ಚಿನ್ನದ ಸರ ಕಳವು ಮಾಡುತ್ತಿದ್ದ ವೇಳೆಯೇ ಹಿಡಿದುಕೊಟ್ಟರೂ ಪೊಲೀಸರಿಂದ ಬಿಡುಗಡೆ-ಎಸ್ಪಿಗೆ ದೂರು

0

ಪುತ್ತೂರು:ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವ ಸಂದರ್ಭ ಗದ್ದೆಯಲ್ಲಿ ಮಹಿಳೆಯೊಬ್ಬರ ಚಿನ್ನದ ಸರ ಕಳವು ಮಾಡುತ್ತಿದ್ದ ನಕಲಿ ಮಂಗಳಮುಖಿಯೊಬ್ವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಕೊಟ್ಟರೂ ಪೊಲೀಸರು ಅವರ ಮೇಲೆ ಯಾವುದೇ ಕಾನೂನು ಕ್ರಮ ಕೈಗೊಳ್ಳದೆ ಬಿಟ್ಟಿರುವುದಾಗಿ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿರುವ ಘಟನೆ ವರದಿಯಾಗಿದೆ.

ಬ್ರಹ್ಮರಥೋತ್ಸವ ಸಂದರ್ಭ ಜಾತ್ರಾ ಗದ್ದೆಯಲ್ಲಿ, ಮಂಗಳಮುಖಿಯರ ವೇಷ ಧರಿಸಿದ ಕೆಲವರು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದರು.ಓರ್ವ ಮಂಗಳಮುಖಿ ವೇಷಧಾರಿ ಜಾತ್ರಾಗದ್ದೆಯಲ್ಲಿದ್ದ ಮಹಿಳೆಯೊಬ್ವರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಳವು ಮಾಡಿದ್ದು ಸರ ಕತ್ತಿನಿಂದ ಜಾರಿದ್ದು ಗಮನಕ್ಕೆ ಬಂದು ಮಹಿಳೆ ನೋಡಿದಾಗ ಮಂಗಳಮುಖಿ ವೇಷಧಾರಿ ಚಿನ್ನದ ಸರವನ್ನು ಸೊಂಟದ ಚೀಲಕ್ಕೆ ಹಾಕುವುತ್ತಿದ್ದುದು ಕಂಡು ಬಂತು.ತಕ್ಷಣ ಆರೋಪಿಯನ್ನು ಹಿಡಿದು ಇತರ ಸಾರ್ವಜನಿಕರ ಸಹಕಾರದೊಂದಿಗೆ ಪೊಲೀಸರಿಗೆ ಒಪ್ಪಿಸಿದ್ದಾರೆ.ಚಿನ್ನದ ಸರದ ವಾರಸುದಾರರು ಘಟನೆ ಕುರಿತು ದೂರು ನೀಡಲು ರಾತ್ರಿಯೇ ಪೊಲೀಸರಲ್ಲಿ ಮಾತನಾಡಿದಾಗ ಬೆಳಿಗ್ಗೆ ಬರಲು ತಿಳಿಸಿದ್ದರು.ಏ.೧೮ರ ಬೆಳಿಗ್ಗೆ ಚಿನ್ನದ ಸರದ ವಾರಿಸುದಾರ ಮಹಿಳೆ ಮತ್ತು ಆಕೆಯ  ತಂದೆ ಠಾಣೆಗೆ ಹೋದಾಗ, ಚಿನ್ನದ ಸರವನ್ನು ಕಳವು ಮಾಡುತ್ತಿದ್ದ ವೇಳೆ ತಾವು ಹಿಡಿದುಕೊಟ್ಟ ಮಂಗಳಮುಖಿ ವೇಷಧಾರಿಯನ್ನು ಪೊಲೀಸರು ಬಿಡುಗಡೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಪೊಲೀಸರನ್ನು ಪ್ರಶ್ನಿಸಿದಾಗ ಪೊಲೀಸರು ಹಾರಿಕೆ ಉತ್ತರ ನೀಡಿದ್ದಾರೆ ಎಂದು ಚಿನ್ನದ ಸರದ ವಾರಸುದಾರ ಮಹಿಳೆಯ ತಂದೆ ಸಿ.ಎಸ್. ಶಾಸ್ತ್ರಿಯವರು ಇದೀಗ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರವಾಣಿ ಕರೆ ಮಾಡಿ ಮೌಖಿಕ ದೂರು ನೀಡಿದ್ದಾರೆಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here