ಕಾಂಗ್ರೆಸ್, ಮೋದಿ ಗ್ಯಾರಂಟಿಗಿಂತ ಗೆಲ್ಲಲು ಜನರ ವಿಶ್ವಾಸದ ಗ್ಯಾರಂಟಿಯೇ ಮುಖ್ಯ

0

ಕಳೆದ ಹಲವಾರು ವರ್ಷಗಳಿಂದ ಮತದಾರರೇ ರಾಜರು, ಜನಪ್ರತಿನಿಧಿಗಳು ಜನಸೇವಕರು. ಮೋದೀಜಿಯವರಿಗೆ, ರಾಹುಲ್‌ಗಾಂಧಿಯವರಿಗೆಂದು ಮತದಾನ ಮಾಡಬೇಡಿ, ನಮಗಾಗಿ ನಮ್ಮ ಸೇವೆಗಾಗಿ ಮತದಾನ, ಊರು ಉದ್ಧಾರವಾದರೆ ದೇಶ ಉದ್ದಾರವಾಗುತ್ತದೆ ಅದೇ ದೇಶಸೇವೆ ಎಂದು ಪ್ರತಿಪಾದಿಸುತ್ತಾ ಬಂದಿದ್ದೇನೆ. ಚುನಾವಣಾ ಸಂದರ್ಭದಲ್ಲಿ ನಾನು ವಾರಣಾಸಿಗೆ, ದೆಹಲಿಗೆ ಭೇಟಿ ನೀಡಿದ ಬಗ್ಗೆ ಬರೆದಿದ್ದೇನೆ. ಅಲ್ಲಿಯ ಜನರು ಮನ್‌ಕಿ ಬಾತ್‌ನಲ್ಲಿ ಮೋದೀಜಿಯವರು ಮಾಡಿದ ಕೆಲಸಗಳಿಗಾಗಿ ಅವರಿಗೆ ಮತ. ಇತರ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಮಾಡಿದ ಕೆಲಸಕ್ಕಾಗಿ ಮತ ಎಂದು ಹೇಳುತ್ತಾರೆ ಎಂದೂ ಬರೆದಿದ್ದೆ.


ನಮ್ಮ ಜಿಲ್ಲೆಯ, ರಾಜ್ಯದ ಜನರಿಗಿಂತ ಉತ್ತರ ಭಾರತದವರು ಹೆಚ್ಚು ರಾಜಕೀಯ ಪ್ರಭುದ್ದತೆ ಹೊಂದಿದ್ದಾರೆ. ಅಲ್ಲಿ ನೀವು ಯಾರನ್ನೇ ಕೇಳಿದರೂ ಅವರು ನಮ್ಮ ಮನ್‌ಕಿ ಬಾತನ್ನು ಯಾರು ಕೇಳುತ್ತಾರೆ ಎಂದು ಹೇಳುತ್ತಾ ತಮ್ಮ ಕ್ಷೇತ್ರದ ಅಭ್ಯರ್ಥಿ ಹೇಗಿರಬೇಕು?, ಏನು ಕೆಲಸ ಮಾಡಬೇಕು? ಎಂದು ಸ್ಪಷ್ಟವಾಗಿ ಹೇಳುತ್ತಾರೆ. ಮೋದೀಜಿಯವರಿಗಾಗಿ ಅಥವಾ ರಾಹುಲ್ ಗಾಂಧಿಯವರಿಗಾಗಿ ಅಥವಾ ಯಾರಿಗಾಗಿಯೂ ಎಂದು ಹೇಳುವುದಿಲ್ಲ. ತಮಗಾಗಿಯೇ ಎಂದು ಹೇಳುತ್ತಾರೆ. ಅವರಿಗೆಂದು ಓಟು ಕೊಡುವುದಿದ್ದರೂ ಅವರ ತಪ್ಪುಗಳನ್ನು ಟೀಕಿಸಿಯೇ ಮಾತನಾಡುತ್ತಾರೆ.


