ಹಿಂದಿನ ಶಾಸಕರು ಮಾಡಿದ ಶೇ.50ರಷ್ಟಾದರೂ ಅಭಿವೃದ್ಧಿ ಕಾರ್ಯ ನಡೆಸಲಿ-ಹಿರೇಬಂಡಾಡಿ ಬಿಜೆಪಿ ಶಕ್ತಿ ಕೇಂದ್ರದಿಂದ ಪತ್ರಿಕಾಗೋಷ್ಠಿ

0

ಉಪ್ಪಿನಂಗಡಿ: ಈ ಹಿಂದಿನ ಶಾಸಕರು ತವರು ಗ್ರಾಮದಲ್ಲೇ ಅಭಿವೃದ್ಧಿ ಮಾಡಿಲ್ಲ ಎಂದು ಈಗಿನ ಶಾಸಕರು ದೂರುವ ಬದಲು ಸಂಜೀವ ಮಠಂದೂರುರವರು ಹಿರೇಬಂಡಾಡಿ ಗ್ರಾಮದಲ್ಲಿ ತನ್ನ ಶಾಸಕತ್ವದ ಅವಧಿಯಲ್ಲಿ ಮಾಡಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿ ಮೊತ್ತದ ಶೇ.50ರಷ್ಟಾದರೂ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಈಗಿನ ಶಾಸಕರು ಅವರ ಅವಧಿಯಲ್ಲಿ ಮಾಡಿತೋರಿಸಲಿ ಎಂದು ಹಿರೇಬಂಡಾಡಿ ಬಿಜೆಪಿ ಶಕ್ತಿ ಕೇಂದ್ರದ ಸಂಚಾಲಕ ದಯಾನಂದ ಸರೋಳಿ ಸವಾಲು ಹಾಕಿದ್ದಾರೆ.


ಶಾಸಕರು ಹಿರೇಬಂಡಾಡಿ ಗ್ರಾಮದ ಅಗರಿ ಎಂಬಲ್ಲಿ 5 ಲಕ್ಷ ಮೊತ್ತದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನಡೆಸಿರುವುದು ಸರಿ. ಆದರೆ ಅವರು ತನ್ನ ಕಾರ್ಯಕ್ರಮದ ಭಾಷಣದಲ್ಲಿ ಹಿರೇಬಂಡಾಡಿ ಗ್ರಾಮ ಅಭಿವೃದ್ಧಿಯಾಗಬೇಕಿತ್ತು. ಇಲ್ಲಿನವರೇ ಶಾಸಕರಾದರೂ ರಸ್ತೆ ಕಾಂಕ್ರೀಟು ಕಾಮಗಾರಿ ಆಗಿಲ್ಲ ಎಂದು ಹೇಳಿರುವುದು ಅವರ ಜ್ಞಾನದ ಕೊರತೆಯೋ ಅಥವಾ ರಾಜಕೀಯ ಪ್ರೇರಿತ ಹೇಳಿಕೆಯೋ ಅರ್ಥವಾಗುತ್ತಿಲ್ಲ. ಅಗರಿ ಎಂಬ ಪ್ರದೇಶದಲ್ಲಿ ಸುಮಾರು 1.05 ಕೋ.ರೂ.ನಲ್ಲಿ ರಸ್ತೆ ಕಾಂಕ್ರೀಟ್ ಕಾಮಗಾರಿ, ಅಗರಿಗೆ ಸಂಪರ್ಕ ಸೇತುವೆ ಹಾಗೂ ಅಂತರ್ಜಲ ಅಭಿವೃದ್ಧಿಯ ದೃಷ್ಟಿಯಿಂದ ಚೆಕ್ ಡ್ಯಾಂ ನಿರ್ಮಿಸಲಾಗಿದೆ. ನಿಕಟಪೂರ್ವ ಶಾಸಕರ ಊರಿನ ಬಗ್ಗೆ ಅಥವಾ ಅವರು ಮಾಡಿದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾತನಾಡುವಾಗ ಅವರು ಮಾಡಿದ ಅಭಿವೃದ್ಧಿ ಕಾಮಗಾರಿಗಳ ಅಂಕಿ-ಅಂಶಗಳ ಸಹಿತ ತಿಳಿದುಕೊಳ್ಳುವುದು ಒಳಿತು. ಇಲ್ಲದಿದ್ದರೆ ಇಲ್ಲಿ ಆದ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಮ್ಮ ಕಾಂಗ್ರೆಸ್ ಕಾರ್ಯಕರ್ತರಿಂದ ಕೇಳಿ ತಿಳಿದುಕೊಳ್ಳಲಿ ಎಂದರು.


