ಶಾಂತಿಮೊಗರು: ನೀರು ಸೋರಿಕೆಯಾಗಿ ಬರಿದಾಗುತ್ತಿದೆ ಕಿಂಡಿ ಅಣೆಕಟ್ಟು- ಮರಳು ದಂಧೆಯವರೇ ಕಾರಣ- ಆರೋಪ

0

ಕಾಣಿಯೂರು: ಕುಮಾರಧಾರ ನದಿಗೆ ಕುದ್ಮಾರು ಶಾಂತಿಮೊಗರು ಎಂಬಲ್ಲಿ ನಿರ್ಮಿಸಲಾದ ಬೃಹತ್ ಕಿಂಡಿ ಅಣೆಕಟ್ಟುವಿನಲ್ಲಿ ನೀರು ಸೋರಿಕೆಯಾಗಿ ಅಣೆಕಟ್ಟು ಬರಿದಾಗಿದೆ. ಇದಕ್ಕೆ ಮರಳು ದಂಧೆಯವರೇ ಪ್ರಮುಖ ಕಾರಣ ಎಂದು ಆರೋಪಿಸಿರುವ ಸಾರ್ವಜನಿಕರು ತಕ್ಷಣ ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದಾರೆ.


ಅಣೆಕಟ್ಟಿಗೆ ಅಳವಡಿಸಲಾಗಿದ್ದ ಹಲಗೆಯನ್ನು ರಾತ್ರೋ ರಾತ್ರಿ ತೆಗೆಯುವುದಲ್ಲದೆ ಹಲಗೆಯೊಂದರ ಅಡಿಯಲ್ಲಿ ಕಲ್ಲು ಇಡಲಾಗಿದೆ, ಇನ್ನುಳಿದಂತೆ ಕೆಲವು ಹಲಗೆಯ ಅಡಿಯಲ್ಲಿದ್ದ ರಬ್ಬರ್ ವಾಷರ್‌ನ್ನು ತೆಗೆಯಲಾಗಿದೆ. ಇದು ಅಕ್ರಮ ಮರಳು ದಂಧೆಕೋರರ ಕೃತ್ಯವಾಗಿದೆ ಎಂದು ಮಾ 20ರಂದು ನದಿ ತಟದಲ್ಲಿ ಸೇರಿದ್ದ ಸ್ಥಳೀಯರು ಆರೋಪಿಸಿದ್ದಾರೆ.
ಈ ವರ್ಷ ಮಾಧ್ಯಮದವರ ಸಕಾಲಿಕ ಎಚ್ಚರಿಕೆಯ ಹಿನ್ನೆಲೆಯಲ್ಲಿ ಹಲಗೆ ಜೋಡಣೆಯಂತೂ ಯಶಸ್ವಿಯಾಗಿತ್ತು. ಭರಪೂರ ನೀರು ಶೇಖರಣೆಯಾಗಿತ್ತು. ಸಂಬಂಧಪಟ್ಟ ಇಲಾಖೆಯವರು ಹೇಳುವ ಪ್ರಕಾರ ಅಣೆಕಟ್ಟಿನಿಂದ ಮೇಲೆ ಸುಮಾರು ಹನ್ನೆರಡು ಕಿಲೋ ಮೀಟರ್ ದೂರದ ವರೆಗೆ ನದಿಯಲ್ಲಿ ನೀರು ಶೇಖರಣೆಯಾಗಿದೆ. ಏನಿಲ್ಲವೆಂದರೂ ನದಿಯ ಮೇಲಿನ ಭಾಗದ ಏಳೆಂಟು ಕಿಲೋ ಮೀಟರ್ ದೂರದವರೆಗೆ ಸಮೃದ್ಧವಾದ ನೀರು ಶೇಖರಣೆಯಾಗಿರುವುದು ಕಾಣುತ್ತಿತ್ತು. ಆದರೆ ನಾಲ್ಕೈದು ದಿನಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಹಲವು ಅನುಮಾನಗಳಿಗೆ ಕಾರಣವಾಗಿತ್ತು.


