





ಪುತ್ತೂರು: ಕೆಲವು ತಿಂಗಳುಗಳ ಹಿಂದೆ ಕೊಳ್ತಿಗೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಗದ್ದಲ ಎಬ್ಬಿಸಿರುವ ಒಂಟಿ ಸಲಗ ತನ್ನ ಪ್ರಯಾಣವನ್ನು ಕೆಯ್ಯೂರು ಗ್ರಾಮದತ್ತ ಮಾಡಿದ್ದು ಗ್ರಾಮದ ತೆಗ್ಗು ಪರಿಸರದಲ್ಲಿ ಬೀಡುಬಿಟ್ಟಿದೆ. ಜೂ.5 ರಂದು ರಾತ್ರಿ ಸವಣೂರು ಗ್ರಾಮದ ಪುಣ್ಚಪ್ಪಾಡಿ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಕಾಡಾನೆಯು ಅಲ್ಲಿಂದ ರಾತ್ರೋ ರಾತ್ರಿ ಹೊಳೆ ದಾಟಿಕೊಂಡು ತೆಗ್ಗು ಪರಿಸರಕ್ಕೆ ಕಾಲಿಟ್ಟಿದೆ. ತೆಗ್ಗು ನೆಲ್ಲಿಗುರಿ ಎಂಬಲ್ಲಿ ಆನೆ ಇರುವುದನ್ನು ಸ್ಥಳೀಯರು ರಾತ್ರಿಯೇ ನೋಡಿದ್ದರು. ಆ ಬಳಿಕ ಆನೆಯು ಸ್ಥಳೀಯ ಕಾಡು ಪ್ರದೇಶಗಳಾದ ಎರಬೈಲು, ಓಲೆಮುಂಡೋವು ಭಾಗಗಳಲ್ಲಿ ಸುತ್ತಾಡಿದ್ದು ಅಲ್ಲಲ್ಲಿ ಲದ್ದಿ ಹಾಕಿರುವುದು ಕಂಡು ಬಂದಿದೆ. ಬಲ್ಕಾಡು ಭಾಗಕ್ಕೆ ಬಂದಿರುವ ಆನೆ ರಸ್ತೆಯಲ್ಲಿ ಓಡಾಡಿರುವ ಹೆಜ್ಜೆ ಗುರುತು ಇದ್ದು ಅಲ್ಲಿಂದ ಮತ್ತೆ ಎರಬೈಲು ಕಾಡು ಪ್ರದೇಶಕ್ಕೆ ಹೆಜ್ಜೆ ಹಾಕಿದೆ.


ಕಾಡಲ್ಲಿ ವಿಶ್ರಾಂತಿಗೆ ಜಾರಿದ ಸಲಗ
ರಾತ್ರಿ ಇಡೀ ಸುತ್ತಾಡಿದ್ದ ಕಾಡಾನೆಯು ಬೆಳಿಗ್ಗೆಯಾಗುತ್ತಲೇ ಹತ್ತಿರದ ಶುಭಪ್ರಕಾಶ್ ಎರಬೈಲು ಮಾಲಕತ್ವದ ಎರಬೈಲು ಪ್ರದೇಶದ ಕಾಡಲ್ಲಿ ವಿಶ್ರಾಂತಿಗೆ ಜಾರಿದೆ.ಸುತ್ತ ಪೊದೆ, ಮರಗಳಿಂದ ತುಂಬಿರುವ ಕಾಡು ಪ್ರದೇಶದಲ್ಲಿ ಆನೆ ಮಲಗಿರುವುದನ್ನು ಅರಣ್ಯಾಧಿಕಾರಿಗಳು ಕಂಡಿದ್ದಾರೆ.






