ಮಧುಮೇಹ ತಪಾಸಣೆಯಲ್ಲಿ ಅದ್ವಿತೀಯ ಸೇವೆ, ಆರೋಗ್ಯ ಜಾಗೃತಿ-ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದ ವೈದ್ಯಕೀಯ ಶಿಬಿರದ ರೂವಾರಿ ಡಾ.ಸುರೇಶ್ ಪುತ್ತೂರಾಯರಿಗೆ ರಾಷ್ಟ್ರ ಪ್ರಶಸ್ತಿ

0

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ, ಆರೋಗ್ಯ ರಕ್ಷಾ ಸಮಿತಿ, ನವಚೇತನಾ ಯುವಕ ಮಂಡಲ, ಸತ್ಯನಾರಾಯಣ ಪೂಜಾ ಸಮಿತಿ ಸೇರಿದಂತೆ ಹಲವು ಸಂಘ ಸಂಸ್ಥೆಗಳು, ದಾನಿಗಳು, ವೈದ್ಯರು, ಸಿಬ್ಬಂದಿಗಳು, ಔಷಧ ಕಂಪನಿಗಳು, ಲ್ಯಾಬೋರೇಟರಿ, ಜನೌಷಧಿ ಕೇಂದ್ರಗಳು, ಸ್ವಯಂ ಸೇವಕರು ಹಾಗೂ ಭಕ್ತಾದಿಗಳ ಸಹಕಾರದಿಂದ ದೇವಳದಲ್ಲಿ ಉಚಿತ ವೈದ್ಯಕೀಯ ಶಿಬಿರವು ಯಶಸ್ವಿಯಾಗಿ ನಡೆಯುತ್ತಿದೆ.ಈ ಪ್ರಶಸ್ತಿಯನ್ನು ಶಿಬಿರದ ಯಶಸ್ಸಿಗೆ ಕಾರಣರಾದವರಿಗೆ ಅರ್ಪಿಸುತ್ತಿದ್ದೇ ನೆ.ಶಿಬಿರದ ಬಗ್ಗೆ ನಿರಂತರ ಪ್ರಚಾರ ನೀಡಿ,ಜನತೆ ಶಿಬಿರದ ಪ್ರಯೋಜನ ಪಡೆದುಕೊಳ್ಳುವಲ್ಲಿ ಸಹಕರಿಸಿದ ಸುದ್ದಿ ಬಿಡುಗಡೆಗೂ ಕೃತಜ್ಞತೆಗಳು-
ಡಾ.ಸುರೇಶ್ ಪುತ್ತೂರಾಯ(ಪ್ರಶಸ್ತಿ ಪುರಸ್ಕೃತರು)
ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಸಂಪ್ಯ

ಪುತ್ತೂರು:ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಾರ್ವಜನಿಕ ಭಕ್ತಾದಿಗಳ ಅನುಕೂಲಕ್ಕಾಗಿ ಪ್ರತಿ ತಿಂಗಳು ನಡೆಸುತ್ತಿರುವ ಉಚಿತ ವೈದ್ಯಕೀಯ ಶಿಬಿರವು ಇದೀಗ ರಾಷ್ಟç ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ.ಶಿಬಿರದ ಮೂಲಕ ಮಧುಮೇಹ ತಪಾಸಣೆಯಲ್ಲಿ ನೀಡಿದ ಅದ್ವಿತೀಯ ಸೇವೆ ಹಾಗೂ ಜನರಲ್ಲಿ ಆರೋಗ್ಯ ಜಾಗೃತಿಗಾಗಿ ಈ ಶಿಬಿರದ ರೂವಾರಿಯಾಗಿರುವ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ಹೆಸರಾಂತ ವೈದ್ಯರಾಗಿರುವ ಡಾ.ಸುರೇಶ್ ಪುತ್ತೂರಾಯ ಅವರು ಮಧುಮೇಹ ಜಾಗೃತಿ ಉಪಕ್ರಮ ರಾಷ್ಟ್ರಪ್ರಶಸ್ತಿ(Diabetes Awareness Initiative Award-2024)ಗೆ ಭಾಜನರಾಗಿದ್ದಾರೆ.ಜ.25ರಂದು ಒಡಿಸ್ಸಾದ ಭುವನೇಶ್ವರದಲ್ಲಿ ನಡೆದ ಡಯಾಬಿಟೀಸ್ ಇಂಡಿಯಾ 14ನೇ ವಿಶ್ವ ಸಮ್ಮೇಳನದಲ್ಲಿ ಡಾ.ಸುರೇಶ್ ಪುತ್ತೂರಾಯ ಅವರು ಪ್ರಶಸ್ತಿ ಸ್ವೀಕರಿಸಿದರು.

