ಇಂದಿನಿಂದ ಕುಮಾರಪರ್ವತ ಚಾರಣ ನಿಷೇಧ

0

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹಿಂಭಾಗದಲ್ಲಿರುವ ಕುಮಾರಪರ್ವತ ಚಾರಣವನ್ನು ಫೆ.1ರಿಂದ ನಿಷೇಧಿಸಲಾಗಿದೆ.

ಪ್ರಸ್ತುತ ಜಿಲ್ಲೆಯಾದ್ಯಂತ ಬಿರುಬಿಸಿಲಿನ ವಾತಾವರಣ ಇರುವುದು ಮತ್ತು ಪರ್ವತದಲ್ಲಿ ನೀರಿನ ಸಮಸ್ಯೆ ಎದುರಾಗುವ ಹಿನ್ನೆಲೆಯಲ್ಲಿ ಚಾರಣಿಗರ ಹಿತದೃಷ್ಟಿಯಿಂದ ಫೆ.1ರಿಂದ ಅಕ್ಟೋಬರ್ ತನಕ ಅಥವಾ ಮುಂದಿನ ಆದೇಶದ ತನಕ ಕುಮಾರಪರ್ವತ ಚಾರಣ ನಿಷೇಧಿಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಈ ವರ್ಷದ ಕುಮಾರಪರ್ವತ ಚಾರಣದ ಅವಧಿ ಮುಗಿದಿದೆ. ಅಲ್ಲದೆ ಪರ್ವತದ ಹುಲ್ಲುಗಾವಲು ಸಂಪೂರ್ಣ ಒಣಗಿರುವುದರಿಂದ ಮುಂದೆ ಬಿಸಿಲಿನ ಬೇಗೆಗೆ ಬೆಂಕಿಗೆ ತುತ್ತಾಗದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ. ಇದೀಗ ಕುಮಾರಪರ್ವತಕ್ಕೆ ಬರುವ ಚಾರಣಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಬೇಸಗೆಯ ಕಾರಣ ನೀರಿನ ಮೂಲಗಳು ಬತ್ತಿ ಹೋಗಿವೆ. ಚಾರಣಿಗರು ತಂಗುವ ಗಿರಿಗದ್ದೆಯಲ್ಲಿ ಕುಡಿಯುವ ನೀರು ಮತ್ತು ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಒದಗಿಸಲು ತೊಂದರೆಯಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಕೆಲವು ದಿನಗಳ ಹಿಂದೆ ಸರಣಿ ರಜೆಯ ಹಿನ್ನೆಲೆಯಲ್ಲಿ ಕುಮಾರ ಪರ್ವತ ಚಾರಣಕ್ಕೆ ಒಂದೇ ದಿನ ಸಾವಿರಕ್ಕಿಂತ ಅಧಿಕ ಸಂಖ್ಯೆಯ ಚಾರಣಿಗರು ಆಗಮಿಸಿದ್ದರು. ಈ ಬಗ್ಗೆ ಪರಿಸರ ಪ್ರೇಮಿಗಳು ಅಸಮಾಧಾನ ಹಾಗೂ ಆತಂಕ ವ್ಯಕ್ತಪಡಿಸಿದ್ದರು. ಸಾವಿರಾರು ಸಂಖ್ಯೆಯ ಚಾರಣಿಗರ ಆಗಮನದಿಂದ ನಿಯಂತ್ರಣ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗೆ ತಪಾಸಣೆ ಮಾಡಿ ಬಿಡುವುದು ಸವಾಲಾಗುತ್ತದೆ. ಪರಿಸರಕ್ಕೂ ಹಾನಿಯಾಗುವ ಆತಂಕವನ್ನು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ವ್ಯಕ್ತಪಡಿಸಿದ್ದರು.

ಮುಂದೆ ಚಾರಣಕ್ಕೆ ಆನ್‌ಲೈನ್ ಬುಕ್ಕಿಂಗ್ : ಕುಕ್ಕೆ ಸುಬ್ರಹ್ಮಣ್ಯದ ಕುಮಾರ ಪರ್ವತ ಚಾರಣಕ್ಕೆ ಫೆಬ್ರವರಿ 1ರಿಂದ ನಿಷೇಧ ಹೇರಲಾಗಿದ್ದು, ಮುಂದಿನ ಅಕ್ಟೋಬರ್ ಅಥವಾ ಮುಂದಿನ ಆದೇಶದ ಬಳಿಕ ಆರಂಭವಾಗುವ ಚಾರಣ ಪ್ರವೇಶಕ್ಕೆ ಸಂಪೂರ್ಣ ಆನ್‌ಲೈನ್ ಬುಕ್ಕಿಂಗ್ ಮೂಲಕವೇ ಪ್ರವೇಶಕ್ಕೆ ವ್ಯವಸ್ಥೆ ಮಾಡುವ ಬಗ್ಗೆ ಅರಣ್ಯ ಇಲಾಖೆ ಯೋಜನೆ ರೂಪಿಸಲಿದೆ. ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here