ಆಚರಣೆಗಳು ನಡೆದಾಗ ಸಂಸ್ಕೃತಿಯ ಉಳಿವು ಸಾಧ್ಯ: ನಟೇಶ್ ಪೂಜಾರಿ
ಉಪ್ಪಿನಂಗಡಿ: ತುಳುನಾಡು ಎಂಬುದು ಪುಣ್ಯ ಭೂಮಿ. ತುಳುವರ ಪ್ರತಿಯೊಂದು ಆಚರಣೆ, ಸಂಸ್ಕೃತಿ, ಕ್ರೀಡೆಗಳಿಗೂ ಅದರದ್ದೇ ಆದ ಮಹತ್ವವಿದೆ. ಇದರ ಹಿಂದೆ ಈ ಮಣ್ಣಿನ, ಪ್ರಕೃತಿಯ ಸೊಗಡಿದೆ. ಆದ್ದರಿಂದಲೇ ಪ್ರತಿಯೊಂದು ಆಚರಣೆಗಳ ಹಿಂದೆ ದೈವ ಶಕ್ತಿಯೂ ಇರುತ್ತದೆ. ನಮ್ಮ ತುಳುನಾಡ ಆಚಾರ- ವಿಚಾರಗಳು ಉಳಿಯಬೇಕಿದ್ದರೆ, ಇವುಗಳ ಆಚರಣೆಗಳೂ ನಡೆಯಬೇಕಿದೆ. ಇದನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವುದು, ತುಳುವರ ಆಚಾರ-ವಿಚಾರಗಳನ್ನು ಹತ್ತೂರಿಗೆ ಪರಿಚಯಿಸುವುದು ನಮ್ಮೆಲ್ಲರ ಕರ್ತವ್ಯವೂ ಆಗಿದೆ ಎಂದು ಬೆಂಗಳೂರಿನ ಉದ್ಯಮಿ, ಉಪ್ಪಿನಂಗಡಿ ವಿಜಯ- ವಿಕ್ರಮ ಜೋಡುಕರೆ ಕಂಬಳದ ಉಪಾಧ್ಯಕ್ಷರೂ ಆದ ನಟೇಶ್ ಪೂಜಾರಿ ಪುಳಿತ್ತಡಿ ತಿಳಿಸಿದರು.
ಉಪ್ಪಿನಂಗಡಿ ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಆಶ್ರಯದಲ್ಲಿ ಇಲ್ಲಿನ ಹಳೆಗೇಟುವಿನ ನೇತ್ರಾವತಿ ನದಿ ಕಿನಾರೆಯಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾದ ‘ಉಬಾರ್ ಕಂಬಳೋತ್ಸವ’ದಲ್ಲಿ ಮಾ.30ರಂದು ವಿಜಯ- ವಿಕ್ರಮ ಜೋಡುಕರೆ ಕಂಬಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬದಲಾದ ಇಂದಿನ ಕಾಲಘಟ್ಟಕ್ಕೆ ನಮ್ಮ ತುಳುನಾಡು ಕೂಡಾ ಸಿಲುಕಿಕೊಂಡಿದೆ. ನಮ್ಮ ನೆಲದ ಸಂಸ್ಕೃತಿಯು ಮರೆಯಾಗುತ್ತಿರುವ ಈ ದಿನಗಳಲ್ಲಿ ಕಂಬಳ ಕ್ರೀಡೆ ಮಾತ್ರ ವೈಭವದಿಂದ ನಡೆಯುತ್ತಿದ್ದು, ನಮ್ಮೂರ ಸಂಸ್ಕೃತಿಯನ್ನು ಎಲ್ಲೆಡೆ ಪಸರಿಸುವ ಕೆಲಸ ಮಾಡುತ್ತಿರುವುದು ಸಂತಸದ ಸಂಗತಿ. ಕಂಬಳವನ್ನು ಕೇವಲ ಕೋಣಗಳ ಓಟಕ್ಕೆ ಮಾತ್ರ ಸೀಮಿತವಾಗಿಡದೇ, ಕಂಬಳ ನಡೆಯುವ ಸ್ಥಳದಲ್ಲಿ ತುಳುನಾಡಿನ ಆಚಾರ- ವಿಚಾರಗಳನ್ನು ಪರಿಚಯಿಸುವ ಕಾರ್ಯವೂ ಆಗಬೇಕಿದೆ. ಆಗ ಇನ್ನಷ್ಟು ನಮ್ಮ ಸಂಸ್ಕೃತಿ ಬೆಳೆಯಲು