ಪುತ್ತೂರು: ಕಾಸರಗೋಡು ಜಿಲ್ಲೆಯ ನೆಟ್ಟಣಿಗೆ ಗ್ರಾಮದ ಕುಳದಪಾರೆಯ ಕುಳ ತರವಾಡು ಮನೆಯಲ್ಲಿ ಜನವರಿ 26, 27 ಮತ್ತು 28ರಂದು ಮಹಾದೈವ ಶ್ರೀ ವಿಷ್ಣುಮೂರ್ತಿ, ಧರ್ಮದೈವ ಪ್ಲಾವಡ್ಕತ್ತಾಯ, ಶ್ರೀ ಹುಲಿಭೂತ, ವರ್ಣರ ಪಂಜುರ್ಲಿ, ಮುಕಾಂಬಿಕಾ ಗುಳಿಗ, ರಕ್ತೇಶ್ವರಿ ಹಾಗೂ ಪರಿವಾರ ದೈವಗಳ ದೈವಂಕೆಟ್ಟ್ ಮಹೋತ್ಸವ ನಡೆಯಲಿದೆ.
ಸುಮಾರು 75 ವರ್ಷಗಳ ಹಿಂದೆ ದೈವಂಕೆಟ್ಟ್ ಮಹೋತ್ಸವ ನೆರವೇರಿಸಲಾಗಿದ್ದು ಇದೀಗ ಇಂದಿನ ಕುಟುಂಬಸ್ಥರು ಶ್ರೀ ದೈವಗಳ ದೈವಂಕೆಟ್ಟ್ ಮಹೋತ್ಸವವನ್ನು ದೈವ ಸಂಕಲ್ಪದಂತೆ ನೆರವೇರಿಸಲು ತೀರ್ಮಾನಿಸಿದ್ದಾರೆ. ಜ.26ರಂದು ಗಣಪತಿ ಹೋಮ, ದೈವಸ್ಥಾನದಲ್ಲಿ ಶುದ್ಧಿಕಲಶ, ನಾಗತಂಬಿಲ, ಕುರವನ್ ದೈವದ ಕೋಲ, ಶ್ರೀ ವೆಂಕಟರಮಣ ದೇವರ ಹರಿಸೇವೆ, ನೆಟ್ಟಣಿಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಶ್ರೀ ಹುಲಿಭೂತದ ಭಂಡಾರ ಆಗಮನ, ಶ್ರೀ ದೈವಗಳ ತೊಡಂಙಲ್, ಕೊರತ್ತಿಯಮ್ಮನ ಕೋಲ, ಮುಕಾಂಬಿಕಾ ಗುಳಿಗ ಕೋಲ, ವರ್ಣರಪಂಜುರ್ಲಿ ಕೋಲ, ಜ.27ರಂದು ಬೆಳಿಗ್ಗೆ ಶ್ರೀ ಹುಲಿಭೂತದ ಕೋಲ, ಧರ್ಮದೈವ ಪ್ಲಾವಡ್ಕತ್ತಾಯ ಕೋಲ, ನೆಟ್ಟಣಿಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಶ್ರೀ ಹುಲಿಭೂತದ ಭಂಡಾರ ನಿರ್ಗಮನ, ದೈವಗಳ ತೊಡಂಙಲ್, ಪೊಟ್ಟ ದೈವದ ಕೋಲ, ಜ.28ರಂದು ರಕ್ತೇಶ್ವರಿ ದೈವದ ಕೋಲ, ಮಹಾದೈವ ವಿಷ್ಣುಮೂರ್ತಿ ಕೋಲ, ಶ್ರೀ ಗುಳಿಗ ದೈವದ ಕೋಲ ನಡೆಯಲಿದೆ. ಇತಿಹಾಸ ಪ್ರಸಿದ್ಧ ಕುಳದಪಾರೆ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ಮಹೋತ್ಸವ ಎಪ್ರಿಲ್ 21 ಮತ್ತು 22ರಂದು ನಡೆಯಲಿದೆ. ಕುಳದ ದೈವಸ್ಥಾನದ ಪರಿಸರದಲ್ಲಿ ಜರಗುವ ಈ ಮಹತ್ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ಕುಳ ತರವಾಡು ಮನೆಯ ಮುಖ್ಯಸ್ಥ ಎನ್. ಎ. ದಾಮೋದರ್ ಕುಳ, ಯಮುನ ಮತ್ತು ಬಾಲಕೃಷ್ಣ ಮಣಿಯಾಣಿ ಹಾಗೂ ಕುಟುಂಬಸ್ಥರು ವಿನಂತಿಸಿದ್ದಾರೆ.