ಜೂ. 21ರಂದು “ಆರಾಟ” ಕನ್ನಡ ಸಿನಿಮಾ ತೆರೆಗೆ

0

ಪುತ್ತೂರು: ಪಿಎನ್ ಆರ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ತಯಾರಾದ ಪುಷ್ಪರಾಜ್ ರೈ ಮಲಾರ ಬೀಡು ನಿರ್ದೇಶನದ “ಆರಾಟ” ಕನ್ನಡ ಸಿನಿಮಾ ಜೂ.21 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದ್ದು ಪುತ್ತೂರಿನಲ್ಲಿ ಜಿ.ಎಲ್.ಒನ್ ಮಾಲ್‌ನಲ್ಲಿರುವ ಭಾರತ್ ಸಿನಿಮಾಸ್‌ನಲ್ಲಿ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ ಎಂದು ಚಿತ್ರದ ನಿರ್ದೇಶಕ ಪುಷ್ಪರಾಜ ಮಲಾರ್ ಬೀಡು ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.


ಚಿತ್ರದ ಎರಡು ಹಾಡುಗಳು ಹಾಗೂ ಟೀಸರ್ ಮತ್ತು ಟ್ರೈಲರ್ ಗಳನ್ನು ಕನ್ನಡದ ಹೆಸರಾಂತ ಯೂಟ್ಯೂಬ್ ಚಾನೆಲ್ ಆನಂದ್ ಆಡಿಯೋ ಮೂಲಕ ಬಿಡುಗಡೆಗೊಳಿಸಲಾಗಿದ್ದು ಈಗಾಗಲೇ ಜನಮನವನ್ನು ಮನಸೂರೆಗೊಂಡಿದೆ.
“ಕರ್ನಾಟಕ ಮತ್ತು ಕೇರಳ ರಾಜ್ಯದ ಗಡಿಭಾಗಗಳಾದ ಮುಡಿಪು, ಆನೇಕಲ್ಲು, ಉಪ್ಪಳ, ಮಂಗಲ್ಪಾಡಿ ಹಾಗೂ ಕುಬಣೂರು ಪರಿಸರದಲ್ಲಿ ಸಿನಿಮಾ ಚಿತ್ರೀಕರಣಗೊಂಡಿದೆ. ಸುಮಾರು 20 ದಿನಗಳ ಚಿತ್ರೀಕರಣ ಎರಡು ಹಂತಗಳಲ್ಲಿ ನಡೆದಿದ್ದು ಪಿಎನ್ ಆರ್ ಬ್ಯಾನರ್ ನಲ್ಲಿ ನಿರ್ಮಿಸಿದ “ಆರಾಟ” ಕನ್ನಡ ಚಲನಚಿತ್ರಕ್ಕೆ ರಾಘವೇಂದ್ರ ಹೊಳ್ಳ ಟಿ, ರಾಂಪ್ರಸಾದ್ ಕೆ, ನಿತೇಶ್ ಮಾಡಮ್ಮೆ ಹಾಗೂ ಸ್ನೇಹಿತರು ಬಂಡವಾಳ ಹೂಡಿದ್ದಾರೆ. ಸಿನಿಮಾದ ಮೂಲಕತೆ ರಾಘವೇಂದ್ರ ಹೊಳ್ಳ ಅವರದ್ದಾಗಿದ್ದು ಚಿತ್ರಕತೆ ಸಂಭಾಷಣೆ ನಿರ್ದೇಶನದ ಜವಾಬ್ದಾರಿಯನ್ನು ನಾನು ವಹಿಸಿದ್ದೇನೆ ಎಂದವರು ಹೇಳಿದರು.


ನಿರ್ದೇಶನ ತಂಡದಲ್ಲಿ ಜಯರಾಜ್ ಹೆಜಮಾಡಿ, ರೋಷನ್ ಆಳ್ವ, ಹರ್ಷರಾಜ್ ಬಂಟ್ವಾಳ, ಅಭಿ ಬೋಳ್ಯಾರ್, ಸುಶಿನ್ ದುಡಿದಿದ್ದಾರೆ. ಕ್ಯಾಮರಾ ರವಿ ಸುವರ್ಣ, ಸಂಕಲನ ದಾಮು ಕನಸೂರ್, ಸಂಗೀತ ರಾಘವೇಂದ್ರ ಬೀಜಾಡಿ ಹಾಗೂ ಶಮೀರ್ ಮುಡಿಪು, ಸಾಹಿತ್ಯ ಹೆಚ್ ಎಸ್ ವೆಂಕಟೇಶ್ ಮೂರ್ತಿ ಹಾಗೂ ಯೋಗೀಶ್ ಅಡಕಳಕಟ್ಟೆ, ಗಾಯಕರು ಶಮೀರ್ ಮುಡಿಪು ಹಾಗೂ ಶಾಲಿನಿ ಎಸ್ ಆರ್, ವಸ್ತ್ರ ವಿನ್ಯಾಸ ಶರತ್ ಪೂಜಾರಿ ಮಂಗಳೂರು, ಪ್ರಸಾಧನ ಚರಣ್ ರಾಜ್ ಪಚ್ಚಿನಡ್ಕ, ಕಲಾ ವಿನ್ಯಾಸ ಹರೀಶ್ ಆಚಾರ್ಯ, ಸ್ಥಿರ ಚಿತ್ರಣ ನವನೀತ್ ವಿಠ್ಠಲ್ ಪಬ್ಲಿಸಿಟಿ ಯಶ್ವಿನ್ ಕೆ ಶೆಟ್ಟಿಗಾರ್ ಇವರು ನಿರ್ವಹಿಸಿದ್ದಾರೆ. ನಿರ್ಮಾಣ ಮೇಲ್ವಿಚಾರಕರು ಭಾಗ್ಯರಾಜ್ ನಾವೂರು ಕಾರ್ಯ ನಿರ್ವಹಿಸಿದ್ದಾರೆ ಎಂದು ಪುಷ್ಪರಾಜ್ ತಿಳಿಸಿದ್ದಾರೆ.


ಕಾಂತರದಲ್ಲಿ ನಟಿಸಿದ ರಂಜನ್ ತಾರಾಗಣದಲ್ಲಿ:
ತಾರಾಗಣದಲ್ಲಿ ಸ.ಹಿ.ಪ್ರ ಶಾಲೆ ಕಾಸರಗೋಡು, ಕಾಂತಾರ, ಲಚ್ಚು ಚಿತ್ರದಲ್ಲಿ ನಟಿಸಿ ಇದೀಗ ಮಗ್ಗಿ ಪುಸ್ತಕ ಚಿತ್ರದ ನಟಿಸುತ್ತಿರುವ ರಂಜನ್ ವೀಶೆಷ ಪಾತ್ರ ಮಾಡಿದ್ದಾರೆ. ಚಿತ್ರದಲ್ಲಿ ನಾಯಕನಾಗಿ ಕಥೆಯೇ ಇರುತ್ತದೆ ಎಂದು ರಂಜನ್ ತಿಳಿಸಿದ್ದಾರೆ. ಚಿತ್ರದಲ್ಲಿ ವೆನ್ಯ ರೈ, ಜ್ಯೋತಿಶ್ ಶೆಟ್ಟಿ, ಸುನಿಲ್ ನೆಲ್ಲಿಗುಡ್ಡೆ, ಅನಿಲ್ ರಾಜ್ ಉಪ್ಪಳ, ಚೇತನ್ ರೈ ಮಾಣಿ, ರವಿ ರಾಮಕುಂಜ, ಸುರೇಶ್ ಮಂಜೇಶ್ವರ, ಪ್ರಭಾಕರ್ ಕಾಸರಗೋಡು , ತೇಜಸ್ವಿನಿ ಕಿಶೋರ್, ಸಂದೀಪ್ ಭಕ್ತ, ಆಶಾ ಮಾರ್ನಾಡ್, ನಯನ ಸಾಲ್ಯಾನ್, ದೀಕ್ಷಾ ಭಾಗ್ಯರಾಜ್ ನಾವೂರು, ವಿನೋದ್ ಶೆಟ್ಟಿ ಸುರತ್ಕಲ್, ಉದಯ ಶೆಟ್ಟಿ ಇಡ್ಯಾ, ಸಂಕೇತ್, ಉತ್ಸವ್ ವಾಮಂಜೂರ್, ತುಳಸಿಧರನ್, ಶಶಿ ಗುಜರನ್ ಪಡುಬಿದ್ರಿಮೊದಲಾದವರಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ರಾಮಪ್ರಸಾದ್ , ಸಹಾಯಕ ನಿರ್ದೇಶಕ ಜಯರಾಜ್, ಪ್ರೊಡಕ್ಷನ್ ಭಾಗ್ಯರಾಜ್, ಚಿತ್ರದ ವಿತರಕ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ ಉಪಸ್ಥಿತರಿದ್ದರು.

