ಕುಂಬ್ರದಲ್ಲಿ ಕಾಂಗ್ರೆಸ್‌ನಿಂದ ಬೃಹತ್ ಚುನಾವಣಾ ಪ್ರಚಾರ ಸಭೆ

1

ಯಾವುದೇ ಭರವಸೆ ನೀಡಿದರೂ ಕಾಂಗ್ರೆಸ್ ಅದನ್ನು ಈಡೇರಿಸುತ್ತದೆ-ಪದ್ಮರಾಜ್
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತೀ ಬಡ ಕುಟುಂಬದ ಮಹಿಳೆಗೆ 1 ಲಕ್ಷ ರೂ ಸಿಗಲಿದೆ-ಅಶೋಕ್ ರೈ

ಪುತ್ತೂರು: ಕಾಂಗ್ರೆಸ್ ಯಾವುದೇ ಭರವಸೆ ನೀಡಿದರೂ ಅದನ್ನು ಈಡೇರಿಸಿದೆ, ಬಿಜೆಪಿ ಜನರಿಗೆ ಪೊಳ್ಳು ಆಶ್ವಾಸನೆಗಳನ್ನು ನೀಡಿ ಜನರನ್ನು ಮೋಸ ಮಾಡಿದ್ದು ಬಿಟ್ಟರೆ ಅಭಿವೃದ್ಧಿ ಎನ್ನುವ ವಿಚಾರವೇ ಬಿಜೆಪಿಯವರಲ್ಲಿ ಇಲ್ಲ ಎಂದು ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಹೇಳಿದರು.


ಎ.20ರಂದು ಕುಂಬ್ರದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಗ್ಯಾರಂಟಿ ಯೋಜನೆ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಜನರಿಗೆ ಬದುಕು ಕಟ್ಟಿಕೊಟ್ಟರೆ ಬಿಜೆಪಿ ಜನರನ್ನು ಎತ್ತಿ ಕಟ್ಟುವ ಮೂಲಕ ದ್ವೇಷ ರಾಜಕೀಯ ಮಾಡುತ್ತಿದೆ. ಗ್ಯಾರಂಟಿ ಯೋಜನೆ ಕಾರ್ಡ್‌ನ್ನು ಹರಿದು ಕಸದ ಬುಟ್ಟಿಗೆ ಹಾಕಿ ಎಂದವರು ಈಗ ಅದೇ ಗ್ಯಾರಂಟಿ ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದು ಅವರು ಹೇಳಿದರು.ಶಾಂತಿ, ಸೌಹಾರ್ದತೆಯ ದ.ಕ ಜಿಲ್ಲೆ ನಿರ್ಮಾಣ ಮಾಡುವುದು ನನ್ನ ಪ್ರಥಮ ಆದ್ಯತೆಯಾಗಿದ್ದು ಅದಕ್ಕಾಗಿ ನನ್ನನ್ನು ಬೆಂಬಲಿಸಿ ಎಂದು ಅವರು ಮನವಿ ಮಾಡಿದರು.

ಬಡ ಮಹಿಳೆಯರಿಗೆ 1 ಲಕ್ಷ ರೂ:
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತೀ ಬಡ ಕುಟುಂಬದ ಒಬ್ಬ ಮಹಿಳೆಗೆ ವರ್ಷಕ್ಕೆ 1 ಲಕ್ಷ ರೂ ನೀಡಲಿದೆ. ಇದು ಕಾಂಗ್ರೆಸ್ ನೀಡುತ್ತಿರುವ ಮತ್ತೊಂದು ಗ್ಯಾರಂಟಿಯಾಗಿದೆ ಎಂದು ಪದ್ಮರಾಜ್ ಆರ್ ಪೂಜಾರಿ ಹೇಳಿದರು.

