ಆಂಗ್ಲ ಭಾಷಾ ಬಳಕೆಯಿಂದ ಪ್ರಾವಿಣ್ಯತೆ: ಬಾಲಕೃಷ್ಣ
ಪುತ್ತೂರು: ಭಾಷೆಯನ್ನು ಕಲಿಯಲು ಆ ಭಾಷೆಯಲ್ಲಿ ಕೇಳುವುದು, ಮಾತನಾಡುವುದು, ಓದುವುದು ಹಾಗೂ ಬರಿಯುವುದು ಅತೀ ಅಗತ್ಯವಾಗಿದೆ. ಇದರಿಂದ ಭಾಷೆಯ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆ. ವಿಚಾರಗಳನ್ನು ದಿನನಿತ್ಯ ಬರೆದುಕೊಳ್ಳುವ ಅಭ್ಯಾಸವನ್ನು ಮಾಡಬೇಕು, ಇದರಿಂದ ಭಾಷೆಯಲ್ಲಿ ಪ್ರಾವಿಣ್ಯತೆ ಸಾಧಿಸಲು ಸಾಧ್ಯ. ಇಂಗ್ಲಿಷ್ ಭಾಷೆ ಬಳಕೆ ಇಂದಿನ ಕಾಲದಲ್ಲಿ ಅನಿವಾರ್ಯವಾಗಿದ್ದು, ಇದು ಕಷ್ಟಕರವಲ್ಲ ಎಂದು ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನ ಇಂಗ್ಲೀಷ್ ವಿಭಾಗ ಮುಖ್ಯಸ್ಥ ಬಾಲಕೃಷ್ಣ ಎಚ್. ಹೇಳಿದರು.
ಅವರು ನಗರದ ನಟ್ಟೋಜ ಪೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಆಂಗ್ಲಭಾಷಾ ವಿಭಾಗ ಹಾಗೂ ಐಕ್ಯೂಎಸಿ ವಿಭಾಗದ ಜಂಟಿ ಆಶ್ರಯದಲ್ಲಿ ಮಂಗಳವಾರ ’ಸೂಕ್ಷ್ಮ ಕೌಶಲ್ಯಗಳು ಮತ್ತು ಕಠಿಣ ಸತ್ಯಗಳು’ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಆಂಗ್ಲ ಭಾಷಾ ಕಲಿಕೆ ಉದ್ಯೋಗಗಳ ಹುಡುಕಾಟದ ಸಂದರ್ಬದಲ್ಲಿ ಅತೀ ಅಗತ್ಯವಾಗಿದೆ. ಭಾಷಾ ಹಿಡಿತವಿದ್ದಲ್ಲಿ ಪ್ರಪಂಚದಲ್ಲಿ ಎಲ್ಲಿ ಹೋದರೂ ಸುಲಭವಾಗಿ ಸಂವಹನ ಮಾಡಿಕೊಳ್ಳಲು ಸಾಧ್ಯ. ತರಬೇತಿ ಅವಧಿಯಲ್ಲಿಯೇ ಭಾಷಾ ಕಲಿಕೆ ಮಾಡಿಕೊಂಡಲ್ಲಿ ಮುಂದೆ ಉದ್ಯೋಗದ ಸಂದರ್ಭದಲ್ಲಿ ಭಾಷೆ ಕಲಿಯಲು ಕಷ್ಟ ಪಡುವ ದಿನಗಳನ್ನು ತಪ್ಪಿಸಿಕೊಳ್ಳಬಹುದು ಎಂದು ಅವರು ಹೇಳಿದರು.
ಯಾವುದೇ ವ್ಯಕ್ತಿಯು ಸಾಧಕನಾಗಬೇಕಾದರೆ ಸತತ ಪರಿಶ್ರಮ ಪಡುವುದನ್ನು ರೂಢಿಗೊಳಿಸಬೇಕು. ಪ್ರಯತ್ನದ ಜೊತೆಗೆ ಕೌಶಲ್ಯಗಳೂ ಆತನಲ್ಲಿ ಮಿಳಿತವಾಗಿರಬೇಕು. ಮಾತ್ರವಲ್ಲದೆ, ತಮ್ಮ ಸುತ್ತಲಿರುವ ಅವಕಾಶಗಳನ್ನು ಬಳಸಿಕೊಳ್ಳುವ ಕಲೆ ಅರಿತುಕೊಳ್ಳುವುದು ಅತೀ ಮುಖ್ಯ ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಕಾಲೇಜಿನ ಪ್ರಭಾರ ಪ್ರಾಂಶುಪಾಲ ಚಂದ್ರಕಾಂತ ಗೋರೆ, ಸಮಾಜದೊಂದಿಗೆ, ಮನೆಯವರೊಂದಿಗೆ ವ್ಯಕ್ತಿಯು ಹೇಗೆ ಬೆರೆಯುತ್ತಾನೆ ಎನ್ನುವುದರಿಂದ ಆತನ ವ್ಯಕ್ತಿತ್ವವನ್ನು ಅಳೆಯಲಾಗುತ್ತದೆ. ಉತ್ತಮ ಭಾಷಾ ಪರಿಣತಿ ಪಡೆದು, ತಿಳುವಳಿಕೆ ಹೊಂದಿರುವುದು ಇಂದಿನ ಸಮಾಜದಲ್ಲಿ ಅಗತ್ಯವಾಗಿದೆ. ಪದಗಳ ಮೂಲಕ , ಸಂಜ್ನೆಗಳ ಮೂಲಕ ವ್ಯವಹರಿಸುವ ಕಲೆ ಮನುಷ್ಯನಿಗೆ ತಿಳಿದಿರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಇಂಗ್ಲೀಷ್ ವಿಭಾಗ ಮುಖ್ಯಸ್ಥ ಗಣೇಶ್ ಪ್ರಸಾದ್ ಎ. ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪಂಚಮಿ ಪ್ರಾರ್ಥಿಸಿ, ಚೈತನ್ಯಾ ಸ್ವಾಗತಿಸಿದರು. ಅಂಕಿತಾ ಅತಿಥಿಗಳನ್ನು ಪರಿಚಯಿಸಿ, ಸ್ಫೂರ್ತಿ ವಂದಿಸಿದರು. ಪ್ರಿಯಾಲ್ ನಿರೂಪಿಸಿದರು.