ಬಿಳಿಯೂರು ಅಣೆಕಟ್ಟಿನಿಂದ ಹರಿದ ನೀರು-ಒಂದೇ ದಿನದಲ್ಲಿ ಭಾಗಶಃ ಬರಿದಾದ ನೇತ್ರಾವತಿ

0

ಉಪ್ಪಿನಂಗಡಿ: ನೇತ್ರಾವತಿ ನದಿಗೆ ಅಡ್ದಲಾಗಿ ಕಟ್ಟಲಾಗಿದ್ದ ಬಿಳಿಯೂರು ಅಣೆಕಟ್ಟಿನಲ್ಲಿ ಸಂಗ್ರಹವಾಗಿದ್ದ ಹಿನ್ನೀರಿನಿಂದ ಕಂಗೊಳಿಸುತ್ತಿದ್ದ ನೇತ್ರಾವತಿ ನದಿಯ ಒಡಲು ಒಂದೇ ದಿನದಲ್ಲಿ ಭಾಗಶಃ ಬರಿದಾಗಿ ಜನತೆಯನ್ನು ನಿರಾಶೆಗೊಳಿಸಿದೆ. ಒಂದೇ ದಿನ 2.1 ಮೀಟರ್‌ನಷ್ಟು ನೀರನ್ನು ಅಣೆಕಟ್ಟಿನಿಂದ ಹರಿಯಬಿಡಲಾಗಿದ್ದು, ಇದರಿಂದಾಗಿ ನದಿಯ ಒಡಲು ಬರಿದಾಗಿ ಮುಖ್ಯವಾಗಿ ಕೃಷಿಕರ ಮನದಲ್ಲಿ ಕಳವಳ ಮೂಡಿದೆ.


ಬುಧವಾರದವರೆಗೆ ಅಣೆಕಟ್ಟಿನಲ್ಲಿ 4 ಮೀಟರ್ ವರೆಗೆ ಹಲಗೆಯನ್ನು ಅಳವಡಿಸಲಾಗಿದೆಯಾದರೂ, ವಿಪರೀತ ಬಿಸಿಲ ಧಗೆಯಿಂದಾಗಿ ನೀರು ಆವಿಯಾಗುತ್ತಿರುವುದರಿಂದ ಅಣೆಕಟ್ಟಿನಲ್ಲಿ 3.7 ಮೀಟರ್‌ವರೆಗೆ ನೀರಿನ ಸಂಗ್ರಹವಿತ್ತು. ಈ ಮಧ್ಯೆ ಮಂಗಳೂರಿಗೆ ನೀರು ಸರಬರಾಜು ಕಲ್ಪಿಸುವ ತುಂಬೆ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹ ಕಡಿಮೆಯಾದ ಕಾರಣಕ್ಕೆ ಎಎಂಆರ್ ಅಣೆಕಟ್ಟಿನಿಂದ ನೀರು ಬಿಡಲಾಗಿತ್ತು. ಇದರ ಪರಿಣಾಮ ಸರಪಾಡಿ ಹಾಗೂ ಕಡೇಶಿವಾಲಯ ಗಳಲ್ಲಿನ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಅಣೆಕಟ್ಟುಗಳು ಬರಿದಾಗತೊಡಗಿ ಜನತೆಗೆ ನೀರು ಒದಗಿಸುವ ನಿಟ್ಟಿನಲ್ಲಿ ಸಮತೋಲನ ಜಲಾಶಯವಾಗಿ ಪರಿಗಣಿಸಲ್ಪಟ್ಟ ಬಿಳಿಯೂರು ಅಣೆಕಟ್ಟಿನಿಂದ ನೀರು ಒದಗಿಸುವ ಅನಿರ್ವಾಯತೆಗೆ ಸಣ್ಣ ನೀರಾವರಿ ಇಲಾಖೆ ಸಿಲುಕಿತ್ತು. ಬುಧವಾರ ಸಾಯಂಕಾಲದಿಂದ ನೀರು ಬಿಡುವ ಕ್ರಮ ಕೈಗೊಳ್ಳಲಾಯಿತು. ಪ್ರಸಕ್ತ ಬಿಳಿಯೂರು ಅಣೆಕಟ್ಟಿನಲ್ಲಿ 1.6 ಮೀಟರ್ ಎತ್ತರದ ವರೆಗೆ ಮಾತ್ರ ನೀರಿದ್ದು, ಅನಿವಾರ್ಯತೆ ಉಂಟಾದರೆ ಮುಂದಿನ ದಿನಗಳಲ್ಲಿ ಅದನ್ನೂ ಬಿಟ್ಟುಕೊಡುವ ಸ್ಥಿತಿ ಉದ್ಭವಿಸಲಿದೆ.


