ನಿಡ್ಪಳ್ಳಿ: ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಸೂರಂಬೈಲು ಇಲ್ಲಿಗೆ ಜೋಸ್ ಆಲೂಕ್ಕಾಸ್ ಸಂಸ್ಥೆ ಪುತ್ತೂರು ಇದರ ಸಿಎಸ್ಆರ್ ಫಂಡ್ ವತಿಯಿಂದ ಸುಮಾರು ರೂ. 82,330 ಬೆಲೆಯ ಮೂಲಭೂತ ಸೌಕರ್ಯಗಳಾದ ಪೀಠೋಪಕರಣ, ಬ್ಯಾಂಡ್ ಸೆಟ್, ಧ್ವನಿ ವರ್ದಕ, ಬಟ್ಟಲು ಸ್ಟ್ಯಾಂಡ್ ಮುಂತಾದವುಗಳನ್ನು ಜ.6ರಂದು ಕೊಡುಗೆಯಾಗಿ ನೀಡಿದರು.
ಇದರ ಹಸ್ತಾಂತರ ಕಾರ್ಯಕ್ರಮವನ್ನು ಜೋಸ್ ಆಲೂಕ್ಕಾಸ್ ಸಂಸ್ಥೆ ಪುತ್ತೂರು ಇದರ ಮೆನೇಜರ್ ರತೀಶ್ ನಡೆಸಿಕೊಟ್ಟರು.ಅಲ್ಲದೆ ಸಂಸ್ಥೆಯ ಉದಯ ಕುಲಾಲ್ ಆಗಮಿಸಿ ಶುಭಹಾರೈಸಿದರು.
ಬೆಟ್ಟಂಪಾಡಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಪರಮೇಶ್ವರಿ ಸಂಸ್ಥೆಯ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿ ಇಲಾಖಾ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಿದರು. ಮುಖ್ಯ ಗುರು ಊರ್ಮಿಳಾ ಕೆ ಶಾಲಾ ಪರವಾಗಿ ಧನ್ಯವಾದ ನೀಡಿ, ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಸದ್ಬಳಕೆ ಮಾಡುತ್ತೇವೆ ಎಂದರು. ಶಾಲಾ ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಶ್ರೀನಿವಾಸ್ ಭಟ್ ಕೊಡುಗೆ ನೀಡಿದ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು. ಸಹ ಶಿಕ್ಷಕ ನಾಗೇಶ್ ಪಾಟಾಳಿ ಗ್ರಾಮೀಣ ಪ್ರದೇಶದ ಇಂತಹ ಶಾಲೆಯನ್ನು ಆಯ್ಕೆ ಮಾಡಿ ಶಾಲಾ ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸಿದ ಸಂಸ್ಥೆಯ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ ಹಾಗೂ ಸಂಸ್ಥೆ ಇನ್ನಷ್ಟು ಗ್ರಾಹಕರನ್ನು ಆಕರ್ಷಿಸಿ ವ್ಯವಹಾರ ವೃದ್ಧಿಸಲಿ ಎಂದು ಶುಭ ಹಾರೈಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷೆ ಸುನೀತಾ ತಾರಾನಾಥ್ ಉಪಸ್ಥಿತರಿದ್ದರು. ಅತಿಥಿ ಶಿಕ್ಷಕಿ ಕು.ವಿದ್ಯಾಲಕ್ಷ್ಮೀ ಸ್ವಾಗತಿಸಿ, ಗೌರವ ಶಿಕ್ಷಕಿ ಕು.ಯಶಸ್ವಿನಿ ವಂದಿಸಿದರು. ಅತಿಥಿ ಶಿಕ್ಷಕಿ ಸುಪ್ರಿತಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಎಸ್ ಡಿಎಂಸಿ ಸದಸ್ಯರು ಹಾಗೂ ಪೋಷಕರು ಭಾಗವಹಿಸಿ ಸಹಕರಿಸಿದರು.