ಡಿ.ವಿ.ಸದಾನಂದ ಗೌಡರಿಗೆ ಕಾಂಗ್ರೆಸ್ ಗಾಳ ?

0

ಬೆಂಗಳೂರು:ಲೋಕಸಭಾ ಚುನಾವಣೆ ಈಗಾಗಲೇ ಘೋಷಣೆಯಾಗಿದ್ದು ಬಿಜೆಪಿ ಪಕ್ಷದಿಂದ ಈ ಬಾರಿ ಅವಕಾಶ ವಂಚಿತರಾಗಿರುವ ಮಾಜಿ ಸಿಎಂ.,ಮಾಜಿ ಕೇಂದ್ರ ಸಚಿವರೂ ಆಗಿರುವ ಡಿ.ವಿ.ಸದಾನಂದ ಗೌಡ ಅವರನ್ನು ಪಕ್ಷಕ್ಕೆ ಸೆಳೆಯಲು ಚಿಂತನೆ ನಡೆಸಿರುವ ಕಾಂಗ್ರೆಸ್ ಪುತ್ತೂರು ಶಾಸಕರ ಮೂಲಕ ಆಪರೇಷನ್ ಡಿ.ವಿ.ಎಸ್.ಗೆ ಮುಂದಾಗಿದ್ದು ಡಿ.ವಿ.ಯವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ದ.ಕ.ಅಥವಾ ಮೈಸೂರು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ವ್ಯಾಪಕವಾಗಿ ಸುದ್ದಿ ಹರಡಿದೆ.ಆದರೆ,ಈ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ಪ್ರತಿಕ್ರಿಯಿಸಿದ್ದಾರೆ.


ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಹಾಲಿ ಸಂಸದರೂ ಆಗಿರುವ ಡಿ.ವಿ.ಸದಾನಂದ ಗೌಡ ಅವರ ಬದಲಿಗೆ ಈ ಬಾರಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ.ಶೋಭಾ ಕರಂದ್ಲಾಜೆ ಅವರನ್ನು ಸೋಲಿಸಲು ಮಾಸ್ಟರ್ ಪ್ಲ್ಯಾನ್ ಮಾಡಿರುವ ಕಾಂಗ್ರೆಸ್, ಡಿ.ವಿ.ಸದಾನಂದ ಗೌಡ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಅವರನ್ನೇ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಚಿಂತನೆ ನಡೆಸುತ್ತಿದೆ.ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಕುರಿತು ಉತ್ಸುಕರಾಗಿದ್ದಾರೆ.ಡಿ.ವಿ.ಸದಾನಂದ ಗೌಡ ಅವರ ಆಪ್ತರೂ ಆಗಿರುವ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಮೂಲಕ ಡಿ.ವಿ.ಸದಾನಂದ ಗೌಡ ಅವರನ್ನು ಕಾಂಗ್ರೆಸ್‌ಗೆ ಕರೆತರುವ ‘ಆಪರೇಷನ್ ಡಿವಿಎಸ್’ಗೆ ಡಿಕೆಶಿ ಮುಂದಾಗಿದ್ದಾರೆ ಎಂದು ವರದಿಯಾಗಿದೆ.ಡಿ.ವಿ.ಸದಾನಂದ ಗೌಡ ಅವರ ಜೊತೆ ಶಾಸಕ ಅಶೋಕ್ ಕುಮಾರ್ ರೈಯವರು ಈಗಾಗಲೇ ರಹಸ್ಯ ಮಾತುಕತೆ ನಡೆಸಿದ್ದಾರೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.


ಡಿ.ವಿ.ಎಸ್‌ಗೆ ಮೂರು ಕ್ಷೇತ್ರಗಳ ಆಫರ್:
ಕಾಂಗ್ರೆಸ್ ಸೇರ್ಪಡೆಯಾದುದೇ ಆದಲ್ಲಿ ದಕ್ಷಿಣ ಕನ್ನಡ, ಬೆಂಗಳೂರು ಉತ್ತರ ಅಥವಾ ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡುವುದಾಗಿ ಕಾಂಗ್ರೆಸ್ ನಾಯಕರು ಡಿವಿಎಸ್ ಮುಂದೆ ಆಫರ್ ಇರಿಸಿದ್ದಾರೆ.ಮೈಸೂರಿನ ಹಾಲಿ ಸಂಸದ ಪ್ರತಾಪಸಿಂಹ ಅವರಿಗೂ ಈ ಬಾರಿ ಬಿಜೆಪಿ ಅವಕಾಶ ನೀಡದೇ ಇರುವುದರಿಂದಾಗಿ ಇರುವ ಅಸಮಾಧಾನವನ್ನು ತಮ್ಮ ಪರ ಮತವಾಗಿ ಪರಿವರ್ತಿಸಿ ಲಾಭ ಪಡೆದುಕೊಳ್ಳಲು ಹವಣಿಸುತ್ತಿರುವ ಕಾಂಗ್ರೆಸ್ ಮೈಸೂರಿಗೆ ಪ್ರಬಲ ಒಕ್ಕಲಿಗ ಅಭ್ಯರ್ಥಿಗಾಗಿ ಹುಡುಕಾಟದಲ್ಲಿದ್ದು ಈ ನಿಟ್ಟಿನಲ್ಲಿ ಡಿ.ವಿ.ಸದಾನಂದ ಗೌಡ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಕಣಕ್ಕಿಳಿಸಲು ಮಾಸ್ಟರ್ ಪ್ಲ್ಯಾನ್ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.