ಸಾಧ್ಯ. ಅಶೋಕ್ ಕುಮಾರ್ ರೈ ಅವರ ಸಾರಥ್ಯದಲ್ಲಿ ನಡೆಯುವ ಉಪ್ಪಿನಂಗಡಿಯ ವಿಜಯ- ವಿಕ್ರಮ ಕಂಬಳವು ಈ ಕೆಲಸ ಮಾಡುತ್ತಿದ್ದು, ತುಳು ಸಂಸ್ಕೃತಿಯ ಪ್ರಸರಣಕ್ಕೆ ತನ್ನದೇ ಕೊಡುಗೆ ನೀಡುತ್ತಿದೆ. ತುಳುವರಾದ ನಾವೆಲ್ಲರೂ ಇದೆಲ್ಲಾ ನಮ್ಮ ಜವಾಬ್ದಾರಿ ಅಂತ ತಿಳಿದು ತುಳು ಸಂಸ್ಕೃತಿಯ ಅನಾವರಣಕ್ಕೆ ಮುಂದಾದಾಗ ತುಳುವಿಗೆ ವಿಶ್ವ ಮಾನ್ಯತೆ ಸಿಗಲು ಸಾಧ್ಯ ಎಂದರು.
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾಕ್ ಮಾತನಾಡಿ, ಕಂಬಳ ಆಯೋಜನೆ ಮೂಲಕ ರೈತಾಪಿ ವರ್ಗದವರ ಒಗ್ಗಟ್ಟು ಪ್ರದರ್ಶನಕ್ಕೆ ಸಾಧ್ಯವಾಗುತ್ತಿದೆ ಎಂದರು. ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ, ಕಂಬಳ ಸಮಿತಿಯ ಗೌರವ ಸಲಹೆಗಾರ ಧನ್ಯಕುಮಾರ್ ರೈ ಬಿಳಿಯೂರುಗುತ್ತು, ಉಪ್ಪಿನಂಗಡಿ ರೋಟರಿ ಕ್ಲಬ್ ಅಧ್ಯಕ್ಷೆ ಅನುರಾಧ ಆರ್. ಶೆಟ್ಟಿ ಮಾತನಾಡಿ ಶುಭಕೋರಿದರು.
ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಪ್ರಾಸ್ತಾವಿಕವಾಗಿ ಮಾತನಾಡಿ, ಬೆಂಗಳೂರಿನ ಕಂಬಳ ನೋಡಿದ ಬಳಿಕ ಅಲ್ಲಿನ ಹಾಗೆ ಇಲ್ಲಿ ಕೂಡಾ ಕಂಬಳಕ್ಕೆ ಇನ್ನಷ್ಟು ಮೆರುಗು ನೀಡಬೇಕೆನ್ನುವ ವಿಚಾರಗಳು ಜನರಲ್ಲಿ ಬರುತ್ತಿವೆ. ಅದಕ್ಕಾಗಿ ಈ ಬಾರಿ ಉಪ್ಪಿನಂಗಡಿ ಕಂಬಳದಲ್ಲಿ ಸಣ್ಣ ಮಟ್ಟಿನಲ್ಲಾದರೂ ಕಂಬಳದೊಂದಿಗೆ ಸಸ್ಯ ಮೇಳ, ಆಹಾರ ಮೇಳ, ಕೃಷಿ ಯಂತ್ರೋಪಕರಣ ಮೇಳಗಳನ್ನು ಆಯೋಜಿಸುವ ಮೂಲಕ ಇದಕ್ಕೆ ಹೊಸ ರೂಪ ನೀಡುವ ಕೆಲಸ ಮಾಡಿದ್ದೇವೆ. ಕಂಬಳವನ್ನು ಜನರು ಇದೀಗ ಕುಟುಂಬ ಸಮೇತರಾಗಿ ಬಂದು ನೋಡುತ್ತಿದ್ದು, ಕಂಬಳದಲ್ಲಿ ತೊಡಗಿಸಿಕೊಳ್ಳುವ ಯುವ ಜನರ ಸಂಖ್ಯೆ ಹೆಚ್ಚಳವಾಗಿದೆ. ಕಂಬಳ ಕೋಣಗಳು, ಕಂಬಳ ಕರೆಗಳು ಜಾಸ್ತಿಯಾಗತೊಡಗಿವೆ. ಆದ್ದರಿಂದ ಕಂಬಳದ ಕ್ರೀಡೆಯೂ ಅವನತಿಯ ಹಾದಿಯಲ್ಲಿಲ್ಲ. ಇನ್ನಷ್ಟು ಬೆಳೆಯುವ ಹಾದಿಯಲ್ಲಿದೆ ಎಂಬುದು ಅತ್ಯಂತ ಖುಷಿಯ ವಿಚಾರ. ಸಸ್ಯ ಸಂಪತ್ತನ್ನು