೋಗವಾಗಿದೆ. ನನ್ನ ಹಿರಿಯರು ಮಾಡಿದ ಸತ್ಕರ್ಮದ ಫಲವನ್ನು ನಾನು ಪಡೆಯುತ್ತಾ ಇದ್ದೇನೆ. ಯಕ್ಷಗಾನವನ್ನು ಒಂದು ಸೇವೆ ಎನ್ನುವ ರೀತಿಯಲ್ಲಿ ನಾನು ಮತ್ತು ನನ್ನ ಸಹೋದರರು ಮಾಡುತ್ತಾ ಬಂದಿದ್ದೇವೆ. ನೀವು ಮಾಡಿದ ಸನ್ಮಾನ ಕಲಾಮಾತೆಗೆ ಮಾಡಿದ ಗೌರವ ಎಂದು ಭಾವಿಸಿ ಸ್ವೀಕರಿಸಿದ್ದೇನೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಮೆತ್ತಿಮಾರುಗುತ್ತು ಕೃಷ್ಣ ಶೆಟ್ಟಿ ಕಡಬರವರು ಮಾತನಾಡಿ, ಈ ಮಣ್ಣಿನಲ್ಲಿ ನಮ್ಮ ಹಿರಿಯರು ಮಾಡಿದ ಸತ್ಕರ್ಮದ ನಿಸ್ವಾರ್ಥ ಸೇವೆಯ ಫಲವಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಇಂತಹ ಸತ್ಕರ್ಮಗಳು ನಡೆಯಲು ಸಾಧ್ಯವಾಗಿದೆ. ನಾಗದೇವರು ಮತ್ತು ದೈವಗಳ ಅನುಗ್ರಹದಿಂದ ನಿರಂತರವಾಗಿ ಪ್ರತಿ ವರ್ಷ ನಡೆಯುವ ಮೂಲಕ ನಾವೆಲ್ಲರೂ ಶ್ರೀ ದೈವಗಳ ಅನುಗ್ರಹಕ್ಕೆ ಪಾತ್ರರಾಗುವಂತಾಗಿದೆ. ಈ ಧಾರ್ಮಿಕ ಕಾರ್ಯಕ್ರಮದ ಮೂಲಕ ಪ್ರತಿಯೊಬ್ಬರ ಮನೆ ಮತ್ತು ಮನಗಳಲ್ಲಿ ಧರ್ಮ ಜಾಗೃತಿಯಾಗಲಿ ಎಂದರು.
ಸನ್ಮಾನ:
ವಾರ್ಷಿಕ ದಿನಾಚರಣೆಯ ಅನ್ನಸಂತರ್ಪಣೆಯ ಸೇವೆಯನ್ನು ನೀಡಿದ ಅಮೆತ್ತಿಮಾರು ಕುಟುಂಬದ ಪುಷ್ಪಾಬಾಲಕೃಷ್ಣ ರೈ ಸೊರಕೆಯವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಳೆದ ಮೂರು ವರ್ಷಗಳಿಂದ ಯಕ್ಷಗಾನ ತಾಳಮದ್ದಲೆಯ ಸೇವೆ ನೀಡುತ್ತಿರುವ ರಾಮನಗರ ಶ್ರೀ ವಿನಾಯಕ ಯಕ್ಷಗಾನ ಮಂಡಳಿಯ ಅಧ್ಯಕ್ಷರಾದ ಜಯರಾಮ ಗೌಡ ನಾಲ್ಗುತ್ತುರವರನ್ನು ಶಾಲು ಹೊಂದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ದೈವಗಳಿಗೆ ಹೂವಿನ ಸೇವೆ ನೀಡಿದ ಅಮೆತ್ತಿಮಾರುಗುತ್ತು ಕುಟುಂಬದ ಶಾಲಿನಿಜಗನ್ನಾಥ ಪೂಂಜ ತದ್ಮಬಾಳಿಕೆಯವರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅಮೆತ್ತಿಮಾರುಗುತ್ತು ಗಂಗಾಧರ ಶೆಟ್ಟಿ, ನಾಲ್ಗುತ್ತು ರಮೇಶ ಗೌಡ, ಕೊರಗಪ್ಪ ರೈ, ಪಾತ್ರಾಜೆ ಕೃಷ್ಣಪ್ಪ ಗೌಡ, ಪಾತ್ರಾಜೆ ನಾರಾಯಣ ಗೌಡ, ಜಯರಾಮ ಗೌಡ ನಾಲ್ಗುತ್ತು, ಕಿರಣ್ ಗೌಡ ಪುತ್ತಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಮನಗರ ಶ್ರೀ ವಿನಾಯಕ ಭಜನಾ ಮಂಡಳಿಯ ಮಾಜಿ ಅಧ್ಯಕ್ಷ, ಯಕ್ಷಗಾನ ಕಲಾವಿದ ಅಮ್ಮಿ ನಾಲ್ಗುತ್ತು ಕಾರ್ಯಕ್ರಮ ನಿರೂಪಿಸಿದರು. ರಾಮನಗರ ಶ್ರೀ ವಿನಾಯಕ ಯಕ್ಷಗಾನ ಮಂಡಳಿಯ ಅಧ್ಯಕ್ಷ ಜಯರಾಮ ಗೌಡ ನಾಲ್ಗುತ್ತು ಸ್ವಾಗತಿಸಿದರು. ಯಕ್ಷಗಾನ ಮಂಡಳಿಯ ಕಾರ್ಯದರ್ಶಿ ಕಿರಣ್ ಗೌಡ ಪುತ್ತಿಲ ವಂದಿಸಿದರು.
ಯಕ್ಷಗಾನ ತಾಳಮದ್ದಳೆ:
ಸಭಾ ಕಾರ್ಯಕ್ರಮದ ಬಳಿಕ ಅತಿಥಿ ಕಲಾವಿದರು ಮತ್ತು ವಿನಾಯಕ ಯಕ್ಷಗಾನ ಮಂಡಳಿಯ ಕಲಾವಿದರಿಂದ ‘ ಗದಾ ಯುದ್ಧ’ ಯಕ್ಷಗಾನ ತಾಳಮದ್ದಲೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಕುಸುಮಾಕರ ಆಚಾರ್ಯ ಹಳೆನೇರೆಂಕಿ, ಮದ್ದಳೆ ವಾದಕರಾಗಿ ಹರಿಪ್ರಸಾದ್ ಇಚಿಲಂಪಾಡಿ, ಹರಿ ದೇವಾಡಿಗ ನಗ್ರಿ, ಚೆಂಡೆ ವಾದಕರಾಗಿ ದಿವಾಕರ ಆಚಾರ್ಯ ಭಾಗವಹಿಸಿದ್ದರು. ಮುಮ್ಮೇಳದಲ್ಲಿ ಅರ್ಥದಾರಿಗಳಾಗಿ ಗುಡಪ್ಪ ಗೌಡ ಬಲ್ಯ, ದಿವಾಕರ ಆಚಾರ್ಯ ಹಳೆನೇರಂಕಿ, ಹರೀಶ್ ಆಚಾರ್ಯ ಉಪ್ಪಿನಂಗಡಿ, ತಿಮ್ಮಪ್ಪ ಗೌಡ ಪುಳಿತಡಿ, ಗಂಗಾಧರ ಶೆಟ್ಟಿ ಹೊಸಮನೆ, ಜಯರಾಮಗೌಡ ನಾಲ್ಗುತ್ತು, ಅಮ್ಮಿ ಗೌಡ ನಾಲ್ಗುತ್ತು, ಕಿರಣ್ ಗೌಡ ಪುತ್ತಿಲ ಭಾಗವಹಿಸಿದ್ದರು. ಯಕ್ಷಗಾನ ತಾಳಮದ್ದಳೆಯ ಸೇವಾಕರ್ತರಾದ ಜಯರಾಮ ಗೌಡ ನಾಲ್ಗುತ್ತು ಸ್ವಾಗತಿಸಿದರು. ಮಂಡಳಿಯ ಕಾರ್ಯದರ್ಶಿ ಕಿರಣ್ ಗೌಡ ಪುತ್ತಿಲ ವಂದಿಸಿದರು.
