ಪುತ್ತೂರು: ಕಳೆದ 9 ವರುಷಗಳಿಂದ ಪುತ್ತೂರು ತಾಲೂಕನ್ನು ಕೇಂದ್ರೀಕರಿಸಿ ಪುತ್ತೂರು ಇ-ಫೌಂಡೇಶನ್ (ಇ-ಫ್ರೆಂಡ್ಸ್) ಪ್ರತಿವರ್ಷ ಪುತ್ತೂರಿನ ಎಲ್ಲಾ ಆಸ್ಪತ್ರೆಗಳಲ್ಲಿ ರೋಗಿಗಳೊಂದಿಗೆ ತಂಗುವ ಉಪವಾಸ ನಿರತರಿಗೆ ಇಫ್ತಾರ್ ಕಿಟ್ ಮತ್ತು ಸಹರಿ ಕಿಟ್ ವಿತರಣಾ ಕಾರ್ಯಕ್ಕೆ ಪುತ್ತೂರು ಜುಮಾ ಮಸೀದಿಯ ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಗಳ್ ದುಆ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ದುಆ ನೆರವೇರಿಸಿ ಮಾತನಾಡಿದ ತಂಗಲ್ ಇಸ್ಲಾಮಿನಲ್ಲಿ ಕಡ್ಡಾಯ ಕರ್ಮಗಳಿಗೆ ಇರುವ ಪ್ರತಿಫಲಕ್ಕಿಂತಲೂ ಹೆಚ್ಚಿನ ಪ್ರತಿಫಲ ಅಲ್ಲಾಹು ನೀಡುವುದು ಇನ್ನೊಬ್ಬರಿಗೆ ನೆರವಾಗುವ ಅಥವಾ ಸಹಾಯ ಮಾಡುವ ಕಾರ್ಯದಲ್ಲಾಗಿದೆ. ಇ-ಫ್ರೆಂಡ್ಸ್ ಸದಸ್ಯರು ಆ ಕಾರ್ಯವನ್ನು ಕಳೆದ 8 ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ. ಇವರು ನಡೆಸುವ ಈ ಮಹತ್ತರ ಕಾರ್ಯ ಅಷ್ಟು ಸುಲಭದಲ್ಲ. ನಿರಂತರ 30 ದಿನಗಳ ಕಾಲ 11 ವಿವಿಧ ಆಸ್ಪತ್ರೆಗಳಿಗೆ ತೆರಳಿ ದಿನಕ್ಕೆ 2 ಸಲ (ಇಫ್ತಾರ್ ಮತ್ತು ಸಹರಿ) ಭೇಟಿ ಕೊಟ್ಟು 100 ಮಂದಿಗೆ ಅವರಿಗೆ ಬೇಕಾಗುವ ಆಹಾರವನ್ನು ಕೊಟ್ಟು ಬರುವುದು ಮಹಾ ಪುಣ್ಯಕಾರ್ಯವಾಗಿದೆ ಎಂದರು.
ಇ-ಫೌಂಡೇಶನ್ (ಇ- ಫ್ರೆಂಡ್ಸ್)ನ ಇಮ್ತಿಯಾಜ್ ಮಾತನಾಡಿ, ಈ ಮಹತ್ತರ ಕಾರ್ಯಗಳನ್ನು ಎಲ್ಲಾ ವರ್ಷ ಮಾಡುತ್ತಿರುವ ಅನಿವಾರ್ಯತೆ ಮತ್ತು ದೂರದ ಊರಿನಿಂದ ಬಂದು ಉಪವಾಸಿಗರು ಆಸ್ಪತ್ರೆಗಳಲ್ಲಿ ಕಷ್ಟ ಪಡುತ್ತಾರೆ ಅವರಿಗೆ ಈ ಕಿಟ್ ಗಳ ಅವಶ್ಯಕತೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಪುತ್ತೂರು ಜಮಾತ್ ಕಮೀಟಿ ಅಧ್ಯಕ್ಷ ಹಾಜಿ ಎಲ್ ಟಿ ರಜಾಕ್, ಸಿಟಿ ಗೋಲ್ಡ್ ನ ಆದಂ ಹಾಜಿ, ಅಡ್ವೊಕೇಟ್ ಸಿದ್ದೀಕ್, ಸಿಟಿ ಗೋಲ್ಡ್ ನ ಜುನೈದ್, ವಿ ಕೆ ಶರೀಫ್ ಬಪ್ಪಳಿಗೆ, ಶರೀಫ್ ಮುಕ್ರಂಪಾಡಿ, ಆರ್ ಪಿ ರಜಾಕ್, ಲತೀಫ್ ದರ್ಬೆ, ಫಲುಲ್ ಹಾಜಿ, ಜಮಾಲ್, ಇ-ಫೌಂಡೇಶನ್ ನ ಡಾ.ಸರ್ಫ್ರಾಜ್, ಇಜಾಜ್, ಮುಝಮ್ಮಿಲ್, ಶಾಕೀರ್, ಶುಕೂರ್, ಆಸಿಫ್, ರಿಯಾಜ್, ಇಕ್ಬಾಲ್, ಸಲೀಂ ಬರೆಪ್ಪಾಡಿ ಉಪಸ್ಥಿತರಿದ್ದರು. ಇ-ಫೌಂಡೇಶನ್ ಅಧ್ಯಕ್ಷ ಆರೀಫ್ ಸಾಲ್ಮರ ಸ್ವಾಗತಿಸಿ , ಪ್ರ.ಕಾರ್ಯದರ್ಶಿ ನೌಶಾದ್ ಕಾರ್ಯಕ್ರಮ ನಿರೂಪಿಸಿ, ಕೋಶಾಧಿಕಾರಿ ಹೈದರ್ ಹೈಝಾ ವಂದಿಸಿದರು.