ಮೋದೀಜಿಯವರು ಅಥವಾ ರಾಹುಲ್ ಗಾಂಧಿಯವರು ಎಷ್ಟೇ ಒಳ್ಳೆಯ ಕೆಲಸ ಮಾಡಲಿ ಅವರ ಪಕ್ಷವನ್ನು ಪ್ರತಿನಿಧಿಸುವ ವ್ಯಕ್ತಿ ಆಯಾ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುವವನಾಗಿರಬೇಕು. ಲೈಟ್ ಕಂಬ ಅಥವಾ ಕತ್ತೆ ನಿಲ್ಲಿಸಿದರೂ ಗೆಲ್ಲಿಸುತ್ತೇವೆ ಎಂದು ಹೇಳುವುದು, ನಮ್ಮ ಮತ ಇಂತಹ ವ್ಯಕ್ತಿಗೆ, ಇಂತಹ ಪಕ್ಷಕ್ಕೆ ಎಂದು ಮೊದಲೇ ಮಾರಿಕೊಳ್ಳುವುದು ಗುಲಾಮಗಿರಿಯ ಸಂಕೇತ. ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ ಎಂದು ಅರ್ಥ ಮಾಡಿಕೊಳ್ಳಬೇಕು. ಮತದಾರರು ತಾವು ರಾಜರು, ಜನಪ್ರತಿನಿಧಿ ಅಂದರೆ ಜನಸೇವಕ, ಪಕ್ಷಗಳು ಜನಸೇವೆಗಾಗಿ ಇರುವಂತದ್ದು, ಅಽಕಾರಿಗಳು ಜನಸೇವಕರು, ನಮ್ಮ ಆಡಳಿತಕ್ಕಾಗಿ ಈ ಆಯ್ಕೆ ಮತ್ತು ವ್ಯವಸ್ಥೆ. ಜನಪ್ರತಿನಿಧಿಗಳನ್ನು ರಾಜರನ್ನಾಗಿ ಮಾಡಲಿಕ್ಕೆ ಅಲ್ಲ ಎಂದು ಚಿಂತಿಸಿದರೆ ಅಂದಿನಿಂದ ಜನರು ರಾಜರಾಗುತ್ತಾರೆ. ಜನಪ್ರತಿನಿಧಿಗಳು ಜನಸೇವಕರಾಗುತ್ತಾರೆ. ಇಲ್ಲದಿದ್ದರೆ ಅವರು ರಾಜರುಗಳಾಗುತ್ತಾರೆ. ನಾವು ಗುಲಾಮರಾಗುತ್ತೇವೆ ಅಲ್ಲವೇ?.


ಈ ಚುನಾವಣೆ ದೇಶದ ಎಲ್ಲಾ ಪಕ್ಷಗಳು, ವ್ಯಕ್ತಿಗಳು ತಾವು ಶಾಶ್ವತರಲ್ಲ ಎಂದು ನೆನೆಸಿಕೊಳ್ಳುವಂತೆ ಮಾಡಿದೆ. ಕಾಂಗ್ರೆಸ್, ಮೋದಿ ಗ್ಯಾರಂಟಿಗಳಿಗಿಂತ ಜನರ ವಿಶ್ವಾಸದ ಗ್ಯಾರಂಟಿಯೇ ಮುಖ್ಯ ಎಂದು ಜನರು ತೋರಿಸಿಕೊಟ್ಟಿದ್ದಾರೆ. ಕೇಂದ್ರದಲ್ಲಿ, ರಾಜ್ಯದಲ್ಲಿ ಜನರ ಮನ್‌ಕಿ ಬಾತನ್ನು ಕೇಳುವ ಸರಕಾರ ಬರಲಿ ಮತ್ತು ಉಳಿಯಲಿ ಎಂದು ಹಾರೈಸುತ್ತೇನೆ.


ಪುತ್ತೂರಿನ ಬಿಜೆಪಿ ವ್ಯಕ್ತಿಯೋರ್ವ ಅಯೋಧ್ಯೆಯಲ್ಲಿ ಸೋತ ಬಿಜೆಪಿ ಅಭ್ಯರ್ಥಿಯನ್ನು ಬೇಸರದಿಂದ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಅಲ್ಲಿ ಸೋತ ಅಭ್ಯರ್ಥಿಯನ್ನು ತರಾಟೆಗೆ ತೆಗೆದುಕೊಳ್ಳುವ ಮೊದಲು ಅಲ್ಲಿಯ ಜನರು ಆತನನ್ನು ಸೋಲಿಸಲು ಕಾರಣ ಏನು ಎಂದು ಅರ್ಥ ಮಾಡಿಕೊಂಡು ಅಲ್ಲಿಯ ಜನರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಬೇಕು. ಅಲ್ಲಿಯ ಜನರಿಗೆ ಸೇವೆ ನೀಡುವ ಅಭ್ಯರ್ಥಿಯನ್ನು ಬಿಜೆಪಿಯಲ್ಲಿ ಆಯ್ಕೆ ಮಾಡದಿರುವುದಕ್ಕೆ ಮತ್ತು ಸೋಲುವ ಅಭ್ಯರ್ಥಿಗೆ ಸೀಟು ಕೊಟ್ಟವರನ್ನು ತರಾಟೆಗೆ ತೆಗೆದುಕೊಳ್ಳಬೇಕು. ಅದು ನಮ್ಮ ದೇಶದ ಎಲ್ಲಾ ಕಡೆಗಳಲ್ಲಿ ಎಲ್ಲಾ ಪಕ್ಷಗಳಿಗೆ ಅನ್ವಯವಾಗಬೇಕು ಎಂದು ಹೇಳಲು ಬಯಸುತ್ತೇನೆ.
ಡಾ.ಯು.ಪಿ.ಶಿವಾನಂದ, ಸುದ್ದಿ ಜನಾಂದೋಲನ ವೇದಿಕೆ, ಪುತ್ತೂರು, ಸುಳ್ಯ, ಬೆಳ್ತಂಗಡಿ

LEAVE A REPLY

Please enter your comment!
Please enter your name here