ದೇಶಾಭಿಮಾನ ಉಳಿಸುವಲ್ಲಿ ಚಲನಚಿತ್ರ ನೋಡಿ-ಅರುಣ್ ಕುಮಾರ್ ಪುತ್ತಿಲ
ಪುತ್ತೂರು: ಎಲ್ಲರೂ ರಾಷ್ಟ್ರದ ಈ ವಿಚಾರವನ್ನು ತಿಳಿಯಬೇಕು ಮತ್ತು ದೇಶಾಭಿಮಾನ ಉಳಿಸುವ ನಿಟ್ಟಿನಲ್ಲಿ ‘ಆರ್ಟಿಕಲ್ 370’ ಚಲನಚಿತ್ರ ನೋಡಬೇಕೆಂದು ಪುತ್ತಿಲ ಪರಿವಾರದ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಅವರು ಹೇಳಿದ್ದಾರೆ.
ಪುತ್ತೂರು ಜಿಎಲ್‌ಒನ್ ಮಾಲ್‌ನಲ್ಲಿರುವ ಚಿತ್ರಮಂದಿರದಲ್ಲಿ ಫೆ.29ರಂದು ಸಂಜೆ ಗಂಟೆ 6ಕ್ಕೆ ‘ಆರ್ಟಿಕಲ್ 370’ ಸಿನಿಮಾ ಉಚಿತ ಪ್ರದರ್ಶನಕ್ಕೆ ಪುತ್ತಿಲ ಪರಿವಾರದಿಂದ ವ್ಯವಸ್ಥೆ ಮಾಡಲಾಗಿತ್ತು. ಚಿತ್ರಪ್ರದರ್ಶನ ಮುಗಿದ ಬಳಿಕ ‘ಸುದ್ದಿ’ಯೊಂದಿಗೆ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ ಅವರು, ದೇಶ ಭಕ್ತಿ ಮತ್ತು ಸ್ವಾಭಿಮಾನದ ವಿಚಾರವನ್ನು ಮೈಗೂಡಿಸಿಕೊಂಡು ರಾಷ್ಟ್ರಪ್ರೇಮದೊಂದಿಗೆ ಸರ್ವಸ್ವವನ್ನು ತ್ಯಾಗ ಮಾಡುವ ಆದರ್ಶ ಈ ಸಮಾಜದಲ್ಲಿ ಎಲ್ಲರದ್ದೂ ಆಗಬೇಕೆಂಬ ಆಶಯದಡಿಯಲ್ಲಿ ಇವತ್ತು ಸುಮಾರು ಮೂರು ಚಿತ್ರಮಂದಿರದಲ್ಲಿ 475 ಮಂದಿಗೆ ‘ಆರ್ಟಿಕಲ್ 370’ ಚಲನ ಚಿತ್ರವನ್ನು ಉಚಿತವಾಗಿ ತೋರಿಸುವ ವ್ಯವಸ್ಥೆ ಬ್ರಿಗೇಡ್ ಮನೀಶ್ ಅವರ ನೇತೃತ್ವದಲ್ಲಿ ನಡೆದಿದೆ. ಎಲ್ಲರೂ ರಾಷ್ಟ್ರದ ಈ ವಿಚಾರವನ್ನು ತಿಳಿಯಬೇಕು ಮತ್ತು ದೇಶಾಭಿಮಾನ ಉಳಿಸುವ ಹಿನ್ನೆಲೆಯಲ್ಲಿ ಚಲನಚಿತ್ರ ನೋಡಬೇಕು ಮತ್ತು ಕಾಶ್ಮೀರದ ಆರ್ಟಿಕಲ್ 370 ರದ್ಧತಿಯ ಕುರಿತು ಅರಿಯಬೇಕೆಂದು ಮನವಿ ಮಾಡಿದರು. ಈ ಸಂದರ್ಭ ಪುತ್ತಿಲ ಪರಿವಾರದ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು, ನಗರ ಅಧ್ಯಕ್ಷ ಅನಿಲ್ ತೆಂಕಿಲ, ವಕ್ತಾರ ಶ್ರೀಕೃಷ್ಣ ಉಪಾಧ್ಯಾಯ, ರವಿ ರೈ, ಮನೀಶ್ ಕುಲಾಲ್, ಕೃಷ್ಣಪ್ರಸಾದ್ ಶೆಟ್ಟಿ, ಶ್ರೀಕಾಂತ್ ಸಹಿತ ಹಲವಾರು ಮಂದಿ ಜೊತೆಗಿದ್ದರು.
ಎಲ್ಲೆ ಎಲ್ಲಂಜಿ ಪನ್ಪೆ
ಮುಂದಿನ ಲೋಕಸಭೆ ಚುನಾವಣೆಗೆ ತಾವು ಸ್ಪ್ರರ್ಧಿಸುವ ಕುರಿತು ಪುತ್ತಿಲ ಪರಿವಾರದ ಅಧ್ಯಕ್ಷರು ಘೋಷಣೆ ಮಾಡಿರುವ ವಿಚಾರದ ಕುರಿತು ಅರುಣ್ ಕುಮಾರ್ ಪುತ್ತಿಲ ಅವರನ್ನು ಮಾತನಾಡಿಸಿದಾಗ, ‘ಇನಿ ಬೊಡ್ಜಿ ಎಲ್ಲೆ ಎಲ್ಲಂಜಿ ಪನ್ಪೆ, ಪ್ರೆಸ್ ಮಾಲ್ಪೆರೆ ಉಂಡು(ಇಂದು ಬೇಡ. ನಾಳೆ ನಾಡಿದ್ದು ಹೇಳ್ತೇನೆ. ಪ್ರೆಸ್ ಮೀಟ್ ಮಾಡಲಿದೆ)ಎಂದಷ್ಟೆ ಉತ್ತರಿಸಿ ಅಲ್ಲಿಂದ ತೆರಳಿದರು.