ಬೆಳೆಸುವ ಕಾರ್ಯಕ್ಕೂ ಕಂಬಳವು ಪ್ರೋತ್ಸಾಹ ನೀಡಬೇಕು. ಆದ್ದರಿಂದ ಕಂಬಳದೊಂದಿಗೆ ಸಸ್ಯ ಮೇಳ, ಇಲ್ಲಿನ ಆಹಾರ ಪದ್ಧತಿಯನ್ನು ಪರಿಚಯಿಸುವ ಕಾರ್ಯ, ರೈತಾಪಿ ವರ್ಗಕ್ಕೆ ಬೇಕಾದ ಕೃಷಿ ಯಂತ್ರೋಪಕರಣಗಳನ್ನು ಪರಿಚಯಿಸುವ ಕಾರ್ಯ ನಡೆಯಬೇಕು ಎಂದರು.
ವೇದಿಕೆಯಲ್ಲಿ ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಲಲಿತಾ, ಸದಸ್ಯ ತೌಸೀಫ್ ಯು.ಟಿ., ಶ್ರೀ ಮಹಿಷಮರ್ದಿನಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಮಹಾಲಿಂಗ ಕಜೆಕ್ಕಾರು, ರಾಜೇಶ್ ಎಲೆಕ್ಟ್ರಿಕಲ್ಸ್‌ನ ರಾಜೇಶ್ ರೈ, ಶ್ರೀ ದುರ್ಗಾ ಕನ್‌ಸ್ಟ್ರಕ್ಷನ್‌ನ ಬಿ.ಕೆ. ಆನಂದ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಕೃಷ್ಣರಾವ್ ಆರ್ತಿಲ, 34 ನೆಕ್ಕಿಲಾಡಿ ಗ್ರಾ.ಪಂ. ಮಾಜಿ ಸದಸ್ಯೆ ಅನಿ ಮಿನೇಜಸ್, ಕಂಬಳದ ಪ್ರಧಾನ ತೀರ್ಪುಗಾರ ರಾಜೀವ್ ಶೆಟ್ಟಿ ಎಡ್ತೂರು, ಸಾಮಾಜಿಕ ಕಾರ್ಯಕರ್ತ ಅಶ್ರಫ್ ಬಸ್ತಿಕ್ಕಾರ್, ನಝೀರ್ ಮಠ, ಉಪ್ಪಿನಂಗಡಿ ಕಟ್ಟಡ ಕಾರ್ಮಿಕ ಸಂಘದ ಕಾರ್ಯದರ್ಶಿ ಮಹಾಲಿಂಗ ಕಜೆಕ್ಕಾರು, ಪ್ರವೀಣ್ ಕುಮಾರ್ ಕದಿಕ್ಕಾರು ಬೀಡು, ಕಂಬಳ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾಣಿಸಾಗು ಉಮೇಶ್ ಶೆಟ್ಟಿ, ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಗೌರವಾಧ್ಯಕ್ಷ ಉಮೇಶ್ ಶೆಣೈ, ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ, ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹಗ್ಡೆಹಿತ್ಲು ಮತ್ತಿತರರು ಉಪಸ್ಥಿತರಿದ್ದರು.
ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಯೊಗೀಶ್ ಸಾಮಾನಿ ಸಂಪಿಗೆದಡಿ ಮಠಂತಬೆಟ್ಟು ವಂದಿಸಿದರು. ಗೌರವ ಸಲಹೆಗಾರ ನಿರಂಜನ್ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿದರು.
