ಕಾಲೇಜು ರಜೆ ಸಂದರ್ಭ ಸಂಸ್ಥೆಯಲ್ಲಿ ದುಡಿದ ವಿದ್ಯಾರ್ಥಿಗಳಿಗೆ ನಯಾ ಚಪ್ಪಲ್ ಬಜಾರ್ ನಿಂದ ಗೌರವದ ಬೀಳ್ಕೊಡುಗೆ

0

ಪುತ್ತೂರು: ಪಿಯುಸಿ ಹಾಗೂ ಪದವಿ ಹಂತದ ಪರೀಕ್ಷೆಗಳು ಮುಗಿದು ಎರಡೂವರೆ ತಿಂಗಳ ರಜೆಯ ಸಂದರ್ಭದಲ್ಲಿ ದರ್ಬೆ ಬುಶ್ರಾ ಕಾಂಪ್ಲೆಕ್ಸ್ ನಲ್ಲಿ ವ್ಯವಹರಿಸುತ್ತಿರುವ ಪಾದರಕ್ಷೆಗಳ ಮಳಿಗೆ ನಯಾ ಚಪ್ಪಲ್ ಬಜಾರ್ ನಲ್ಲಿ ಸೇಲ್ಸ್ ಮ್ಯಾನ್/ಗರ್ಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಐವರು ವಿದ್ಯಾರ್ಥಿಗಳನ್ನು ಸಂಸ್ಥೆಯ ವತಿಯಿಂದ ಗೌರವದ ಬೀಳ್ಕೊಡುಗೆ ಯನ್ನು ಮೇ.15ರಂದು ಹಮ್ಮಿಕೊಳ್ಳಲಾಯಿತು.

ನಿವೃತ್ತ ಹಿರಿಯ ಶಿಕ್ಷಕ ಸುರೇಶ್ ಶೆಟ್ಟಿಯವರು ಮಾತನಾಡಿ, ಮಕ್ಕಳು ತಮ್ಮ ಹೆತ್ತವರಿಗೆ ಬೇಸರ ತರಿಸುವ, ಕಣ್ಣೀರು ತರಿಸುವ ಕೆಲಸವನ್ನು ಎಂದಿಗೂ ಮಾಡಬಾರದು. ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ವೆಚ್ಚವನ್ನು ಭರಿಸಲು ಅಸಾಧ್ಯವಾಗಿದ್ದ ಸಂದರ್ಭದಲ್ಲಿ ಅವರು ರಜೆಯಲ್ಲಿ ಕೆಲಸವನ್ನು ಮಾಡುವ ಮೂಲಕ ಸಂಪಾದಿಸುವುದು ಉತ್ತಮ ವಿಚಾರ. ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಬೇಕಾದರೆ ಕನಿಷ್ಟ ದಿನದ ನಾಲ್ಕು ಗಂಟೆಯಾದರೂ ಓದಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸ್ಪರ್ಧೆಯನ್ನು ಎದುರಿಸಿ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಹೊರಹೊಮ್ಮಬೇಕು ಎಂದರು.

ಪುತ್ತೂರು ವರ್ತಕ ಸಂಘದ ಅಧ್ಯಕ್ಷ ವಾಮನ್ ಪೈ ಮಾತನಾಡಿ, ಉಜಿರೆಯಲ್ಲಿನ ನನ್ನ ಮಾಲಕತ್ವದ ಪೆಟ್ರೋಲ್ ಪಂಪಿನಲ್ಲಿ ಏಳೆಂಟು ಮಂದಿ ತಮ್ಮ ಮುಂದಿನ ವಿದ್ಯಾಭ್ಯಾಸಕ್ಕೋಸ್ಕರ ರಜೆಯಲ್ಲಿ ದುಡಿಯುತ್ತಿದ್ದಾರೆ. ವಿದ್ಯಾರ್ಥಿಗಳು ತಮ್ಮ ಹೆತ್ತವರಿಗೆ ಹೆಚ್ಚಿನ ಭಾರ ಹಾಕದೆ ತಮ್ಮ ಸಂಪಾದನೆಯನ್ನು ನ್ಯಾಯಯುತವಾಗಿ ಸಂಪಾದಿಸಿ ಮನೆಗೆ ಆಧಾರಸ್ತಂಭವಾಗಿರಬೇಕು ಎಂದರು.

ಬೊಳುವಾರು ಕಾವೇರಿ ಎಂಟರ್ಪ್ರೈಸಸ್ ಮಾಲಕ, ಉದ್ಯಮಿ ಶ್ರೀಕಾಂತ್ ಕೊಳತ್ತಾಯ ಮಾತನಾಡಿ, ರಜಾ ಸಂದರ್ಭ ವಿದ್ಯಾರ್ಥಿಗಳು ಕೆಲಸ ಮಾಡಿ ಸಂಪಾದನೆ ಮಾಡುವುದು ಒಳ್ಳೆಯ ಬೆಳವಣಿಗೆ. ವಿದ್ಯಾರ್ಥಿ ಹಂತದಲ್ಲಿಯೇ ಗ್ರಾಹಕರೊಂದಿಗೆ ಉತ್ತಮ ಸಂವಹನ ಕೌಶಲ್ಯವನ್ನು ಹೊಂದಿದಾಗ ಜೀವನದಲ್ಲಿ ಮುಂದೆ ಬರಬಹುದು. ವಿದ್ಯಾರ್ಥಿಗಳಲ್ಲಿ ಸಾಧಿಸುವ ಗುರಿಯಿದ್ದಾಗ ಸಾಧನೆ ಸಾಧ್ಯ ಎಂದರು.