ಕೃಷಿ ಹಾನಿ
ಆನೆ ನಡೆದದ್ದೇ ದಾರಿ ಎಂಬಂತೆ ತನಗೆ ತೋಚಿದ ಕಡೆಗಳಲ್ಲಿ ಆನೆ ಹೆಜ್ಜೆ ಹಾಕಿದೆ. ಗುಡ್ಡ, ತೋಟಗಳಲ್ಲಿ ಸಂಚರಿಸಿದ ಆನೆಯು ಕೆಲವು ಕಡೆಗಳಲ್ಲಿ ತೆಂಗಿನ ಸಸಿಗಳನ್ನು ಮುರಿದು ಹಾಕಿದೆ. ಕೃಷಿಗೆ ಹೆಚ್ಚೇನು ಹಾನಿ ಮಾಡಿಲ್ಲ ಎಂದು ತಿಳಿದು ಬಂದಿದೆ.

ಅರಣ್ಯಾಧಿಕಾರಿಗಳ ಭೇಟಿ
ತೆಗ್ಗು ಪರಿಸರದಲ್ಲಿ ಆನೆ ಇರುವ ಬಗ್ಗೆ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಎಸಿಎಫ್ ಪ್ರವೀಣ್, ಆರ್‌ಎಫ್ ಕಿರಣ್ ಹಾಗೂ ತಂಡದವರು ಸ್ಥಳಕ್ಕೆ ಭೇಟಿ ನೀಡಿ ಆನೆ ಇರುವ ಬಗ್ಗೆ ಕಾರ್ಯಾಚರಣೆ ನಡೆಸಿದರು. ಬೆಟ್ಟ ಕಾಡುಗಳಲ್ಲಿ ಓಡಾಡಿದ ಅರಣ್ಯಾಧಿಕಾರಿಗಳು ಕೊನೆಗೂ ಆನೆ ಕಾಡಿನ ನಡುವೆ ಮಲಗಿರುವುದನ್ನು ಪತ್ತೆ ಹಚ್ಚಿದ್ದಾರೆ.

ಸ್ಥಳಕ್ಕೆ ಸಾರ್ವಜನಿಕರು ತೆರಳದಂತೆ ಎಚ್ಚರಿಕೆ..!
ಆನೆ ಇರುವ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನೂರಾರು ಮಂದಿ ಜಮಾಸಿದ್ದರು.ಆನೆ ನಡೆದು ಕೊಂಡು ಹೋಗಿರುವ ಹೆಜ್ಜೆ ಗುರುತನ್ನು ಪತ್ತೆ ಹಚ್ಚಿದ ಜನರು ಆನೆ ಈ ಭಾಗದಲ್ಲಿ ಓಡಾಡಿದ ಎಂದುಕೊಂಡು ಕಾಡಲ್ಲಿ ಹೆಜ್ಜೆ ಇಡಲು ಶುರು ಮಾಡಿದ್ದರು. ಕೊನೆಗೆ ಆನೆ ಕಾಡಲ್ಲಿ ಮಲಗಿರುವ ಬಗ್ಗೆ ತಿಳಿದುಕೊಂಡ ಅರಣ್ಯಾಧಿಕಾರಿಗಳು ಜನರು ಆ ಭಾಗಕ್ಕೆ ತೆರಳದಂತೆ ಸಿಬ್ಬಂದಿಗಳನ್ನು ನೇಮಿಸಿ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದಾರೆ.

ರಾತ್ರಿಯೇ ಆನೆಯನ್ನು ಓಡಿಸುವ ಕಾರ್ಯಾಚರಣೆ
ಜೂ.6 ರಂದು ರಾತ್ರಿಯೇ ಆನೆಯನ್ನು ಓಡಿಸುವ ಕಾರ್ಯಾಚರಣೆ ನಡೆಸಲಾಗುವುದು ಎಂದು ಆರ್‌ಎಫ್ ಕಿರಣ್‌ರವರು ಮಾಹಿತಿ ನೀಡಿದ್ದಾರೆ. ರಾತ್ರಿ ೭ ಗಂಟೆ ಸುಮಾರಿಗೆ ಆನೆಯನ್ನು ಯಾವ ಭಾಗಕ್ಕೆ ಓಡಿಸಬಹುದು ಎಂದು ತಿಳಿದುಕೊಂಡು ಓಡಿಸುವ ಬಗ್ಗೆ ಪ್ಲಾನ್ ಮಾಡಲಾಗಿದೆ.ಈ ಬಗ್ಗೆ ಇಲಾಖೆಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದು ಸಂಜೆ ವೇಳೆಗೆ ಎಲ್ಲಾ ಸಿಬ್ಬಂದಿಗಳ ಸ್ಥಳದಲ್ಲಿ ಹಾಜರಿರುವಂತೆ ಅವರು ಸೂಚನೆ ನೀಡಿದ್ದಾರೆ.

ಶಾಲೆ, ಅಂಗನವಾಡಿಗಳಿಗೆ ರಜೆ
ಆನೆ ಇರುವ ಬಗ್ಗೆ ಖಚಿತ ಪಡಿಸಿಕೊಂಡು ಅರಣ್ಯಾಧಿಕಾರಿ ಕಿರಣ್‌ರವರು ತಕ್ಷಣವೇ ಹತ್ತಿರದ ಶಾಲೆಗಳಿಗೆ ರಜೆ ನೀಡುವಂತೆ ಶಿಕ್ಷಣಾಧಿಕಾರಿಯವರಿಗೆ ಮನವಿ ಮಾಡಿಕೊಂಡರು. ಅದರಂತೆ ತೆಗ್ಗು ಹಿ.ಪ್ರಾ.ಶಾಲೆಗೆ ರಜೆಯನ್ನು ನೀಡಲಾಯಿತು. ಅದೇ ತೆಗ್ಗು ಅಂಗನವಾಡಿಗೂ ರಜೆ ನೀಡುವಂತೆ ತಿಳಿಸಲಾಯಿತು. ಕೆಯ್ಯೂರು ಗ್ರಾಪಂ ಸದಸ್ಯ ಅಬ್ದುಲ್ ಖಾದರ್ ಮೇರ್ಲರವರು ಶಾಲೆ ಹಾಗೂ ಅಂಗನವಾಡಿಗೆ ಭೇಟಿ ನೀಡಿ ಆನೆ ಇರುವ ಬಗ್ಗೆ ವಿಷಯ ತಿಳಿಸಿ ಮಕ್ಕಳ ಸುರಕ್ಷತೆಯನ್ನು ನೋಡಿಕೊಳ್ಳುವಂತೆ ತಿಳಿಸಿದರು.
ಪರಪ್ಪೆ ರಕ್ಷಿತಾರಣ್ಯದಿಂದ ತಪ್ಪಿಸಿಕೊಂಡ ಬಂದ ಒಂಟಿ ಸಲಗ..!?
ಕಾಸರಗೋಡಿನ ಪರಪ್ಪೆ ರಕ್ಷಿತಾರಣ್ಯದಿಂದ ಈ ಕಾಡಾನೆ ತಪ್ಪಿಸಿಕೊಂಡು ಬಂದಿದೆ ಎನ್ನಲಾಗಿದೆ. ಗುಂಪಿನಿಂತ ಬೇರ್ಪಟ್ಟ ಗಂಡಾನೆ ಇದಾಗಿದೆ. ಇದೇ ಆನೆ ಕೆಲವು ತಿಂಗಳ ಹಿಂದೆ ಕೊಳ್ತಿಗೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಗದ್ದಲ ಎಬ್ಬಿಸಿತ್ತು. ಆ ಬಳಿಕ ಕೆಲವು ತಿಂಗಳು ಆನೆಯ ಸುಳಿವು ಇರಲಿಲ್ಲ. ಇದೀಗ ಮತ್ತೆ ಒಂಟಿ ಸಲಗ ಸದ್ದು ಮಾಡಿದ್ದು ಪುಣ್ಚಪ್ಪಾಡಿ, ತೆಗ್ಗು ಪ್ರದೇಶಗಳತ್ತ ತನ್ನ ಹೆಜ್ಜೆಯನ್ನು ಇಟ್ಟಿದೆ. ತೆಗ್ಗು ಪ್ರದೇಶದಿಂದ ಆನೆಯನ್ನು ಓಡಿಸಿದರೆ ಮತ್ತೆ ಯಾವ ಕಡೆಗೆ ಹೋಗುತ್ತದೆ ಎಂದು ತಿಳಿಯುವುದು ಕಷ್ಟ ಏಕೆಂದರೆ ಆನೆಯನ್ನು ಓಡಿಸುವುದು ಅಷ್ಟು ಸುಲಭದ ಕೆಲಸವೂ ಅಲ್ಲ ಅಲ್ಲದೆ ಆನೆಯನ್ನು ಇಂತಹ ಕಡೆಗೇ ಓಡಿಸುವುದು ಕೂಡ ಕಷ್ಟ. ಏಕೆಂದರೆ ಆನೆ ನಡೆದದ್ದೆ ದಾರಿಯಾಗಬೇಕು ವಿನಹ ನಾವು ಹೇಳಿದ ಕಡೆಗೆ ಆನೆಯನ್ನು ಓಡಿಸುವುದು ಕಷ್ಟಸಾಧ್ಯ.
