ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಅರುಣ್ ಕುಮಾರ್ ಪುತ್ತಿಲ-ಕರಾವಳಿಗೆ ಚೆಂಬು ಕೊಟ್ಟು ಯಾವ ಮುಖದಲ್ಲಿ ಮಂಗಳೂರಿನಲ್ಲಿ ಕಾಂಗ್ರೆಸ್ ಸಮಾವೇಶ ಮಾಡುತ್ತಿರಿ..? – ಮುಖ್ಯಮಂತ್ರಿಗೆ ಪುತ್ತಿಲ ಪ್ರಶ್ನೆ

0

ಪುತ್ತೂರು: ರಾಜ್ಯ ಬಜೆಟ್‌ನಲ್ಲಿ ಕರಾವಳಿಗೆ ಚೆಂಬು ಕೊಟ್ಟು ಯಾವ ಮುಖ ಇಟ್ಟುಕೊಂಡು ಫೆ.17ರಂದು ಮಂಗಳೂರಿನಲ್ಲಿ ಕಾಂಗ್ರೆಸ್ ಸಮಾವೇಶ ಮಾಡಲಿದ್ದೀರಿ ಎಂದು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪ್ರಶ್ನಿಸಿದ್ದಾರೆ.


2024-25ನೇ ಸಾಲಿನ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಅರುಣ್ ಕುಮಾರ್ ಪುತ್ತಿಲ, ಸಿದ್ದರಾಮಯ್ಯ ನಡೆ ನುಡಿಯಂತೆ ಮಿತಿ ಮೀರಿ ಅಲ್ಪಸಂಖ್ಯಾತರ ಓಲೈಕೆ ಮಾಡಿ ಬಹುಸಂಖ್ಯಾತರನ್ನು ಕಡೆಗಣಿಸಿರುವ ಬಜೆಟ್ ಆಗಿದೆ. ಲೋಕಸಭಾ ಚುನಾವಣೆಗೂ ಪೂರ್ವ ಕೇವಲ ತಮ್ಮ ವೋಟ್ ಬ್ಯಾಂಕ್ ಅಲ್ಪಸಂಖ್ಯಾತರ ಮಿತಿ ಮೀರಿದ ಓಲೈಕೆಯ ಸಿದ್ದು ಬಜೆಟ್ 2024 ಎನ್ನಬಹುದು. ಅಲ್ಪಸಂಖ್ಯಾತ ಸಮುದಾಯಕ್ಕೆ ನೀಡಿರುವ ಅನೇಕ ವಿಶೇಷ ಯೋಜನೆಗಳು ಮಾನ್ಯ ಮುಖ್ಯಮಂತ್ರಿಗಳು ಬಹುಸಂಖ್ಯಾತ ಸಮುದಾಯವನ್ನು ಕಡೆಗಣಿಸಿರುವುದಕ್ಕೆ ಸಾಕ್ಷಿಯಾಗಿದೆ. ಬಜೆಟ್‌ನಲ್ಲಿ ಕರಾವಳಿಯನ್ನು ಕಡೆಗಣಿಸಲಾಗಿದೆ. ಹಳದಿ ರೋಗ, ಎಲೆಚುಕ್ಕಿ ರೋಗ ಭಾದೆಯಿಂದ ಬಳಲುತ್ತಿರುವ ಅಡಿಕೆ ಬೆಳೆಗಾರರನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಪುತ್ತೂರಿನ ಮೆಡಿಕಲ್ ಕಾಲೇಜು ಈ ಬಾರಿಯ ಬಜೆಟ್ ನಲ್ಲೂ ಮರೀಚಿಕೆಯಾಗಿದೆ. ಮುಖ್ಯಮಂತ್ರಿಗಳು ತನ್ನ ಆರ್ಥಿಕ ನೀತಿಗಳ ವಿಫಲತೆಗಳನ್ನು ಮುಚ್ಚಿಟ್ಟು ಇಂದಿನ ಆರ್ಥಿಕ ಪರಿಸ್ಥಿತಿಯ ದುಸ್ಥಿತಿಗೆ ಕೇಂದ್ರವನ್ನು ದೂರುವುದಕ್ಕಾಗಿ ತನ್ನ ಬಜೆಟ್ ಭಾಷಣವನ್ನು ಉಪಯೋಗಿಸಿರುವುದು ದುರಂತ. ಕೇಂದ್ರದಿಂದ ರಾಜ್ಯಗಳಿಗೆ ತೆರಿಗೆ ಹಂಚಿಕೆಯಾಗುವ ನಿಯಮಗಳು ಹಣಕಾಸು ಆಯೋಗದ ಮಾರ್ಗದರ್ಶಿ ಸೂತ್ರದಂತೆ ನಿರಂತರವಾಗಿ ನಡೆದುಕೊಂಡು ಬರುತ್ತಿದೆ ಎನ್ನುವ ಕನಿಷ್ಠ ಜ್ಞಾನವಾದರೂ ಇದ್ದಿದ್ದರೆ ಈ ಬೇಜವಾಬ್ದಾರಿಯ ಹೇಳಿಕೆ ಬಜೆಟ್ ಭಾಷಣದ ಭಾಗವಾಗುತ್ತಿರಲಿಲ್ಲ ಎಂದು ಪುತ್ತಿಲ ಟೀಕಿಸಿದ್ದಾರೆ.

