ಆಲಂಕಾರು: ಕರ್ನಾಟಕ ರಾಜ್ಯದಾದ್ಯಂತ ಕಂದಾಯ ಇಲಾಖೆಯ ನಾಡ ಕಚೇರಿ ಸರ್ವರ್ ಸಮಸ್ಯೆಯಿಂದಾಗಿ ಜನ ಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ. ಶಾಲಾ ಕಾಲೇಜುಗಳ ಆರಂಭದ ಸಮಯದಲ್ಲೇ ಈ ಸಮಸ್ಯೆ ಜನರನ್ನು ಹೈರಾಣ ಮಾಡಿದೆ.ಶಾಲಾ ಮಕ್ಕಳ ಹೆತ್ತವರು ತಮ್ಮ ಮಕ್ಕಳ ಶಾಲಾ ದಾಖಲಾತಿಗೆ ತೆರಳಿದಾಗ ಜಾತಿ ಆದಾಯ ಪ್ರಮಾಣಪತ್ರವನ್ನು ಸಲ್ಲಿಸಬೇಕು.
ಗ್ರಾಮ ಕರಣಿಕರ ವರದಿ ಮೂಲಕ ನೆಮ್ಮದಿ ಕೇಂದ್ರ, ಸೈಬರ್, ಗ್ರಾಮ ಒನ್ ಕೇಂದ್ರಗಳ ಮೂಲಕ ಜಾತಿ ಆದಾಯ ಪ್ರಮಾಣ ಪತ್ರಕ್ಕೆ ಸರ್ವರ್ ಸಮಸ್ಯೆಯಿಂದಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಒಂದು ವಾರದಿಂದ ಸರ್ವರ್ ಕೈ ಕೊಟ್ಟ ಕಾರಣ ಹಿಂದೆ ಸಲ್ಲಿಸಿದ ಅರ್ಜಿಗಳು ವಿಲೇವಾರಿ ಆದರೂ ಪ್ರಮಾಣ ಪತ್ರ ಸಿಗುತ್ತಿಲ್ಲ. ಸೇವಾ ಕೇಂದ್ರದ ಸಿಬ್ಬಂದಿಗಳು ಅರ್ಜಿ ಹಾಕಲು ಪ್ರಯತ್ನಿಸಿದರೂ ಅವರ ಖಾತೆಯಿಂದ ಸೇವಾ ಶುಲ್ಕ ಕಡಿತಗೊಳ್ಳುತ್ತದೆ. ಆದರೆ ಅರ್ಜಿ ಮಾತ್ರ ಸಲ್ಲಿಕೆಯಾಗುತ್ತಿಲ್ಲ. ಸಲ್ಲಿಕೆಯಾದ ಅರ್ಜಿಯ ಸರ್ಟಿಫಿಕೇಟ್ ತೆಗೆಯಲು ಆಗುತ್ತಿಲ್ಲ. ಆದರೆ ಹಣ ಮಾತ್ರ ಕಟ್ ಆಗುತ್ತಿದೆ. ಇದರಿಂದಾಗಿ ಸೇವಾ ಕೇಂದ್ರದ ಸಿಬ್ಬಂದಿಗಳು ಅರ್ಜಿ ಸಲ್ಲಿಸಲು ಹಿಂಜರಿಯುತ್ತಿದ್ದಾರೆ.
ಒಂದು ಬಾರಿ ಜಾತಿ ಆದಾಯ ಪ್ರಮಾಣ ಪತ್ರ ಪಡೆದರೆ ಮುಂದಿನ ಐದು ವರುಷಗಳವರೆಗೆ ಮಾನ್ಯತೆ ಇರುತ್ತದೆ. ಐದು ವರ್ಷಗಳ ನಂತರ ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. 2019ರಲ್ಲಿ ಹೆಚ್ಚಿನ ಜನ ಪ್ರಮಾಣ ಪತ್ರಗಳನ್ನು ಮಾಡಿಸಿಕೊಂಡವರ ಅವಧಿ ಮುಗಿಯುತ್ತಿರುವುದರಿಂದ ಜನರು ಸೇವಾಕೇಂದ್ರ, ನಾಡಕಚೇರಿಗಳಿಗೆ ಅಲೆದಾಟ ಮಾಡಿ ಹಿಡಿಶಾಪ ಹಾಕುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸರಕಾರ ಗಮನಹರಿಸಿ ಸೂಕ್ತ ಕ್ರಮ ಕೈಗೊಂಡು ಸರ್ವರ್ ಸಮಸ್ಯೆಯನ್ನು ನಿವಾರಿಸಿ ಸಾರ್ವಜನಿಕರಿಗೆ ನ್ಯಾಯ ಒದಗಿಸಿಕೊಡಬೇಕಾಗಿದೆ.