ನೆಲ್ಯಾಡಿ: ಗೋಳಿತ್ತೊಟ್ಟು ಗ್ರಾಮದ ಪೆರಣಬೈಲು ಅನಿಲದಲ್ಲಿ ನೂತನವಾಗಿ ನಿರ್ಮಿಸಿರುವ ಆರೂಢದಲ್ಲಿ ಶ್ರೀ ವನದುರ್ಗಾದೇವಿಯ ಪ್ರತಿಷ್ಠೆಯು ತಂತ್ರಿ ಶ್ರೀ ಸುಬ್ರಹ್ಮಣ್ಯ ಬಳ್ಳಕ್ಕುರಾಯ ಕೆಮ್ಮಿಂಜೆ ಇವರ ಮಾರ್ಗದರ್ಶನದಲ್ಲಿ ಕಾಂಚನ ಪೆರ್ಲ ಶ್ರೀ ಷಣ್ಮುಖ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀನಿವಾಸ ಬಡೆಕಿಲ್ಲಾಯರ ನೇತೃತ್ವದಲ್ಲಿ ನಡೆಯಲಿದೆ ಎಂದು ಅನಿಲ ಕುಟುಂಬಸ್ಥರು ತಿಳಿಸಿದ್ದಾರೆ.
ಮೇ 4ರಂದು ಸಂಜೆ 5.30ರಿಂದ ತೋರಣ ಮುಹೂರ್ತ, ಪ್ರಾಸಾದಾದಿ ಪರಿಗ್ರಹ, ಸಂಜೆ ಗಂಟೆ 6.30ರಿಂದ ದೇವತಾ ಪ್ರಾರ್ಥನೆ, ಸ್ವಸ್ತಿ ಪಂಚಗವ್ಯ ಪುಣ್ಯಾಹವಾಚನ, ಆಚಾರ್ಯವರಣೆ, ಪ್ರಾಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ಬಲಿ, ನವದುರ್ಗಾ ಹೋಮ, ದಿಕ್ಪಾಲಕ ಬಲಿ ಹಾಗೂ ಬಿಂಬಾಧಿವಾಸ ನಡೆಯಲಿದೆ. ರಾತ್ರಿ ಗಂಟೆ 7ರಿಂದ ಗೋಳಿತ್ತೊಟ್ಟು ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಮೇ 5ರಂದು ಬೆಳಿಗ್ಗೆ 7.30ರಿಂದ ಮಹಾಗಣಪತಿ ಹೋಮ, ಪ್ರತಿಷ್ಠಾ ಪ್ರಧಾನ ಹೋಮ, ಪಂಚವಿಂಶತಿ ಕಲಶಾರಾಧನೆ ನಡೆದು 10.27ರ ಮಿಥುನ ಲಗ್ನದಲ್ಲಿ ಶ್ರೀ ವನದುರ್ಗಾ ದೇವಿಯ ಪದ್ಮಶಿಲಾ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ, ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ಪ್ರಸನ್ನ ಪೂಜೆ, ಮಹಾ ಮಂಗಳಾರತಿ, ಪ್ರಸಾದ ವಿತರಣೆಯಾಗಿ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ ಎಂದು ಅನಿಲ ಕುಟುಂಬಸ್ಥರು ತಿಳಿಸಿದ್ದಾರೆ.