ಬಾಲಕಿಯ ಭಕ್ತಿಗೆ ಮೆಚ್ಚಿ ಪ್ರಸಾದ ನೀಡಿ ಹರಸಿದ ತಂತ್ರಿ
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಎ.19ರಂದು ಶ್ರೀ ದೇವರು ವೀರಮಂಗಲ ಕುಮಾರಧಾರ ಹೊಳೆಯಿಂದ ಅವಭೃತ ಸ್ನಾನ ಮಾಡಿ ದೇವಳಕ್ಕೆ ಆಗಮಿಸುವ ವೇಳೆ ಶ್ರೀ ದೇವರ ಜೊತೆಯೇ ಓಡೋಡಿ ಬಂದ ಪುಟ್ಟ ಬಾಲಕಿಯ ಭಕ್ತಿಗೆ ಮೆಚ್ಚಿ ತಂತ್ರಿಯವರು ಪುಟ್ಟ ಬಾಲಕಿಗೆ ಶ್ರೀ ದೇವರ ಪ್ರಸಾದ ನೀಡಿ ಹರಿಸಿದ ಘಟನೆ ಎ.19ರಂದು ನಡೆದಿದೆ.
ಶ್ರೀ ದೇವರು ಅವಭೃತ ಸ್ನಾನದಿಂದ ಕಟ್ಟೆಯಲ್ಲಿ ಪೂಜೆ ಸ್ವೀಕರಿಸಿ ಅಲ್ಲಿಂದ ಓಡೋಡಿ ಶ್ರೀ ದೇವಳಕ್ಕೆ ಬರುತ್ತಿರುವ ವೇಳೆ ಶ್ರೀ ದೇವರ ಜೊತೆಯೇ ವೀರಮಂಗಲದಿಂದ ಪುಟ್ಟ ಬಾಲಕಿಯೋರ್ವಳು ಹೆಜ್ಜೆ ಹಾಕಿದ್ದಾಳೆ. ವೀರಮಂಗಲದಿಂದ ಬರಿ ಕಾಲಿನಲ್ಲೇ ಓಡೋಡಿ ಶ್ರೀ ದೇವಳವನ್ನು ತಲುಪಿದ್ದಾಳೆ. ಪುಟ್ಟ ಬಾಲಕಿಯ ಭಕ್ತಿಯನ್ನು ನೋಡಿ ಜೊತೆಯಲ್ಲಿದ್ದ ಭಕ್ತರು ಆಕೆಯನ್ನು ಮತ್ತಷ್ಟು ಹುರಿದುಂಬಿಸಿದರು. ಆಕೆ ಶ್ರೀ ದೇವರನ್ನು ಶಿರದಲ್ಲಿ ಹೊತ್ತ ಬ್ರಹ್ಮವಾಹಕರ ಹಿಂದೆಯೇ ಬಂದು ಶ್ರೀ ದೇವಳವನ್ನು ತಲುಪಿ ಅಚ್ಚರಿ ಮೂಡಿಸಿದ್ದಾಳೆ.