ಪಿಕಾಪ್‌ಗಳಿಗೆ 28 ದಿನ ಬಾಡಿಗೆ ನೀಡುವ ಆಸೆ ಹುಟ್ಟಿಸಿದ ಭೂಪ-ನಂಬಿ ಹೋದವರಿಗೆ ಬಾಡಿಗೆಯೂ ಇಲ್ಲ..! ಕೈಯಲ್ಲಿದ್ದ ಹಣವೂ ಇಲ್ಲ..! – 8,500 ರೂ. ದೋಚಿ ವಂಚಕ ನಾಪತ್ತೆ

0
fraud red round stamp

ಉಪ್ಪಿನಂಗಡಿ: ತಾನೋರ್ವ ಸಿಮ್ ಕಂಪೆನಿಯ ಅಧಿಕಾರಿ. 5ಜಿ ಟವರ್ ಈ ಭಾಗಗಳಲ್ಲಿ ಆಗಬೇಕಿದೆ. ಅದಕ್ಕೆ ಬೇಕಾದ ಮೆಟೀರಿಯಲ್‌ಗಳನ್ನು ಮಂಗಳೂರಿನಿಂದ ತರಲಿಕ್ಕಿದೆ. ನನಗೆ 28 ದಿನಗಳಷ್ಟು ಕಾಲ ದಿನಾ ಎರಡು ಬಾರಿ ಮಂಗಳೂರಿಗೆ ಹೋಗಿ ಟವರ್‌ನ ಸಾಮಗ್ರಿಗಳನ್ನು ತರಲು ಎರಡು ಪಿಕಾಪ್ ವಾಹನಗಳು ಬೇಕು ಎಂದು ನಂಬಿಸಿದ ಭೂಪನೋರ್ವ ಉಪ್ಪಿನಂಗಡಿಯಿಂದ ಪಿಕಾಪ್ ಅನ್ನು ಬಾಡಿಗೆಗೆ ಪಡೆದು ಮಂಗಳೂರಿಗೆ ಹೋಗಿ ಅಲ್ಲಿ ಪಿಕಾಪ್ ಚಾಲಕರ ಕೈಯಿಂದ ಎಂಟೂವರೆ ಸಾವಿರ ರೂ. ಪಡೆದು ನಾಪತ್ತೆಯಾದ ಘಟನೆ ನಾಲ್ಕು ದಿನಗಳ ಹಿಂದೆ ನಡೆದಿದೆ.

ಯಾವುದೋ ಉನ್ನತ ಹುದ್ದೆಯಲ್ಲಿರುವವರಂತೆ ಡ್ರೆಸ್ ಮಾಡಿಕೊಂಡು ಇಲ್ಲಿನ ಲಾಡ್ಜ್‌ವೊಂದಕ್ಕೆ ಬಂದ ವ್ಯಕ್ತಿಯೋರ್ವ ಅದರ ಮಾಲಕರಲ್ಲಿ ತನ್ನನ್ನು, ತಾನು ಸಿಮ್ ಕಂಪೆನಿಯೊಂದರ ಅಧಿಕಾರಿ. ಉಪ್ಪಿನಂಗಡಿ ಭಾಗಗಳಲ್ಲಿ 5ಜಿ ಮೊಬೈಲ್ ಟವರ್ ಆಗಬೇಕಿದೆ. ಅದಕ್ಕೆ ಒಂದು ತಿಂಗಳಷ್ಟು ಕಾಲ ಅಧಿಕಾರಿಗಳಿಗೆ ತಂಗಲು ಮೂರು ಎಸಿ ರೂಂ ಹಾಗೂ ಕಾರ್ಮಿಕರಿಗೆ ತಂಗಲು ಎರಡು ನಾನ್ ಎಸಿ ರೂಂ ಬೇಕಾಗಿದೆ ಎಂದನಲ್ಲದೇ, ಅದೇ ಲಾಡ್ಜ್ ಮಾಲಕರ ಹಳೆ ಮನೆಯೊಂದನ್ನು ಬಾಡಿಗೆಗೆ ಬೇಕು ಎಂದು ಇಲ್ಲಿಂದ ರಿಕ್ಷಾ ಮಾಡಿಕೊಂಡು ಹೋಗಿ ಬಂದಿದ್ದ. ಹೀಗೆ ಮಾತುಕತೆಗಳು ಸಾಗುತ್ತಿರುವ ನಡುವೆಯೇ ಈತ ಲಾಡ್ಜ್ ಮಾಲಕರಲ್ಲಿ ತನಗೆ ಎರಡು ಪಿಕಾಪ್‌ಗಳು ಬಾಡಿಗೆಗೆ ಬೇಕು. ನಿರಂತರ 28 ದಿನಗಳ ಕಾಲ ಮಂಗಳೂರಿಗೆ ಎರಡು ಟ್ರಿಪ್ ಇದೆ. ಯಾರಾದರೂ ಇದ್ದರೆ ಹೇಳಿ ಎಂದಿದ್ದ.

