ಅಪಘಾತದಲ್ಲಿ ಮೃತಪಟ್ಟ ರಾಮಕುಂಜದ ದಿನೇಶ್ ಕುಟುಂಬಕ್ಕೆ ಕರ್ಣಾಟಕ ಬ್ಯಾಂಕ್‌ನ ‘ಕೆಬಿಎಲ್ ಸುರಕ್ಷಾ ವಿಮಾ’ ಸೌಲಭ್ಯದಲ್ಲಿ 10 ಲಕ್ಷ ರೂ.ಮಂಜೂರು-ಚೆಕ್ ಹಸ್ತಾಂತರ

0

ರಾಮಕುಂಜ: ಕೆಲ ತಿಂಗಳ ಹಿಂದೆ ರಿಕ್ಷಾ ಅಪಘಾತದಲ್ಲಿ ಮೃತಪಟ್ಟ ರಾಮಕುಂಜ ಗ್ರಾಮದ ಇರ್ಕಿ ನಿವಾಸಿ ದಿನೇಶ್ ಮಡಿವಾಳ ಅವರ ಕುಟುಂಬಕ್ಕೆ ಕರ್ಣಾಟಕ ಬ್ಯಾಂಕ್‌ನ ಕೆಬಿಎಲ್ ಸುರಕ್ಷಾ ವಿಮಾ ಸೌಲಭ್ಯದಡಿ 10 ಲಕ್ಷ ರೂ.ಮಂಜೂರಾಗಿದ್ದು ವಿಮಾ ಮೊತ್ತದ ಚೆಕ್ ಅನ್ನು ಮೇ.18ರಂದು ಕರ್ಣಾಟಕ ಬ್ಯಾಂಕ್‌ನ ಕೊಯಿಲ ಶಾಖೆಯಲ್ಲಿ ಹಸ್ತಾಂತರ ಮಾಡಲಾಯಿತು.


ಸ್ವಂತ ರಿಕ್ಷಾದಲ್ಲಿ ಬಾಡಿಗೆ ಮಾಡುತ್ತಿದ್ದ ದಿನೇಶ್ ಅವರು ಕರ್ಣಾಟಕ ಬ್ಯಾಂಕ್‌ನ ಕೊಯಿಲ ಶಾಖೆಯಲ್ಲಿ ಉಳಿತಾಯ ಖಾತೆ ಹೊಂದಿದ್ದು ವಾರ್ಷಿಕ 300 ರೂ.ಕಂತು ಪಾವತಿಯ ಕೆಬಿಎಲ್ ಸುರಕ್ಷಾ ವಿಮಾ ಸೌಲಭ್ಯ ಪಡೆದುಕೊಂಡಿದ್ದರು. ದಿನೇಶ್ ಅವರು 2023ರ ಅ.1ರಂದು ತಡರಾತ್ರಿ ಬಜತ್ತೂರು ಗ್ರಾಮದ ವಳಾಲು-ಅಯೋಧ್ಯಾನಗರ ಸಾರ್ವಜನಿಕ ಕಚ್ಚಾ ರಸ್ತೆಯ ಅಯೋಧ್ಯಾನಗರ ಪೊರೋಳಿ ಬಸ್‌ನಿಲ್ದಾಣದ ಬಳಿ ರಿಕ್ಷಾ ಪಲ್ಟಿಯಾಗಿ ಗಾಯಗೊಂಡು ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಇದೀಗ ಅವರ ಕುಟುಂಬಕ್ಕೆ ಕೆಬಿಎಲ್ ವಿಮಾ ಸುರಕ್ಷಾ ಸೌಲಭ್ಯದಲ್ಲಿ ವಿಮಾ ಮಾರ್ಗಸೂಚಿಯಂತೆ 10 ಲಕ್ಷ ರೂ. ಪರಿಹಾರ ಧನ ಮಂಜೂರುಗೊಂಡಿದ್ದು, ಇದರ ಚೆಕ್ ಅನ್ನು ಕರ್ಣಾಟಕ ಬ್ಯಾಂಕ್‌ನ ಪುತ್ತೂರು ಕ್ಲಸ್ಟರ್‌ನ ಮುಖ್ಯ ಪ್ರಬಂಧಕರಾದ ಶ್ರೀಹರಿ ಪಿ.ಅವರು ಮೃತ ದಿನೇಶ್ ಅವರ ತಾಯಿ ಜಯಂತಿ ಅವರಿಗೆ ಕೊಯಿಲ ಶಾಖೆಯಲ್ಲಿ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ವಿಮಾ ಕಂಪನಿಯ ಅಧಿಕಾರಿ ಪ್ರಸನ್ನ ದೇವಾಡಿಗ, ಕೊಯಿಲ ಶಾಖಾ ಪ್ರಬಂಧಕರಾದ ರಾಜೇಶ್‌ಕುಮಾರ್ ವರ್ಮ, ಸಿಬ್ಬಂದಿಗಳಾದ ಚೇತನ್ ಎನ್., ಶ್ರೀಕಾಂತ್ ಪಿ., ಮಂಜುನಾಥ ಬಿ.ಅವರು ಉಪಸ್ಥಿತರಿದ್ದರು.

ಕಡಿಮೆ ಪ್ರೀಮಿಯಮ್, ಹೆಚ್ಚು ಪರಿಹಾರ:
ಕರ್ಣಾಟಕ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿರುವ 18 ರಿಂದ 60 ವರ್ಷದೊಳಗಿನವರು ವಾರ್ಷಿಕ ರೂ.150 ಹಾಗೂ ರೂ.300 ಕಂತು ಪಾವತಿಯ ಕೆಬಿಎಲ್ ಸುರಕ್ಷಾ ವಿಮಾ ಸೌಲಭ್ಯ ಪಡೆದುಕೊಳ್ಳಬಹುದು. ವಿಮಾ ಸೌಲಭ್ಯ ಪಡೆದುಕೊಂಡ ಉಳಿತಾಯ ಖಾತೆದಾರರು ಅಪಘಾತದಲ್ಲಿ ಮೃತಪಟ್ಟಲ್ಲಿ ಅವರ ನಾಮಿನಿದಾರರಿಗೆ ಮೃತರು ವಾರ್ಷಿಕ 150 ರೂ.ಕಂತು ಪಾವತಿದಾರರಾಗಿದಲ್ಲಿ ರೂ.5 ಲಕ್ಷ ಹಾಗೂ ವಾರ್ಷಿಕ 300 ರೂ.ಕಂತು ಪಾವತಿದಾರರಾಗಿದ್ದಲ್ಲಿ ರೂ.10 ಲಕ್ಷದ ತನಕ ವಿಮಾ ಪರಿಹಾರ ಸಿಗಲಿದೆ. ಅತೀ ಕಡಿಮೆ ಪ್ರೀಮಿಯಮ್‌ಗೆ ಅತೀ ಹೆಚ್ಚು ಪರಿಹಾರ ಸಿಗುವ ವಿಮಾ ಸೌಲಭ್ಯ ಇದಾಗಿದ್ದು ಸಾರ್ವಜನಿಕರು ಕರ್ಣಾಟಕ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ತೆರೆದು ಈ ವಿಮಾ ಸೌಲಭ್ಯ ಪಡೆದುಕೊಳ್ಳಬಹುದು.
-ರಾಜೇಶ್‌ಕುಮಾರ್ ವರ್ಮ, ಪ್ರಬಂಧಕರು, ಕರ್ಣಾಟಕ ಬ್ಯಾಂಕ್ ಕೊಯಿಲ ಶಾಖೆ

LEAVE A REPLY

Please enter your comment!
Please enter your name here