ಗಣ್ಯರ ಉಪಸ್ಥಿತಿ:
ನೆಲ್ಯಾಡಿ ಸುಬ್ರಹ್ಮಣ್ಯ ವಿಲಾಸ ಹೋಟೆಲ್‌ನ ಮಾಲಕ, ಧಾರ್ಮಿಕ ಮುಖಂಡರೂ ಆದ ಸುಬ್ರಹ್ಮಣ್ಯ ಆಚಾರ್ಯ, ಸೊರಕೆ ಬಾಲಕೃಷ್ಣ ರೈ, ಅಮೆತ್ತಿಮಾರುಗುತ್ತು ಮನೆತನದ ಹಿರಿಯರೂ, ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿವೃತ್ತ ಡಿಜಿಎಂ ಕೊಂಬಿಲ ಉಗ್ಗಪ್ಪ ಶೆಟ್ಟಿ, ಕ್ಯಾಂಪ್ಕೋದ ನಿವೃತ್ತ ಅಧಿಕಾರಿ ಕೊಂಬಿಲ ಪುರುಷೋತ್ತಮ ಶೆಟ್ಟಿ, ಕರಂಬಳ್ಳಿ ಭಾಸ್ಕರ್ ಶೆಟ್ಟಿ, ದೇವಸ್ಥಾನದ ಸಲಹೆಗಾರರಾದ ಇಂಜಿನಿಯರ್ ಚಂದ್ರಹಾಸ ಗೌಡ ಪನ್ಯಾಡಿ, ಅಮೆತ್ತಿಮಾರುಗುತ್ತು ಕುಟುಂಬದ ಹಿರಿಯರಾದ ರೇವತಿ ನಾರಾಯಣ ಶೆಟ್ಟಿ ನಂದುಗುರಿ, ಗಿರಿಧರ ಗೌಡ ಕಡಿರ, ಸೀತಾರಾಮ ಗೌಡ ಮುರುಳ್ಯ, ಪರಮೇಶ್ವರಿ ಬಾಲಕೃಷ್ಣ ಶೆಟ್ಟಿ ಪದಿಂಜಲಗುತ್ತು, ನಿವೃತ್ತ ಪೊಲೀಸ್ ಅಧಿಕಾರಿ ಕದಂಬಳ್ಳಿ ಭಾಸ್ಕರ ಶೆಟ್ಟಿ, ಸದಾನಂದ ಶೇಖ ತದ್ಮಬಾಳಿಕೆ, ರವಿಪ್ರಸಾದ್ ಶೆಟ್ಟಿ ಬೈಲುಗುತ್ತು, ಬೇಬಿ ಕುಮಾರ್ ಶೆಟ್ಟಿ ಬೈಲುಗುತ್ತು, ಹಾರ್ಪಾಳ ಶಾಸ್ತಾರೇಶ್ವರ ದೇವಸ್ಥಾನದ ಗೌರವಾಧ್ಯಕ್ಷ ಸೂರ್ಯನಾರಾಯಣ ಜೋಗಿತ್ತಾಯ, ಕಾರ್ಯದರ್ಶಿ ಸುರೇಶ್ ಗೌಡ ಪಡಿಪಂಡ, ಕೋಶಾಧಿಕಾರಿ ಸೀತಾರಾಮ ಗೌಡ ಕಾನಮನೆ, ಮಹಾಬಲ ಶೆಟ್ಟಿ ದೋಂತಿಲ, ಊರಿನ ಗುತ್ತಿನ ಪ್ರಮುಖರು, ನಾಲ್ಗುತ್ತು ಕುಟುಂಬದ ಹಿರಿಯರು, ಊರಿನ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶ್ರೀ ದೈವಗಳ ಕೂಡುಕಟ್ಟಿನ ಪ್ರಮುಖರಾದ ಯಾದವ ಶೆಟ್ಟಿ ರಾಮನಗರ, ರವಿ ಶೆಟ್ಟಿ ಕೂರಟ, ಉದಯ್ ಕುಮಾರ್ ಶೆಟ್ಟಿ ಕೂರಟ, ಸುರೇಶ್ ಗೌಡ ಪಾತ್ರಾಜೆ, ಉದಯ್ ಗೌಡ ಪಾತ್ರಾಜೆ ಸಹಕರಿಸಿದರು.