ಪುತ್ತೂರು: ಹತ್ತು ಹಲವು ಕಾರಣಿಕತೆಗಳ ಮೂಲಕ ಊರಪರವೂರ ಭಕ್ತ ಸಮೂಹವನ್ನು ಹೊಂದಿರುವ ಶ್ರೀ ವಿಷ್ಣುವಿಗೆ ಅತೀ ಪ್ರಿಯವಾದ ಹಾಲು ಪಾಯಸದಂತಹ ಹರಕೆಯನ್ನು ಪಡೆದು ಭಕ್ತರ ಸಕಲ ಇಷ್ಟಾರ್ಥಗಳನ್ನು ಈಡೇರಿಸುತ್ತಾ ಬಂದಿರುವ ಸರ್ವೆ ಗ್ರಾಮದ ಎಲಿಯ ಶ್ರೀ ವಿಷ್ಣುಮೂರ್ತಿ ದೇವರ ದ್ವಿತೀಯ ಪ್ರತಿಷ್ಠಾ ವರ್ಧಂತಿ ಹಾಗೂ ಉತ್ಸವ ` ಎಲಿಯ ಜಾತ್ರೆ’ ಫೆ.6 ಮತ್ತು 7ರಂದು ಸಂಭ್ರಮದಿಂದ ಜರಗಲಿದೆ. ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ದೇವಳದ ಎಲ್ಲಾ ಸಮಿತಿಗಳು ಹಾಗೂ ಊರ ಕೂಡುಕಟ್ಟಿನ ಯಜಮಾನತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆಯೊಂದಿಗೆ ಎಲಿಯ ಜಾತ್ರಾ ಮಹೋತ್ಸವ ನಡೆಯಲಿದೆ.
ಫೆ.6ರಂದು ಬೆಳಿಗ್ಗೆ 3 ಕಾಯಿ ಗಣಪತಿ ಹೋಮ, ಸಾನಿಧ್ಯ ಕಲಶಪೂಜೆ, ಪುಣ್ಯಾಹ, ಪಂಚಗವ್ಯ, ಪಂಚಾಮೃತಾಭಿಷೇಕ, ಸಾನಿಧ್ಯ ಕಲಶಾಭಿಷೇಕ ಮತ್ತು ದೇವಳದ ನಾಗಬನದಲ್ಲಿ ನಾಗತಂಬಿಲ ಸೇವೆ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ರಂಗ ಪೂಜೆ, ಶ್ರೀ ಭೂತ ಬಲಿ, ಸೇವಾ ಸುತ್ತುಗಳು, ನೃತ್ಯಬಲಿ, ರಾಜಾಂಗಣ ಪ್ರಸಾದ, ಬಟ್ಟಲು ಕಾಣಿಕೆ, ಮಂತ್ರಾಕ್ಷತೆ ಬಳಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.
ದೇವರ ಜಾತ್ರಾ ಮಹೋತ್ಸವ ಹಾಗೂ ಶ್ರೀ ದೈವಗಳ ನೇಮೋತ್ಸವ ಕಾರ್ಯಕ್ರಮಗಳಲ್ಲಿ ಊರಪರವೂರ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೈವ ದೇವರ ಗಂಧ ಪ್ರಸಾದ, ಅನ್ನಪ್ರಸಾದವನ್ನು ಸ್ವೀಕರಿಸುವಂತೆ ಜಾತ್ರಾ ಸಮಿತಿಯ ಗೌರವಾಧ್ಯಕ್ಷರುಗಳಾದ ಬೂಡಿಯಾರ್ ರಾಧಾಕೃಷ್ಣ ರೈ, ರಾಜಾರಾಮ್ ಮಡಂಬಡಿತ್ತಾಯ ಸೊರಕೆ, ಶಾಸಕರಾದ ಅಶೋಕ್ ಕುಮಾರ್ ರೈ, ಪ್ರಧಾನ ಅರ್ಚಕ ನಾಗೇಶ ಕಣ್ಣಾರಾಯ ಎಲಿಯ, ಸಂಚಾಲಕರಾದ ಲಕ್ಷ್ಮೀನಾರಾಯಣ ಕಡಂಬಳಿತ್ತಾಯ ಪಿ, ಜಾತ್ರಾ ಸಮಿತಿ ಅಧ್ಯಕ್ಷ ಶಿವರಾಮ ರೈ ಸೊರಕೆ, ಶ್ರೀ ಕ್ಷೇತ್ರದ ಆಡಳಿತಾಧಿಕಾರಿ ಉಮೇಶ್ ಕಾವಾಡಿ, ಜಾತ್ರಾ ಸಮಿತಿ ಕೋಶಾಧಿಕಾರಿ ಮಜಿತ್ ಸುವರ್ಣ ಸೊರಕೆ, ಕಾರ್ಯದರ್ಶಿ ರಜನಿಕಾಂತ ಬಾಳಾಯ,ಪವಿತ್ರಪಾಣಿ ಬಾಲಕೃಷ್ಣ ಮುಡಂಬಡಿತ್ತಾಯ ಸೊರಕೆ ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಜಾತ್ರಾ ಸಮಿತಿಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರುಗಳು, ವಿವಿಧ ಸಮಿತಿಗಳ ಸಂಚಾಲಕರು ಮತ್ತು ಸದಸ್ಯರುಗಳು ಹಾಗೂ ಸರ್ವೆ, ಮುಂಡೂರು, ಕೆದಂಬಾಡಿ, ಕೆಯ್ಯೂರು ಗ್ರಾಮದ ಸಮಸ್ತ ಭಕ್ತಾಧಿಗಳ ಪ್ರಕಟಣೆ ತಿಳಿಸಿದೆ.