ದೇಹಕ್ಕೆ ಕಾಯಿಲೆ ಬಂದಾಗ ಮಾತ್ರವೇ ಚಿಕಿತ್ಸೆ ಪಡೆಯುವುದಲ್ಲ.ಕಾಯಿಲೆ ಬರುವ ಮೊದಲೇ ಮಧುಮೇಹ, ಅಧಿಕ ರಕ್ತದೊತ್ತಡ ಮೊದಲಾದ ಕಾಯಿಲೆಗಳ ಬಗ್ಗೆ ಆಗಾಗ ತಪಾಸಣೆ ನಡೆಸಿ ಅವುಗಳನ್ನು ಮೂಲದಿಂದಲೇ ನಿವಾರಿಸಿಕೊಳ್ಳಬೇಕು ಎಂಬ ಸದುದ್ದೆಶದಿಂದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿರುವ ಪುತ್ತೂರು ಮಹಾವೀರ ಮೆಡಿಕಲ್ ಸೆಂಟರ್‌ನ ಹೆಸರಾಂತ ವೈದ್ಯ ಡಾ.ಸುರೇಶ್ ಪುತ್ತೂರಾಯರ ಸಮಾಜಮುಖಿ ಚಿಂತನೆಯಂತೆ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಆರಂಭಗೊಂಡಿರುವ ಉಚಿತ ವೈದ್ಯಕೀಯ ಶಿಬಿರಕ್ಕೆ 2022ರ ಏಪ್ರಿಲ್ 3ರಂದು ಶಿಬಿರಕ್ಕೆ ಚಾಲನೆ ನೀಡಲಾಗಿತ್ತು.ಆ ಬಳಿಕ ಕಳೆದ 22 ತಿಂಗಳಲ್ಲಿ ಪ್ರತಿ ತಿಂಗಳ ಪ್ರಥಮ ಆದಿತ್ಯವಾರ ಉಚಿತ ವೈದ್ಯಕೀಯ ಶಿಬಿರ ನಡೆದಿದೆ.ದೇವಳಕ್ಕೆ ಬರುವ ಭಕ್ತಾದಿಗಳ ಅನುಕೂಲಕ್ಕೆ ತಕ್ಕಂತೆ ಪ್ರತಿ ತಿಂಗಳ ಶಿಬಿರದಲ್ಲಿ ವಿಶೇಷ ಚಿಕಿತ್ಸಾ ವಿಧಾನಗಳನ್ನು ಅಳವಡಿಸಿಕೊಂಡು ನುರಿತ ತಜ್ಞ ವೈದ್ಯರ ಮೂಲಕ ತಪಾಸಣೆ, ಚಿಕಿತ್ಸೆಗಳನ್ನು ನೀಡುತ್ತಾ ಬರಲಾಗುತ್ತಿದೆ.ಪ್ರತಿ ತಿಂಗಳ ಶಿಬಿರದಲ್ಲಿಯೂ ಮಧುಮೇಹ ತಪಾಸಣೆಯನ್ನು ನಿರಂತರವಾಗಿ ನಡೆಸಲಾಗಿದ್ದು ಸಾವಿರಾರು ಮಂದಿ ಶಿಬಿರಾರ್ಥಿಗಳು ತಪಾಸಣೆ ಮಾಡಿಸಿಕೊಂಡು ತಮ್ಮ ಆರೋಗ್ಯ ಕಾಪಾಡುವಲ್ಲಿ ಶಿಬಿರ ಮಹತ್ವದ ಪಾತ್ರ ವಹಿಸಿದೆ.ದೇವಸ್ಥಾನದ ವ್ಯವಸ್ಥಾಪನಾ ಸಮಿತಿ, ಆರೋಗ್ಯ ರಕ್ಷಾ ಸಮಿತಿ, ಸಂಪ್ಯ ನವಚೇತನಾ ಯುವಕ ಮಂಡಲ ಹಾಗೂ ಮುಕ್ರಂಪಾಡಿ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ, ಐಕ್ಯಕಲಾ ಸೇವಾ ಟ್ರಸ್ಟ್ ಮೊಟ್ಟೆತ್ತಡ್ಕ ಮೊದಲಾದ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಶಿಬಿರವು ಯಶಸ್ವಿಯಾಗಿ ಸಾಗುತ್ತಿದೆ.ಪ್ರತಿ ತಿಂಗಳ ಪ್ರಥಮ ಆದಿತ್ಯವಾರ ನಡೆಯುವ ಶಿಬಿರದಲ್ಲಿ ಪುತ್ತೂರು, ಸುಳ್ಯ ಹಾಗೂ ಮಂಗಳೂರಿನ ನುರಿತ ವೈದ್ಯರುಗಳ ತಂಡ ಪಾಲ್ಗೊಳ್ಳುತ್ತಿದೆ.ಹಲವು ಔಷಧ ಕಂಪನಿಗಳು, ಜನೌಷಧಿ ಕೇಂದ್ರಗಳು, ದಾನಿಗಳೂ ನೆರವಿನ ಹಸ್ತ ಚಾಚಿದ್ದಾರೆ.

