ಕಡಬ: ನದಿಗಳನ್ನು ಮೂಲವಾಗಿಟ್ಟುಕೊಂಡು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ರೂಪಿಸಲಾಗಿದೆ. ಜಿಲ್ಲಾ ಪಂಚಾಯಿತಿಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಯೋಜನೆಯನ್ನು ಪೂರ್ಣಗೊಳಿಸಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸುತ್ತದೆ. ನಂತರ ಅದನ್ನು ನಿರ್ವಹಣೆ ಮಾಡಿಕೊಂಡು ಹೋಗಬೇಕಾದ ಹೊಣೆ ಗ್ರಾಮ ಪಂಚಾಯಿತಿಯದ್ದಾಗಿದೆ.
ಇದೀಗ ಕುಟ್ರುಪ್ಪಾಡಿ ಗ್ರಾ.ಪಂ ವ್ಯಾಪ್ತಿಯಲ್ಲೂ ಇಂತಹ ಜನೋಪಯೋಗಿ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದ್ದು ಸ್ಪೋಟಕ ಬಳಸಿ ಬಂಡೆ ಸಿಡಿಸುವ ಅವೈಜ್ಞಾನಿಕ ಕ್ರಮಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಭಾಗದ ಸುತ್ತಮುತ್ತ ಕೆಲಸ ನಿರ್ವಹಿಸುವ ಕಾರ್ಮಿಕರಿಗೂ ಅಪಾಯವಿದೆ, ಬಂಡೆ ಸ್ಪೋಟದಿಂದ ಕಲ್ಲಿನ ಚೂರುಗಳು ಮನೆ ಮೇಲೆ ಅಥವಾ ಜನರ ಮೇಲೆ ಬೀಳುವ ಸಾಧ್ಯತೆ ಇದೆ. ಈಗಾಗಲೇ ಈ ಭಾಗದಲ್ಲಿ ವಿದ್ಯುತ್ ಉತ್ಪಾದನಾ ಘಟಕವೊಂದು ಕಾರ್ಯಾಚರಿಸುತ್ತಿದ್ದು ಇದರಿಂದಲೇ ಇಲ್ಲಿನ ರೈತಾಪಿ ವರ್ಗಕ್ಕೆ ನೀರಿನ ಸಮಸ್ಯೆ ಸೇರಿದಂತೆ ಪರಿಸರಕ್ಕೆ ಮಾರಕವಾದಂತಹ ಸಮಸ್ಯೆಗಳು ಎದುರಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಎಂಬ ಹೆಸರಿನಲ್ಲಿ ಗ್ರಾಮ ಪಂಚಾಯತ್ ಸ್ಥಳೀಯ ರೈತರಿಗೆ ತೊಂದರೆ ನೀಡಲು ಮುಂದಾಗಿದೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಅಭಿವೃದ್ದಿಗೆ ನಮ್ಮ ವಿರೋಧವಿಲ್ಲ ಆದ್ರೆ ಜನರಿಗೆ ತೊಂದರೆ ಕೊಡುವ ಯೋಜನೆ ನಮಗೆ ಬೇಡ,ಮುಂದುವರಿಸಿದರೆ ಪ್ರತಿಭಟನೆಗೆ ಹಿಂಜರಿಯುವುದಿಲ್ಲ ಎಂದು ಸ್ಥಳೀಯ ಕೃಷಿಕ ಪ್ರಕಾಶ್ ಎಂಬವರು ತಿಳಿಸಿದ್ದಾರೆ. ಗ್ರಾಮದ ಜನತೆಗೆ ತೊಂದರೆಯಾಗುತ್ತಿರುವ ಬಗ್ಗೆ ಕಡಬ ಪೊಲೀಸರಿಗೆ ಮತ್ತು ತಹಶಿಲ್ದಾರ್ ಗೆ ಈಗಾಗಲೇ ದೂರು ನೀಡಲಾಗಿದ್ದು ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಈ ಪ್ರದೇಶಕ್ಕೆ ಭೇಟಿ ನೀಡಿ ಇಲ್ಲಿನ ಜನರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು ಎಂದು ಸ್ಥಳೀಯ ರೈತರು ಆಗ್ರಹಿಸಿದ್ದಾರೆ.