ನಿಡ್ಪಳ್ಳಿ: ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ನಿಡ್ಪಳ್ಳಿ ಹಾಗೂ ಶ್ರೀ ಶಾಂತದುರ್ಗಾ ದೇವಸ್ಥಾನ ಶ್ರೀ ಕ್ಷೇತ್ರ ನಿಡ್ಪಳ್ಳಿ ಇದರ ಸಂಯುಕ್ತ ಆಶ್ರಯದಲ್ಲಿ ಬ್ರಹ್ಮಶ್ರೀ ದಿನೇಶ್ ಮರಡಿತ್ತಾಯ ಗುಮ್ಮಟೆಗದ್ದೆ ಇವರ ನೇತೃತ್ವದಲ್ಲಿ 20ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆ ಫೆ.25 ರಂದು ದೇವಾಲಯದಲ್ಲಿ ನಡೆಯಿತು.
ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉಪನ್ಯಾಸಕ, ದೈವ ನರ್ತಕ ಡಾ.ರವೀಶ್ ಪಡುಮಲೆ ಧಾರ್ಮಿಕ ಉಪನ್ಯಾಸ ನೀಡಿ ಸನಾತನ ಹಿಂದೂ ಧರ್ಮದಲ್ಲಿ ಇರುವ ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳ ಬಗ್ಗೆ ತಿಳಿಸಿದ ಅವರು ಹಿರಿಯರು ಉಳಿಸಿ ಬೆಳೆಸಿದ ನಮ್ಮ ಸಂಸ್ಕೃತಿಯನ್ನು ಯುವ ಪೀಳಿಗೆ ಮುಂದುವರಿಸಿ ಕೊಂಡು ಹೋಗುವ ಮೂಲಕ ಅನ್ಯರಿಂದ ನಮ್ಮ ಧರ್ಮಕ್ಕೆ ಅನ್ಯಾಯವಾದಾಗ ಅದನ್ನು ಹಿಮ್ಮೆಟ್ಟಿಸುವ ಧೈರ್ಯವಂತಾರಾಗಿ ಮುಂದುವರಿಯುವಂತೆ ಅವರು ತಿಳಿ ಹೇಳಿದರು. ಸ್ವಾಮಿ ವಿವೇಕಾನಂದ ಮತ್ತು ಶ್ರೀ ನಾರಾಯಣ ಗುರುಗಳ ತತ್ವ ಆದರ್ಶಗಳು ನಮಗೆಲ್ಲಾ ದಾರಿ ದೀಪವಾಗಿದ್ದು ಅದೇ ಹಾದಿಯಲ್ಲಿ ನಾವೆಲ್ಲಾ ನಡೆಯುವ ಅವಶ್ಯಕತೆ ಇದೆ ಎಂದು ಹೇಳಿ ಧರ್ಮದ ರಕ್ಷಣೆ ನಮ್ಮ ಹೊಣೆಯಾಗಿದೆ ಎಂದರು.
ಮುಖ್ಯಅತಿಥಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಪುತ್ತೂರು ತಾಲೂಕು ಯೋಜನಾಧಿಕಾರಿ ಶಶಿಧರ್.ಎಂ ಮಾತನಾಡಿ, ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಪ್ರಾರಂಭಿಸಿದ ಗ್ರಾಮಾಭಿವೃದ್ದಿ ಯೋಜನೆ ಮತ್ತು ಹಲವಾರು ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳಿಂದ ಜನರಲ್ಲಿ, ಸಮಾಜದಲ್ಲಿ ಆದ ಪರಿವರ್ತನೆ ಬಗ್ಗೆ ಮಾತನಾಡಿ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣ ರೈ ಕೊಪ್ಪಳ, ಪೂಜಾ ಸಮಿತಿಯ ಅಧ್ಯಕ್ಷ ಮಂಜುನಾಥ ರೈ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿಡ್ಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್ ಅಧ್ಯಕ್ಷತೆ ವಹಿಸಿದ್ದರು. ಪೂಜಾ ಸಮಿತಿಯ ಗೌರವಾಧ್ಯಕ್ಷ ರಾಧಾಕೃಷ್ಣ ಪಾಟಾಳಿ ಬಡಕಾಯೂರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೂಜಾ ಸಮಿತಿ ಉಪಾಧ್ಯಕ್ಷ ಗಂಗಾಧರ ಸಿ.ಎಚ್ ವಂದಿಸಿದರು. ಸಲಹೆಗಾರ ನವೀನ ಕುಮಾರ್ ಎಂ ಕಾರ್ಯಕ್ರಮ ನಿರೂಪಿಸಿದರು. ರಾಮಚಂದ್ರ ಮಣಿಯಾಣಿ, ದಿವ್ಯಾ.ಸಿ.ಎಚ್, ತಿಮ್ಮಪ್ಪ.ಕೆ, ಸತೀಶ್. ಎಂ ಅತಿಥಿಗಳಿಗೆ ಹೂಗುಚ್ಚ ನೀಡಿ ಗೌರವಿಸಿದರು.
ನಂತರ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು. ಪೂಜಾ ಸಮಿತಿ ಸದಸ್ಯರು, ಒಕ್ಕೂಟದ ಸದಸ್ಯರು, ಇರ್ದೆ ಬೆಟ್ಟಂಪಾಡಿ ಶೌರ್ಯ ವಿಪತ್ತು ನಿರ್ವಹಣಾ ಸಮಿತಿ ಸದಸ್ಯರು ಸಹಕರಿಸಿದರು. ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಊರ ಪರವೂರ ಭಕ್ತಾದಿಗಳು ಪಾಲ್ಗೊಂಡರು.