4200ಕ್ಕೂ ಅಧಿಕ ಫಲಾನುಭವಿಗಳು: ಕಳೆದ 22 ತಿಂಗಳಲ್ಲಿ ನಡೆದ ಉಚಿತ ವೈದ್ಯಕೀಯ ಶಿಬಿರದಲ್ಲಿ ಸುಮಾರು 4200ಕ್ಕೂ ಅಧಿಕ ಫಲಾನುಭವಿಗಳು ಭಾಗವಹಿಸಿ ಪ್ರಯೋಜನ ಪಡೆದುಕೊಂಡಿದ್ದಾರೆ.ಪ್ರತಿ ತಿಂಗಳು ಸರಾಸರಿಯಾಗಿ 200ಕ್ಕೂ ಅಧಿಕ ಮಂದಿ ಶಿಬಿರಾರ್ಥಿಗಳು ಭಾಗವಹಿಸಿ ಪ್ರಯೋಜನ ಪಡೆದುಕೊಂಡಿರುತ್ತಾರೆ.ಸಾರ್ವಜನಿಕರ ಅಪೇಕ್ಷೆ ಹಾಗೂ ಬೇಡಿಕೆಯಂತೆ ವಿವಿಧ ತಪಾಸಣೆಗಳನ್ನು ಶಿಬಿರದಲ್ಲಿ ಅಳವಡಿಕೊಂಡು ನುರಿತ ವೈದ್ಯರ ಮೂಲಕ ತಪಾಸಣೆ ಹಾಗೂ ಚಿಕಿತ್ಸೆಗಳನ್ನು ನೀಡುತ್ತಾ ಬರಲಾಗುತ್ತಿದೆ.ಕಳೆದ ಮಾರ್ಚ್ ತಿಂಗಳಲ್ಲಿ ಶಿಬಿರದ ವಾರ್ಷಿಕ ಸಂಭ್ರಮ ನಡೆದಿದ್ದು ಈ ಸಂದರ್ಭ 12 ವಿಶೇಷ ಪ್ರತ್ಯೇಕ ವಿಭಾಗಗಳಲ್ಲಿ ಚಿಕಿತ್ಸೆ ಹಾಗೂ ತಪಾಸಣೆ ನಡೆಸಲಾಗಿತ್ತು.ಈ ವರ್ಷದ ಮಾರ್ಚ್ನಲ್ಲಿ ಎರಡನೇ ವರ್ಷದ ವಾರ್ಷಿಕ ಶಿಬಿರವನ್ನು ನಡೆಸಲು ಈಗಾಗಲೇ ಆಯೋಜಕರು ತೀರ್ಮಾನಿಸಿದ್ದಾರೆ.

