ಕುಕ್ಕೆ ಸುಬ್ರಹ್ಮಣ್ಯ; ಲಕ್ಷ ಹಣತೆ ದೀಪಗಳ ನಡುವೆ ಲಕ್ಷದೀಪೋತ್ಸವ

0

ಕಾಣಿಯೂರು: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ವೈಭವದ ಲಕ್ಷದೀಪೋತ್ಸವ ನೆರವೇರಿತು. ಸಾಲು ಸಾಲು ಹಣತೆಗಳ ನಡುವೆ ಕುಕ್ಕೆ ಸುಬ್ರಹ್ಮಣ್ಯ ದೇವರ ಲಕ್ಷದೀಪೋತ್ಸವವು ಭಕ್ತಿ-ಸಡಗರದಿಂದ ನಡೆಯಿತು.


ಪಂಚ ಶಿಖರಗಳನ್ನೊಳಗೊಂಡ ಚಂದ್ರಮಂಡಲ ರಥದಲ್ಲಿ ಸುಬ್ರಹ್ಮಣ್ಯ ದೇವರ ಉತ್ಸವ ನಡೆಯಿತು. ಶ್ರೀ ದೇವಳದ ಅರ್ಚಕರು ಉತ್ಸವದ ವಿದಿ ವಿಧಾನ ನೆರವೇರಿಸಿದರು. ರಥಬೀದಿಯಿಂದ ಕಾಶಿಕಟ್ಟೆ ತನಕ ಬೆಳಗಿದ ಲಕ್ಷ ಹಣತೆ ದೀಪದ ನಡುವೆ ಶ್ರೀ ದೇವರ ಉತ್ಸವ ನೆರವೇರಿತು. ದೀಪಾಲಂಕಾರಗಳ ನಡುವೆ ಭಕ್ತರ ಪರಾಕುಗಳೊಂದಿಗೆ ಶ್ರೀ ದೇವರ ಲಕ್ಷದೀಪೋತ್ಸವ ರಥೋತ್ಸವ ನೆರವೇರಿತು. ಈ ಮೂಲಕ ಶ್ರೀ ದೇವರ ರಥಬೀದಿ ಉತ್ಸವ ಆರಂಭವಾಯಿತು.


ದೇವಳದ ಹಾಗೂ ಸಾರ್ವಜನಿಕ ಭಕ್ತರ, ಸಂಘ ಸಂಸ್ಥೆಗಳ ಸಹಕಾರದಿಂದ ಲಕ್ಷ ಹಣತೆಗಳು ಬೆಳಗಿತು. ಇದು ಉತ್ಸವಕ್ಕೆ ವಿನೂತನ ಕಳೆ ನೀಡಿತು. ಶ್ರೀ ದೇವಳದ ಗೋಪುರದಿಂದ ಕಾಶಿಕಟ್ಟೆ ತನಕ, ಅಭಯ ಆಂಜನೇಯ ಗುಡಿ, ಸವಾರಿ ಮಂಟಪ, ಆದಿಸುಬ್ರಹ್ಮಣ್ಯ, ಬೈಪಾಸ್ ರಸ್ತೆ, ಕುಮಾರಧಾರ ಸೇರಿದಂತೆ ಕ್ಷೇತ್ರಾದ್ಯಂತ ಹಣತೆ ದೀಪ ಬೆಳಗಿತು. ಈ ಮೂಲಕ ಲಕ್ಷ ದೀಪೋತ್ಸವದಂದು ಲಕ್ಷ ಹಣತೆ ದೀಪ ಪ್ರಜ್ವಲಿಸಿತು.