ಬುಧವಾರದ ವರೆಗೆ ನದಿಯಲ್ಲಿ ಸಮೃದ್ದ ಜಲರಾಶಿಯನ್ನು ಕಂಡಿದ್ದ ಕೃಷಿಕ ಸಮುದಾಯ, ಗುರುವಾರದಂದು ಬೆಳಗ್ಗೆ ನದಿಯ ನೀರು ಖಾಲಿಯಾಗುತ್ತಿದ್ದಂತೆಯೇ ಕಳವಳಕ್ಕೆ ತುತ್ತಾಯಿತು. ನದಿಯಲ್ಲಿ ಕೆಲ ಮೀಟರ್‌ಗಳಷ್ಟು ಎತ್ತರದವರೆಗೆ ನೀರು ಸಂಗ್ರಹ ಗೊಂಡಿದ್ದರಿಂದ ಕೃಷಿಕರು ತಮ್ಮ ತಮ್ಮ ತೋಟಗಳಿಗೆ ನದಿ ದಂಡೆಯಲ್ಲೇ ಪಂಪು ಅಳವಡಿಸಿ ಕೃಷಿ ಕಾರ್ಯಗಳಿಗೆ ನೀರುಣಿಸುತ್ತಿದ್ದರು. ಆದರೆ ಇದೀಗ ಯಾವುದೇ ಪೂರ್ವ ಸೂಚನೆ ನೀಡದೆ ನದಿಯ ನೀರು ಒಮ್ಮಿಂದೊಮ್ಮೆಲೆ ಖಾಲಿಯಾಗತೊಡಗಿದ್ದರಿಂದ ಪಂಪು ಅಳವಡಿಕೆಯ ಪ್ರಕ್ರಿಯೆಯನ್ನು ಬದಲಾಯಿಸುವ ಅನಿವಾರ್ಯತೆ ಬಂದೊದಗಿದೆ.


ಗುರುವಾರ ಮಧ್ಯಾಹ್ನದಿಂದ ಅಣೆಕಟ್ಟಿನ ಗೇಟುಗಳನ್ನು ಪುನಹ ಅಳವಡಿಸಲಾಗಿದ್ದು, ಎಲ್ಲೆಡೆಯಲ್ಲೂ ನದಿಯಲ್ಲಿ ನೀರಿನ ಹರಿವು ನಿಂತಿರುವುದರಿಂದ ಮಳೆಯ ವಿನಹ ಮತ್ತೆ ನೀರಿನ ಸಂಗ್ರಹವಾಗುವ ಸಾಧ್ಯತೆ ಇಲ್ಲವಾಗಿದೆ. ಕಳೆದ ವರ್ಷ ಸುಬ್ರಹ್ಮಣ್ಯ ಪರಿಸರದಲ್ಲಿ ದಿನ ನಿತ್ಯ ಬೇಸಗೆಯ ಸಮಯದಲ್ಲೂ ಮಳೆ ಸುರಿಯುತ್ತಿದ್ದ ಕಾರಣಕ್ಕೆ ನೇತ್ರಾವತಿ ನೀರಿಲ್ಲದೆ ಬತ್ತಿ ಹೋಗಿದ್ದರೂ, ಕುಮಾರಧಾರಾ ನದಿ ಜೀವಂತಿಕೆಯಿಂದ ಕೂಡಿತ್ತು. ಆದರೆ ಈ ಬಾರಿ ಮಳೆಯ ಕೊರತೆಯಿಂದಾಗಿ ಕುಮಾರಧಾರಾ ನದಿಯಲ್ಲಿಯೂ ನೀರಿನ ಕೊರತೆ ಕಾಣಿಸಿಕೊಂಡಿದ್ದು, ಮುಂಬರುವ ದಿನಗಳಲ್ಲಿ ನೀರು ನದಿಗಳಲ್ಲಿ ಹರಿಯುವ ರೀತಿಯಲ್ಲಿ ಮಳೆ ಸುರಿಯದೇ ಇದ್ದಲ್ಲಿ ಜಿಲ್ಲೆಯಾದ್ಯಂತ ನೀರಿನ ಸಮಸ್ಯೆ ಕಾಡುವ ಭೀತಿ ಮೂಡಿದೆ.

ಕುಡಿಯುವ ನೀರಿಗಾಗಿ ಅನಿವಾರ್ಯ ಕ್ರಮ: ಶಿವಪ್ರಸನ್ನ
ಮಂಗಳೂರಿಗೆ ಕುಡಿಯುವ ನೀರು ಒದಗಿಸುವ ತುಂಬೆ ಅಣೆಕಟ್ಟಿನಲ್ಲಿ ನೀರಿನ ಕೊರತೆ ಕಾಣಿಸಿದ್ದಕ್ಕೆ ಎಎಂಆರ್ ಅಣೆಕಟ್ಟಿನಿಂದ ನೀರು ಹರಿಸಲಾಗಿತ್ತು. ಪ್ರಸಕ್ತ ಸರಪಾಡಿ ಮತ್ತು ಕಡೇಶಿವಾಲಯ ಬಹುಗ್ರಾಮ ಕುಡಿಯುವ ಯೋಜನೆಗೆ ನೀರಿಲ್ಲದೆ ಸಮಸ್ಯೆ ಕಾಡಿದಾಗ ಸಮತೋಲನದ ಜಲಾಶಯವಾಗಿದ್ದ ಬಿಳಿಯೂರು ಅಣೆಕಟ್ಟಿನಿಂದ ಅನಿವಾರ್ಯವಾಗಿ ನೀರನ್ನು ಹೊರಕ್ಕೆ ಬಿಡಬೇಕಾಗಿ ಬಂತು. ಅದರ ಹೊರತಾಗಿಯೂ ಅಣೆಕಟ್ಟಿನಲ್ಲಿ 1.6 ಮೀಟರ್ ಎತ್ತರದಷ್ಟು ನೀರನ್ನು ಉಳಿಸಿಕೊಳ್ಳಲಾಗಿದೆ. ಈ ಬಾರಿಯ ಬೇಸಿಗೆಯಲ್ಲಿನ ಉಷ್ಣಾಂಶದಿಂದಾಗಿ ನೀರಿನ ಮೂಲಗಳೆಲ್ಲವೂ ಆವಿಯಾಗಿ ಕುಡಿಯುವ ನೀರಿನ ಸಮಸ್ಯೆಗೆ ಕಾರಣವಾಗುತ್ತಿದೆ. ಮಳೆ ವಿಳಂಬವಾದರೆ ಇನ್ನಷ್ಟು ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಜಕ್ರಿಬೆಟ್ಟುವಿನಲ್ಲಿ ನಿರ್ಮಾಣವಾಗುತ್ತಿರುವ ಇನ್ನೊಂದು ಸಮತೋಲನ ಅಣೆಕಟ್ಟು ಮುಂದಿನ ವರ್ಷದಿಂದ ಕಾರ್ಯನಿರ್ವಹಿಸಿದರೆ ಬಿಳಿಯೂರಿನ ಅಣೆಕಟ್ಟಿನ ನೀರು ಈ ಪ್ರದೇಶಕ್ಕೆ ಲಭಿಸಬಹುದಾಗಿದೆ.
ಶಿವಪ್ರಸನ್ನ
ಸಹಾಯಕ ಅಭಿಯಂತರರು
ಸಣ್ಣ ನೀರಾವರಿ ಇಲಾಖೆ


