ಹಳೆನೇರೆಂಕಿ ಶಾಲೆಯಲ್ಲಿ ಸಾಹಿತ್ಯ ಜಾಗೃತಿ ಕಾರ್ಯಕ್ರಮ

0

ರಾಮಕುಂಜ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಡಬ ತಾಲೂಕು ಘಟಕ ಮತ್ತು ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆ ಹಳೇನೆರಂಕಿ ಇವರ ಸಹಯೋಗದೊಂದಿಗೆ ಸಾಹಿತ್ಯ ಜಾಗೃತಿ ಕಾರ್ಯಕ್ರಮ ಜ.12ರಂದು ಹಳೆನೇರಂಕಿ ಶಾಲಾ ಸಭಾಂಗದಲ್ಲಿ ನಡೆಯಿತು.
ವಾಸಪ್ಪ ಗೌಡ ಹಿರಿಂಜ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಕ.ಸಾ.ಪ ಕಡಬ ತಾಲೂಕು ಘಟಕದ ಅಧ್ಯಕ್ಷ ಕೆ.ಸೇಸಪ್ಪ ರೈಯವರು ಮಾತನಾಡಿ, ಕನ್ನಡ ಭಾಷಾ ಸಾಹಿತ್ಯವು ಪ್ರಪಂಚದ ಇತರ ಭಾಷೆಗಳಿಗೆ ಭಾಷಾಂತರವಾದಾಗ ಇಲ್ಲಿನ ಸಂಸ್ಕೃತಿ ವಿಶ್ವದೆಲ್ಲೆಡೆ ಪಸರಿಸಬಹುದು ಮತ್ತು ವಿದ್ಯಾರ್ಥಿಗಳು ಎಳವೆಯಲ್ಲಿಯೇ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದರು. ತಾಲೂಕು ಘಟಕದ ಹೋಬಳಿ ಅಧ್ಯಕ್ಷರಾದ ಪದ್ಮಪ್ಪ ಗೌಡ, ಕೋಶಾಧಿಕಾರಿ ಬಾಲಚಂದ್ರ ಮುಚ್ಚಿಂತಾಯರವರು ಸಂದರ್ಭೋಚಿತವಾಗಿ ಮಾತನಾಡಿದರು. ಅತಿಥಿಗಳಾಗಿದ್ದ ಚಂದ್ರಾವತಿ ಶಾಂತಿಮೂಲೆ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಹೊನ್ನಪ್ಪ ಗೌಡ ಮರಂಕಾಡಿ, ಘಟಕದ ಸದಸ್ಯೆ ಪ್ರೇಮ ಉಪಸ್ಥಿತರಿದ್ದರು. ಕ.ಸಾ.ಪ. ಕಡಬ ತಾಲೂಕು ಘಟಕದ ಸಂಘಟನಾ ಕಾರ್ಯದರ್ಶಿ ಕಿಶೋರ್ ಕುಮಾರ್ ಪ್ರಾಸ್ತಾವಿಕ ಮಾತನಾಡಿ, ಸಾಹಿತ್ಯ ಜಾಗೃತಿಯ ಉದ್ದೇಶದ ಬಗ್ಗೆ ತಿಳಿಸಿದರು. ಶಾಲಾ ಮುಖ್ಯಗುರು ವೈ.ಸಾ೦ತಪ್ಪ ಗೌಡ ಸ್ವಾಗತಿಸಿದರು. ಸಹಶಿಕ್ಷಕಿ ಶಶಿಕಲಾ ವಂದಿಸಿದರು. ಸಹ ಶಿಕ್ಷಕ ನವೀನ್. ಎ.ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಸನ್ಮಾನ:
ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕರಾದ ಮಾಯಿಲಪ್ಪ ಗೌಡ ಇವರನ್ನು ಸನ್ಮಾನಿಸಲಾಯಿತು. ಶಾಲಾ ಶಿಕ್ಷಕ ದಯಾನಂದ ಅವರು ಸನ್ಮಾನಿತರನ್ನು ಪರಿಚಯಿಸಿದರು. ಶುದ್ದ ಬರಹ ಮತ್ತು ಸ್ಪಷ್ಟ ಓದು ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಕ.ಸಾ.ಪ.ವತಿಯಿಂದ ಗೌರವಿಸಲಾಯಿತು. ಬಹುಮಾನಿತರ ಪಟ್ಟಿಯನ್ನು ದೈಹಿಕ ಶಿಕ್ಷಣ ಶಿಕ್ಷಕ ರಾಮಣ್ಣ ಗೌಡ ವಾಚಿಸಿದರು. ವಿದ್ಯಾರ್ಥಿಗಳು ಸ್ವರಚಿತ ಕವನಗಳನ್ನು ವಾಚಿಸಿದರು.

LEAVE A REPLY

Please enter your comment!
Please enter your name here