ಈ ಮೊದಲು ಸಂಜೆ ಆದಿ ಸುಬ್ರಹ್ಮಣ್ಯದಲ್ಲಿ ದೀಪಾಂಕೃತ ರಂಗಪೂಜೆ ನಡೆಯಿತು. ಆ ಬಳಿಕ ಪ್ರಧಾನ ದೇವಾಲಯದಲ್ಲಿ 16 ಮಡಿಕೆಗಳಲ್ಲಿ ಮಣ್ಣು ಮತ್ತು ಮರಳನ್ನು ಮಿಶ್ರಮಾಡಿ ಅದರಲ್ಲಿ ನವಧಾನ್ಯಗಳನ್ನು ಬಿತ್ತುವ ಅಂಕುರಾರ್ಪಣೆ ನೆರವೇರಿತು. ಮಹಾಪೂಜೆಯ ಬಳಿಕ ಶ್ರೀ ದೇವರ ಹೊರಾಂಗಣ ಉತ್ಸವವು ಆರಂಭವಾಯಿತು. ಪ್ರಥಮವಾಗಿ ಕಾಚುಕುಜುಂಬ ದೈವವು ಶ್ರೀ ದೇವರನ್ನು ಭೇಟಿಯಾಗಿ ನುಡಿಗಟ್ಟು ನಡೆಯಿತು. ನಂತರ ಆಕರ್ಷಕ ಸಾಲುದೀಪಗಳ ನಡುವೆ ಶ್ರೀ ದೇವರ ಶೇಷವಾಹನಯುಕ್ತ ಬಂಡಿ ಉತ್ಸವ ಮತ್ತು ಪಾಲಕಿ ಉತ್ಸವ ಮತ್ತು ವಿವಿಧ ಸಂಗೀತ ವಾದ್ಯಗಳ ಸುತ್ತುಗಳು ನೆರವೇರಿತು. ಅಂತಿಮವಾಗಿ ಶ್ರೀ ದೇವರು ರಥಬೀದಿ ಪ್ರವೇಶಿಸಿದರು.


ಹೊರಾಂಗಣ ಉತ್ಸವದ ಬಳಿಕ ರಥಬೀದಿಗೆ ಆಗಮಿಸಿದ ಶ್ರೀ ದೇವರು ಪಂಚ ಶಿಖರಗಳನ್ನಳಗೊಂಡ ಚಂದ್ರಮಂಡಲ ರಥದಲ್ಲಿ ಆರೂಢರಾಗಿ ಪೂಜೆ ಸ್ವೀಕರಿಸಿದರು. ಬಳಿಕ ಶ್ರೀ ದೇವಳದಿಂದ ಕಾಶಿಕಟ್ಟೆ ತನಕ ಉತ್ಸವ ನೆರವೇರಿತು. ಶ್ರೀ ದೇವರು ಚಂದ್ರಮಂಡಲ ರಥದಲ್ಲಿ ಕಾಶಿಕಟ್ಟೆಗೆ ಆಗಮಿಸುವುದು ಕೇವಲ ಲಕ್ಷ ದೀಪೋತ್ಸವದ ದಿನ ಮಾತ್ರ ಅನ್ನುವುದು ವಿಶೇಷ. ಸಹಸ್ರಾರು ಭಕ್ತರು ಈ ಸಂದರ್ಭದಲ್ಲಿ ಶ್ರೀ ದೇವರ ದರುಶನ ಪಡೆದರು. ಉತ್ಸವಕ್ಕೆ ಆನೆ ಯಶಸ್ವಿ, ಬಿರುದಾವಳಿಗಳು, ಬ್ಯಾಂಡ್, ನಾದಸ್ವರ, ತವಿಲ್ ಮೇಳಗಳು ವಿಶೇಷ ಮೆರುಗನ್ನು ನೀಡಿತ್ತು.

ಬೀದಿ ಉರುಳು ಸೇವೆ ಆರಂಭ: ಚಂದ್ರಮಂಡಲ ರಥೋತ್ಸವದ ಬಳಿಕ ಸುಬ್ರಹ್ಮಣ್ಯನಿಗೆ ಅತ್ಯಂತ ಪ್ರೀಯವಾದ ಬೀದಿ ಉರುಳು ಸೇವೆಯನ್ನು ಭಕ್ತರು ಆರಂಭಿಸಿದರು. ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರಿಗೆ ಸಲ್ಲಿಸುವ ವಿಶಿಷ್ಠವಾದ ಈ ಸೇವೆಯನ್ನು ಸ್ವಯಂಸ್ಪೂರ್ತಿಯಿಂದ ಭಕ್ತರು ಲಕ್ಷದೀಪೋತ್ಸವ ರಥೋತ್ಸವದ ಬಳಿಕ ಆರಂಭಿಸಿ ಚಂಪಾಷಷ್ಠಿ ಮಹಾರಥೋತ್ಸವದ ತನಕ ನೆರವೇರಿಸುತ್ತಾರೆ.

LEAVE A REPLY

Please enter your comment!
Please enter your name here