ಈತನ ಮಾತನ್ನು ಸತ್ಯವೆಂದು ನಂಬಿದ ಲಾಡ್ಜ್ ಮಾಲಕರು, ಪಿಕಾಪ್ ವಾಹನದವರಿಗೆ ಬಾಡಿಗೆ ಆಗುತ್ತಲ್ಲ ಎಂದು ಎನಿಸಿ, ತನಗೆ ಪರಿಚಯದ ಪಿಕಾಪ್ ಚಾಲಕನಲ್ಲಿ ಈ ಬಗ್ಗೆ ವಿಷಯ ಹೇಳಿ, ನೀವು ಹೋಗುವುದಿದ್ದಲ್ಲಿ ಅವನಲ್ಲಿ ಬಂದು ಮಾತನಾಡಿ ಎಂದಿದ್ದರು. ಆಗ ಓರ್ವ ಪಿಕಾಪ್ ಚಾಲಕ ತನ್ನ ಸಂಬಂಧಿ ಪಿಕಾಪ್ ಚಾಲಕನನ್ನು ಕರೆದುಕೊಂಡು ಆತನಲ್ಲಿ ಹೋಗಿ ಬಾಡಿಗೆಯ ಬಗ್ಗೆ ಮಾತನಾಡಿ, ನಾವು ಬಾಡಿಗೆಗೆ ಬರುತ್ತೇವೆ ಎಂದು ಒಪ್ಪಿಕೊಂಡರು. ಆಗ ನವೀನ್ ಎಂದು ಪರಿಚಯಿಸಿಕೊಂಡವ ಹಾಗಾದರೆ ಇವತ್ತು ಮಂಗಳೂರಿಗೆ ರೈಲಿನಲ್ಲಿ ಟವರ್‌ನ ಸಾಮಾಗ್ರಿಗಳು ಬರುತ್ತವೆ. ಈಗಲೇ ಎರಡು ಪಿಕಾಪ್‌ಗಳನ್ನು ತೆಗೆದುಕೊಂಡು ಮಂಗಳೂರಿಗೆ ಹೋಗೋಣ ಎಂದಿದ್ದ. ಅದಕ್ಕೆ ಪಿಕಾಪ್ ಚಾಲಕರು ಒಪ್ಪಿ ಅವನೊಂದಿಗೆ ಮಂಗಳೂರಿಗೆ ತೆರಳಿದ್ದಾನೆ. ಒಂದು ಪಿಕಾಪ್‌ನಲ್ಲಿ ನವೀನ್ ಎಂದು ಪರಿಚಯಿಸಿಕೊಂಡಿದ್ದ ವ್ಯಕ್ತಿ ಕೂತಿದ್ದು, ಅದರ ಚಾಲಕನಿಗೆ, ʼನನಗೆ ಪಿಕಾಪ್‌ನಲ್ಲೆಲ್ಲಾ ಕೂತು ಅಭ್ಯಾಸ ಇಲ್ಲ. ನಮಗೆ ಸಂಚರಿಸಲು ಇನೋವಾ ಕಾರು ಕಂಪೆನಿಯಿಂದ ಇದೆ. ಆದರೆ ಆ ಕಾರನ್ನು ಕಂಪೆನಿಯ ಮತ್ತೋರ್ವ ಅಧಿಕಾರಿಯನ್ನ ಕರೆದುಕೊಂಡು ಬರಲು ಏರ್‌ಪೋರ್ಟ್‌ಗೆ ಕಳುಹಿಸಲಾಗಿದೆ’ ಎಂದೆಲ್ಲಾ ಹೇಳಿದ್ದ. ಅಲ್ಲದೇ, ದಾರಿಯುದ್ದಕ್ಕೂ ಅಧಿಕಾರಿಯಂತೆ ಮೊಬೈಲ್‌ನಲ್ಲಿ ಮಾತನಾಡುತ್ತಾ, ಪಿಕಾಪ್ ಚಾಲಕನಿಗೆ ಈತ ಅಧಿಕಾರಿಯೆಂದು ನಂಬಿಕೆ ಹುಟ್ಟಿಸಿದ್ದ. ಒಂದು