ರೈತರು ಕಂಗಾಲಾಗಿದ್ದಾರೆ:
ಕೃಷಿಕರ ಕೊಳವೆಬಾವಿ, ಕುಡಿಯುವ ನೀರಿನ ಬಾವಿ ಹಾಗೂ ಕೆರೆಗಳಲ್ಲಿ ಬಿರು ಬೇಸಿಗೆಯಲ್ಲೂ ಸಾಕಷ್ಟು ನೀರು ತುಂಬಿ ಕೃಷಿ ಭೂಮಿಗೆ ನೀರುಣಿಸಲು ಕೃಷಿಕರಿಗೆ ಜಲನಿಽ ಒಲಿದಿತ್ತು. ಇದರಿಂದ ಕೃಷಿಕರು ತೋಟಗಳಿಗೆ ಭರಪೂರ ನೀರುಣಿಸುತ್ತಿದ್ದಾರೆ. ಆದರೆ ಒಮ್ಮಿಂದೊಮ್ಮೆಲೇ ನೀರು ಇಳಿಮುಖವಾಗಿ ರೈತರು ಕಂಗಾಲಾಗಿದ್ದಾರೆ.
ಆಲಂಕಾರು ಮತ್ತು ಕುದ್ಮಾರು ಗ್ರಾಮದ ಜನರು ಅಣೆಕಟ್ಟು ಸ್ಥಳದ ಬಳಿ ಜಮಾಯಿಸಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಥಳಿಯರು ಅಣೆಕಟ್ಟಿನ ಮೇಲ್ಬಾಗದಲ್ಲಿ ನಡೆಯುತ್ತಿರುವ ಮರಳುಗಾರಿಗೆಯಲ್ಲಿ ತೊಡಗಿಸಿಕೊಂಡವರು ಅಣೆಕಟ್ಟಿನಿಂದ ನೀರು ಸೋರಿಕೆಯಾಗುವಂತೆ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ಸರ್ಕಾರದ ವ್ಯವಸ್ಥೆಗಳನ್ನು ವಿರೂಪಗೊಳಿಸಿ ಜನ ಸಾಮಾನ್ಯರಿಗೆ ಅನ್ಯಾಯ ಮಾಡುವವರ ವಿರುದ್ದ ಸಂಬಂಧಪಟ್ಟವರು ಕಾನೂನು ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.


7.5 ಕೋಟಿ ರೂ ಯೋಜನೆ ವ್ಯರ್ಥವಾಗುತ್ತಿದೆಯಾ?:
ಕುಡಿಯುವ ನೀರಿನ ಭವಣೆ ನೀಗಿಸಬೇಕೆನ್ನುವ ಉದ್ದೇಶದಿಂದ ಸುಳ್ಯದ ಹಿಂದಿನ ಶಾಸಕ ಎಸ್.ಅಂಗಾರ ಅವರ ಶಿಪಾರಸ್ಸಿನಂತೆ ಶಾಂತಿಮೊಗರು ಎಂಬಲ್ಲಿ ಕಿಂಡಿ ಅಣೆಕಟ್ಟು ಯೋಜನೆಗೆ 7.5 ಕೋಟಿ ರೂ ಮಂಜೂರುಗೊಂಡು ಕಾಮಗಾರಿ ಪೂರ್ಣಗೊಂಡಿತ್ತು. ಆದರೆ ಈ ರೀತಿ ನೀರಿನ ಸೋರಿಕೆಯಿಂದ ಪ್ರಯೋಜನಕ್ಕೆ ಬರದೇ ರೂ 7.5ಕೋಟಿ ವ್ಯರ್ಥವಾಗುತ್ತಿದೆಯಾ ಎನ್ನುವ ಕೂಗು ಬಲವಾಗಿ ಇಲ್ಲಿ ಕೇಳಿಬರುತ್ತಿದೆ. ನದಿಯ ತಳಮಟ್ಟದಿಂದ ನಾಲ್ಕು ಮೀಟರ್ ಎತ್ತರದಲ್ಲಿ ನಿರ್ಮಾಣವಾಗಿರುವ ಈ ಅಣೆಕಟ್ಟು 221 ಮೀಟರ್ ಉದ್ದ ಹಾಗೂ ಮೂರು ಮೀಟರ್ ಅಗಲವಿದೆ. ಐವತ್ತಾರು ಕಿಂಡಿಗಳನ್ನು ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಸುಮಾರು 18.56 ಎಮ್‌ಸಿಎಫ್ ಟಿ ನೀರು ಶೇಖರಣೆಯಾಗಲಿದೆ.‌


