ಪುತ್ತೂರು: ಬೆಳ್ತಂಗಡಿ ತಾಲೂಕಿನ ವೇಣೂರು ಭಾಗದ ಕುಕ್ಕೇಡಿ ಎಂಬಲ್ಲಿ ಮೂವರ ಸಾವಿಗೆ ಕಾರಣವಾದ ಸುಡುಮದ್ದು ಸ್ಪೋಟ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ದ ಮೂಲಕ ತನಿಖೆ ನಡೆಸಬೇಕು ಎಂದು ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ಮೋಹನ್‌ದಾಸ್ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ಸ್ಪೋಟದ ಭೀಕರತೆ ಸುಮಾರು 4 ಕಿ.ಮೀ ದೂರ ವ್ಯಾಪ್ತಿಯಲ್ಲಿ ಕಂಪನ ಸೃಸ್ಟಿಸಿದೆ. ಸುಮಾರು 200 ಮೀಟರ್ ದೂರಕ್ಕೆ ಮೃತ ವ್ಯಕ್ತಿಗಳ ದೇಹಗಳು ಛಿದ್ರವಾಗಿ ಚೆಲ್ಲಾಡಿವೆ. ಘಟನೆಯಲ್ಲಿ ಮೂವರು ಪ್ರಾಣ ತೆತ್ತಿದ್ದಾರೆ. ಸುಮಾರು 6ಕ್ಕೂ ಹೆಚ್ಚು ಮಂದಿಗೆ ಗಂಭೀರವಾದ ಗಾಯಗಳಾಗಿವೆ. ಕೇವಲ ಪಟಾಕಿ ಸುಡುಮದ್ದಿನಿಂದ ಇಂತಹ ಭೀಕರತೆ ಉಂಟಾಗಲು ಸಾಧ್ಯವಿಲ್ಲ ಎಂಬ ಅನುಮಾನ ಉಂಟಾಗಿದೆ. ಹಾಗಾಗಿ ಸ್ಥಳೀಯ ಪೊಲೀಸರ ತನಿಖೆಯಿಂದ ಇದರ ಮೂಲ ಹುಡುಕುವ ಕೆಲಸ ಅಸಾಧ್ಯವಾಗಿದೆ. ತನಿಖಾದಳವೇ ಈ ತನಿಖೆ ಕೈಗೊಂಡರೆ ನಿಜವಾದ ಮೂಲ ಹುಡುಕಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್, ಕೇರಳದ ಚರ್ಚ್ ನಲ್ಲಿ ಬಾಂಬ್ ಸ್ಪೋಟ ಘಟನೆಗಳ ಸಾಮ್ಯತೆಯೂ ಕಂಡುಬಂದಿರುವ ಈ ಪ್ರಕರಣದಲ್ಲಿ ನಿಗೂಢ ಕೈಗಳ ಕೈವಾಡ ಇರುವ ಸಾಧ್ಯತೆ ಇದ್ದು, ಸಮರ್ಪಕವಾದ ತನಿಖೆ ನಡೆಯಬೇಕಾಗಿದೆ ಎಂದ ಅವರು, ಜಾತ್ರೋತ್ಸವ ಕಾರ್ಯಕ್ರಮಗಳಿಗೆ ಸುಡುಮದ್ದು ತಯಾರಿಸುವ ಸ್ಪೋಟಕಗಳಂತೆ ಕಂಡುಬರುತ್ತಿಲ್ಲ.ಅಷ್ಟೊಂದು ಬೃಹತ್ ಪ್ರಮಾಣದ ಸುಡುಮದ್ದು ಎಲ್ಲಿಂದ ಬಂದಿದೆ ಎಂಬ ಬಗ್ಗೆಯೂ ತನಿಖೆ ನಡೆಯಬೇಕಾಗಿದೆ. ಇದೀಗ ಪೊಲೀಸರ ಬಂಧನದಲ್ಲಿರುವ, ಸುಡುಮದ್ದು ತಯಾರಿಕಾ ಘಟಕ ಹಾಗೂ ಜಮೀನಿನ ಮಾಲಕ ಬಶೀರ್‌ಗೆ ಎಷ್ಟು ದಾಸ್ತಾನು ಮಾಡುವ ಹಾಗೂ ಎಷ್ಟು ಸುಡುಮದ್ದು ತಯಾರಿಕೆಗೆ ಅವಕಾಶ ನೀಡಲಾಗಿತ್ತು ಎಂಬುವುದೂ ತನಿಖೆಗೆ ಒಳಪಡಬೇಕು. ಪಟಾಕಿ ತಯಾರಿಕೆಗೆ ಪರವಾನಿಗೆ ಪಡೆದಿದ್ದರೂ ಅಪಾರ ಪ್ರಮಾಣದಲ್ಲಿ ಸುಡುಮದ್ದು ದಾಸ್ತಾನಿಗೆ ಹೇಗೆ ಅವಕಾಶ ನೀಡಿದ್ದಾರೆ ಎಂಬುದು ಬಹಿರಂಗವಾಗಬೇಕು ಎಂದು ಹೇಳಿದರು.
ಪೊಲೀಸರ ತನಿಖೆಯಲ್ಲಿ ನಂಬಿಕೆ ಇಲ್ಲ..
ಈ ಪ್ರಕರಣದಲ್ಲಿ ಪೊಲೀಸರ ತನಿಖೆ ಸರಿಯಾದ ರೀತಿಯಲ್ಲಿ ನಡೆಯುತ್ತದೆ ಎಂಬ ನಂಬಿಕೆ ನಮಗಿಲ್ಲ. ಪೊಲೀಸ್ ಇಲಾಖೆ ರಾಜ್ಯ ಸರ್ಕಾರದ ಕೈಗೊಂಬೆಯಾಗಿದೆ. ಹಾಗಾಗಿ ಎನ್‌ಐಎಯಿಂದ ತನಿಖೆ ನಡೆಸುವುದು ಸೂಕ್ತವಾಗಿದೆ. ಈ ಸ್ಪೋಟದಿಂದ ಕುಕ್ಕೇಡಿ ಭಾಗದ ಜನತೆಯಲ್ಲಿ ಆತಂಕ ಉಂಟಾಗಿದೆ. ಈ ಘಟನೆಯಲ್ಲಿ ಉಗ್ರಗಾಮಿಗಳ ಕೈವಾಡದ ಸಂಚು ಇರುವ ಸಾಧ್ಯತೆಯ ಬಗ್ಗೆಯೂ ತನಿಖೆ ನಡೆಯಬೇಕು. ಈ ಪ್ರಕರಣದಲ್ಲಿನ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು. ಮುಂದೆ ಜಿಲ್ಲೆಯಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕಾನೂನುಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಇಲಾಖೆ ಹಾಗೂ ರಾಜ್ಯಸರ್ಕಾರವನ್ನು ಆಗ್ರಹಿಸುವುದಾಗಿ ಅವರು ಹೇಳಿದರು. ಗೋಷ್ಠಿಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಪ್ರಾಂತ ಸಹ ಸಂಯೋಜಕ ಅಜಿತ್ ರೈ ಹೊಸಮನೆ, ಸಹ ಸಂಯೋಜಕರಾದ ಅನೂಪ್ ಕುಮಾರ್ ಸುಳ್ಯ, ನಿರಂಜನ ವೇಣೂರು ಹಾಗೂ ದಿನೇಶ್ ಪಂಜಿಗ ಉಪಸ್ಥಿತರಿದ್ದರು.