ಒಂದೆಡೆ ಕೇಂದ್ರವನ್ನು ದೂಷಿಸುತ್ತಾ, ತನ್ನ ಬಜೆಟ್ ನ ಅನುದಾನಗಳ ಪೂರೈಕೆಗೆ ಕೇಂದ್ರದ ಮೊರೆ ಹೋಗುವುದು ಆರ್ಥಿಕ ಸೋಗಲಾಡಿತನಕ್ಕೆ ’ಸಿದ್ದು ಮಾದರಿ’ ಎನ್ನಬಹುದು. ಜೊತೆಗೆ ಕೇಂದ್ರದ ಯೋಜನೆಗಳನ್ನು ತನ್ನ ಯೋಜನೆಗಳೆಂದು ಬಿಂಬಿಸುವ ವ್ಯರ್ಥ ಪ್ರಯತ್ನ ಈ ಬಜೆಟ್‌ನಲ್ಲಿ ಎದ್ದು ಕಾಣುತ್ತಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಮಿತಿಮೀರಿದ ಸಾಲದ ಮೊರೆ ಹೋಗಿರುವುದು ಮುಂಬರುವ ದಿನಗಳಲ್ಲಿ ಆರ್ಥಿಕ ವಿಪತ್ತುಗಳಿಗಷ್ಟೇ ಗ್ಯಾರಂಟಿ ಎನ್ನಿಸುವ ಓಲೈಕೆ ಬಜೆಟ್ ಇದಾಗಿದೆ. ಕರಾವಳಿ ಭಾಗದಿಂದ ತೆರಿಗೆ ಸಂಗ್ರಹ ಹೆಚ್ಚಿದ್ದರೂ ರಾಜ್ಯದ ಎಲ್ಲಾ ಭಾಗದ ಜನರ ಹಿತದೃಷ್ಟಿಯಿಂದ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು. ಆದರೆ ಕರಾವಳಿಯನ್ನು ಈ ಬಜೆಟ್‌ನಲ್ಲಿ ಸಂಪೂರ್ಣ ಕಡೆಗಣಿಸಲಾಗಿದೆ. ಕರಾವಳಿಗರ ತೆರಿಗೆ ಸಂಗ್ರಹ ಮಾತ್ರ ಕೈಚಾಚುವ ಸಿದ್ದರಾಮಯ್ಯ ಸರ್ಕಾರ ಈ ಭಾಗ ರಾಜ್ಯದೊಳಗಿದೆ ಎನ್ನುವುದನ್ನು ಮರೆತಂತಿದೆ. ಬಜೆಟ್ ನಲ್ಲಿ ಕರಾವಳಿಯನ್ನು ಮರೆತ ಸಿದ್ದರಾಮಯ್ಯ ನಾಳೆ (ಫೆ.17) ಕಾಂಗ್ರೇಸ್ ಸಮಾವೇಶವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಈ ಬಾರಿ ಕರಾವಳಿಗರು ಕಾಂಗ್ರೇಸ್‌ನ ಈ ಕಡೆಗಣನೆ ಭಾವನೆಗೆ ಪಾಠ ಕಳುಹಿಸುವುದು ಕೂಡ ’ಗ್ಯಾರಂಟಿ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

LEAVE A REPLY

Please enter your comment!
Please enter your name here