ಇಲ್ಲಿ ಎಲ್ಲವೂ ಉಚಿತ…!: ಕಳೆದ 22 ತಿಂಗಳುಗಳಿಂದ ನಡೆಯುತ್ತಿರುವ ಶಿಬಿರದಲ್ಲಿ ರೋಗಿಗಳ ಅವಶ್ಯಕತೆಗೆ ಅನುಗುಣವಾಗಿ ತಪಾಸಣೆ, ಚಿಕಿತ್ಸೆ, ಒಂದು ತಿಂಗಳಿಗೆ ಸಾಕಾಗುವಷ್ಟು ಔಷಧಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ.ಚಿಕಿತ್ಸೆ, ಔಷಧಿಗಳ ಜೊತೆಗೆ ಶಿಬಿರಾರ್ಥಿಗಳಿಗೆ ಬೆಳಗ್ಗಿನ ಉಪಾಹಾರ, ಮಧ್ಯಾಹ್ನ ಊಟವನ್ನು ನೀಡಲಾಗುತ್ತಿರುವುದು ಇಲ್ಲಿನ ಶಿಬಿರದ ಇನ್ನೊಂದು ವಿಶೇಷತೆಯಾಗಿದೆ.

ಒಂದೇ ಸೂರಿನಡಿಯಲ್ಲಿ ಎಲ್ಲಾ ಸೇವೆ…!: ದೇವಸ್ಥಾನದ ವಠಾರದಲ್ಲಿ ನಡೆಯುವ ಶಿಬಿರದಲ್ಲಿ ಆಸ್ಪತ್ರೆಯಲ್ಲಿ ದೊರೆಯುವಂತೆ ಎಲ್ಲಾ ಸೌಲಭ್ಯಗಳು ಒಂದೇ ಕಡೆ ದೊರೆಯುತ್ತಿವೆÉ.ಚಿಕಿತ್ಸೆ, ತಪಾಸಣೆ ಹಾಗೂ ಔಷಧಿಗಳನ್ನು ಶಿಬಿರದಲ್ಲಿ ಒಂದೇ ಕಡೆ ವಿತರಿಸುವ ಮೂಲಕ ಶಿಬಿರಾರ್ಥಿಗಳಿಗೆ ಎಲ್ಲಾ ಸೌಲಭ್ಯಗಳು ಒಂದೇ ಸೂರಿನಡಿಯಲ್ಲಿ ಉಚಿತವಾಗಿ ದೊರೆಯುತ್ತಿದೆ.ಅಧ್ಯಕ್ಷರಾಗಿ ಪ್ರಸನ್ನ ಕುಮಾರ್ ಮಾರ್ತ, ಗೌರವಾಧ್ಯಕ್ಷರಾಗಿ ಅರುಣ್ ಕುಮಾರ್ ಪುತ್ತಿಲ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಉದಯ ಕುಮಾರ್ ರೈ ಎಸ್ ಹಾಗೂ ಇತರ ಪದಾಧಿಕಾರಿಗಳನ್ನು ಒಳಗೊಂಡ ಆರೋಗ್ಯ ರಕ್ಷಾ ಸಮಿತಿ ಕಾರ್ಯನಿರ್ವಹಿಸುತ್ತಿದೆ.ಒಟ್ಟಾರೆ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಳದಲ್ಲಿ ಉಚಿತವಾಗಿ ನಡೆಯುತ್ತಿರುವ ಮಾಸಿಕ ವೈದ್ಯಕೀಯ ಶಿಬಿರ ಇದೀಗ ರಾಷ್ಟçಮಟ್ಟದಲ್ಲಿ ಗಮನ ಸೆಳೆದಿದ್ದು ಇನ್ನಷ್ಟು ದೇವಸ್ಥಾನಗಳಲ್ಲಿ ಈ ರೀತಿಯ ಶಿಬಿರ ಆಯೋಜಿಸಲು ಉತ್ತೇಜನ ನೀಡಿದೆ.

LEAVE A REPLY

Please enter your comment!
Please enter your name here