ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ಇಬ್ಬರು ವಿದ್ಯಾರ್ಥಿನಿಯರು ಮಂಗಳೂರು ವಿಶ್ವವಿದ್ಯಾನಿಲಯದ ರ‍್ಯಾಂಕ್‌ಗೆ ಭಾಜನರಾಗಿದ್ದಾರೆ.
ಬಿ.ಎಸ್ಸಿ ವಿಭಾಗದಲ್ಲಿ ಪೆರ್ಲದ ಪಡ್ರೆ ನಿವಾಸಿಗಳಾದ ಬಾಲಚಂದ್ರ ಬಿ.ವಿ ಹಾಗೂ ಪ್ರಿಯಾ ವಿ ದಂಪತಿ ಪುತ್ರಿ ವರೇಣ್ಯಾ ಒಟ್ಟು 4200 ಅಂಕಗಳಲ್ಲಿ 4093 ಅಂಕಗಳನ್ನು ಗಳಿಸುವ ಮೂಲಕ 97.45 ಶೇಕಡಾದೊಂದಿಗೆ ಮೂರನೇ ರ‍್ಯಾಂಕ್ ಗಳಿಸಿದ್ದಾರೆ. ಬಿ.ಎ ವಿಭಾಗದಲ್ಲಿ ಪುತ್ತೂರಿನ ವಾಲ್ತಾಜೆ ನಿವಾಸಿಗಳಾದ ಸತ್ಯನಾರಾಯಣ ಭಟ್ ಹಾಗೂ ವಿನಯಾ ದಂಪತಿ ಪುತ್ರಿ ನಯನಾ ಒಟ್ಟು 4200 ಅಂಕಗಳಲ್ಲಿ 3814 ಅಂಕಗಳನ್ನು ಗಳಿಸುವ ಮೂಲಕ 90.81 ಶೇಕಡಾ ಅಂಕಗಳೊಂದಿಗೆ ಮೂರನೇ ರ‍್ಯಾಂಕ್ ಪಡೆದಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದಡಿ ಕಾರ್ಯನಿರ್ವಹಿಸುವ ನೂರಾರು ಕಾಲೇಜುಗಳ ಮಧ್ಯೆ ಕೇವಲ ಐದು ವರ್ಷಗಳ ಹಿಂದಷ್ಟೇ ಆರಂಭಗೊಂಡ ಅಂಬಿಕಾ ಮಹಾವಿದ್ಯಾಲಯ ಇಂತಹ ಸಾಧನೆ ಮೆರೆದಿರುವುದು ಗುಣಮಟ್ಟಕ್ಕೆ ಹಿಡಿದ ಕೈಗನ್ನಡಿಯೆನಿಸಿದೆ. ವಿದ್ಯಾರ್ಥಿಗಳ ಸಾಧನೆಗೆ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ, ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ, ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಅಭಿನಂದನೆ ಸಲ್ಲಿಸಿದ್ದಾರೆ.