ಪುತ್ತೂರು:ಏ.10ರಿಂದ 20ರವರೆಗೆ ನಡೆಯುವ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಯನ್ನು ಪೂರ್ವಪದ್ಧತಿಯಂತೆ ನಡೆಸಬೇಕು.ಜಾತ್ರೆಗೆ ಬರುವ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮಕೈಗೊಳ್ಳಬೇಕು.ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಜಾತ್ರೆಯ ಯಶಸ್ಸಿಗೆ ಕೈಜೋಡಿಸಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಸೂಚಿಸಿದರು.
ಪುತ್ತೂರು ಶ್ರೀಮಹಾಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಮೂಲಭೂತ ಸೌಕರ್ಯ ಒದಗಿಸಲು ದೇವಾಲಯದ ಆಡಳಿತ ಕಛೇರಿಯಲ್ಲಿ ನಡೆದ ಇಲಾಖಾಧಿಕಾರಿಗಳ ಸಭೆಯಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಏ.9ಕ್ಕೆ ಹೊರೆಕಾಣಕೆ ಸಮರ್ಪಣೆ, ಏ.10ರಿಂದ ಪ್ರತೀದಿನ ಪೇಟೆ ಸವಾರಿ, 16ರಂದು ಕೆರೆ ಆಯನ, 17ರಂದು ದರ್ಶನ ಬಲಿ, ರಾತ್ರಿ ಪುತ್ತೂರು ಬೆಡಿ,ಬ್ರಹ್ಮರಥೋತ್ಸವ,18ರಂದು ಅವಭೃತ ಸ್ನಾನ, ಬಳಿಕ ಧ್ವಜಾರೋಹಣ ಕಾರ್ಯಕ್ರಮಗಳು ಎಂದಿನಂತೆ ನಡೆಯುತ್ತದೆ.ಪೇಟೆ ಸವಾರಿ ಸಂದರ್ಭದಲ್ಲಿ ಪ್ರತೀದಿನ ರಾತ್ರಿ ೮.೩೦ರವರೆಗೆ ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳಿಗೆ ಫಲಾಹಾರ ವ್ಯವಸ್ಥೆ ಮಾಡಬೇಕು.ತುಲಾಭಾರ ಸೇವೆ ಮಾಡುವ ಭಕ್ತರಿಗೆ ಸಮಾಧಾನ ಆಗುವ ರೀತಿಯಲ್ಲಿ ಸೇವೆ ಮಾಡಿಸಬೇಕು ಎಂದು ಶಾಸಕರು ಸಂಬಂಧಿಸಿದವರಿಗೆ ನಿರ್ದೇಶನ ನೀಡಿದರು.ಭಕ್ತಾದಿಗಳಿಗೆ ದೇವರನ್ನು ನೋಡಲು ಸರಿಯಾಗಿ ವ್ಯವಸ್ಥೆ ಮಾಡಬೇಕು. ಮಹಿಳೆಯರಿಗೆ, ಪುರುಷರಿಗೆ ಪ್ರತ್ಯೇಕವಾದ ಶೌಚಾಲಯ, ನೀರಿನ ವ್ಯವಸ್ಥೆ ಮಾಡಬೇಕು. ಒಟ್ಟು ವ್ಯವಸ್ಥೆಗಳು ವ್ಯವಸ್ಥಿತ ರೀತಿಯಲ್ಲಿ ನಡೆಯುವ ಹಾಗೆ ಕ್ರಮಕೈಗೊಳ್ಳಬೇಕು ಎಂದು ಶಾಸಕರು ಸೂಚಿಸಿದರು.
ಭಕ್ತಾದಿಗಳಿಗೆ ನೀಡುವ ಪ್ರಸಾದದಲ್ಲಿ ಗುಣಮಟ್ಟ ಇರಬೇಕು:
ದೇವಾಲಯದಲ್ಲಿ ಸೇವೆ ಮಾಡಿಸಿದ ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ನೀಡುವ ಬಾಳೆಹಣ್ಣು ಉತ್ತಮ ಗುಣಮಟ್ಟದಲ್ಲಿರಬೇಕು.ಕಪ್ಪಾದ ಬಾಳೆಹಣ್ಣು ನೀಡಬಾರದು ಎಂದ ಶಾಸಕರು, ದೇವಾಲಯಕ್ಕೆ ಬಾಳೆಹಣ್ಣು ಪೂರೈಕೆ ಮಾಡುವವರಿಗೆ ಇದರ ಬಗ್ಗೆ ತಿಳಿಸುವಂತೆ ಹೇಳಿದರು.ಅಪ್ಪ ಕಜ್ಜಾಯದಲ್ಲಿಯೂ ಗುಣಮಟ್ಟ ಕಾಯ್ದುಕೊಳ್ಳಬೇಕು.ಸೇವೆ ಮಾಡಿದ ಭಕ್ತಾದಿಗಳಿಗೆ ಸಮಾಧಾನವಾಗಬೇಕು.ದೇವರ ಅಭಿಷೇಕಕ್ಕೆ ಎಳನೀರು ತರುವಾಗ ಸರಿಯಾದ ವ್ಯವಸ್ಥೆ ಮಾಡಬೇಕು ಎಂದರು.
ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ, ತಾಲೂಕು ವೈದ್ಯಾಧಿಕಾರಿ ಡಾ.ದೀಪಕ್ ರೈ, ಪುತ್ತೂರು ಸಂಚಾರಿ ಠಾಣಾ ಉಪನಿರೀಕ್ಷಕ ಶಾಹೀದ್ ಅಫ್ರೀದ್, ಕಂದಾಯ ಇಲಾಖೆಯ ಆರ್‌ಐ ಗೋಪಾಲ ಹಾಗೂ ಕೆಎಸ್‌ಆರ್‌ಟಿಸಿ ವಿಭಾಗೀಯ ಸಂಚಲನಾಧಿಕಾರಿ ಮುರಳೀಧರ ಆಚಾರ್‌ರವರು ಜಾತ್ರೋತ್ಸವ ಸಂದರ್ಭದಲ್ಲಿ ಕೈಗೊಳ್ಳುವ ವ್ಯವಸ್ಥೆಗಳ ಬಗ್ಗೆ ತಿಳಿಸಿದರು.
ದೇವಾಲಯದ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಮುಖ್ಯಕಾರ್ಯನಿರ್ವಹಣಾದಿಕಾರಿ ಕೆ.ವಿ.ಶೀನಿವಾಸ್‌ರವರು ಜಾತ್ರೋತ್ಸವ ನಡೆಯುವ ರೀತಿಯ ಮಾಹಿತಿ ತಿಳಿಸಿದರು.ಆಡಳಿತಾಽಕಾರಿ ಹನುಮ ರೆಡ್ಡಿ ಸ್ವಾಗತಿಸಿದರು.ಎಂ.ಬಿ.ವಿಶ್ವನಾಥ ರೈ, ನಿರಂಜನ್ ರೈ ಮಠಂತಬೆಟ್ಟು, ಚಂದ್ರಹಾಸ ಶೆಟ್ಟಿ, ಪಂಜಿಗುಡ್ಡೆ ಈಶ್ವರ ಭಟ್, ಮುರಳೀಧರ ರೈ ಮಠಂತಬೆಟ್ಟು, ಶ್ರೀರಾಮ ಪಕ್ಕಳ, ರೋಶನ್ ರೈ ಬನ್ನೂರು ಸೇರಿದಂತೆ ಹಲವು ಭಕ್ತಾದಿಗಳು,ಅಽಕಾರಿಗಳು ಉಪಸ್ಥಿತರಿದ್ದರು
20 ಮಂದಿಯ ಉತ್ಸವ ಸಮಿತಿ
ಜಾತ್ರೋತ್ಸವದ ಯಶಸ್ಸಿಗೆ 20 ಜನರ ಉತ್ಸವ ಸಮಿತಿಯನ್ನು ಮಾಡಲಾಗುವುದು.ಸಮಿತಿಗೆ ನಾನೇ ಅಧ್ಯಕ್ಷನಾಗಿರುತ್ತೇನೆ.ಈ ತಂಡದ ಸದಸ್ಯರಿಗೆ ವಿವಿಧ ಜವಾಬ್ದಾರಿಗಳನ್ನು ನೀಡಲಾಗುವುದು ಎಂದು ಹೇಳಿದ ಶಾಸಕರು,ಮುಂದಿನ ಎರಡು ದಿನಗಳಲ್ಲಿ ಸಮಿತಿ ಹೆಸರು ಅಂತಿಮ ಮಾಡಿ ಕೊಡುತ್ತೇನೆ.ಬಳಿಕ ಸಮಿತಿ ಸಭೆ ನಡೆಸುವಂತೆ ದೇವಾಲಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಸೂಚಿಸಿದರು.