ಉಪ್ಪಿನಂಗಡಿ:ಶಾಲೆಯಿಂದ ಗ್ಯಾಸ್ ಸಿಲಿಂಡರ್, ಮಿಕ್ಸಿ ಕಳವು

0

ಉಪ್ಪಿನಂಗಡಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಳನುಗ್ಗಿದ ಕಳ್ಳರು ಅಲ್ಲಿನ ಅಕ್ಷರ ದಾಸೋಹ ಕೊಠಡಿಯಲ್ಲಿದ್ದ ಗ್ಯಾಸ್ ಸಿಲಿಂಡರ್, ಮಿಕ್ಸಿ ಹಾಗೂ ಅದರ ಜಾರ್‌ಗಳನ್ನು ಕಳ್ಳತನ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಪಿಲಿಗೂಡುನಲ್ಲಿ ನಡೆದಿದೆ.


ಜೂ.5ರಂದು ಸಂಜೆ ಶಾಲಾ ಅವಧಿ ಬಳಿಕ ಶಾಲೆಗೆ ಬೀಗ ಹಾಕಿ ಶಿಕ್ಷಕರು ತೆರಳಿದ್ದು, ಜೂ.6ರಂದು ಬೆಳಗ್ಗೆ ಬಂದು ನೋಡಿದಾಗ ಶಾಲೆಯ ಕಚೇರಿಯ ಬಾಗಿಲಿನ ಬೀಗವನ್ನು ಕಬ್ಬಿಣದ ಆಯುಧದಿಂದ ಮೀಟಿ ಬಾಗಿಲು ತೆರೆದಿರುವುದು ಕಂಡು ಬಂತು. ಒಳಗೆ ನೋಡಿದಾಗ ಅಲ್ಲಿದ್ದ ಕಪಾಟನ್ನು ತೆರೆದು ಅದರೊಳಗಿದ್ದ ದಾಖಲೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡು ಬಂದಿದ್ದು, ಬಳಿಕ ಶಾಲೆಯ ಇತರ ಕೊಠಡಿಗಳನ್ನು ಪರಿಶೀಲಿಸಿದಾಗ ಮೂರು ಕೊಠಡಿಗಳ ಹಾಗೂ ಅಕ್ಷರ ದಾಸೋಹದ ಕೊಠಡಿಯ ಬಾಗಿಲ ಬೀಗಗಳನ್ನು ಒಡೆದು ತೆರೆದಿರುವುದು ಕಂಡು ಬಂದಿದೆ. ಅಲ್ಲದೇ, ಅಕ್ಷರ ದಾಸೋಹ ಕೊಠಡಿಯಲ್ಲಿದ್ದ ಗ್ಯಾಸ್ ಸಿಲಿಂಡರ್, ಮಿಕ್ಸಿ ಹಾಗೂ ಅದರ ಜಾರ್‌ಗಳನ್ನು ಕಳವುಗೈಯಲಾಗಿತ್ತು. ಕಳವುಗೈದ ಸೊತ್ತುಗಳ ಅಂದಾಜು ಮೌಲ್ಯ 11 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರಾದ ಪ್ಲೇವಿಯ ಡಿಸೋಜ ಎಂಬವರ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

LEAVE A REPLY

Please enter your comment!
Please enter your name here