ನೀರಿನ ಪ್ರಮಾಣ ಇಳಿಕೆ ಹಿನ್ನಲೆ- ಸ್ಥಳೀಯರಲ್ಲಿ ಆತಂಕ
ಕಿಂಡಿ ಅಣೆಕಟ್ಟು ನದಿಯ ಇಕ್ಕೆಲಗಳಲ್ಲಿ ಸುಮಾರು 3ಕಿಲೋ ಮೀಟರ್ ಸುತ್ತಳತೆಯಲ್ಲಿ ಅಂತರ್ಜಲ ವೃದ್ಧಿಯಾಗುತ್ತಿದೆ. ಕೃಷಿಕರ ಕೊಳವೆ ಬಾವಿ, ಕುಡಿಯುವ ನೀರಿನ ಬಾವಿ ಹಾಗೂ ಕೆರೆಗಳಲ್ಲಿ ಬಿರು ಬೇಸಿಗೆಯಲ್ಲೂ ಸಾಕಷ್ಟು ನೀರು ತುಂಬಿದೆ. ಆದರೆ ಕಿಂಡಿ ಅಣೆಕಟ್ಟಿನಿಂದ ನೀರು ಹರಿದು ಹೋದ ವಾರದಲ್ಲಿ ಬಾವಿಯ ನೀರೂ ಭೌರೀ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂಬುದು ಸ್ಥಳೀಯರ ಆತಂಕವಾಗಿದೆ.


ನೀರು ಸರಬರಾಜು ಯೋಜನೆ ಇನ್ನೂ ಮರೀಚಿಕೆ:
ಕುದ್ಮಾರು, ಬೆಳಂದೂರು, ಕಾಣಿಯೂರು, ಸವಣೂರು, ಆಲಂಕಾರು, ಪೆರಾಬೆ, ಕುಂತೂರು ಗ್ರಾಮಗಳಿಗೆ ನೀರು ಸರಬರಾಜು ಮಾಡಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನ ಮಾಡುವ ಉದ್ದೇಶ ಹೊಂದಲಾಗಿದ್ದರೂ ಇದೆಲ್ಲಾ ಮರೀಚಿಕೆಯಾಗಿಯೇ ಉಳಿದಿದೆ.