ದೇಶ ಪ್ರೇಮ ಎಂದರೇನು..?
ಬಿಜೆಪಿಯವರು ದೇಶ ಪ್ರೇಮ ಎಂದು ಬೊಬ್ಬೆ ಹೊಡೆಯುತ್ತಾರೆ. ದೇಶ ಪ್ರೇಮ ಎಂದರೆ ಏನು ಎಂದು ಅವರಲ್ಲೇ ಪ್ರಶ್ನೆ ಮಾಡಿದರೆ ಅದಕ್ಕೆ ಅವರಲ್ಲಿ ಉತ್ತರ ಇರಲಿಕ್ಕಿಲ್ಲ, ಏಕೆಂದರೆ ಸಂವಿಧಾನ ಬಾಹಿರ ಕೆಲಸ ಮಾಡಿಕೊಂಡು ಜೈಲು ಸೇರುವುದು, ಬಡವರ ಮಕ್ಕಳನ್ನು ಪ್ರಚೋದಿಸಿ ಆಸ್ಪತ್ರೆಯಲ್ಲಿ ಮಲಗುವಂತೆ ಮಾಡುವುದು, ಇವೆಲ್ಲಾ ಯಾವ ದೇಶ ಪ್ರೇಮ ಎಂದು ಬಿಜೆಪಿಯವರು ಹೇಳಬೇಕು ಎಂದು ಪದ್ಮರಾಜ್ ಆರ್ ಪೂಜಾರಿ ಹೇಳಿದರು.

ಪುತ್ತೂರಿನಿಂದ 25 ಸಾವಿರ ಲೀಡ್ ತೆಗೆಸಿಕೊಡೋಣ-ಅಶೋಕ್ ರೈ
ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಕಾಂಗ್ರೆಸ್ ಕಾರ್ಯಕರ್ತರು ಪ್ರತೀ ಮನೆ, ಮನೆಗೆ ತೆರಳಿ ಕಾಂಗ್ರೆಸ್ ಸರಕಾರದ ಯೋಜನೆಗಳ ಬಗ್ಗೆ ಪ್ರತಿಯೊಬ್ಬರಿಗೂ ತಿಳಿಸಬೇಕು, ಬಿಜೆಪಿಯವರ ಹಾಗೆ ಯಾರಲ್ಲೂ ಸುಳ್ಳು ಹೇಳಬೇಡಿ, ಸುಳ್ಳು ಭರವಸೆ, ಆಶ್ವಾಸನೆ ನೀಡಬೇಡಿ, ನೀರು ಇಲ್ಲ ಅಂದ್ರೆ ನೋಡುವ, ವ್ಯವಸ್ಥೆ ಮಾಡುವ ಎಂದು ಭರವಸೆ ನೀಡಬೇಡಿ, ಕೂಡಲೇ ವ್ಯವಸ್ಥೆ ಮಾಡಿ ಕೊಡಿ, ಕಾಂಗ್ರೆಸ್ ಗ್ಯಾರಂಟಿ ಯೋಜನೆ ಬಗ್ಗೆ ತಿಳಿಸಿ, ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬಂದರೆ ಪ್ರತೀ ಬಡ ಕುಟುಂಬದ ಒಬ್ಬ ಮಹಿಳೆಗೆ ರೂ.1 ಲಕ್ಷ ನೀಡುವ ಬಗ್ಗೆ ತಿಳಿಸಿಕೊಡಿ, ಬೂತ್ ಅಧ್ಯಕ್ಷರು, ಪದಾಧಿಕಾರಿಗಳು ಇನ್ನಷ್ಟು ಶಕ್ತಿಯುತವಾಗಿ ಕೆಲಸ ಮಾಡಿ ಎಂದು ಅವರು ಕರೆ ನೀಡಿದರು.


ನಾವು ಯಾರಿಗೂ ಅನ್ಯಾಯ ಮಾಡುವುದಿಲ್ಲ, ಎಲ್ಲ ಧರ್ಮದವರೂ ನಮಗೆ ಬೇಕು. ಬಿಜೆಪಿ ರಾಜಕೀಯ ಲಾಭಕ್ಕಾಗಿ ಧರ್ಮವನ್ನು ಉಪಯೋಗಿಸುತ್ತಿದ್ದು ಅವರಲ್ಲಿ ಅಭಿವೃದ್ಧಿ ಎನ್ನುವ ವಿಚಾರವೇ ಇಲ್ಲ ಎಂದು ಹೇಳಿದರು. ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಪದ್ಮರಾಜ್ ಪೂಜಾರಿ ಅವರು 25ಸಾವಿರಕ್ಕೂ ಹೆಚ್ಚು ಮುನ್ನಡೆ ಸಿಗುವಂತೆ ನಾವೆಲ್ಲಾ ಸೇರಿ ಮಾಡಬೇಕು ಎಂದು ಅಶೋಕ್ ರೈ ಹೇಳಿದರು.

