ಬೋಳ್ವಾರಿನ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಹಿರಿಯ ವಿದ್ಯಾರ್ಥಿಗಳಿಗೆ ‘ಬೀಳ್ಕೊಡುಗೆ ಸಮಾರಂಭ’

0

ಸಮಾಜದಲ್ಲಿ ಪ್ರಜ್ಞಾವಂತ ನಾಗರಿಕರಾಗಿ ಬದುಕಿ: ಲಕ್ಷ್ಮೀಕಾಂತ ರೈ ಅನಿಕೂಟೇಲ್

ಪುತ್ತೂರು: ಬೋಳ್ವಾರಿನ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಹಿರಿಯ ವಿದ್ಯಾರ್ಥಿಗಳಿಗೆ ‘ಬೀಳ್ಕೊಡುಗೆ ಸಮಾರಂಭ’ ಜರುಗಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಲಕ್ಷ್ಮೀಕಾಂತ ರೈ ಅನಿಕೂಟೇಲ್ ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ವಿಶೇಷ ಉಪನ್ಯಾಸ ನೀಡಿದ ಅವರು, ಒಬ್ಬ ವಿದ್ಯಾರ್ಥಿಯ ಬೆಳವಣಿಗೆಯಲ್ಲಿ ಹಾಸ್ಟೆಲ್ ಜೀವನ ಅತ್ಯಂತ ಮಹತ್ತರವಾದ ಕೊಡುಗೆ ನೀಡುತ್ತದೆ. ಸಾಮಾಜಿಕ ಜೀವನ ಹೇಗೆ ನಡೆಸಬೇಕು ಎನ್ನುವ ಅನುಭವವನ್ನು ಹಾಸ್ಟೆಲ್ ಜೀವನ ಕಲಿಸುತ್ತದೆ. ಹಾಸ್ಟೆಲ್, ಕಾಲೇಜು ನೀಡುವ ಸವಲತ್ತುಗಳನ್ನು ಸರಿಯಾಗಿ ಬಳಸಿ ಸಾಧನೆ ಮಾಡಬೇಕು. ಪ್ರಸ್ತುತ ವಿದ್ಯಾರ್ಥಿ ಜೀವನದಲ್ಲಿ ಅಂಕಗಳು ಮುಖ್ಯ ಪಾತ್ರವನ್ನು ವಹಿಸುತ್ತಿದೆ. ವಿದ್ಯಾರ್ಥಿಗಳು ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸುವ ಮೂಲಕ ನಿರ್ದಿಷ್ಟ ಗುರಿಯನ್ನು ತಲುಪಿ, ವಿದ್ಯಾಸಂಸ್ಥೆಯ, ವಿದ್ಯಾರ್ಥಿ ನಿಲಯದ ರಾಯಭಾರಿಗಳಾಗಬೇಕು ಎಂದು ಹೇಳಿದರು. ಇಂದು ಬೀಳ್ಕೊಡುಗೆ ಪಡೆದು ಹೊರ ಹೋಗುತ್ತಿರುವ ಹಿರಿಯ ವಿದ್ಯಾರ್ಥಿಗಳು ತಮ್ಮ ಹೆತ್ತವರ ನಿರೀಕ್ಷೆಗೆ ತಕ್ಕಂತೆ ನಡೆದುಕೊಂಡರೆ ಸಾಲದು, ಜೊತೆಗೆ ಸಮಾಜದ ನಿರೀಕ್ಷೆಗೂ ತಕ್ಕ ರೀತಿಯಲ್ಲಿ ನಡೆದುಕೊಂಡಾಗ ಮಾತ್ರ ನಾವು ವಿದ್ಯೆ ಕಲಿತದ್ದಕ್ಕೂ ಸಾರ್ಥಕತೆ ಪಡೆಯುತ್ತದೆ. ಕೇವಲ ನಮ್ಮ ಕುಟುಂಬ ನಿರ್ವಹಣೆಗೆ ದುಡಿಯುವುದಷ್ಟೇ ಅಲ್ಲ, ದೇಶವನ್ನು ಮುಖ್ಯವಾಹಿನಿಗೆ ತರಲು ನಮ್ಮದೂ ಒಂದು ಅಳಿಲು ಸೇವೆ ಎಂಬಂತೆ ಸೇವೆ ಒದಗಿಸಿದಾಗ ಮಾತ್ರ ನಮ್ಮ ಶ್ರಮ ಸಾರ್ಥಕತೆ ಪಡೆಯುತ್ತದೆ. ಸಮಾಜದಲ್ಲಿ ಪ್ರಜ್ಞಾವಂತ ನಾಗರಿಕರಾಗಿ ಬದುಕಿ ಎಂದು ಕರೆನೀಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇನ್ನೊರ್ವ ಅತಿಥಿ ಪುತ್ತೂರಿನ ಬಿರುಮಲೆ ಬೆಟ್ಟದಲ್ಲಿರುವ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ನಿಲಯಪಾಲಕ ಚಾಂದ್ ಪಟೇಲ್ ಸೈದಾಪುರ ಮಾತನಾಡಿ, ಹಾಸ್ಟೆಲ್ ಜೀವನ ಅದ್ಭುತವಾದ ಅನುಭವಗಳ ಬುತ್ತಿಯನ್ನು ತೆರೆದಿಡುತ್ತವೆ. ಈ ಅನುಭವಗಳು ನಮ್ಮ ಜೀವನದ ಪಯಣದಲ್ಲಿ ಸಹಕಾರಿಯಾಗುತ್ತವೆ. ಇಂತಹ ಅನುಭವಗಳಿಂದ ಕಲಿಯುವುದು ಬಹಳಷ್ಟಿದೆ ಎಂದು ನುಡಿದರು.

ಬೋಳ್ವಾರಿನ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ನಿಲಯಪಾಲಕ ಗಣಪಯ್ಯ ನಾಯ್ಕ್ ಮಾತನಾಡಿ, ವಿದ್ಯಾರ್ಥಿಗಳು ಮತ್ತು ವಿದ್ಯ ನಿಲಯದ ಸಂಬಂಧ ಮತ್ತು ಕೊಂಡಿ ಎಂದಿಗೂ ಕಳಚಬಾರದು. ಅದು ಮುಂದುವರಿಯುತ್ತಾ ಸಾಗಬೇಕು. ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸಮಾಜದ ಆಧಾರ ಸ್ತಂಭವಾಗಬೇಕು ಎಂದು ಶುಭಹಾರೈಸಿದರು. ವೇದಿಕೆಯಲ್ಲಿ ವಿದ್ಯಾರ್ಥಿ ನಿಲಯದ ಅಡುಗೆ ಸಿಬ್ಬಂದಿ ಹರೀಶ್ ಎಸ್., ಜೋಗಿಶ್ ಹಾಗೂ ಹೊನ್ನಪ್ಪ ಜಿ, ವಿದ್ಯಾರ್ಥಿ ನಿಲಯದ ವಿದ್ಯಾರ್ಥಿ ಅಧ್ಯಕ್ಷ ಪ್ರಾಣೇಶ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 564 ಅಂಕಗಳನ್ನು ಪಡೆದ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿ ಸಚಿನ್ ನನ್ನು ಸನ್ಮಾನಿಸಲಾಯಿತು. ಜೊತೆಗೆ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಇದೇ ವೇಳೆ ಅಂತಿಮ ವರ್ಷದ ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ವಿದ್ಯಾರ್ಥಿ ಮಂಜುನಾಥ್ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here