ಧಾರ್ಮಿಕ ಭಾವನೆಗಳನ್ನು ಬದಿಗಿರಿಸಲಾಗಿತ್ತು: ಕಿಶೋರ್ ನೀರಕಟ್ಟೆ
ಪ್ರತಿ ವರ್ಷವೂ ನೇತ್ರಾವತಿ ನದಿ ಗರ್ಭದಲ್ಲಿ ಪೂಜಿಸಿಕೊಂಡು ಬರಲಾಗುತ್ತಿದ್ದ ಉದ್ಭವ ಲಿಂಗಕ್ಕೆ ಈ ಬಾರಿ ನೇತ್ರಾವತಿ ನದಿಯಲ್ಲಿ ಶೇಖರಣೆಯಾಗಿದ್ದ ಹಿನ್ನೀರಿನಿಂದಾಗಿ ಪೂಜೆ ಸಲ್ಲಿಸಲಾಗಿರಲಿಲ್ಲ. ನೀರಿನ ಮಹತ್ವವನ್ನು ಮನಗಂಡು ಇಲ್ಲಿನ ಜನತೆ ಧಾರ್ಮಿಕ ಭಾವನೆಗಳನ್ನು ಬದಿಗಿರಿಸಿ ನದಿಯಲ್ಲಿನ ಸಮೃದ್ದ ನೀರು ಸಂಗ್ರಹವಾಗಿರುವುದನ್ನು ನೋಡಿ ಸಂಭ್ರಮಿಸಿದ್ದರು. ಆದರೆ ಇದೀಗ ಎಲ್ಲೆಡೆ ನೀರಿಲ್ಲದೆ ಬರಗಾಲದ ಮುನ್ಸೂಚನೆ ಲಭಿಸುತ್ತಿರುವಾಗ, ನಮ್ಮೂರಿನ ನದಿಯಲ್ಲಿ ಸಮೃದ್ದ ಜಲರಾಶಿ ಇದೆ ಎಂದು ಜನತೆ ಸಂಭ್ರಮಿಸಿದ್ದರು. ಆದರೆ ನದಿಯಲ್ಲಿ ರಾತ್ರಿ ಬೆಳಗಾಗುವುದರ ನಡುವೆ ನೀರು ಬರಿದಾಗುತ್ತಿದೆ ಎಂದರೆ ಜನರ ಮನಸ್ಸಿಗೆ ಯಾವ ರೀತಿ ಆಘಾತವಾಗಿರದು. ಜಿಲ್ಲೆಯ ಜನತೆಗೆ ಕುಡಿಯುವ ನೀರು ಒದಗಿಸುವುದು ಅತ್ಯಗತ್ಯ. ಆದರೆ ಎಲ್ಲಾ ಭಾವನೆಗಳನ್ನು ಬದಿಗೊತ್ತಿ, ಸರಕಾರದ ಯೋಜನೆಯನ್ನು ಸ್ವಾಗತಿಸಿದ ಈ ಪರಿಸರದ ಜನತೆಗೆ ಮುಂದಿನ ಒಂದೂವರೆ ತಿಂಗಳ ತೀಕ್ಷ್ಣ ಬೇಸಗೆಯಲ್ಲಿ ನೀರಿನ ಕೊರತೆ ಕಾಡಿದರೆ ನಮ್ಮ ತ್ಯಾಗಕ್ಕೆ ಬೆಲೆ ಇಲ್ಲದಂತಾಗುತ್ತದೆ.
ಕಿಶೋರ್ ನೀರಕಟ್ಟೆ
ಸಾಮಾಜಿಕ ಕಾರ್ಯಕರ್ತರು

LEAVE A REPLY

Please enter your comment!
Please enter your name here