ಕಡಬ ತಹಶೀಲ್ದಾರ್ ಮೂಲಕ ದಯಾಮರಣ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ ವೃದ್ಧ ದಂಪತಿ

0

ಕಡಬ : ವ್ಯಕ್ತಿಯೊಬ್ಬರು ತಾವು ವಾಸಿಸುತ್ತಿರುವ ಮನೆಯನ್ನು ತೆರವುಗೊಳಿಸುವಂತೇ ನ್ಯಾಯಾಲಯದಿಂದ ಆದೇಶ ತಂದ ಹಿನ್ನೆಲೆಯಲ್ಲಿ ವೃದ್ಧ ದಂಪತಿ ತಮಗೆ ದಯಾಮರಣ ಕರುಣಿಸುವಂತೆ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ ಘಟನೆ ಕಡಬದಲ್ಲಿ ನಡೆದಿದೆ.


ರಾಧಮ್ಮ ಮತ್ತು ಮುತ್ತುಸ್ವಾಮಿ ಎಂಬವರು ಕಡಬ ತಾಲೂಕಿನ ಉಪ್ಪಿನಂಗಡಿ ಹೋಬಳಿಯ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಎಂಬಲ್ಲಿ ಸರ್ಕಾರಿ ಜಾಗವೊಂದರಲ್ಲಿ ಕಳೆದ 6 ವರ್ಷಗಳಿಂದ ವಾಸವಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಹುಟ್ಟಿ ಬೆಳೆದಿರುವ ಇವರು ಕಳೆದ ಸುಮಾರು 6 ವರ್ಷಗಳ ಹಿಂದೆ ಕೂಲಿ ಕೆಲಸಕ್ಕಾಗಿ ಇಲ್ಲಿಗೆ ಆಗಮಿಸಿ, ಇಲ್ಲೇ ಕೂಲಿ ಕೆಲಸ ಮಾಡುತ್ತಾ ನೆಲೆಸಿದ್ದಾರೆ.ಕೂಲಿ ಕೆಲಸದಿಂದ ಬಂದ ಸುಮಾರು ಐವತ್ತು ಸಾವಿರ ರೂಪಾಯಿ ಹಣವನ್ನು ಒಬ್ಬರಿಗೆ ನೀಡಿ ಅವರ ಕೈಯಿಂದ ಸರ್ಕಾರಿ ಜಾಗವನ್ನು ಖರೀದಿಸಿದ್ದರು. ಆ ಜಾಗದಲ್ಲಿ ದನಕರುಗಳನ್ನು ಸಾಕುತ್ತಾ ತಮ್ಮ ಜೀವನವನ್ನು ಸಾಗಿಸುತ್ತಿದ್ದರು. ಈ ವೃದ್ಧ ದಂಪತಿಗೆ ಯಾವುದೇ ಪಿತ್ರಾರ್ಜಿತ ಆಸ್ತಿಯೂ ಇಲ್ಲ. ಹಾಗಾಗಿ ಖರೀದಿ ಮಾಡಿದ್ದ ಸರ್ಕಾರಿ ಜಾಗಕ್ಕೆ ಹಕ್ಕುಪತ್ರಕ್ಕಾಗಿಯೂ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ಕಂದಾಯ ಅಧಿಕಾರಿಗಳು ತಿರಸ್ಕರಿಸಿದ್ದಾರೆ. ಮಾತ್ರವಲ್ಲದೇ ಬೆಳ್ತಂಗಡಿ ತಾಲೂಕಿನ ಅಶೋಕ್ ಆಚಾರ್ಯ ಎನ್ನುವವರು ನಾವು ಸರ್ಕಾರಿ ಜಾಗದಲ್ಲಿ ಇದ್ದೇವೆ ಎನ್ನುವ ಕಾರಣಕ್ಕೆ, ಇಲ್ಲಿಂದ ಒಕ್ಕಲೆಬ್ಬಿಸಲು ಹೈಕೋರ್ಟ್ನಲ್ಲಿ ದಾವೆ ಹೂಡಿದ್ದಾರೆ. ಈ ಮೂಲಕ ನಮ್ಮನ್ನು ಬದುಕಲು ಬಿಡುತ್ತಿಲ್ಲ ಎಂದು ವೃದ್ಧ ದಂಪತಿ ಅಳಲು ತೋಡಿಕೊಂಡಿದ್ದಾರೆ. ಇದರಿಂದಾಗಿ ಸ್ಥಳೀಯ ಗ್ರಾಮ ಕರಣಿಕರು ಮನೆಗೆ ಬಂದು ಮೌಖಿಕವಾಗಿ ತಿಳಿಸಿ, ಮನೆ ತೆರವು ಮಾಡುವಂತೆ ನೋಟಿಸ್ ಹಚ್ಚಿ ಹೋಗಿದ್ದಾರೆ. ಆದರೆ ನಮಗೆ ನೀಡಲಾಗಿರುವ ನೋಟಿಸ್ ಈಗಾಗಲೇ ಬೆಳ್ತಂಗಡಿಗೆ ಮದುವೆ ಮಾಡಿಕೊಟ್ಟ ಮಗಳ ಹೆಸರಲ್ಲಿ ನೀಡಲಾಗಿದೆ. ಅವಳಿಗೂ ನಾವೀಗ ವಾಸವಿರುವ ಮನೆಗೂ ದಾಖಲೆಗಳ ಪ್ರಕಾರ ಯಾವುದೇ ಸಂಬಂಧ ಇಲ್ಲ. ಎಂದು ಹೇಳಿದ್ದಾರೆ.