ಪಿಕಾಪ್‌ನನ್ನು ಪಡೀಲ್ ಬಳಿಯ ಜಂಕ್ಷನ್ ರೈಲ್ವೇ ನಿಲ್ದಾಣಕ್ಕೆ ಹೋಗಿ ನಿಲ್ಲಲು ಹೇಳಿದ್ದನ್ನಲ್ಲದೆ, ಟವರ್ ಸಾಮಾಗ್ರಿಗಳು ರೈಲಿನಲ್ಲಿ ಬರುತ್ತಾ ಇವೆ. ಅದು ಬಂದ ಬಳಿಕ ನಮ್ಮದೇ ಕಾರ್ಮಿಕರು ಲೋಡ್ ಮಾಡಿಕೊಡುತ್ತಾರೆ. ಅದನ್ನು ತೆಗೆದುಕೊಂಡು ಉಪ್ಪಿನಂಗಡಿಗೆ ಹೋಗಿ ಅದು ಯಾವ ಜಾಗಕ್ಕೆ ಹಾಕಬೇಕೆಂದು ನಾನು ಹೇಳುತ್ತೇನೆ. ಅನ್‌ಲೋಡ್ ಮಾಡಲು ಅಲ್ಲಿ ನಮ್ಮ ಕಾರ್ಮಿಕರಿದ್ದಾರೆ ಎಂದಿದ್ದ.

ಅದರಂತೆ ಒಬ್ಬರು ತನ್ನ ಪಿಕಾಪ್ ಅನ್ನು ಜಂಕ್ಷನ್ ರೈಲ್ವೇ ನಿಲ್ದಾಣಕ್ಕೆ ತಗೊಂಡು ಹೋಗಿದ್ದರು. ಈತನಿದ್ದ ಪಿಕಾಪ್‌ನವರನ್ನು ಸೆಂಟ್ರಲ್ ರೈಲ್ವೇ ನಿಲ್ದಾಣಕ್ಕೆ ಕರೆದುಕೊಂಡು ಹೋದ ಈತ ದಾರಿ ಮಧ್ಯೆ ಅದರ ಚಾಲಕನಲ್ಲಿ ನಮ್ಮಲ್ಲಿ 100 ಲೀ. ಡೀಸೆಲ್ ಇದೆ. ಅದನ್ನು ನಾನು ನಿಮಗೆ ಕಮ್ಮಿಗೆ ಕೊಡುತ್ತೇನೆ ಎಂದಿದ್ದನಲ್ಲದೆ, ಅದಕ್ಕಾಗಿ ಆರು ಸಾವಿರ ರೂ. ಮುಂಗಡವಾಗಿ ಪಿಕಾಪ್ ಚಾಲಕನಿಂದ ಪಡೆದಿದ್ದ. ಮಂಗಳೂರಿನ ಸೆಂಟ್ರಲ್ ರೈಲ್ವೇ ನಿಲ್ದಾಣಕ್ಕೆ ಹೋಗುತ್ತಿದ್ದಾಗ ಮೂರು ಎಟಿಎಂಗೆ ಹೋಗಿ ಬಂದಿದ್ದ ಈತ, ಒಂದರಲ್ಲಿ ರಷ್ ಇದೆ. ಇನ್ನೊಂದರಲ್ಲಿ ಕ್ಯಾಷ್ ಇಲ್ಲ. ಹೀಗೆ ನಾನಾ ಸಬೂಬು ಹೇಳಿ ಮೂರು ಎಟಿಎಂನಲ್ಲೂ ಹಣ ಡ್ರಾ ಮಾಡಲು ಆಗಿಲ್ಲ ಎಂದು ಎಟಿಎಂಗಳಿಗೆ ಬೈಯುತ್ತಾ ಅಲ್ಲಿನ ವಿಚಾರಗಳನ್ನು ಪಿಕಾಪ್ ಚಾಲಕನಲ್ಲಿ ಹೇಳಿದ್ದನ್ನಲ್ಲದೇ, ತನಗೆ ಇನ್ನು 5 ಸಾವಿರ ಕೊಡಿ ನಾನು ವಾಪಸ್ ಹೋಗುವಾಗ ನೀಡುತ್ತೇನೆ ಎಂದಿದ್ದ. ಈತನ ಮೋಸದ ಮಾತುಗಳನ್ನು ತನ್ನಲ್ಲಿ ಅಷ್ಟು ಹಣವಿಲ್ಲ ಎಂದು ತನ್ನಲ್ಲಿದ್ದ ಎರಡೂವರೆ ಸಾವಿರ ರೂ.ವನ್ನು ಆತನಿಗೆ ನೀಡಿದ್ದಾರೆ. ಹೇಗಾದರೂ ಒಟ್ಟಿಗೆ ಇದ್ದಾನಲ್ವಾ ಅಂತ ಎನಿಸಿ. ಕೊನೆಗೇ ಸೆಂಟ್ರಲ್ ರೈಲು ನಿಲ್ದಾಣ ತಲುಪಿದ ಈತ ಇಲ್ಲೇ ನೆರಳಲ್ಲಿ ಪಿಕಾಪ್ ಪಾರ್ಕಿಂಗ್ ಮಾಡಿ. ಟವರ್ ಸಾಮಗ್ರಿಗಳು ಬಂದ ಕೂಡಲೇ ನಾನು ಫೋನ್ ಮಾಡುತ್ತೇನೆ. ನಾನು ಇಲ್ಲೇ ಇದ್ದೇನೆ ಎಂದು ಅಲ್ಲಿ ಪಿಕಾಪ್ ಇಳಿದು ಹೋಗಿದ್ದ. ಮಧ್ಯಾಹ್ನದಿಂದ ಸಂಜೆಯವರೆಗೆ ಕಾದರೂ ಈತನ ಸುಳಿವು ಮಾತ್ರ ಕಾಣಲಿಲ್ಲ. ಪಡೀಲ್ ಬಳಿಯ ಜಂಕ್ಷನ್ ರೈಲ್ವೇ ನಿಲ್ದಾಣದಲ್ಲಿದ್ದ ಪಿಕಾಪ್‌ನವರಿಗೆ ಇವರು ಕರೆ ಮಾಡಿದಾಗ ಅಲ್ಲಿಗೂ ಯಾವುದೇ ಲೋಡಿಗೆ ಯಾರೂ ಬಂದಿಲ್ಲ ಎಂದಿದ್ದರು. ನಾವು ಮೋಸ ಹೋಗಿದ್ದೇವಾ ಎಂದು ಅನುಮಾನಿಸಿ, ಈತನ ಮೊಬೈಲ್‌ಗೆ ಕರೆ ಮಾಡಿದರೆ, ಆತನ ಫೋನ್ ಸ್ವಿಚ್ ಆಫ್ ಆಗಿತ್ತು. ಈತ ತನ್ನ ಮಾತಿನಲ್ಲಿ ಇವರನ್ನು ಮೋಸಗೊಳಿಸಿ, ಮಂಗಳೂರಿಗೆ ಎರಡು ಪಿಕಾಪ್ ಅನ್ನು ಕರೆದುಕೊಂಡು ಹೋಗಿದ್ದಲ್ಲದೆ, ಒಂದು ಪಿಕಾಪ್‌ನ ಚಾಲಕರಿಂದ 8,500 ರೂ. ಅನ್ನು ಪಡೆದು ಈತ ಪರಾರಿಯಾಗಿದ್ದ. ತಾವು ಮೋಸ ಹೋದೆವೆಂದು ಅರಿತು ಇವರು ಮತ್ತೆ ವಾಪಸ್ ಉಪ್ಪಿನಂಗಡಿಗೆ ಬಂದರು. ಇನ್ಯಾರೂ ಈ ರೀತಿ ಮೋಸ ಹೋಗಬಾರದೆಂದು ಅವರು ಈ ವಿಷಯವನ್ನು ಮಾಧ್ಯಮಕ್ಕೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here