ಜನರು ಆತಂಕ ಪಡಬೇಕಾಗಿಲ್ಲ: ಶಾಸಕ ಅಶೋಕ್ ರೈ
ಕೆಯ್ಯೂರು ಗ್ರಾಮದ ತೆಗ್ಗು ಎರಬೈಲ್ ನಲ್ಲಿ ಕಾಡಾನೆಯೊಂದು ಪತ್ತೆಯಾಗಿದ್ದು ಅದನ್ನು ಮರಳಿ ಕಾಡಿಗಟ್ಟುವ ಪ್ರಕ್ರಿಯೆ ಅರಣ್ಯ ಇಲಾಖೆಯಿಂದ ನಡೆಯುತ್ತಿದ್ದು ಜನ ಆತಂಕ ಪಡಬೇಕಾಗಿಲ್ಲ ಎಂದು ಶಾಸಕ ಅಶೋಕ್ ರೈ ಹೇಳಿದ್ದಾರೆ. ಆನೆ ಎರಬೈಲ್ ಕಾಡು ಪ್ರದೇಶದಲ್ಲಿ ಕಂಡು ಬಂದ ಬಗ್ಗೆ ಜನರು ಇಲಾಖೆಗೆ ಮಾಹಿತಿನೀಡಿದ್ದಾರೆ.ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ಅನಾಹುತವಾಗದಂತೆ ಎಚ್ಚರದಿಂದ ಇರಬೇಕು ಮತ್ತು ಕಾಡಾನೆಯನ್ನು ಸುರಕ್ಷಿತವಾಗಿ ಕಾಡಿಗೆ ಅಟ್ಟುವ ಕೆಲಸವನ್ನು ಇಲಾಖೆ ಮಾಡಬೇಕೆಂದು ಸೂಚನೆ ನೀಡಿದ್ದೇನೆ. ದಾರಿ ತಪ್ಪಿ ಬಂದಿರುವ ಸಾಧ್ಯತೆ ಇದ್ದು ಇದುವರೆಗೂ ಯಾರಿಗೂ ತೊಂದರೆ ನೀಡಿಲ್ಲ ಎಂದು ಶಾಸಕರು ತಿಳಿಸಿದ್ದಾರೆ.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ
ಕಾಡಾನೆ ಇರುವ ಬಗ್ಗೆ ಮಾಹಿತಿ ಪಡೆದುಕೊಂಡ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರವರು ಎರಬೈಲು ಪ್ರದೇಶಕ್ಕೆ ಭೇಟಿ ನೀಡಿದರು. ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆ ಮಾತನಾಡಿದ ಅವರು ಗ್ರಾಮಸ್ಥರಿಗೆ ಯಾವುದೇ ತೊಂದರೆಯಾಗದಂತೆ ಆನೆಯನ್ನು ಸುರಕ್ಷಿತ ಜಾಗಕ್ಕೆ ಅಟ್ಟುವ ಕೆಲಸವನ್ನು ಮಾಡುವಂತೆ ತಿಳಿಸಿದರು.