“ನಮ್ಮ ಬಳಿ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಮತದಾನದ ಗುರುತಿನ ಚೀಟಿ ಸೇರಿದಂತೆ ಎಲ್ಲ ದಾಖಲೆಗಳೂ ಇವೆ. ನೀಡಿರುವ ನೋಟಿಸ್ ಪ್ರಕಾರ ಇನ್ನು ಎರಡು ದಿನಗಳಲ್ಲಿ ತಾವು ಇರುವ ಜಾಗವನ್ನು ಬಿಟ್ಟು ಇವರು ತೆರಳಬೇಕು ಎಂಬುದಾಗಿಯೂ ತಾಕೀತು ಮಾಡಿದ್ದಾರೆ. ಕುಡಿಯುವ ನೀರಿನ ಸಂಪರ್ಕ ಸೇರಿದಂತೆ ಯಾವುದೇ ಪಂಚಾಯತ್ ಸೌಲಭ್ಯಗಳು ಈ ನಮ್ಮ ಕುಟುಂಬಕ್ಕೆ ಲಭ್ಯವಾಗಿಲ್ಲ. ಇವರಿಗೆ ಬೇರೆ ಯಾವುದೇ ಆಸ್ತಿಗಳಾಗಲೀ, ಆಶ್ರಯವಾಗಲೀ ಇಲ್ಲ ಎನ್ನುತ್ತಾರೆ.


ಇದೀಗ ಬೇರೆ ಯಾವುದೇ ದಾರಿ ತೋರದೆ ಬಡವರಾದ ಇವರು, ಕಡಬ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗೆ ದಯಾಮರಣಕ್ಕಾಗಿ ಮನವಿ ಮಾಡಿದ್ದಾರೆ. “ನಮಗೆ ಸರ್ಕಾರಿ ಜಾಗದಲ್ಲಿ ತಾವು ನಿರ್ಮಿಸಿರುವ ಸಣ್ಣ ಮನೆಯಲ್ಲಿ ಜೀವನ ನಡೆಸಲು ಅವಕಾಶ ಕಲ್ಪಿಸಿಕೊಡಿ. ಅಥವಾ ಅದು ಸಾಧ್ಯವಿಲ್ಲ ಎಂಬುದಾದರೆ ದಯಮಾಡಿ ವೃದ್ಧರಾದ ನಮಗೆ ದಯಾಮರಣಕ್ಕೆ ಅವಕಾಶವನ್ನು ನೀಡಿ” ಎಂದು ಅರ್ಜಿ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಡಬ ತಹಶೀಲ್ದಾರ್ ಪ್ರಭಾಕರ್ ಖಜೂರೆ ಅವರು ಕೂಡಲೇ ಪರಿಶೀಲನೆ ನಡೆಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದ್ದಾರೆ.

LEAVE A REPLY

Please enter your comment!
Please enter your name here