ತಕ್ಷಣ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಶಾಸಕಿ ಭಾಗೀರಥಿ ಮುರುಳ್ಯ ಸೂಚನೆ :
ಕುಮಾರಧಾರ ನದಿಗೆ ಶಾಂತಿಮೊಗರು ಕಿಂಡಿ ಅಣೆಕಟ್ಟು ವಿಗೆ ಅಳವಡಿಸಲಾದ ಗೇಟುಗಳನ್ನು ಮರಳು ದಂಧೆಕೋರರು ತೆಗೆಯುವುದರಿಂದ ನೀರು ಸೋರಿಕೆಯಾಗಿ ನೀರು ಸಂಗ್ರಹವಾಗದೆ ನದಿ ಒಡಲು ಬರಿದಾಗಿದೆ. ಇದರಿಂದ ರೈತರ ಕೃಷಿ ತೋಟಗಳಿಗೆ ನೀರು ಹಾಯಿಸಲು ತೊಂದರೆಯಾಗಿದೆ ಎಂದು, ಸುಳ್ಯ ಶಾಸಕಿ ಭಾಗಿರಥಿ ಮುರುಳ್ಯ ಅವರಿಗೆ ಸಾರ್ವಜನಿಕರು ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮೌಖಿಕ ದೂರು ಸಲ್ಲಿಸಿದರು. ರೈತರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಕೋಟಿಗಟ್ಟಲೆ ಹಣ ವ್ಯಯಿಸಿ ಕಿಂಡಿ ಅಣೆಕಟ್ಟು ನಿರ್ಮಾಣಮಾಡಿ ನೀರು ಸಂಗ್ರಹಿಸಲಾಗಿತ್ತು. ಅದರೆ ಕಿಂಡಿ ಅಣೆಕಟ್ಟುವಿನ ಮೇಲ್ಬಾಗದಲ್ಲಿ ಮರಳುಗಾರಿಕೆ ಮಾಡುವ ಮಂದಿ ಕಿಂಡಿ ಅಣೆಕಟ್ಟಿನ ಹಲಗೆಗಳನ್ನು ತೆಗೆದು ನೀರು ಸೋರಿಕೆಯಾಗುವಂತೆ ಮಾಡುತ್ತಾರೆ. ನೀರು ಸಂಗ್ರಹವಾಗುವುದರಿಂದ ಮರಳುಗಾರಿಕೆ ಮಾಡಲು ಕಷ್ಟವಾಗುವ ನಿಟ್ಟಿನಲ್ಲಿ ಈ ಕೃತ್ಯ ಎಸಗಲಾಗುತ್ತದೆ . ನೀರು ಸಂಗ್ರಹವಾಗದೆ ನದಿಯಲ್ಲಿ ನೀರಿನ ಪ್ರಮಾಣ ಗಣನೀಯ ಕಡಿಮೆಯಾಗಿದೆ. ಇದರಿಂದ ರೈತರು ಕೃಷಿ ತೋಟಗಳಿಗೆ ನೀರು ಹಾಯಿಸಲು ತೊಂದರೆಯಾಗುತ್ತಿದೆ ಎಂದು ದೂರಿಕೊಂಡರು. ಈ ವೇಳೆ ಅಣೆಕಟ್ಟು ಸಂಬಂಧಪಟ್ಟ ಮಂಗಳೂರಿನ ಇಂಜಿನಿಯರ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಶಾಸಕರು ಸ್ಥಳೀಯರು ತಿಳಿಸಿದ ಸಮಸ್ಯೆಯ ಬಗ್ಗೆ ತಿಳಿಸಿ, ತಕ್ಷಣ ಸಮಸ್ಯೆ ಬಗೆಹರಿಸಲು ಸೂಚಿಸಿದರು. ಶುಕ್ರವಾರ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದು ಇಂಜಿನಿಯರ್ ತಿಳಿಸಿದರು. ಸ್ಥಳೀಯವಾಗಿ ಸಲಹಾ ಸಮಿತಿಗಳನ್ನು ರಚಿಸಿಕೊಂಡು ಅಣೆಕಟ್ಟಿನ ನಿರ್ವಹಣೆಯ ಹೊಣೆಯನ್ನು ಸಲಹಾ ಸಮಿತಿಗೆ ನೀಡಿ, ಈ ಬಗ್ಗೆ ಸ್ಥಳೀಯಾಡಳಿತದ ಜೊತೆ ಮಾತುಕತೆ ನಡೆಸಿ ಎಂದು ಇಂಜಿನಿಯರ್‌ಗೆ ಶಾಸಕರು ಸೂಚಿಸಿದರು. ಶಾಂತಿಮೊಗರು ಸಂಪರ್ಕ ರಸ್ತೆಯ ಸರ್ವ ಋತು ಸೇತುವೆಯಡಿಯಲ್ಲಿ ರಸ್ತೆ ನಿರ್ಮಿಸಿ ಮರಳು ಸಾಗಾಟ ಮಾಡಲಾಗುತ್ತದೆ, ಮರಳುಗಾರಿಕೆಯ ಸ್ಥಳದಲ್ಲಿ ಮರಳು ಖಾಲಿಯಾದಾಗ ಸೇತುವೆಯ ಕೆಳಭಾಗದಿಂದ ತೆಗೆದು ಸಾಗಾಟ ಮಾಡಲಾಗುತ್ತದೆ ಇದಕ್ಕೆ ಕಡಿವಾಣ ಹಾಕುವಂತೆ ಕ್ರಮಜರುಗಿಸಿ ಎಂದು ಶಾಸಕರಲ್ಲಿ ಸಾರ್ವಜನಿಕರು ಮನವಿ ಮಾಡಿಕೊಂಡರು. ಅಕ್ರಮಗಳಿಗೆ ಕಡಿವಾಣ ಹಾಕಲು ಗಣಿ ಇಲಾಖೆಗೆ ಸೂಚಿಸಲಾಗುವುದು ಶಾಸಕರು ಎಂದು ಭರವಸೆ ನೀಡಿದರು.

ಕಡಬ ತಹಸೀಲ್ದಾರ್ ಭೇಟಿ- ಪರಿಶೀಲನೆ:
ಶಾಂತಿಮೊಗರು ಬೃಹತ್ ಕಿಂಡಿ ಆಣೆಕಟ್ಟಿನಲ್ಲಿ ನೀರಿನ ಸೋರಿಕೆ ಮತ್ತು ಮರಳು ದಂಧೆಯ ಆರೋಪವು ಗ್ರಾಮಸ್ಥರಿಂದ ಬಲವಾಗಿ ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಕಡಬ ತಹಸೀಲ್ದಾರ್ ಪ್ರಭಾಕರ್ ಕಜೂರೆ ಮಾ 21ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಽಕಾರಿಯವರಲ್ಲಿ ತಿಳಿಸುವುದಾಗಿ ಭೇಟಿ ಸಂದರ್ಭದಲ್ಲಿ ಹೇಳಿದ್ದಾರೆ. ಕಡಬ ಉಪ ತಹಸೀಲ್ದಾರ್ ಮನೋಹರ್, ಕಂದಾಯ ನಿರೀಕ್ಷಕ ಪೃಥ್ವಿರಾಜ್, ಅಲಂಕಾರು ಗ್ರಾಮ ಆಡಳಿತಾಽಕಾರಿ ಪ್ರೇಮಲತಾ, ಕುದ್ಮಾರು ಗ್ರಾಮ ಆಡಳಿತಾಧಿಕಾರಿ ಸುನಿಲ್, ಅಲಂಕಾರು ಗ್ರಾ. ಪಂ ಸದಸ್ಯ ಸದಾನಂದ ಆಚಾರ್ಯ, ಅಲಂಕಾರು ಗ್ರಾಮ ಸಹಾಯಕ ವಿಶ್ವನಾಥ್, ಕುದ್ಮಾರು ಗ್ರಾಮ ಸಹಾಯಕ ಯೋಗೀಶ್ ಬರೆಪ್ಪಾಡಿ ಮೊದಲಾದವರು ಈ ಸಂದರ್ಭದಲ್ಲಿದ್ದರು.

ಮಾಜಿ ಶಾಸಕ ಎಸ್ ಅಂಗಾರ ಅವರ ಮುತುವರ್ಜಿಯಿಂದ ಮೂರು ವರ್ಷದ ಹಿಂದೆ ನಿರ್ಮಾಣಗೊಂಡಿರುವ ಬೃಹತ್ ಕಿಂಡಿ ಅಣೆಕಟ್ಟು ರೈತರಿಗೆ ವರದಾನವಾಗಿದೆ, ಕಳೆದ ಮೂರು ನಾಲ್ಕು ತಿಂಗಳಿಂದ ಸಮೃದ್ಧವಾಗಿ ಶೇಖರಣೆಯಾಗಿದ್ದ ನೀರು ಕಳೆದ ಮೂರು ನಾಲ್ಕು ದಿನಗಳಲ್ಲಿ ಖಾಲಿಯಾಗಿದೆ ಎಂದರೆ ಕಾರಣ ಏನು. ಅಣೆಕಟ್ಟೆಗೆ ಜೋಡಣೆ ಮಾಡಿರುವ ಹಲಗೆಯ ವಾಷರ್‌ಗಳನ್ನು ತೆಗೆಯಲಾಗುತ್ತಿದೆ. ಇಲ್ಲಿ ಮರಳುಗಾರಿಕೆ ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಒಂದಿಬ್ಬರ ಸ್ವಾರ್ಥಕ್ಕಾಗಿ ಇಲ್ಲಿನ ರೈತರು ಕೃಷಿಗೆ ನೀರಿಲ್ಲದೆ ಕಂಗಾಲಾಗುತ್ತಿದ್ದಾರೆ.

ಲೋಹಿತಾಕ್ಷ ಕೆಡೆಂಜಿಕಟ್ಟ, ಮಾಜಿ ಅಧ್ಯಕ್ಷರು, ಗ್ರಾ. ಪಂ ಬೆಳಂದೂರು

ನಾವು ದೇವಸ್ಥಾನ ನಿರ್ಮಾಣಕ್ಕೆ ಮರಳು ತೆಗೆಯುತ್ತೇವೆ ಎಂದು ಕೇಳಿದರೆ ಸೇತುವೆ ಬಳಿ ಸಾಧ್ಯವಿಲ್ಲ ಎಂದು ಹೇಳುವ ಅಽಕಾರಿಗಳಿಗೆ ಇಲ್ಲಿ ಮರಳುಗಾರಿಕೆ ಕಾಣುತ್ತಿಲ್ಲ. ಹಲಗೆ ತೆಗೆಯುವವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮ ಜರಗಿಸಬೇಕು.

ಹರೀಶ್ ಕೆರೆನಾರು, ಮಾಜಿ ಉಪಾಧ್ಯಕ್ಷರು, ಬೆಳಂದೂರು ಗ್ರಾ.ಪಂ.

ಇಲ್ಲಿನ ಸುತ್ತಮುತ್ತಲಿನ ಜನರಿಗೆ ಉಪಯೋಗವಾಗಿರುವ ಈ ಅಣೆಕಟ್ಟಿನಲ್ಲಿ ಸಡನ್ನಾಗಿ ನೀರು ಖಾಲಿಯಾಗಿರುವುದರಿಂದ ಕೃಷಿ ಪಂಪುಗಳಿಗೆ ನೀರು ಸಾಕಾಗದೆ ಪಂಪುಗಳು ಸುಟ್ಟು ಹೋಗಿವೆ, ಇದರಿಂದ ಕೃಷಿಕರಿಗೆ ನಷ್ಟ ಉಂಟಾಗಿದೆ.

ಬಾಲಚಂದ್ರ ನೂಜಿ, ಸ್ಥಳೀಯರು

ಮೂರು ದಿನಗಳ ಹಿಂದೆ ಅಣೆಕಟ್ಟಿನಲ್ಲಿ ತುಂಬಿ ತುಳುಕುತ್ತಿದ್ದ ನೀರು ಇದೀಗ ಖಾಲಿಯಾಗಿದೆ. ಇದರಿಂದಾಗಿ ಕೃಷಿಕರ ಪಂಪು ಸುಟ್ಟು ಹೋಗಿದೆ. ಇಲ್ಲಿ ಮರಳು ದಂಧೆ ನಡೆಯುತ್ತಿದೆ. ಈ ಬಗ್ಗೆ ಯಾರು ಕೂಡಾ ಕೇಳುವವರಿಲ್ಲ. ಸಂಬಂಧಪಟ್ಟ ಅಽಕಾರಿಗಳಿಗೆ ದೂರು ನೀಡಿದರೂ ಕ್ರಮಕೈಗೊಳ್ಳುತ್ತಿಲ್ಲ.

ಶೀನಪ್ಪ, ಸ್ಥಳೀಯರು

LEAVE A REPLY

Please enter your comment!
Please enter your name here