ಬಹಿರಂಗ ಚರ್ಚೆಗೆ ಬನ್ನಿ…ಬಿಜೆಪಿ ಶಾಸಕರಿಗೆ ಸವಾಲು
ಧರ್ಮದ ವಿಚಾರದಲ್ಲಿ ಮಾತನಾಡಲು, ಚರ್ಚೆ ಮಾಡಲು ಜಿಲ್ಲೆಯ ಬಿಜೆಪಿ ಶಾಸಕರೆಲ್ಲ ಬರಲಿ, ಅವರ ಜೊತೆ ನಾನು ಮತ್ತು ಪದ್ಮರಾಜ್ ಇಬ್ಬರೇ ಚರ್ಚೆ ಮಾಡುತ್ತೇವೆ. ಧರ್ಮ ಅಂದರೆ ಏನು ಎಂದೂ ನಾವು ತೋರಿಸಿಕೊಡುತ್ತೇವೆ. ನಾವು ಮಾಡಿದಷ್ಟು ದೇವಸ್ಥಾನಗಳ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ, ಅಭಿವೃದ್ಧಿ ಕಾರ್ಯಗಳು ಮತ್ತು ಬಿಜೆಪಿ ಶಾಸಕರು ಮಾಡಿದ್ದರ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಶಾಸಕ ಅಶೋಕ್ ಕುಮಾರ್ ರೈ ಸವಾಲು ಹಾಕಿದರು. ಕಷ್ಟದಲ್ಲಿದ್ದವರಿಗೆ, ಕಟ್ಟ ಕಡೆಯ ವ್ಯಕ್ತಿಯ ನೋವಿಗೆ ಸ್ಪಂಧಿಸುವುದು, ಕಣ್ಣೀರೊರೆಸುವುದೇ ನಿಜವಾದ ಧರ್ಮ ಎಂದ ಅಶೋಕ್ ರೈಯವರು ಭಾಷಣ ಬಿಗಿದು, ಪ್ರಚೋದನೆ ಮಾಡಿ, ಬಳಿಕ ಊಟ ಮಾಡಿ ಹೋಗುವುದು ಧರ್ಮವಲ್ಲ ಎಂದು ಹೇಳಿದರು.

ಬಿಜೆಪಿ ಜನರೆಡೆಯಲ್ಲಿ ದ್ವೇಷ ಬಿತ್ತಿದ್ದು ಬಿಟ್ಟರೆ ಬೇರೇನೂ ಮಾಡಿಲ್ಲ-ಬಡಗನ್ನೂರು
ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಮಾತನಾಡಿ ಈ ದೇಶವನ್ನು ಕಟ್ಟಿದ್ದು, ಅಭಿವೃದ್ಧಿ ಮಾಡಿದ್ದು ಕಾಂಗ್ರೆಸ್. ಬಿಜೆಪಿ ಜನರೆಡೆಯಲ್ಲಿ ದ್ವೇಷ ಬಿತ್ತಿದ್ದು ಬಿಟ್ಟರೆ ಬೇರೇನೂ ಮಾಡಿಲ್ಲ, ಹಾಗಾಗಿ ಶಾಂತಿ, ಸೌಹಾರ್ದತೆ, ಸಹಬಾಳ್ವೆಯ ನಾಳೆಗಾಗಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿಯವರನ್ನು ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ನಳಿನ್ ಕುಮಾರ್ ಕಟೀಲ್ ಅವರು ಜಿಲ್ಲೆಗೆ ಬೆಂಕಿ ಕೊಡುವ ಹೇಳಿಕೆಗಳನ್ನು ನೀಡಿದ್ದು ಬಿಟ್ಟರೆ ಅಭಿವೃದ್ಧಿ ಮಾಡಿದ್ದು ಶೂನ್ಯ. ಬಿಜೆಪಿಯಲ್ಲಿ ಗೆದ್ದವರಿಗೂ ವಾಪಸ್ ಟಿಕೆಟ್ ಸಿಗುವುದಿಲ್ಲ, ಏಕೆಂದರೆ ಅವರು ಅಭಿವೃದ್ಧಿ ಮಾಡಿರುವುದು ಎಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಹೇಳಿದರು.

