ಗೋಳಿತ್ತೊಟ್ಟು: ರಾಷ್ಟ್ರಪಿತ ಮಹಾತ್ಮಗಾಂಧಿ ಪ್ರತಿಮೆ ಲೋಕಾರ್ಪಣೆ

0

ಮಹಾತ್ಮ ಗಾಂಧೀಜಿಯವರಷ್ಟು ರಾಮಭಕ್ತ ಬೇರೆ ಯಾರೂ ಇಲ್ಲ; ವಿನಯಕುಮಾರ್ ಸೊರಕೆ

ನೆಲ್ಯಾಡಿ: ನಿಲಿನಾ ಕೆ.ಜೋನ್ ನೆಲ್ಯಾಡಿ ಇವರ ಸವಿನೆನಪಿಗಾಗಿ ದೈಹಿಕ ಶಿಕ್ಷಣ ಶಿಕ್ಷಕ ಜೋನ್ ಕೆ.ಪಿ.ಅವರು ಕೊಡುಗೆಯಾಗಿ ಕಡಬ ತಾಲೂಕಿನ ಗೋಳಿತ್ತೊಟ್ಟು ಗ್ರಾಮದ ಗೋಳಿತ್ತೊಟ್ಟು ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆಯಲ್ಲಿ ನಿರ್ಮಾಣ ಮಾಡಿರುವ ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಪ್ರತಿಮೆ ಜ.27ರಂದು ಬೆಳಿಗ್ಗೆ ಲೋಕಾರ್ಪಣೆಗೊಳಿಸಲಾಯಿತು.

ಕರ್ನಾಟಕ ಸರಕಾರದ ನಗರಾಭಿವೃದ್ಧಿ ಇಲಾಖೆ ಮಾಜಿ ಸಚಿವರಾದ ವಿನಯಕುಮಾರ್ ಸೊರಕೆಯವರು ಪ್ರತಿಮೆ ಅನಾವರಣಗೊಳಿಸಿ ಮಾಲಾರ್ಪಣೆ ಮಾಡಿ ಪುಷ್ಪಾರ್ಚನೆ ಮಾಡಿದರು. ಬಳಿಕ ಮಾತನಾಡಿದ ವಿನಯಕುಮಾರ್ ಸೊರಕೆ ಅವರು, ಮಹಾತ್ಮ ಗಾಂಧೀಜಿಯವರು ಕೇವಲ ಭಾರತಕ್ಕೆ ಮಾತ್ರ ರಾಷ್ಟ್ರಪಿತ ಅಲ್ಲ. ಜಗತ್ತಿನ 224 ದೇಶಗಳೂ ಗಾಂಧೀಜಿಯವರ ತತ್ವವನ್ನು ಒಪ್ಪಿಕೊಂಡಿವೆ.

ಮಹಾತ್ಮಗಾಂಧೀಜಿಯವರದ್ದು ಸತ್ಯ, ಶಾಂತಿ, ಅಹಿಂಸೆಯ ಮೂಲಕ ಜಗತ್ತಿನ ಎಲ್ಲೂ ಜಯಗಳಿಸಬಹುದು ಎಂಬುದನ್ನು ತೋರಿಸಿಕೊಟ್ಟಿರುವಂತಹ ವ್ಯಕ್ತಿತ್ವವಾಗಿದೆ. ಜಗತ್ತಿನಲ್ಲಿ ಅಶಾಂತಿ ನಿರ್ಮಾಣಗೊಂಡ ಸಂದರ್ಭದಲ್ಲೂ ವಿಶ್ವಸಂಸ್ಥೆಯಲ್ಲಿ ಮಹಾತ್ಮಗಾಂಧೀಜಿಯವರ ಸತ್ಯ, ಶಾಂತಿ, ಅಹಿಂಸೆ ಬಗ್ಗೆ ಚರ್ಚೆ ನಡೆದಿದೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಶೃಂಗಸಭೆಗೆ ಆಗಮಿಸಿದ ವಿವಿಧ ರಾಷ್ಟ್ರಗಳ ಪ್ರಧಾನಿಗಳೂ ರಾಜ್‌ಘಾಟ್‌ಗೆ ತೆರಳಿ ಮಹಾತ್ಮಗಾಂಧೀಜಿಯವರ ಸಮಾಧಿಗೆ ಗೌರವ ಸಲ್ಲಿಸಿದ್ದಾರೆ. ಗಾಂಧೀಜಿಯವರದ್ದು ಎಲ್ಲರೂ ಗೌರವಿಸುವ ಅಭೂತಪೂರ್ವ ವ್ಯಕ್ತಿತ್ವವಾಗಿದೆ ಎಂದರು. ಗಾಂಧೀಜಿಯವರಷ್ಟು ರಾಮಭಕ್ತ ಬೇರೆ ಯಾರೂ ಇಲ್ಲ. ರಾಮನ ಭಜನೆ, ಪೂಜಿಸುವ ವ್ಯಕ್ತಿತ್ವ ಅವರದ್ದು. ಬಡವರ ಹೃದಯದಲ್ಲಿ ಭಗವಂತನ ದೇಗುಲವಿದೆ ಎಂಬ ಮಾತನ್ನು ಗಾಂಧೀಜಿಯವರು ಹೇಳಿದ್ದರು. ಎಲ್ಲಾ ಜಾತಿ, ಧರ್ಮ,ಪಕ್ಷದವರೂ ಒಪ್ಪುವ ವ್ಯಕ್ತಿ ಮಹಾತ್ಮಗಾಂಧೀಜಿಯವರು. ಅವರ ಸರಳ ಜೀವನ ಎಲ್ಲರಿಗೂ ಆದರ್ಶವಾಗಿದೆ. ಗ್ರಾಮೀಣ ಪ್ರದೇಶವಾದ ಗೋಳಿತ್ತೊಟ್ಟು ಶಾಲೆಯಲ್ಲಿ ಮಹಾತ್ಮಗಾಂಧೀಜಿಯವರ ಪ್ರತಿಮೆ ನಿರ್ಮಾಣವಾಗಿರುವುದು ದೇಶದ 140 ಕೋಟಿ ಭಾರತೀಯರೂ ಹೆಮ್ಮೆ ಪಡುವ ವಿಚಾರವಾಗಿದೆ. ಅದರಲ್ಲೂ ದೈಹಿಕ ಶಿಕ್ಷಣ ಶಿಕ್ಷಕರೊಬ್ಬರೂ ತಾನು ಕರ್ತವ್ಯ ನಿರ್ವಹಿಸಿದ ಶಾಲೆಯಲ್ಲಿ ಮಹಾತ್ಮಗಾಂಧೀಜಿಯವರ ಪ್ರತಿಮೆ ನಿರ್ಮಿಸಿ ಕೊಡುಗೆಯಾಗಿ ನೀಡಿರುವುದು ರಾಜ್ಯದಲ್ಲೇ ಪ್ರಥಮ ಆಗಿರಬಹುದು ಎಂದು ಹೇಳಿದರು.

ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ ನೆಲ್ಯಾಡಿ, ನೆಲ್ಯಾಡಿಯ ಉದ್ಯಮಿ ಕೆ.ಪಿ.ತೋಮಸ್, ಗೋಳಿತ್ತೊಟ್ಟು ಗ್ರಾ.ಪಂ.ಮಾಜಿ ಅಧ್ಯಕ್ಷ ಪೂವಪ್ಪ ಕರ್ಕೇರ, ಗೋಳಿತ್ತೊಟ್ಟು ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕಿ ಜಯಂತಿ ಬಿ.ಎಂ., ಸಾಮಾಜಿಕ ಕಾರ್ಯಕರ್ತರಾದ ಪ್ರಸಾದ್ ರಾಮಕುಂಜ, ಕುಶಾಲಪ್ಪ ಗೌಡ ಕಟ್ಟೆಮಜಲು, ನೆಲ್ಯಾಡಿ ಸೈಂಟ್ ಸ್ಟೀಫನ್ ಚರ್ಚ್‌ನ ಟ್ರಸ್ಟಿ ಬೈಜು ನೆಲ್ಯಾಡಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಬಾಲಚಂದ್ರ ಗುಂಡ್ಯ, ಸವಣೂರು ಸರಕಾರಿ ಹಿ.ಪ್ರಾ.ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಸುವರ್ಣ, ರಾಮಕುಂಜ ಸರಕಾರಿ ಹಿ.ಪ್ರಾ.ಶಾಲಾ ಮುಖ್ಯಶಿಕ್ಷಕ ಮಹೇಶ್, ಬಿಎಸ್‌ಎನ್‌ಎಲ್‌ನ ನಿವೃತ್ತ ಅಧಿಕಾರಿ ಶೇಖರ ಗೌಡ ಅನಿಲಭಾಗ್, ಎಸ್‌ಡಿಎಂಸಿ ಸದಸ್ಯ ಬೈಜು ಗೋಳಿತ್ತೊಟ್ಟು, ಗೋಳಿತ್ತೊಟ್ಟು ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆ ಶಿಕ್ಷಕಿಯರಾದ ತೇಜಸ್ವಿ, ತೇಜಸ್ವಿನಿ ಮತ್ತಿತರರು ಉಪಸ್ಥಿತರಿದ್ದರು.

ಎಸ್‌ಡಿಎಂಸಿ ಅಧ್ಯಕ್ಷ ಗೋಪಾಲ ಗೌಡ ಸ್ವಾಗತಿಸಿ, ಪ್ರತಿಮೆ ದಾನಿ, ದೈಹಿಕ ಶಿಕ್ಷಣ ಶಿಕ್ಷಕ ಜೋನ್ ಕೆ.ಪಿ.ವಂದಿಸಿದರು. ಕೆಯ್ಯೂರು ಕೆಪಿಎಸ್ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ, ಪುತ್ತೂರು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ನವೀನ್‌ಕುಮಾರ್ ರೈ ಅವರು ನಿರೂಪಿಸಿದರು.

LEAVE A REPLY

Please enter your comment!
Please enter your name here