ಪುತ್ತೂರು: ಪುತ್ತಿಲ ಪರಿವಾರದ ಕಾರ್ಯಕರ್ತರ ಮತ್ತು ಬೆಂಬಲಿಗರ ಸಭೆ ನಗರದ ಕೊಟೇಚಾ ಹಾಲ್‌ನಲ್ಲಿ ಆರಂಭಗೊಂಡಿದೆ. ಪುತ್ತಿಲ ಪರಿವಾರದ ನಾಯಕ, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಪರಿಹಾರ ಕಂಡುಕೊಳ್ಳುವಲ್ಲಿ ಪಕ್ಷದ ಜಿಲ್ಲಾ ನಾಯಕರಿಗೆ ಸಾಧ್ಯವಾಗಿಲ್ಲ. ಪಕ್ಷದ ಕೆಲವು ಸ್ಥಳೀಯ ಮುಖಂಡರು ಪುತ್ತಿಲ ಬಿಜೆಪಿ ಸೇರ್ಪಡೆಯನ್ನು ವಿರೋಧಿಸುತ್ತಿದ್ದು, ಪಕ್ಷದ ಸ್ಥಳೀಯ ನಾಯಕರಲ್ಲಿ ವಿಷಾದ ವ್ಯಕ್ತಪಡಿಸಿ, ಬೇಷರತ್ತಾಗಿ, ಪರಿವಾರವನ್ನು ವಿಸರ್ಜಿಸಿ ಪಕ್ಷ ಸೇರ್ಪಡೆಯಾಗಬೇಕೆಂದು ಷರತ್ತು ವಿಧಿಸಿದ್ದರು. ದ.ಕ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹುದ್ದೆಯನ್ನು ನೀಡಲು ಮುಂದಾಗಿದ್ದ ಜಿಲ್ಲಾ ಬಿಜೆಪಿ ವರಿಷ್ಠರ ಕೊಡುಗೆಯನ್ನು ಪುತ್ತಿಲ ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಪುತ್ತಿಲ ಬಯಸಿದಂತೆ ಹುದ್ದೆ ನೀಡಲು ತಾಂತ್ರಿಕ ಸಮಸ್ಯೆಯಿದ್ದು ಅದು ಸಾಧ್ಯವಿಲ್ಲ ಎಂದು ಹೇಳಿರುವುದು ಸಮಸ್ಯೆ ಪರಿಹಾರದ ಜಟಿಲತೆಯನ್ನು ಇನ್ನಷ್ಟು ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಪಕ್ಷ ಸೇರ್ಪಡೆ ಕುರಿತು ಕಾರ್ಯಕರ್ತರ ಮತ್ತು ಬೆಂಬಲಿಗರ ಸಭೆ ಕರೆದು ಬಿಜೆಪಿ ಸೇರ್ಪಡೆ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದರು. ಅದರಂತೆ ಇಂದು ಕೊಟೇಚಾ ಹಾಲ್ ನಲ್ಲಿ ಸಭೆ ನಡೆಯುತ್ತಿದ್ದು, ನೂರಾರು ಕಾರ್ಯಕರ್ತರು ಮತ್ತು ಬೆಂಬಲಿಗರು ಸಭೆಯಲ್ಲಿ ಭಾಗವಹಿಸಿದ್ದಾರೆ. ಸಭೆಯ ತೀರ್ಮಾನ ಇನ್ನೂ ಹೊರ ಬಿದ್ದಿಲ್ಲ.