ಪುತ್ತೂರು: ಏ.26ರಂದು ನಡೆಯಲಿರುವ ದ.ಕ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿ, ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮನೆಯಲ್ಲೇ ಮತದಾನ ಪ್ರಕ್ರಿಯೆ ಬಯಸಿ ಅರ್ಜಿ ಸಲ್ಲಿಸಿರುವ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರಿಗೆ ಮನೆ ಮನೆ ಮತದಾನವು ಏ.15ರಂದು ಪ್ರಾರಂಭಗೊಂಡಿದೆ. ಏ.14ರಂದು ಈ ಪ್ರಕ್ರಿಯೆ ಪ್ರಾರಂಭಗೊಳ್ಳಬೇಕಿತ್ತು. ಆದರೆ ಆ ದಿನ ವಿಷು ಹಬ್ಬವಾಗಿದ್ದು ಮತದಾರರ ಕೋರಿಕೆಯಂತೆ ದಿನದ ಮಟ್ಟಿಗೆ ಪ್ರಕ್ರಿಯೆ ಮುಂದೂಡಿಕೆಯಾಗಿತ್ತು.
ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ 787 ಮಂದಿ 85 ವರ್ಷ ಮೇಲ್ಪಟ್ಟವರು ಹಾಗೂ 340 ಮಂದಿ ವಿಶೇಷ ಚೇತನರು ಸೇರಿದಂತೆ ಒಟ್ಟು 1,127 ಮತದಾರರು ಮನೆಯಲ್ಲೇ ಮತದಾನಕ್ಕೆ ಅರ್ಜಿ ಸಲ್ಲಿಸಿದ್ದು ಅವರಿಗೆ ಏ.15,16,17ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಏಜೆಂಟರೊಂದಿಗೆ, ಚುನಾವಣಾ ಆಯೋಗದಿಂದ ನಿಯೋಜಿತ ಅಧಿಕಾರಿಗಳ ತಂಡ ಏ.15,16ರಂದು ಈ ಮತದಾರರ ಮನೆಗಳಿಗೆ ಭೇಟಿ ನೀಡಲಿದೆ. ಒಂದು ವೇಳೆ ಆ ದಿನಗಳಲ್ಲಿ ಮತದಾರರು ಲಭ್ಯವಿಲ್ಲದಿದ್ದರೆ, ಅಧಿಕಾರಿಗಳು ಏ.17ರಂದು ಎರಡನೇ ಮತ್ತು ಕೊನೆಯ ಭೇಟಿ ನೀಡಲಿದ್ದಾರೆ. ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆಗಳಿಗೆ ಭೇಟಿ ನೀಡುವ ಮೊದಲು ಆ ಮತದಾರರಿಗೆ ಮುಂಚಿತವಾಗಿ ಮಾಹಿತಿ ನೀಡುತ್ತಾರೆ.
20 ತಂಡಗಳಲ್ಲಿ ಭೇಟಿ:
ಮತದಾರರ ಭೇಟಿಗಾಗಿ ಆಯೋಗವು ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ೨೦ ಸೆಕ್ಟರ್‌ಗಳಲ್ಲಿ ೨೦ ಮಾರ್ಗಗಳನ್ನು ರೂಪಿಸಿದೆ.ಮನೆ ಮನೆ ಭೇಟಿಯು ಬೆಳಿಗ್ಗೆ ೮ರಿಂದ ಪ್ರಾರಂಭಗೊಂಡು ಸಂಜೆಯ ತನಕ ನಡೆಯಲಿದೆ.
ಮನೆ ಮನೆ ಭೇಟಿ ನೀಡುವ ಪ್ರತಿ ತಂಡದಲ್ಲಿ ಅಧ್ಯಕ್ಷ ಅಧಿಕಾರಿ, ಸಹಾಯಕ ಅಧ್ಯಕ್ಷ ಅಧಿಕಾರಿ, ಡಿ ಗ್ರೂಪ್, ಇಬ್ಬರು ಸೂಕ್ಷ್ಮ ವೀಕ್ಷಕರು, ವಿಡಿಯೋಗ್ರಾಫರ್, ಪೊಲೀಸ್ ಸಿಬ್ಬಂದಿ, ಬೂತ್ ಮಟ್ಟದ ಅಽಕಾರಿ ಮತ್ತು ಸ್ಪರ್ಧಿಸುವ ಅಭ್ಯರ್ಥಿಗಳ ಏಜೆಂಟರು ಜೊತೆಗೆ ಇರಲಿದ್ದಾರೆ. ಏ.15ರಂದು ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು, ಮತದಾರರು ಮತ ಚಲಾಯಿಸಿದ್ದಾರೆ.
ಏ.19ರಿಂದ ಅಗತ್ಯ ಸೇವೆಗಳವರಿಗೆ ಮತದಾನ:
ಚುನಾವಣಾ ಸಂದರ್ಭದಲ್ಲಿ ಸಂಚಾರಿ ಪೊಲೀಸ್, ಆರೋಗ್ಯ ಇಲಾಖೆ ಸೇರಿದಂತೆ 14 ಪ್ರಮುಖ ಅಗತ್ಯ ಸೇವೆ ನೀಡುವ ಇಲಾಖೆಗಳವರಿಗೆ ಏ.19ರಿಂದ ಮೂರು ದಿನಗಳ ಕಾಲ ಮತದಾನ ನಡೆಯಲಿದೆ. ಮತದಾನವು ಮಂಗಳೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಲಿದ್ದು, ಪುತ್ತೂರಿನಿಂದ ಒಟ್ಟು 34 ಮಂದಿ ಮತ ಚಲಾಯಿಸಲಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿಯಾಗಿರುವ ಉಪವಿಭಾಗಾಽಕಾರಿ ಜುಬಿನ್ ಮೊಹಪಾತ್ರ ತಿಳಿಸಿದ್ದಾರೆ.
ಏ.20 ಎರಡನೇ ಹಂತದ ತರಬೇತಿ:
ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಲಿರುವ ಅಧ್ಯಕ್ಷ ಅಧಿಕಾರಿ, ಸಹಾಯಕ ಅಧ್ಯಕ್ಷ ಅಧಿಕಾರಿ, ಸೆಕ್ಟರ್ ಅಧಿಕಾರಿಗಳಿಗೆ ಎರಡನೇ ಹಂತದ ತರಬೇತಿಯು ಏ.20ರಂದು ತೆಂಕಿಲ ವಿವೇಕಾನಂದ ಶಾಲೆಯಲ್ಲಿ ನಡೆಯಲಿದೆ ಎಂದು ದ.ಕ ಲೋಕಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ಜುಬಿನ್ ಮೊಹಾಪಾತ್ರ ತಿಳಿಸಿದ್ದಾರೆ.