ಈಗಿನ ಶಾಸಕರು ಅಭಿವೃದ್ಧಿ ಕಾರ್ಯಗಳಿಗೆ ಅವರೇ ಅನುದಾನ ತಂದರೆ ಅದಕ್ಕೆ ನಮ್ಮ ಸ್ವಾಗತವಿದೆ. ಆದರೆ ಈ ಹಿಂದಿನ ಶಾಸಕರು ಅನುದಾನ ತಂದು, ವರ್ಕ್ ಆರ್ಡರ್, ಟೆಂಡರುಗಳಾದ ಕಾಮಗಾರಿಗಳನ್ನು ನಾನೇ ಅನುದಾನ ತರಿಸಿದ್ದು ಎಂದು ಹೇಳಿ ಮತ್ತೊಮ್ಮೆ ಅದಕ್ಕೆ ಶಿಲಾನ್ಯಾಸ ನಡೆಸುವುದು ಸರಿಯಲ್ಲ ಎಂದು ದಯಾನಂದ ಸರೋಳಿ ತಿಳಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗ್ರಾ.ಪಂ. ಸದಸ್ಯ ಹಮ್ಮಬ್ಬ ಶೌಕತ್ ಅಲಿಯವರು, ಮುರದ ಮೇಲು- ಶ್ರೀ ಷಣ್ಮುಖ ದೇವಾಲಯದ ಮೂರು ಕಿ.ಮೀ. ರಸ್ತೆಗೆ ಈ ಹಿಂದೆ ಶಕುಂತಳಾ ಶೆಟ್ಟಿಯವರು ಶಾಸಕರಾಗಿದ್ದ ಅವಧಿಯಲ್ಲಿ 10 ಲಕ್ಷ ಅನುದಾನ ಒದಗಿಸಿದ್ದು ಬಿಟ್ಟರೆ, ಮತ್ತೆಲ್ಲಾ ರಸ್ತೆಯನ್ನು ಶಾಸಕ ಸಂಜೀವ ಮಠಂದೂರು ಅವರು ಅನುದಾನ ತಂದು ಕಾಂಕ್ರೀಟಿಕರಣಗೊಳಿಸಿದ್ದಾರೆ. ಆ ರಸ್ತೆಯಲ್ಲಿ ಚೀಂಕ್ರ ಕೊಡಂಗೆಯ ಬಳಿ ಸುಮಾರು 200 ಮೀಟರ್ ರಸ್ತೆ ಮಾತ್ರ ಕಾಂಕ್ರೀಟ್‌ಕರಣಗೊಳ್ಳಲು ಬಾಕಿ ಉಳಿದಿದ್ದು, ಉಳಿದೆಲ್ಲಾ ರಸ್ತೆ ಕಾಂಕ್ರೀಟ್ ಕಾಮಗಾರಿಗೊಂಡಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಹಿರೇಬಂಡಾಡಿ ಗ್ರಾ.ಪಂ. ಅಧ್ಯಕ್ಷ ಸದಾನಂದ ಶೆಟ್ಟಿ ಅಡೆಕ್ಕಲ್, ಉಪಾಧ್ಯಕ್ಷೆ ಶಾಂಭವಿ ಸುರೇಶ್, ಸದಸ್ಯ ನಿತಿನ್ ತಾರಿತ್ತಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here