ಕಂಬಳ ಕೋಣಗಳ ಮೆರವಣಿಗೆ
ಇದಕ್ಕೂ ಮೊದಲು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ ಕಂಬಳ ಕೋಣಗಳ ಭವ್ಯ ಮೆರವಣಿಗೆ ಕಂಬಳ ಕರೆಯವರೆಗೆ ನಡೆಯಿತು. ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾಯ್ಕ್ ತೆಂಗಿನ ಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಗೆ ಕೊಂಬು- ಕಹಳೆ, ಬ್ಯಾಂಡ್- ವಾದ್ಯದೊಂದಿಗೆ ನಡೆದ ಮೆರವಣಿಗೆಯಲ್ಲಿ ಗೊಂಬೆ ಕುಣಿತ, ತಟ್ಟಿರಾಯಗಳು ಮೆರವಣಿಗೆಯ ಆಕರ್ಷಣೆ ಹೆಚ್ಚಿಸಿದವು.
ಈ ಸಂದರ್ಭ ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ಕರ್ನಾಟಕ ರಾಜ್ಯ ರೈತ ಸಂಘದ ದ.ಕ. ಜಿಲ್ಲಾಧ್ಯಕ್ಷ ರೂಪೇಶ್ ರೈ ಅಲಿಮಾರ್, ಕಂಬಳೋತ್ಸವ ಆಯೋಜಕರಾದ ರಾಜೇಶ್ ಶೆಟ್ಟಿ, ಕಂಬಳ ಸಮಿತಿಯ ಉಪಾಧ್ಯಕ್ಷರಾದ ವಿದ್ಯಾಧರ ಜೈನ್ ಪದ್ಮವಿದ್ಯಾ, ವಿಠಲ ಶೆಟ್ಟಿ ಕೊಲ್ಯೊಟ್ಟು, ರಾಮಚಂದ್ರ ಮಣಿಯಾಣಿ, ಜಯಂತ ಪೊರೋಳಿ, ವಾರಿಸೇನ ಜೈನ್ ಕೋಡಿಯಾಡಿಗುತ್ತು, ರಾಜೀವ ಶೆಟ್ಟಿ ಕೇದಗೆ, ಶಿವಪ್ರಸಾದ್ ರೈ ಮಠಂತಬೆಟ್ಟು, ಮುರಳೀಧರ ರೈ ಮಠಂತಬೆಟ್ಟು, ಸುದೇಶ್ ಶೆಟ್ಟಿ ಶಾಂತಿನಗರ, ಗೌರವ ಸಲಹೆಗಾರರಾದ ಮಾಣಿಸಾಗು ಉಮೇಶ್ ಶೆಟ್ಟಿ, ಕಾರ್ಯದರ್ಶಿಗಳಾದ ಶಿವರಾಮ ಶೆಟ್ಟಿ ಗೋಳ್ತಮಜಲು, ಚಂದ್ರಶೇಖರ ಮಡಿವಾಳ, ಜೊತೆ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ಕಂಗ್ವೆ, ಸಂಘಟನಾ ಕಾರ್ಯದರ್ಶಿಗಳಾದ ಕೃಷ್ಣಪ್ರಸಾದ್ ಬೊಳ್ಳಾವು, ವಿಜಯ ಪೂಜಾರಿ ಚೀಮುಳ್ಳು, ದಿಲೀಪ್ ಶೆಟ್ಟಿ ಕರಾಯ, ಸಹ ಸಂಚಾಲಕರಾದ ಜಯಪ್ರಕಾಶ್ ಬದಿನಾರು, ಕುಮಾರನಾಥ ಪಲ್ಲತ್ತಾರು ಕೋಡಿಂಬಾಡಿ, ಪದಾಧಿಕಾರಿಗಳಾದ ನಿಹಾಲ್ ಶೆಟ್ಟಿ ಡ್ಯಾಶ್ ಮಾರ್ಕೇಟಿಂಗ್,ವಿಕ್ರಂ ಶೆಟ್ಟಿ ಅಂತರ, ಸತೀಶ್ ಶೆಟ್ಟಿ ಹೆನ್ನಾಳ, ಜಯಾನಂದ ಪಿಲಿಗುಂಡ, ಕಬೀರ್ ಕರ್ವೇಲು, ರಾಕೇಶ್ ಶೆಟ್ಟಿ ಕೆಮ್ಮಾರ, ಜಗದೀಶ್ ಪೂಜಾರಿ ಪರಕ್ಕಜೆ, ಉಮೇಶ ನಟ್ಟಿಬೈಲು, ರಾಘವೇಂದ್ರ ನಾಯಕ್ ನಟ್ಟಿಬೈಲು, ಪ್ರೀತಂ ಶೆಟ್ಟಿ ಕೇದಗೆ ಮತ್ತಿತರರು ಉಪಸ್ಥಿತರಿದ್ದರು.