ಸರ್ವಾಧಿಕಾರಿ ಬಿಜೆಪಿಯನ್ನು ತೊಳಗಿಸಲು ಪಣ ತೊಡೋಣ-ಎಂ.ಎಸ್ ಮಹಮ್ಮದ್
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಮುಹಮ್ಮದ್ ಮಾತನಾಡಿ ಬಡವರ ಬಗ್ಗೆ ಕಾಳಜಿಯಿಲ್ಲದ ಸರ್ವಾಧಿಕಾರಿ ಬಿಜೆಪಿ ಜನರೆಡೆಯಲ್ಲಿ ಕೋಮು ವಿಷಬೀಜ ಬಿತ್ತಿದ್ದು ಬಿಟ್ಟರೆ ಬೇರೆ ಏನನ್ನೂ ಮಾಡಿಲ್ಲ. ಭ್ರಷ್ಟ ಬಿಜೆಪಿಯನ್ನು ತೊಳಗಿಸಿ ಕಾಂಗ್ರೆಸ್‌ನ್ನು ಮತ್ತೆ ಅಧಿಕಾರಕ್ಕೆ ತರುವುದು ಅತ್ಯವಶ್ಯಕವಾಗಿದ್ದು ಈ ನಿಟ್ಟಿನಲ್ಲಿ ಪ್ರಜ್ಞಾವಂತ ಜನತೆ ಪದ್ಮರಾಜ್ ಆರ್ ಪೂಜಾರಿ ಅವರಿಗೆ ತಮ್ಮ ಮತವನ್ನು ಚಲಾಯಿಸಬೇಕೆಂದು ಅವರು ಹೇಳಿದರು. ರಾಜ್ಯ ಸರಕಾರದ ಗ್ಯಾರಂಟಿ ಯೋಜನೆ ಬಡವರ ಬದುಕನ್ನು ಬದಲಾಯಿಸಿದ್ದು ಮಹಿಳೆಯರು ಸ್ವಾಭಿಮಾನಿಗಳಾಗುತ್ತಿದ್ದಾರೆ, ಬಡವರ, ನೊಂದವರ, ಹಿಂದುಳಿದವರ ಬಗ್ಗೆ ಅಲ್ಪವೂ ಕಾಳಜಿಯಿಲ್ಲದ ಕೇಂದ್ರದ ಬಿಜೆಪಿ ಸರಕಾರದ ಸುಳ್ಳಿನ ಗೋಪುರ ಈ ಬಾರಿ ಕುಸಿದು ಬೀಳಲಿದ್ದು ಬಿಜೆಪಿ ಸೋತು ಅಧಿಕಾರ ಕಳೆದುಕೊಳ್ಳಲಿದೆ ಎಂದು ಅವರು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ಪುತ್ತೂರು ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಉಸ್ತುವಾರಿ ಕಾವು ಹೇಮನಾಥ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಅಮಳ ರಾಮಚಂದ್ರ, ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿ, ಕೊಳ್ತಿಗೆ ಗ್ರಾ.ಪಂ ಉಪಾಧ್ಯಕ್ಷ ಪ್ರಮೋದ್ ಕೆ.ಎಸ್, ಒಳಮೊಗ್ರು ಗ್ರಾ.ಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಕಾಂಗ್ರೆಸ್ ಮುಖಂಡರಾದ ಅನಿತಾ ಹೇಮನಾಥ ಶೆಟ್ಟಿ, ಕೃಷ್ಣಪ್ರಸಾದ್ ಆಳ್ವ, ಯಾಕೂಬ್ ಮುಲಾರ್, ಶಶಿಕಿರಣ್ ರೈ, ಎ.ಕೆ ಜಯರಾಮ ರೈ, ಪ್ರಸಾದ್ ಕೌಶಲ್ ಶೆಟ್ಟಿ, ಸಿದ್ದೀಕ್ ಸುಲ್ತಾನ್, ಶಿವರಾಮ ಆಳ್ವ ಬಳ್ಳಮಜಲು, ವಿನೋದ್ ಶೆಟ್ಟಿ ಮುಡಾಳ, ಮಹಮ್ಮದ್ ಅಡ್ಕ, ಅಝೀಝ್ ಅಡ್ಕ, ಮುನೀರ್ ಉಜಿರೋಡಿ, ಚೆನ್ನ ಕುಂಬ್ರ, ರಝಾಕ್ ಪರ್ಪುಂಜ, ಮಹಮ್ಮದ್ ಬೊಳ್ಳಾಡಿ, ಹಾರಿಸ್ ಯು.ಕೆ, ಚಿತ್ರಾ, ಅದ್ರಾಮ ಶಾಂತಿಗೋಡು, ಬದ್ರುನ್ನಿಸಾ, ಎ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದುರ್ಗಾಪ್ರಸಾದ್ ರೈ ಕುಂಬ್ರ ಕಾರ್ಯಕ್ರಮ ನಿರೂಪಿಸಿದರು.

ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ:
ಪುತ್ತೂರು ಕಲ್ಲಾರೆಯಲ್ಲಿರುವ ಭರತ್ ಪ್ರಿಂಟರ‍್ಸ್‌ನ ಮಾಲಕ ಭರತ್ ಅವರು ಕಾಂಗ್ರೆಸ್ ಪಕ್ಷ ಸೇರಿದರು. ಶಾಸಕ ಅಶೋಕ್ ಕುಮಾರ್ ರೈ ಅವರು ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಸ್ವಾಗತಿಸಿದರು.

ಪದ್ಮರಾಜ್ ಪೂಜಾರಿ ಗೆಲುವು ನಿಶ್ಚಿತ-ಅಶೋಕ್ ಪೂಜಾರಿ
ಈ ಬಾರಿ ದ.ಕ ಜಿಲ್ಲೆಯಲ್ಲಿ ಜನತೆ ಬದಲಾವಣೆ ಬಯಸಿದ್ದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಅವರು ಜಯಗಳಿಸುವುದರಲ್ಲಿ ಅನುಮಾನವಿಲ್ಲ. ಬಿಜೆಪಿಯ ಬೆಲೆಯೇರಿಕೆ, ಭ್ರಷ್ಟಾಚಾರ, ದುರಾಡಳಿತದಿಂದ ಜನತೆ ತತ್ತರಿಸಿ ಹೋಗಿದ್ದು ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿ ಕಾಂಗ್ರೆಸ್ ನ್ನು ಮತ್ತೆ ಅಧಿಕಾರಕ್ಕೆ ತರಲಿದ್ದಾರೆ. ಸತ್ಯದ ಎದುರು ಸುಳ್ಳಿನ ಆಟ ಹೆಚ್ಚು ದಿನ ನಡೆಯುವುದಿಲ್ಲ. ರಾಜ್ಯ ಸರಕಾರದ ಗ್ಯಾರಂಟಿ ಯೋಜನೆ ಪ್ರತೀ ಮನೆಗೂ ಆಧಾರವಾಗಿ ಪರಿಣಮಿಸಿದ್ದು ಈ ಬಾರಿ ಬಿಜೆಪಿಯವರು ಕೂಡಾ ಕಾಂಗ್ರೆಸ್‌ಗೆ ಮತ ಚಲಾಯಿಸಲಿದ್ದಾರೆ.
-ಅಶೋಕ್ ಪೂಜಾರಿ ಬೊಳ್ಳಾಡಿ, ಅಧ್ಯಕ್ಷರು ಒಳಮೊಗ್ರು ವಲಯ ಕಾಂಗ್ರೆಸ್

