ಪುತ್ತೂರು: ಕರ್ನಾಟಕ ಗಮಕ ಕಲಾ ಪರಿಷತ್ ದ.ಕ.ಜಿಲ್ಲೆ, ಪುತ್ತೂರು ಘಟಕದ ವತಿಯಿಂದ ಗಮಕ ವಾಚನ- ವ್ಯಾಖ್ಯಾನ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜೂ.16ರಂದು ಶಾರದಾ ಭಜನಾ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಿವೃತ್ತ ಪ್ರಾಂಶುಪಾಲರು ಪ್ರೊ.ವೇದವ್ಯಾಸ ರಾಮಕುಂಜ ಅವರು ಮಾತನಾಡಿ ಗಮಕ ಕಲೆಯು ಅತ್ಯಂತ ಪಾವಿತ್ರ್ಯತೆಯನ್ನು ಹೊಂದಿದ್ದು ಸಾಮಾಜಿಕ, ಧಾರ್ಮಿಕ, ಬೌದ್ಧಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ನೆಲೆಗಳಲ್ಲಿ ಉನ್ನತ ಮೌಲ್ಯಗಳನ್ನು ಹೊಂದಿದೆ. ಮುಂದೆ ಮನೆ ಮನೆಗಳಲ್ಲಿ ಉತ್ತಮ ಆಶಯವುಳ್ಳ ಅತ್ಯಂತ ಕಡಿಮೆ ವೆಚ್ಚದಲ್ಲಿ ಆಗುವಂತಹ ಗಮಕ ಕಾರ್ಯಕ್ರಮವನ್ನು ಹಮ್ಮಿಕೊಂಡು, ಕುಟುಂಬಗಳಲ್ಲಿ ಸಾಮರಸ್ಯ ಬೆಳೆಯುವಂತೆ ಮಾಡಬೇಕು ಎಂಬ ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು, ಕರ್ನಾಟಕ ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷ ಮಧೂರು ಮೋಹನ ಕಲ್ಲೂರಾಯರು ಉದ್ಘಾಟಿಸಿ ಶುಭಹಾರೈಸಿದರು. ಗೌರವಾಧ್ಯಕ್ಷ ಭಾಸ್ಕರ ಬಾರ್ಯ ಪ್ರಾಸ್ತಾವಿಕ ನುಡಿಗಳನ್ನಾಡಿ ಅತಿಥಿಗಳನ್ನು ಪರಿಚಯಿಸಿದರು. ಕಳೆದ ಮಹಾಸಭೆಯಲ್ಲಿ ಆಯ್ಕೆಯಾದ ಪದಾಧಿಕಾರಿಗಳನ್ನು ಸ್ವಾಗತಿಸಿ ಅಭಿನಂದಿಸಲಾಯಿತು. ಬಳಿಕ, ರಾಘವಾಂಕ ಕವಿ ವಿರಚಿತ ಸತ್ಯಹರಿಶ್ಚಂದ್ರ ಮಹಾಕಾವ್ಯದಿಂದ ಆಯ್ದುಕೊಂಡ ’ವಿಶ್ವೇಶ್ವರ ಸಾಕ್ಷಾತ್ಕಾರ’ ಎಂಬ ಭಾಗವನ್ನು ಗಮಕಿ ಜಯಂತಿ ಹೆಬ್ಬಾರ್ ಅವರು ವಾಚಿಸಿ, ಪ್ರೊ. ಮಧೂರು ಮೋಹನ ಕಲ್ಲೂರಾಯರು ನಿರೂಪಣಾ ವ್ಯಾಖ್ಯಾನ ಗೈದು ಗಮಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸಭಾಧ್ಯಕ್ಷರು ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಸದಸ್ಯೆ ಪ್ರೇಮಲತಾ ರಾವ್ ಸ್ವಾಗತಿಸಿದರು ಮತ್ತು ಜಯಲಕ್ಷ್ಮಿ ವಿ.ಭಟ್ ವಂದಿಸಿದರು. ಮಾ. ಸನ್ಮಯ್ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಶಂಕರಿ ಶರ್ಮ ಕಾರ್ಯಕ್ರಮ ನಿರ್ವಹಿಸಿದರು.