ಧರ್ಮ ಕಾರ್ಯ ಮಾಡುವುದೇ ರಾಮ ಕಾರ್ಯವಾಗಿದೆ: ಕಣಿಯೂರು ಶ್ರೀ
ವಿಟ್ಲ: ವಿಶ್ವಹಿಂದೂ ಪರಿಷತ್, ಭಜರಂಗದಳ ಕನ್ಯಾನ ಶಾಖೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇದರ ವತಿಯಿಂದ ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀ ರಾಮ ಲಲ್ಲಾ ಪ್ರಾಣ ಪ್ರತಿಷ್ಠೆ ಸಮಾರಂಭಕ್ಕೆ ಆಹ್ವಾನಿತರಾಗಿರುವಕನ್ಯಾನ ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವೀ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿಯವರಿಗೆ ಗೌರವಾರ್ಪಣೆ ಹಾಗೂ ಸ್ವಾಮೀಜಿಯವರಿಂದ ಕನ್ಯಾನ ಗ್ರಾಮದ ಅಯೋಧ್ಯ ಕರಸೇವಕರಿಗೆ ಗೌರವಾರ್ಪಣೆ ಕಾರ್ಯಕ್ರಮ ಶ್ರೀ ಕ್ಷೇತ್ರದಲ್ಲಿ ನಡೆಯಿತು.
ಸಮಾರಂಭದಲ್ಲಿ ಆಶೀರ್ವಚನ ನೀಡಿದ ಶ್ರೀ ಮಹಾಬಲೇಶ್ವರ ಸ್ವಾಮೀಜಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಆಹ್ವಾನ ಸಿಕ್ಕಿರುವುದು ಜನ್ಮಾಂತರದ ಪುಣ್ಯ. ಇತಿಹಾಸದಲ್ಲಿ ನಮ್ಮವರಿಂದಲೇ ನಮ್ಮ ದೇಶದ ಮೇಲೆ ಪರಕೀಯರ ಆಕ್ರಮಣವಾಗುವಂತಾಗಿದೆ. ನಮ್ಮೊಳಗಿನ ರಾಮನನ್ನು ಸದಾ ನಂಬಿ ಕೊಂಡು ಮುನ್ನಡೆಯಬೇಕು. ಬದುಕಿನಲ್ಲಿ ಧರ್ಮ ಕಾರ್ಯ ಮಾಡುವುದೇ ರಾಮ ಕಾರ್ಯವಾಗಿದೆ ಎಂದರು.
ಸಮಾರಂಭದಲ್ಲಿ ಭಾಗವಹಿಸಿದ ಕೈಯ್ಯೂರು ನಾರಾಯಣ ಭಟ್ ಮಾತನಾಡಿ ಈ ವರ್ಷದ ಜನವರಿ 22 ಅವಿಸ್ಮರಣೀಯ ಕ್ಷಣ ಹಾಗೂ ಭಾರತ ದೇಶದ ಪರಿವರ್ತನೆಯ ದಿನವಾಗಬೇಕು. ರಾಮ ಮಂದಿರ ನಿರ್ಮಾಣದಲ್ಲಿ ಸಹಸ್ರಾರು ಭಕ್ತರ ತ್ಯಾಗ ಬಲಿದಾನವಿದೆ. ದೇಶದ ಪುರಾಣ ಕ್ಷೇತ್ರಗಳು ಮತ್ತೆ ಗತಕಾಲದ ವೈಭವವನ್ನು ಮೆರೆಯುವಂತಹ ಸಂದರ್ಭ ಬರಲಿದೆ ಎಂದರು.
ಕನ್ಯಾನ ಭಾರತ ಸೇವಾಶ್ರಮದ ಕಾರ್ಯದರ್ಶಿ ಈಶ್ವರ ಭಟ್ ಮಾತನಾಡಿ ಹಿಂದುಗಳಿಗೆ ಹಿಂದುಗಳೇ ಶತ್ರುಗಳಾಗಿರುವುದು ದುರಂತ. ನಮ್ಮ ಬದುಕಿನ ಅವಧಿಯಲ್ಲಿ ಆಗುತ್ತಿರುವುದು ಸೌಭಾಗ್ಯವೆನಿಸಿದೆ ಎಂದರು.ಸಮಾರಂಭದಲ್ಲಿ ನಿವೃತ್ತ ಶಿಕ್ಷಕ ಎಸ್.ಬಿ. ಕಣಿಯೂರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ಮಹಾಬಲೇಶ್ವರ ಭಟ್ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಅಯೋಧ್ಯೆ ಕರಸೇವಕರಾಗಿ ಭಾಗವಹಿಸಿದ್ದ ಗಣಾಧೀಶ ಭಟ್ ಪಂಜಾಜೆ, ಚಂದ್ರಶೇಖರ ಕಿರಿಂಚಿ ಮೂಲೆ, ದರ್ಣಪ್ಪ ಗೌಡ ಜಳಕದಗುಂಡಿ ಮತ್ತು ಜೈಲುವಾಸ ಅನುಭವಿಸಿದ್ದ ಅನೆಯಾಲಗುತ್ತು ರಾಮಣ್ಣ ಶೆಟ್ಟಿ, ಅಣ್ಣು ನಾಯ್ಕ ಕೊಳಂಬೆ ಅವರನ್ನು ಗೌರವಿಸಲಾಯಿತು.
ಶ್ರೀಗಳನ್ನು ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವಿ ಸೇವಾ ಟ್ರಸ್ಟ್, ಶ್ರೀಮಾತಾ ಯುವ ಸೇವಾ ಸಂಘ, ಶ್ರೀ ಚಾಮುಂಡೇಶ್ವರಿ ಮಾತೃ ಮಂಡಳಿ ವತಿಯಿಂದ ಗೌರವಾರ್ಪಣೆ ನಡೆಯಿತು.
ಹರ್ಷಿಕಾ ಕಣಿಯೂರು ಪ್ರಾರ್ಥಿಸಿದರು.ಚಂದ್ರಶೇಖರ ಕಣಿಯೂರು ಸ್ವಾಗತಿಸಿದರು.ಮನೋಜ್ ಕುಮಾರ್ ಬನಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು.