ಪೂಂಜರೇ.. ಪೂಂಜರೇ.. ಪೂಂಜರೇ.. ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡುವ ಧೈರ್ಯ ಮಾಡುತ್ತೀರಾ?-ಸುದ್ದಿ ಬಿಡುಗಡೆ ಪತ್ರಿಕೆ ನಿಮ್ಮ ಪತ್ರಿಕೆ ಸುದ್ದಿ ಉದಯದಿಂದ ಹತ್ತು ಪಟ್ಟು ಜಾಸ್ತಿ ಪ್ರಸರಣವನ್ನು ಹೊಂದಿದೆ, ಅದನ್ನು ಒಪ್ಪಿಕೊಂಡ್ರಾ ಪೂಂಜರೇ…

0

ಪೂಂಜರೇ…
ಸುದ್ದಿ ಬಿಡುಗಡೆ ಪತ್ರಿಕೆಯು ನಿಮ್ಮ ಪತ್ರಿಕೆ ಸುದ್ದಿ ಉದಯದಿಂದ ಹತ್ತು ಪಟ್ಟು ಜಾಸ್ತಿ ಪ್ರಸರಣವನ್ನು ಹೊಂದಿದೆ. ಅಂದರೆ ನಿಮ್ಮ 1 ಪತ್ರಿಕೆ ಹೋಗುವಲ್ಲಿ ನಮ್ಮ 10 ಪತ್ರಿಕೆ ಹೋಗುತ್ತದೆ ಎಂದು ಅರ್ಥವಲ್ಲವೇ? ನಾವು ಹೇಳಿದ್ದು ಸುಳ್ಳಾಗಿದ್ದರೆ ಪತ್ರಿಕೆಯನ್ನೇ ನಿಲ್ಲಿಸುತ್ತೇವೆ. ಅದು ಸರಿಯಾಗಿದ್ದರೆ ನೀವು ನಮ್ಮ ಪತ್ರಿಕೆಯನ್ನು ಒಪ್ಪಿಕೊಂಡರೆ ಸಾಕು ಎಂಬ ಪಂಥಾಹ್ವಾನವನ್ನು ನೀಡಿದ್ದೆವು, ಅದನ್ನು ಸ್ವೀಕರಿಸಲಿಲ್ಲ ಯಾಕೆ? ಒಪ್ಪಿಕೊಂಡಿದ್ದೀರಿ ಎಂದು ಅರ್ಥವೇ?


ಪ್ರಸಾರ ಸಂಖ್ಯೆ ಜಾಸ್ತಿ ಇದೆ ಎಂದು ನಂಬಿ ಜನರು ಜಾಹೀರಾತು ಕೊಡುವುದಲ್ಲವೇ?:
ನಿಮ್ಮ ಪತ್ರಿಕೆ ಸುದ್ದಿ ಉದಯದಲ್ಲಿ… ನಿಮ್ಮ ಪತ್ರಿಕೆ ಒಂದು ವರ್ಷದ ಮಗು, ಸುದ್ದಿ ಬಿಡುಗಡೆ 38 ವರ್ಷದ ಯುವಕ, 1 ವರ್ಷದ ಮಗು ಎಷ್ಟು ಕೆಲಸ ಮಾಡಬಹುದು. 38 ವರ್ಷದ ಯುವಕ ಮಾಡುವ ಕೆಲಸಕ್ಕೆ ಅದನ್ನು ಹೋಲಿಸಬಹುದೇ ಎಂದು ಜನರನ್ನು ಕೇಳಿದ್ದಾರೆ. 38 ವರ್ಷ ತಲುಪುವಾಗ ಸುದ್ದಿ ಬಿಡುಗಡೆ ಮಾಡುವಷ್ಟು ಕೆಲಸವನ್ನು ಸಾಧಿಸುತ್ತೇವೆ ಅಂದಿದ್ದಾರೆ. ಅಂದರೆ ನಮ್ಮ ಸುದ್ದಿ ಬಿಡುಗಡೆಯ ಪ್ರಸಾರವನ್ನು 38 ವರ್ಷದ ಯುವಕನ ಕೆಲಸಕ್ಕೆ, ಸುದ್ದಿ ಉದಯದ ಪ್ರಸಾರವನ್ನು 1 ವರ್ಷದ ಮಗುವಿನ ಕೆಲಸಕ್ಕೆ ಹೋಲಿಸಿ ನಮ್ಮ ಸುದ್ದಿ ಬಿಡುಗಡೆ ಪತ್ರಿಕೆ ಪ್ರಸಾರ ಸಂಖ್ಯೆ ಜಾಸ್ತಿ ಇದೆ, ನಿಮ್ಮ ಸುದ್ದಿ ಉದಯ ಪ್ರಸಾರ ಸಂಖ್ಯೆ ಎಷ್ಟೋ ಪಟ್ಟು ಕಡಿಮೆ ಇದೆ ಎಂದು ಒಪ್ಪಿಕೊಂಡಿದ್ದಾರೆ. ಅಂದರೆ ನಿಮ್ಮ ಪತ್ರಿಕೆ ಬೆಳ್ತಂಗಡಿಯ ಜನರನ್ನು ಈಗ ತಲುಪುತ್ತಿಲ್ಲ ಎಂದು ಅರ್ಥವಲ್ಲವೇ? ಜನರು ಜಾಹೀರಾತು ಕೊಡುವುದು ಆ ಪತ್ರಿಕೆಯ ಪ್ರಸಾರ ಹೆಚ್ಚು ಹೆಚ್ಚು ಜನರಿಗೆ ತಲುಪಲಿ ಎಂದು ಆಗಿರುತ್ತದೆ. ಹಾಗಿರುವಾಗ ಪ್ರಸಾರ ಸಂಖ್ಯೆ ಕಡಿಮೆ ಇದ್ದರೂ ಅದನ್ನು ಹೇಳದೆ ಜನರ ಹತ್ತಿರ ಜಾಸ್ತಿ ಪ್ರಸಾರ ಇದೆ ಎಂದು ನಂಬಿಸಿ, ಜಾಹೀರಾತಿನಲ್ಲಿ ಹೆಚ್ಚು ಹಣವನ್ನು ಪಡೆಯುವುದು ಜನತೆಗೆ ಮಾಡಿದ ನಂಬಿಕೆ ದ್ರೋಹವಲ್ಲವೇ ಪೂಂಜರೇ..? ಅದರಲ್ಲಿ ಹೆಚ್ಚಿನವರು ಜಾಹೀರಾತು, ಹಣ ನಿಮಗೆಂದೇ ಕೊಡುವುದಿದ್ದರೂ ಜನರಿಗೆ ಅದರ ಸರಿಯಾದ ಪ್ರಸಾರ ಸಂಖ್ಯೆಯನ್ನು ತಿಳಿಸಬೇಕಲ್ಲವೇ?


ಪೂಂಜರ ಪತ್ರಿಕೆಯ ಪ್ರಸಾರ ಸಂಖ್ಯೆ ಇಳಿಯುತ್ತಾ ಇದೆ ಅದಕ್ಕೆ ಕಾರಣವೇನು? ಜನತೆಯೇ ಉತ್ತರ ನೀಡುತ್ತಾರೆ:
ಸುದ್ದಿ ಉದಯದ ಲೇಖನದಲ್ಲಿ ಪೂಂಜರು ಪತ್ರಿಕೆಯ ಅಸಹಾಯಕತೆಯನ್ನು ಬಿಚ್ಚಿಟ್ಟಿದ್ದಾರೆ. ಪೂಂಜರು ಸುದ್ದಿ ಬಿಡುಗಡೆ ಪತ್ರಿಕೆಯ ಬಲಿಷ್ಠ ತಂಡವನ್ನು ಹೈಜಾಕ್ ಮಾಡಿ ಸುದ್ದಿ ಉದಯ ಪ್ರಾರಂಭಿಸಿದ್ದಾರೆ. ಅವರಲ್ಲಿ ಪತ್ರಿಕೆಗೆ ಬೇಕಾದ ಪೂರ್ಣ ತಯಾರಿಯ ತಂಡವಿತ್ತು. ಸುದ್ದಿ ಬಿಡುಗಡೆಯಲ್ಲಿ ಹೊಸ ಅನುಭವವಿಲ್ಲದ ಯುವಕರ ತಂಡ ಕಟ್ಟಿಕೊಂಡು ಪತ್ರಿಕೆಯನ್ನು ಬುಡದಿಂದ ಕಟ್ಟಿ ಪತ್ರಿಕೆ ಮುಚ್ಚದಂತೆ ನೋಡಿಕೊಂಡಿದ್ದೇವೆ. ನಮ್ಮವರು ಹೊಸಬರಾದ್ದರಿಂದ ನಾವು ಅತ್ಯಂತ ಕಷ್ಟದಿಂದ ಪ್ರಸಾರ ಮಾಡಬೇಕಾಗಿತ್ತು, ಉಳಿಸಿಕೊಳ್ಳಬೇಕಾಗಿತ್ತು. ನಮ್ಮದು ಆಗ ಮಗುವಿನ ಸ್ಥಾನವಾಗಿತ್ತು, ಅವರದ್ದು ಸಂಪೂರ್ಣ ಬೆಳೆದ ತಂಡವಾಗಿತ್ತು.ಆಗ ಎಲ್ಲಿ ಹೋದರೂ ಸುದ್ದಿ ಉದಯದ ಪತ್ರಿಕೆಯ ಬಂಡಲ್‌ಗಳಿದ್ದವು. ಈಗ ನಮ್ಮ ತಂಡ ನಿಧಾನವಾಗಿ ತಾಲೂಕನ್ನು ಕವರ್ ಮಾಡಿ ಹಿಂದಿಗಿಂತ ಹೆಚ್ಚು ಪ್ರಸಾರವನ್ನು ಗಳಿಸಿದೆ. ಸುದ್ದಿ ಉದಯ ತಂಡದ ಸಾಧನೆ ನಿಧಾನವಾಗಿ ಕರಗಲಾರಂಭಿಸಿದೆ. ಅವರ ಬಂಡಲ್‌ಗಳು ಅಲ್ಲಲ್ಲಿ ತೆರೆಯದೇ ಉಳಿಯಲಾರಂಭಿಸಿವೆ. ನಮ್ಮ ಪತ್ರಿಕೆಯ ಪ್ರಸಾರದ ಸಂಖ್ಯೆ ಏರುತ್ತಾ ಇದೆ. ಪೂಂಜರ ಪತ್ರಿಕೆಯ ಪ್ರಸಾರದ ಸಂಖ್ಯೆ ಇಳಿಯುತ್ತಾ ಇದೆ. ಪೂಂಜರ ಪತ್ರಿಕೆ ಬೇಡ ಎಂಬುದಕ್ಕೆ ಕಾರಣವನ್ನು ಜನತೆಯೇ ಹೇಳುತ್ತಿದ್ದಾರೆ. ಆ ಕಾರಣಕ್ಕೆ ನಾವು ಧೈರ್ಯದಿಂದ ಸುದ್ದಿ ಉದಯಕ್ಕಿಂತ ಹತ್ತು ಪಟ್ಟು ಪ್ರಸಾರ ಸಂಖ್ಯೆ ನಮ್ಮ ಸುದ್ದಿಬಿಡುಗಡೆ ಇದೆ ಎಂದು ಹರೀಶ್ ಪೂಂಜರಿಗೆ ಪಂಥಾಹ್ವಾನವನ್ನು ನೀಡಿದ್ದೆವು. ಹೀಗಿರುವಾಗ ಹೆಚ್ಚು ಪ್ರಸಾರವಿಲ್ಲದಿದ್ದರೂ ಪೂಂಜರಿಗೆಂದೇ ಆ ಪತ್ರಿಕೆಗೆ ಜಾಹೀರಾತಿನ ಹಣ ಕೊಡುತ್ತಿದ್ದಾರೆ ಎಂದು ಖಡಾ ಖಂಡಿತವಾಗಿ ಹೇಳಬಹುದಲ್ಲವೇ? ಸಣ್ಣ ಸಣ್ಣ ಮಾತಿಗೆ ಸಿಡಿದೇಳುವ ಪೂಂಜರವರು ನಾವು ಕೇಳಿದ ಪ್ರಶ್ನೆಗಳಿಗೆ, ನಾವು ಹೇಳಿದ ವಿಷಯಗಳಿಗೆ ಉತ್ತರ ಕೊಡುವ ಧೈರ್ಯ ಮಾಡುತ್ತಿಲ್ಲ ಯಾಕೆ? ಎಂಬ ಪ್ರಶ್ನೆಯನ್ನು ಜನತೆಯೇ ಅವರ ಮುಂದಿಡಬೇಕು.

ಕಡಿರುದ್ಯಾವರ ಪಂಚಾಯತ್‌ನವರು ನಿಮಗೆಂದೇ ಸುದ್ದಿ ಉದಯಕ್ಕೆ ಜಾಹೀರಾತು ನೀಡುವುದಲ್ಲವೇ?:
ಪೂಂಜರೇ.. ನಮ್ಮ ಪತ್ರಿಕೆ ನಿಮ್ಮ ಪತ್ರಿಕೆಗಿಂತ 10ಪಟ್ಟು ಹೆಚ್ಚು ಪ್ರಸಾರದಲ್ಲಿದ್ದರೂ, ಕೆಲವು ಪಂಚಾಯತ್‌ನವರು ಜನರಿಗೆ ಮುಟ್ಟಬೇಕಾದ ಪ್ರಕಟನೆಗಳನ್ನು ನಿಮ್ಮ ಪತ್ರಿಕೆಗೆಂದೇ ನೀಡುತ್ತಿದ್ದಾರೆ. ಅದರ ಉದ್ದೇಶ ಹೆಚ್ಚು ಜನರಿಗೆ ತಲುಪಬಾರದೆಂದೇ ಅಥವಾ ಆ ಹಣ ನಿಮ್ಮ ಋಣಕ್ಕಾಗಿ ನಿಮಗೆ ಸಂದಾಯವೇ? ಉದಾಹರಣೆಗಾಗಿ ಕಡಿರುದ್ಯಾವರ ಪಂಚಾಯತ್‌ನಲ್ಲಿ ಸುದ್ದಿ ಬಿಡುಗಡೆ ಅತ್ಯಂತ ಪ್ರಸಾರದಲ್ಲಿದೆ. ನಿಮ್ಮ ಸುದ್ದಿ ಉದಯ ಪತ್ರಿಕೆ ಕೆಲವೇ ಸಂಖ್ಯೆಯಲ್ಲಿದೆ. ಆದರೂ ಕಡಿರುದ್ಯಾವರ ಪಂಚಾಯತ್‌ನಲ್ಲಿ ಸುದ್ದಿ ಬಿಡುಗಡೆ ಪತ್ರಿಕೆಗೆ ಜಾಹೀರಾತು ನೀಡುವುದನ್ನು ನಿರಾಕರಿಸಿ, ಸುದ್ದಿ ಉದಯಕ್ಕೆ ಜಾಹೀರಾತು ನೀಡುವುದೆಂದು ನಿರ್ಣಯವನ್ನು ತೆಗೆದುಕೊಂಡಿದ್ದಾರೆ. ಅದು ಅವರ ಸ್ವಂತದ ಹಣವಾಗಿದ್ದರೆ. ಆ ರೀತಿ ಮಾಡಬಹುದಿತ್ತು. ಆದರೆ ಪಂಚಾಯತ್‌ನ ಸಾರ್ವಜನಿಕರ ಹಣವನ್ನು ಅವರು ದುರುಪಯೋಗ ಮಾಡಿ ಪೂಂಜರಿಗೆಂದೇ ನಿಮ್ಮ ಸುದ್ದಿ ಉದಯ ಪತ್ರಿಕೆಗೆ ನೀಡುವುದು ಜನರಿಗೆ ಮಾಡುವ ದ್ರೋಹವಲ್ಲವೇ. ಅದನ್ನು ಸರಿಪಡಿಸಲು ನಿಮ್ಮ ಅಧಿನದಲ್ಲಿರುವ ನೀವು ಹೇಳಿದಂತೆ ಕೇಳುತ್ತಿರುವ ಆ ಕಡಿರುದ್ಯಾವರ ಪಂಚಾಯತ್‌ನವರಿಗೆ ಹೇಳುತ್ತೀರಾ ಪೂಂಜರೇ.. ಅದೇ ರೀತಿ ನಿಮ್ಮ ಋಣದಲ್ಲಿರುವ ಇನ್ನೂ ಕೆಲವು ಪಂಚಾಯತ್‌ಗಳಿವೆ. ಶಾಸಕರಾಗಿ ಅವರಿಗೂ ಬುದ್ಧಿ ಹೇಳುತ್ತೀರಾ ಪೂಂಜರೇ..?


ಸುದ್ದಿಬಿಡುಗಡೆ ಓದಬೇಡಿ ಅದಕ್ಕೆ ಜಾಹೀರಾತು ಕೊಡಬೇಡಿ ಎಂದಿದ್ದೀರಿ. ಅದಕ್ಕೆ ಜನ ಕಿಮ್ಮತ್ತಿನ ಬೆಲೆ ಕೊಟ್ಟಿಲ್ಲ ಪೂಂಜರೇ..:
ಈ ನಡುವೆ ನೀವು ಕಳೆಂಜದಲ್ಲಿ ಸುದ್ದಿ ವರದಿಗಾರರಿಗೆ, ಸುದ್ದಿ ಬಿಡುಗಡೆಗೆ ಅವ್ಯಾಚವಾಗಿ ಬೈದಿದ್ದೀರಿ. ನಿಮ್ಮ ಬೈಗುಳವನ್ನು ಕೇಳಿದ ನಿಮ್ಮ ಅಭಿಮಾನಿಗಳೂ ಪೂಂಜರು ಆ ಮಟ್ಟಕ್ಕೂ ಇಳಿದಿದ್ದಾರೆಯೇ ಎಂದು ಬೇಜಾರು ಪಟ್ಟುಕೊಂಡಿದ್ದಾರೆ. ಜಾಹೀರಾತು ಕೊಡಬೇಡಿ, ಓದಬೇಡಿ, ಬೆಳ್ತಂಗಡಿಯಿಂದಲೇ ಬಹಿಷ್ಕರಿಸಿ ಎಂದೆಲ್ಲಾ ಕರೆ ಕೊಟ್ಟಿದ್ದೀರಲ್ಲಾ ಅದು ಸರಿಯೇ ಪೂಂಜರೇ.. ಅಂದರೆ ಬೆಳ್ತಂಗಡಿಯಲ್ಲಿ ನಿಮ್ಮ ಪತ್ರಿಕೆ ಮಾತ್ರ ಇರಬೇಕೇ? ಪತ್ರಿಕೆಗಳಿಗೆ ಬೆಂಬಲ ಕೊಡಬೇಕಾದ ಶಾಸಕರಾದ ನಿಮಗೆ ಅದು ಶೋಭೆಯೇ. ನಿಮ್ಮ ಮಗು ಸುದ್ದಿ ಉದಯ ಪತ್ರಿಕೆಯನ್ನು ಬೆಳೆಸಲು ಸುದ್ದಿ ಬಿಡುಗಡೆಯನ್ನು ಮುಚ್ಚುವ ಅಗತ್ಯತೆ ಇದೆಯೇ? ನೀವು ಎಷ್ಟೇ ಹೇಳಿದರೂ ಜನತೆ ಸುದ್ದಿ ಬಿಡುಗಡೆಯ ವಿಷಯದಲ್ಲಿ ನಿಮ್ಮ ಮಾತಿಗೆ ಕಿಮ್ಮತ್ತಿನ ಬೆಲೆ ಕೊಡುವುದಿಲ್ಲ. ಓದುಗರ ಸಂಖ್ಯೆ ಜಾಸ್ತಿಯಾಗುತ್ತಿದೆ, ಜಾಹೀರಾತುಗಳು ಬರುತ್ತಿವೆ. ಸುದ್ದಿಬಿಡುಗಡೆಗೆ ಜಾಹೀರಾತು ಕೊಡಬಾರದು, ಓದಬಾರದು ಎಂದು ಹೇಳಲು ಆ ಪೂಂಜ ಯಾರು ಎಂದು ನಿಮ್ಮ ಆತ್ಮೀಯರೇ ಹೇಳುತ್ತಿದ್ದಾರೆ. ಓಟಿನ ವಿಷಯದಲ್ಲಿ ಅವರು ನಿಮ್ಮ ಕಡೆ ಇರಬಹುದು. ಆದರೆ ಪತ್ರಿಕೆ ವಿಷಯದಲ್ಲಿ ಓಟು ಆದರೆ ನಿಮಗೆ ಇಡುಗಂಟೂ ಸಿಗುವುದಿಲ್ಲ ಪೂಂಜರೇ.. ಸುದ್ದಿ ಬಿಡುಗಡೆಯ ಇಡೀ ತಂಡವನ್ನೇ ಹೈಜಾಕ್ ಮಾಡಿ ಸುದ್ದಿ ಉದಯ ಪತ್ರಿಕೆ ಮಾಡಿದ್ದರೂ, ಅದರ ಪ್ರಸಾರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದೇ ಅದಕ್ಕೆ ಉತ್ತಮ ಸಾಕ್ಷಿ ಪೂಂಜರವರೇ.. ಅದನ್ನು ಪರಿಶೀಲಿಸಲು ನಾವಿಬ್ಬರೂ ಒಟ್ಟಿಗೆ ಬೆಳ್ತಂಗಡಿ ತಾಲೂಕು ತಿರುಗಿ ಪತ್ರಿಕಾ ಏಜೆಂಟರುಗಳನ್ನು ವಿಚಾರಿಸೋಣವೇ?


ನಿಮ್ಮ ಬೈಗುಳಗಳಿಗೆ ನಾವು ಜಗ್ಗುವುದಿಲ್ಲ, ಜನಪರ ವರದಿಯನ್ನು ಮುಂದುರಿಸುತ್ತೇವೆ.. ಪೂಂಜರೇ :
ನೀವು ಕಳೆಂಜದಲ್ಲಿ ಸುದ್ದಿ ಬಿಡುಗಡೆಯ ವರದಿಗಾರರನ್ನು, ಪತ್ರಿಕೆಯನ್ನು ಬೈದು, ಪತ್ರಿಕೆಯ ವರದಿಯ ಬಗ್ಗೆ ಜನರನ್ನು ದಾರಿ ತಪ್ಪಿಸಿರುವುದಕ್ಕೆ ಕನಿಷ್ಠ ಅಲ್ಲಿಯ ಜನರ, ಸಂತ್ರಸ್ಥರ ಕ್ಷಮೆಯನ್ನಾದರೂ ಕೇಳಬೇಕಲ್ಲವೇ? ನಾವೇನು ನಿಮಗೆ ಬೈಯಲು ಹೋಗುವುದಿಲ್ಲ. ಅದರಿಂದ ನಮಗೇನು ಲಾಭವೇನಿಲ್ಲ. ನಿಮ್ಮ ಕಸುಬು ರಾಜಕೀಯ, ನಮ್ಮದು ಪತ್ರಿಕೆ. ರಾಜಕೀಯದ ವಿಷಯದಲ್ಲಿ ನಮಗೆ ನಿಮ್ಮೊಡನೆ ಸರ್ಧೆಯಿಲ್ಲ. ನಾವು ನಿಮ್ಮೆದುರಿಗೆ ಓಟಿಗೆ ನಿಲ್ಲುವವರೂ ಅಲ್ಲ. ಜನರಿಗೆ ಸತ್ಯವೇನು ಎಂದು ತಿಳಿಸುವ ವಿಷಯದಲ್ಲಿ ಮಾತ್ರ ನಮಗೆ ನಿಮ್ಮೊಂದಿಗೆ ಸರ್ಧೆ. ನಿಮ್ಮ ಒಳ್ಳೆಯ ಕೆಲಸದೊಂದಿಗೆ ನಿಮ್ಮ ತಪ್ಪನ್ನೂ ತೋರಿಸುವುದು, ಜನರನ್ನು ರಕ್ಷಿಸುವುದು ನಮ್ಮ ಕರ್ತವ್ಯ. ಆ ವಿಷಯದಲ್ಲಿ ನಾವು ಎಲ್ಲಿಯೂ ನಿಮ್ಮ ಬೆದರಿಕೆಗೆ, ಬೈಗುಳಗಳಿಗೆ ಜಗ್ಗುವುದಿಲ್ಲ. ನೀವು ಏನೇ ಮಾಡಿದರೂ, ಎಷ್ಟೇ ತೊಂದರೆ ಕೊಟ್ಟರೂ ನಮ್ಮ ಪತ್ರಿಕೆ ಜನಪರವಾಗಿಯೇ ನಿಲ್ಲುತ್ತದೆ.


ನಿಮಗೆ ಸುದ್ದಿ ಬಿಡುಗಡೆಯಿಂದ ಅನ್ಯಾಯ ಆಗಿರುವುದೇ ಇಲ್ಲ. ನಿಮ್ಮ ವರದಿ ಮಾತ್ರ ಬರೆಯಬೇಕು. ಇತರರ ನಿಮ್ಮ ವಿರೋಧಿಗಳ ವರದಿ ಬರಬಾರದು ಎಂಬ ಪತ್ರಿಕೆಯ ಮೇಲಿನ ನಿಮ್ಮ ಹಿಡಿತವನ್ನು ಮಾತ್ರ ನಾವು ವಿರೋಧಿಸುತ್ತಿದ್ದೆವು. ನೀವು ಎಷ್ಟೇ ತೊಂದರೆ ಕೊಟ್ಟರೂ ನಮ್ಮ ಪತ್ರಿಕೆಯಲ್ಲಿಯೇ ನಿಮ್ಮ ಹೆಚ್ಚು ಹೆಚ್ಚು ವರದಿಗಳು ಬರುತ್ತಿವೆ. ಶಾಸಕರಾದ ನಿಮ್ಮ ವಾರದ ಕಾರ್ಯಕ್ರಮವೂ ನಿಮ್ಮದರಲ್ಲಿ ಬಾರದಿದ್ದರೂ ಜನರಿಗೆ ಬೇಕಾಗಿ ಎಂದು ನಮ್ಮ ಪತ್ರಿಕೆಯಲ್ಲಿ ಬರುತ್ತಿದೆ. ಆ ವಿಷಯದಲ್ಲಿ ನಿಮಗೆ ಸಂಶಯವಿದ್ದರೆ, ಧೈರ್ಯವಿದ್ದರೆ ಸುದ್ದಿ ಬಿಡುಗಡೆ ಪತ್ರಿಕೆಯನ್ನು ನಿಮ್ಮ ಸುದ್ದಿ ಉದಯ ಪತ್ರಿಕೆಯನ್ನು ಜನರ ಎದುರಿಟ್ಟು ಸಾರ್ವಜನಿಕವಾಗಿ ಚರ್ಚೆ ಮಾಡೋಣ. ಅದನ್ನು (ಸತ್ಯವನ್ನು) ಎದುರಿಸುವ ಧೈರ್ಯ ನಿಮಗೆ ಇದೆಯೇ ಶಾಸಕ ಹರೀಶ್ ಪೂಂಜರೇ..?


ನಿಮ್ಮ ಉತ್ತಮ ಕೆಲಸಗಳಿಗೆ ನಮ್ಮ ಬೆಂಬಲವಿದೆ, ಸುದ್ದಿ ಬಿಡುಗಡೆಗೆ ತೊಂದರೆ ಕೊಡಬೇಡಿ, ಬೆಂಬಲ ಕೊಡಿ:
ಪೂಂಜರೇ.. ನಮ್ಮ ನಿಮ್ಮೊಳಗಿನ ಅನಗತ್ಯ ವಿಷಯಗಳನ್ನು ಜನರ ಮುಂದೆ ತೆಗೆದುಕೊಂಡು ಹೋಗುವುದು ಬೇಡ. ಕಳೆಂಜದಲ್ಲಿ ನೀವು ಮಾಡಿರುವ ಭಾಷಣಕ್ಕೆ, ಆಪಾಧನೆಗಳಿಗೆ ಸೂಕ್ತ ಉತ್ತರವನ್ನು ನೀಡಲಿದ್ದೇನೆ. ಆ ನಂತರ ನೀವು ನಿಮ್ಮ ಕೆಲಸ ಮಾಡಿ. ನಿಮ್ಮ ಉತ್ತಮ ಕೆಲಸಗಳಿಗೆ ನಮ್ಮ ಬೆಂಬಲವಿದೆ. ನಿಮ್ಮ ತಪ್ಪುಗಳನ್ನು ಗುರುತಿಸಲು ಬೆಳ್ತಂಗಡಿಯಲ್ಲಿ ಸುದ್ದಿ ಬಿಡುಗಡೆಯೇ ಬೇಕು. ನಿಮ್ಮ ಸುದ್ದಿ ಉದಯಲ್ಲಿ ಅದು ಸಾಧ್ಯವಿಲ್ಲ ಅಲ್ಲವೇ ಪೂಂಜರೇ..? ಆ ಕಾರಣಕ್ಕಾಗಿ ಮತ್ತು ಬೆಳ್ತಂಗಡಿಯ ಜನತೆಯ ಮೆಚ್ಚಿನ ಪತ್ರಿಕೆಯಾಗಿರುವ ಸುದ್ದಿ ಬಿಡುಗಡೆಗೆ ತೊಂದರೆ ಕೊಡುವುದನ್ನು ನಿಲ್ಲಿಸಿ ಶಾಸಕರಾಗಿ ನಿಮ್ಮ ಕರ್ತವ್ಯದಂತೆ ಬೆಂಬಲ ಕೊಡಲು ಪ್ರಾರಂಭಿಸಿ ಎಂದು ತಮ್ಮಲ್ಲಿ ವಿನಂತಿಸುತ್ತಿದ್ದೇನೆ. ಈ ವಿಷಯದಲ್ಲಿ ನಮ್ಮ ನಿಮ್ಮ ಭೇಟಿ ಎಲ್ಲಿ ಮತ್ತು ಯಾವಾಗ ಎಂದು ತಿಳಿಸಿ ಪೂಂಜರವರೇ..

LEAVE A REPLY

Please enter your comment!
Please enter your name here