ಚುನಾವಣಾ ನಿವೃತ್ತಿ ಘೋಷಿಸಿ ಬಳಿಕ ಟಿಕೆಟ್ ಆಕಾಂಕ್ಷಿ ಎಂದಿದ್ದ ಡಿ.ವಿ.:
ಬಿಜೆಪಿಯ ಹಿರಿಯ ನಾಯಕರಾಗಿರುವ ಮಾಜಿ ಸಿಎಂ.,ಮಾಜಿ ಕೇಂದ್ರ ಸಚಿವ, ದ.ಕ.,ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಮಾಜಿ ಸಂಸದ, ಪುತ್ತೂರಿನ ಮಾಜಿ ಶಾಸಕರೂ ಆಗಿರುವ ಡಿ.ವಿ.ಸದಾನಂದ ಗೌಡ ಅವರು ಇತ್ತೀಚೆಗಷ್ಟೆ, ತಾನು ಚುನಾವಣಾ ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾಗುತ್ತಿರುವುದಾಗಿ ಘೋಷಿಸಿದ್ದರು.ಅದಾದ ಬಳಿಕ ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಸಹಿತ ಪಕ್ಷದ ಪ್ರಮುಖರ ತಂಡವೊಂದು ಡಿ.ವಿ.ಯವರ ಮನೆಗೆ ಭೇಟಿ ನೀಡಿ, ಈ ಬಾರಿಯ ಚುನಾವಣೆಯಲ್ಲಿ ನೀವೇ ಸ್ಪಽಸಬೇಕು ಎಂದು ಒತ್ತಾಯಿಸಿ, ಮನವೊಲಿಸುವಲ್ಲಿ ಯಶಸ್ವಿಯಾಗಿತ್ತು.ಆ ನಂತರದ ಬೆಳವಣಿಗೆಯಲ್ಲಿ ಡಿವಿ.ಯವರು,ಸಕ್ರಿಯ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಣೆ ಹಿಂಪಡೆದಿದ್ದರು.ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ನಡೆಯುತ್ತಿದ್ದ ಸಂದರ್ಭದಲ್ಲಿಯೇ ಮತ್ತೊಂದು ಹೇಳಿಕೆ ನೀಡಿದ್ದ ಡಿ.ವಿ.ಯವರು ಈ ಬಾರಿ ನಾನು ಸ್ಪರ್ಧೆ ಮಾಡಲು ಬಯಸಿದ್ದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಪಕ್ಷದ ಟಿಕೆಟ್ ಆಕಾಂಕ್ಷಿ ಎಂದು ಹೇಳಿದ್ದರಲ್ಲದೆ, ತನಗೆ ಟಿಕೆಟ್ ನೀಡದೇ ಇದ್ದರೆ ಮನಸ್ಸಿಗೆ ಸ್ವಲ್ಪ ನೋವಾಗಲಿದೆ ಎಂದು ತಿಳಿಸಿದ್ದರು.ಈ ಎಲ್ಲ ಬೆಳವಣಿಗೆಗಳ ನಡುವೆಯೂ ಬಿಜೆಪಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಈ ಬಾರಿ ಡಿ.ವಿ.ಸದಾನಂದ ಗೌಡರನ್ನು ಕೈಬಿಟ್ಟು ಅಭ್ಯರ್ಥಿಯಾಗಿ ಶೋಭಾ ಕರಂದ್ಲಾಜೆ ಅವರನ್ನು ಆಯ್ಕೆ ಮಾಡಿದೆ.ಪಕ್ಷದ ಈ ತೀರ್ಮಾನದಿಂದ ಡಿ.ವಿ.ಸದಾನಂದ ಗೌಡರು ಅಸಮಾಧಾನಗೊಂಡಿದ್ದಾರೆಂದು ಅವರನ್ನು ಕಾಂಗ್ರೆಸ್‌ಗೆ ಸೆಳೆದು ಅವಕಾಶ ನೀಡುವ ನಿಟ್ಟಿನಲ್ಲಿ ಡಿಕೆಶಿ ಚಿಂತನೆ ನಡೆಸುತ್ತಿರುವುದಾಗಿ ಮೂಲಗಳು ತಿಳಿಸಿವೆ.

ನನಗೇನೂ ಗೊತ್ತಿಲ್ಲ
ಡಿ.ವಿ.ಸದಾನಂದ ಗೌಡ ಅವರನ್ನು ಕಾಂಗ್ರೆಸ್‌ಗೆ ಕರೆ ತರಲು ಡಿಕೆ ಶಿವಕುಮಾರ್ ಅವರು ತಮ್ಮ ಮೂಲಕ ಆಪರೇಷನ್‌ಗೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿರುವ ಕುರಿತು ಶಾಸಕ ಅಶೋಕ್ ಕುಮಾರ್ ರೈಯವರನ್ನು ಸಂಪರ್ಕಿಸಿದಾಗ, ‘ಈ ವಿಚಾರ ನನಗೇನೂ ಗೊತ್ತಿಲ್ಲ.ನಾನು ಡಿ.ವಿ.ಸದಾನಂದ ಗೌಡರನ್ನು ರಹಸ್ಯವಾಗಿ ಮಾತನಾಡಿಯೂ ಇಲ್ಲ.ನಾನು ಮಂಗಳೂರುನಲ್ಲಿದ್ದೇನೆ.ಚುನಾವಣೆ ಸಂದರ್ಭ ಈ ರೀತಿಯ ಅಂತೆಕಂತೆಗಳು ಸಾಮಾನ್ಯ’ ಎಂದು ಪ್ರತಿಕ್ರಿಯಿಸಿದ್ದಾರೆ.

LEAVE A REPLY

Please enter your comment!
Please enter your name here