1 COMMENT

  1. ಕಾಂಗ್ರೆಸ್ಸಿನವರು ಮಾತ್ರ ದೇಶ ಸರ್ವಾಧಿಕಾರದತ್ತ ಸಾಗುತ್ತ ಇದೆ ಎಂದು ಹೇಳುತ್ತಿರುವುದಲ್ಲ. ರಾಜಕೀಯ ರಹಿತ, ದೇಶದ ಬಗ್ಗೆ ಕಾಳಜಿ ಉಳ್ಳ ಯೂಟ್ಯೂಬರ್ ಧ್ರುವ್ ರಾಟಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಪತಿ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್, ಹಿಂದೆ ಬಿಜೆಪಿಯಲ್ಲಿದ್ದು ವಾಜಪೇಯಿಯವರ ಸಲಹೆಗಾರರಾಗಿದ್ದ, ಸದ್ಯ ರಾಜಕೀಯದಲ್ಲಿಲ್ಲದ ಸುಧೀಂದ್ರ ಕುಲಕರ್ಣಿ ಮೊದಲಾದವರು ದೇಶ ಸರ್ವಾಧಿಕಾರದತ್ತ ಸಾಗುತ್ತಿದೆ ಎಂದು ಉದಾಹರಣೆ ಸಮೇತ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ಪೈಕಿ ಖ್ಯಾತ ಯೂಟ್ಯೂಬರ್ 1.8 ಕೋಟಿ ಚಂದಾದಾರರನ್ನು ಹೊಂದಿರುವ ಧ್ರುವ್ ರಾಟಿಯವರ “ದ ಡಿಕ್ಟೇಟರ್” ವಿಡಿಯೋ 2.4 ಕೋಟಿ ವೀಕ್ಷಣೆಗಳನ್ನು ಕಂಡಿದ್ದರೆ, ಡರಾ ಹುವಾ ಡಿಕ್ಟೇಟರ್ ಎಂಬ ವಿಡಿಯೋ 2.9 ಕೋಟಿ ವೀಕ್ಷಣೆಗಳನ್ನು ಕಂಡಿದೆ. ಆಸಕ್ತರು ಧ್ರುವ್ ರಾಟಿಯವರ ಯೂಟ್ಯೂಬ್ ಚಾನೆಲ್ಲಿಗೆ ಹೋಗಿ ಸ್ವತಃ ಇದನ್ನು ನೋಡಬಹುದು. ಸುಧೀಂದ್ರ ಕುಲಕರ್ಣಿಯವರ ಸಂದರ್ಶನವನ್ನು ಈದಿನ ಎಂಬ ಕನ್ನಡ ಯೂಟ್ಯೂಬ್ ವಾಹಿನಿಯಲ್ಲಿ ನೋಡಬಹುದು. ಅದೇ ರೀತಿ ಪರಕಾಲ ಪ್ರಭಾಕರ್ ಅವರ ಸಂದರ್ಶನವನ್ನು “ದ ವೈರ್’ ಎಂಬ ಯೂಟ್ಯೂಬ್ ವಾಹಿನಿಯಲ್ಲಿ ಸ್ವತಃ ವೀಕ್ಷಿಸಬಹುದು. ಇವರೆಲ್ಲ ದೇಶ ಯಾವ ರೀತಿ ಸರ್ವಾಧಿಕಾರದೆಡೆಗೆ ಸಾಗುತ್ತಿದೆ ಎಂದು ಉದಾಹರಣೆಗಳ ಸಹಿತ ವಿವರಿಸಿದ್ದಾರೆ. ಎಚ್ಚತ್ತುಕೊಳ್ಳುವುದು ಅಥವಾ ದೇಶವನ್ನು ಸರ್ವಾಧಿಕಾರದೆಡೆಗೆ ಸಾಗಲು ಬಿಡುವುದು ಜನರ ವಿವೇಚನೆಗೆ ಬಿಟ್ಟದ್ದು. ದೇಶವು ಒಮ್ಮೆ ಸರ್ವಾಧಿಕಾರದೆಡೆಗೆ ಸಾಗಿದರೆ ಅದರಿಂದ ಹೊರಬರುವುದು ಬಹಳ ಕಷ್ಟವಿದೆ. ರಷ್ಯಾದ ಸರ್ವಾಧಿಕಾರಿ ಪುಟಿನ್ ಉದಾಹರಣೆ, ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಉದಾಹರಣೆ ನಮ್ಮ ಮುಂದಿದೆ. ಜನರಿಗೆ ಪರಿಸ್ಥಿತಿ ಅರ್ಥವಾಗದಿದ್ದರೆ ಅದರ ಪರಿಣಾಮವನ್ನು ಅವರೇ ಅನುಭವಿಸಬೇಕಾಗುತ್ತದೆ. ಪ್ರಜ್ಞಾವಂತರು, ವಿವೇಕವಂತರು ಪರ್ಯಾಯ ಮಾಧ್ಯಮಗಳ ಮೂಲಕ ಎಚ್ಚರವನ್ನಂತೂ ಮೂಡಿಸುತ್ತಿದ್ದಾರೆ. ಮುಖ್ಯವಾಹಿನಿಯ ಪತ್ರಿಕೆ ಹಾಗೂ ಟಿವಿ ವಾಹಿನಿಗಳು ಈ ಜವಾಬ್ದಾರಿಯನ್ನು ನಿರ್ವಹಿಸಿ ದೇಶದ ಪ್ರಜಾಪ್ರಭುತ್ವದ ಕಾವಲುನಾಯಿಯಾಗಿ ತಮ್ಮ ಪಾತ್ರವನ್ನು ನಿರ್ಹಹಿಸಬೇಕಾಗಿತ್ತು, ಆದರೆ ಅವರು ಅಳುವ ಪಕ್ಷದ ಗುಲಾಮರಾಗಿ ತಮ್ಮ ಜವಾಬ್ದಾರಿಯನ್ನೇ ಮರೆತಿದ್ದಾರೆ. ಮುಖ್ಯ ವಾಹಿನಿಯ ಮಾಧ್ಯಮಗಳ ಈ ಬೇಜವಾಬ್ದಾರಿ ವರ್ತನೆ ಮುಂದೊಮ್ಮೆ ಭಾರತದ ಇತಿಹಾಸದಲ್ಲಿ ಕರಾಳ ಅಧ್ಯಾಯವಾಗಿ ಸೇರ್ಪಡೆಗೊಳ್ಳಲಿದೆ.

LEAVE A REPLY

Please enter your comment!
Please enter your name here