ಪುತ್ತೂರು ಜಾತ್ರೆ ಗದ್ದೆಯಲ್ಲಿ ಮೊಬೈಲ್ ಸಿಸಿ ಕ್ಯಾಮರಾ ಕಣ್ಗಾವಲು

0

ಜಾತ್ರೆ ಗದ್ದೆಗೆ ಪ್ರವೇಶ ದ್ವಾರ ಸಹಿತ 42ಕ್ಕೂ ಅಧಿಕ ಕಡೆಗಳಲ್ಲಿ ಅಳವಡಿಕೆ

ಪುತ್ತೂರು: ಲಕ್ಷಾಂತರ ಮಂದಿ ಸೇರುವ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಯ ಸಂದರ್ಭದಲ್ಲಿ ಜಾತ್ರೆ ಗದ್ದೆಯಲ್ಲಿ ಯಾವುದೇ ಅಹಿತಕರ ಘಟನೆಗಳಾಗದಂತೆ ಪೊಲೀಸ್ ಬಂದೋಬಸ್ತ್ ಜೊತೆಗೆ ಮೊಬೈಲ್ ಸಿಸಿ ಕ್ಯಾಮರಾ ಕಣ್ಗಾವಲು ಕೂಡಾ ಇರಲಿದೆ. ಏ.15ರಂದು ಸಿಸಿ ಕ್ಯಾಮರಾ ಅಳವಡಿಸಿ ಚಾಲನೆ ನೀಡಲಾಗಿದೆ.

ಏ.16ರಂದು ಬಲ್ನಾಡು ಶ್ರೀ ದಂಡಾಯಕ ಉಳ್ಳಾಲ್ತಿ ದೈವಗಳ ಭಂಡಾರ ಬರುವ ಸಂದರ್ಭ ಮತ್ತು ಏ.17ರ ಬೆಳಿಗ್ಗೆ ನಡೆಯುವ ಶ್ರೀ ದೇವರ ದರ್ಶನ ಬಲಿ ಮತ್ತು ರಾತ್ರಿ ನಡೆಯುವ ಬ್ರಹ್ಮರಥೋತ್ಸವ, ‘ಪುತ್ತೂರು ಬೆಡಿ’ ಪ್ರದರ್ಶನ ಸಂದರ್ಭ ದೇವಳದ ಗದ್ದೆಯಲ್ಲಿ ಲಕ್ಷಾಂತರ ಮಂದಿ ಭಕ್ತರು ಸೇರಲಿದ್ದಾರೆ. ಈ ಸಂದರ್ಭ ಸೂಕ್ತ ಭದ್ರತೆಯ ದೃಷ್ಟಿಯಿಂದ ದೇವಳದ ಮೂರು ಕಡೆಗಳಲ್ಲಿರುವ ಪ್ರವೇಶ ದ್ವಾರ, ಕೊಂಬೆಟ್ಟು ರಸ್ತೆ, ನೆಲ್ಲಿಕಟ್ಟೆ ರಸ್ತೆ, ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ರಸ್ತೆ, ಮಹಾಲಿಂಗೇಶ್ವರ ದೇವಳದ ಕೆರೆಯ ಬಳಿಯ ರಸ್ತೆ, ಮುಖ್ಯರಸ್ತೆ ಅಲ್ಲದೆ ದೇವಳದ ಜಾತ್ರಾ ಗದ್ದೆಯ ಹಲವು ಕಡೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಎಲ್ಲಾ ಸಿಸಿ ಕ್ಯಾಮರಾಗಳ ನಿಯಂತ್ರಣ ನಿಟ್ಟಿನಲ್ಲಿ ಶೇಟ್ ಇಲೆಕ್ಟ್ರಾನಿಕ್ಸ್ ಸಂಸ್ಥೆಯವರು ಮೊಬೈಲ್ ಕಂಟ್ರೋಲ್ ರೂಮ್‌ನಲ್ಲಿ ಸಿಸಿ ಕ್ಯಾಮರಾಗಳ ನಿಯಂತ್ರಣ ವ್ಯವಸ್ಥೆ ಮಾಡಿಕೊಂಡಿದ್ದಾರೆ. ದೇವಳದ ಬ್ರಹ್ಮರಥ ಮಂದಿರದ ಬಳಿ ಟಿಟಿ ವಾಹನವೊಂದರಲ್ಲಿ ಎಲ್ಲಾ ಸಿಸಿ ಕ್ಯಾಮರಾಗಳ ಕಂಟ್ರೋಲ್ ರೂಮ್ ವ್ಯವಸ್ಥೆ ಕಲ್ಪಿಸಲಾಗಿದೆ. ಏ.16 ಮತ್ತು ಏ.17ರಂದು ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವುದರಿಂದ ಪಟ್ಟಣದಲ್ಲಿ ಸಂಚಾರ ವ್ಯವಸ್ಥೆಯಲ್ಲೂ ಬದಲಾವಣೆ ಮಾಡಲಾಗಿದ್ದು, ಕೆಲವು ಕಡೆ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ. ‘ನೋ ಎಂಟ್ರಿ’ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಸಾಕಷ್ಟು ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.


ಹೆಚ್ಚುವರಿ ಬಸ್ಸುಗಳ ಓಡಾಟ:
ಏ.17ರಂದು ಬ್ರಹ್ಮರಥೋತ್ಸವ ಕಾರ್ಯಕ್ರಮಕ್ಕೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿಯಿಂದ ಹೆಚ್ಚುವರಿ ಬಸ್ಸುಗಳ ಓಡಾಟ ವ್ಯವಸ್ಥೆಯೂ ಇರಲಿದೆ. ಜೊತೆಗೆ ಇತರ ಟೂರಿಸ್ಟ್ ವಾಹನಗಳೂ ಹೆಚ್ಚುವರಿ ಓಡಾಟ ನಡೆಸಲಿವೆ.

LEAVE A REPLY

Please enter your comment!
Please enter your name here