ಫೆ.7: ನೇಮೋತ್ಸವ ಸಂಭ್ರಮ
ಫೆ.7ರಂದು ಶ್ರೀ ಕ್ಷೇತ್ರದ ದೈವಗಳಿಗೆ ನೇಮೋತ್ಸವ ನಡೆಯಲಿದೆ. ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ ನಡೆದು ಸಂಜೆ 5 ಗಂಟೆಗೆ ದೇವಳದ ಪರಿವಾರ ದೈವಗಳಾದ ಪಿಲಿಭೂತ, ರಕ್ತೇಶ್ವರಿ, ಶಿರಾಡಿ ದೈವ, ಕುಪ್ಪೆ ಪಂಜುರ್ಲಿ ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮ, 6 ಗಂಟೆಗೆ ಅಡ್ಕರೆಗುಂಡಿಯಿಂದ ದೇವಳದ ಕಾವಲು ದೈವ ಗುಳಿಗನ ಭಂಡಾರವನ್ನು ಮೆರವಣಿಗೆಯೊಂದಿಗೆ ದೇವಳಕ್ಕೆ ತರುವ ಕಾರ್ಯಕ್ರಮ ನಡೆದು ಬಳಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಬಳಿಕ ಶ್ರೀ ದೈವಗಳಿಗೆ ವೈಭವದ ನೇಮೋತ್ಸವ ನಡೆಯಲಿದೆ.
ಫೆ.5: ಹಸಿರು ಹೊರೆಕಾಣಿಕೆ ಸಮರ್ಪಣೆ
ಎಲಿಯ ಜಾತ್ರೋತ್ಸವಕ್ಕೆ ಹಸಿರು ಹೊರೆಕಾಣಿಕೆ ಸಮರ್ಪಣೆ ಫೆ.5ರಂದು ಬೆಳಿಗ್ಗೆ ನಡೆಯಲಿದೆ. ದ್ವಿತೀಯ ಪ್ರತಿಷ್ಠಾ ವರ್ಧಂತಿಗೆ ಹಸಿರು ಹೊರೆಕಾಣಿಕೆಯಾಗಿ ಸೋನಾಮಸೂರಿ ಬೆಳ್ತಿಗೆ ಅಕ್ಕಿ, ತೆಂಗಿನ ಕಾಯಿ, ಅಡಿಕೆ ಗೊನೆ, ಸಿಯಾಳ ಗೊನೆ, ಬಾಳೆ ಗೊನೆ, ತರಕಾರಿ, ದನದ ತುಪ್ಪ, ದನದ ಹಾಲು, ಎಳ್ಳೆಣ್ಣೆ, ತೆಂಗಿನೆಣ್ಣೆ, ಬೆಲ್ಲ, ಸಕ್ಕರೆ, ಬಾಳೆಎಲೆ, ಹೂವು, ಹಿಂಗಾರ, ತುಳಸಿ, ಮಲ್ಲಿಗೆ, ಸೇವಂತಿಗೆ ಇತ್ಯಾದಿ ವಸ್ತುಗಳನ್ನು ಸ್ವೀಕರಿಸಲಾಗುವುದು. ಹಸಿರು ಹೊರೆಕಾಣಿಕೆ ಮೆರವಣಿಗೆಯು ಬೆಳಿಗ್ಗೆ ತಿಂಗಳಾಡಿ ಮಾರಿಯಮ್ಮ ದೇವಸ್ಥಾನದ ಬಳಿಯಿಂದ ವಾಹನ ಮತ್ತು ಕಾಲ್ನಡಿಗೆ ಜಾಥದ ಮೂಲಕ ದೇವಸ್ಥಾನಕ್ಕೆ ತೆರಳಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೇವಳದ ಪ್ರಕಟಣೆ ತಿಳಿಸಿದೆ.