ರೋಟರಿ ಕ್ಲಬ್ ಪುತ್ತೂರು ಮಾಜಿ ಕಾರ್ಯದರ್ಶಿ ಪರಮೇಶ್ವರ್ ಗೌಡ ಮಾತನಾಡಿ, ರಜಾ ಸಂದರ್ಭದಲ್ಲಿ ಕೆಲಸ ಮಾಡುವ ಮೂಲಕ ಸಂಪಾದನೆ ಮಾಡುವುದು ಸ್ವಾಭಿಮಾನದ ಸಂಕೇತವಾಗಿದೆ. ರಫೀಕ್ ಎಂ.ಜಿರವರು ಅಲ್ಪಕಾಲದ ಉದ್ಯೋಗ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಸಹಕಾರ ನೀಡುತ್ತಿರುವುದು ಅಭಿನಂದನೀಯ ಎಂದರು.
ನಯಾ ಚಪ್ಪಲ್ ಬಜಾರ್ ಮಾಲಕ ರಫೀಕ್ ಎಂ.ಜಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಸಿಬ್ಬಂದಿಗಳು ಸಹಕರಿಸಿದರು.

ಉದ್ಯೋಗ ನೀಡಿರುವುದು ಖುಶಿ ತಂದಿದೆ…
ರಫೀಕ್ ಹಾಗೂ ಸಿದ್ಧೀಕ್ ರವರು ನಮಗೆ ಈ ಸಂಸ್ಥೆಯಲ್ಲಿ ಉದ್ಯೋಗ ನೀಡುವ ಮೂಲಕ ಸಹಕರಿಸಿರುವುದು ನಮಗೆ ಖುಶಿ ತಂದಿದೆ. ಮಾತ್ರವಲ್ಲ ಅವರು ನಮ್ಮಲ್ಲಿ ಒಳ್ಳೆಯ ರೀತಿಯಲ್ಲಿ ವ್ಯವಹರಿಸಿದ್ದಾರೆ ಕೂಡ. ಗ್ರಾಹಕರೊಂದಿಗೆ ಯಾವ ರೀತಿ ವ್ಯವಹರಿಸುವುದು, ಆ ಮೂಲಕ ಸಂವಹನ ಕೌಶಲವನ್ನು ಹೇಗೆ ವೃದ್ಧಿಸಿಕೊಳ್ಳುವುದು ಎಂಬುದು ಇಲ್ಲಿ ನಿರ್ವಹಿಸಿದ ಕೆಲಸವು ನಮ್ಮ ಮುಂದಿನ ಜೀವನಕ್ಕೆ ಸಹಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಕಾಲೇಜು ರಜೆಯ ಸಂದರ್ಭ ನಾವು ಈ ಸಂಸ್ಥೆಯಲ್ಲಿ ಕೆಲಸ ಮಾಡಲು ಉತ್ಸುಕರಾಗಿದ್ದೇವೆ.
-ಪಲ್ಲವಿ, ಸುಶ್ಮಾಶ್ರೀ, ಸೃಜನ್, ಶಹೀರ್, ರಕ್ಷಾ,
ಪಾರ್ಟ್ ಟೈಮ್ ಸಿಬ್ಬಂದಿಗಳು, ನಯಾ ಚಪ್ಪಲ್ ಬಜಾರ್

ಸಂಸ್ಥೆಯಿಂದ ರೂ.3 ಸಾವಿರ ಮೌಲ್ಯದ ಗಿಫ್ಟ್ ವೋಚರ್..
ಕಳೆದ ಎರಡೂವರೆ ತಿಂಗಳಿನಿಂದ ಐವರು ವಿದ್ಯಾರ್ಥಿಗಳು ಕಾಲೇಜು ರಜಾ ಸಂದರ್ಭದಲ್ಲಿ ನಮ್ಮ ಸಂಸ್ಥೆಯಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿರುತ್ತಾರೆ. ಇವರುಗಳಿಗೆ ತಿಂಗಳ ಸಂಬಳ ನೀಡಿಯೂ ಸಂಸ್ಥೆಯ ವತಿಯಿಂದ ರೂ.3 ಸಾವಿರದ ಗಿಫ್ಟ್ ವೋಚರ್ ಅನ್ನು ನೀಡಲಾಗುತ್ತದೆ. ಇದನ್ನು ಒಂದು ವರ್ಷದೊಳಗೆ ಯಾವ ರೀತಿಯಲ್ಲಾದರೂ ಉಪಯೋಗಿಸಿಕೊಳ್ಳಬಹುದು. ಈ ಐವರ ಕೆಲಸ ಕಾರ್ಯಗಳು ನಮಗೆ ಬಹಳ ತೃಪ್ತಿ ತಂದಿದ್ದು ಮುಂದೆ ಯಾವಾಗಲೂ ನಮ್ಮಲ್ಲಿ ಕೆಲಸಕ್ಕೆ ಬರಬಹುದು.
-ರಫೀಕ್ ಎಂ.ಜಿ, ಮಾಲಕರು,
ನಯಾ ಚಪ್ಪಲ್ ಬಜಾರ್

LEAVE A REPLY

Please enter your comment!
Please enter your name here