ಕಥಾ ಸಾರಾಂಶ:
ಊರಿನ ದುರ್ಗಾಪರಮೇಶ್ವರಿ ದೇವರು ಉತ್ಸವ ಮುಗಿಸಿ ಜಳಕಕ್ಕಾಗಿ ನದಿ ದಂಡೆಯಲ್ಲಿರುವ ಪಕ್ಕದ ಊರಿಗೆ ಬರುವುದು ವಾಡಿಕೆ. ಆರಾಟಕ್ಕೆ ಬರುವ ದಾರಿಯಲ್ಲಿ ಕಟ್ಟೆಯಲ್ಲಿ ಪೂಜೆ ಆಗಿಯೇ ದೇವರು ಜಳಕವನ್ನಾಡುವರು. ಕಾಲಕ್ರಮೇಣ ಕಟ್ಟೆಯು ನಿರ್ಲಕ್ಷ್ಯಕ್ಕೊಳಗಾಗಿ ಕಟ್ಟೆಯ ಯಜಮಾನಿಕೆಯ ಮನೆತನಕ್ಕೆ ಬರುವ ನ್ಯಾಯ ಏನು, ಬೇಜವಾಬ್ದಾರಿ ತಂದೆಯ ಮನೆಯಲ್ಲಿ ಆಗುವ ಅನಾಹುತಗಳೇನು ಪ್ರಾಮಾಣಿಕವಾಗಿ ದೇವರನ್ನು ನಂಬಿದರೆ ನಮ್ಮ ಕಷ್ಟ ಕಾಲಕ್ಕೆ ದೇವರು ಯಾವ ರೀತಿ ಸಹಾಯ ಮಾಡುತ್ತಾರೆ ಇದೆಲ್ಲದಕ್ಕೂ ಉತ್ತರವನ್ನು “ಆರಾಟ” ಸಿನಿಮಾದಲ್ಲಿ ನೋಡಬಹುದು ಎಂದು ಚಿತ್ರ ತಂಡ ತಿಳಿಸಿದೆ.

ಕರಾವಳಿಯ ಜೀವನಕ್ಕೆ ಹತ್ತಿರವಾದ ಚಿತ್ರ:
“ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದ್ದು ಕರಾವಳಿಯ ಜನಜೀವನಕ್ಕೆ ತೀರಾ ಹತ್ತಿರವಾಗಿದೆ. ಹಾಡುಗಳು ಚೆನ್ನಾಗಿದ್ದು ಸುಂದರವಾದ ಲೊಕೇಶನ್ ನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಜನರಿಗೆ ಸಂಪೂರ್ಣ ಮನೋರಂಜನೆ ನೀಡಲು ಬೇಕಾದ ಎಲ್ಲಾ ಅಂಶಗಳು ಸಿನಿಮಾದಲ್ಲಿದ್ದು ಪ್ರೇಕ್ಷಕರು ಖಂಡಿತ ಇಷ್ಟಪಡುತ್ತಾರೆ” ಎಂದು ನಿರ್ದೇಶಕ ಪುಷ್ಪರಾಜ ಮಲಾರ್ ಬೀಡು ತಿಳಿಸಿದರು.

LEAVE A REPLY

Please enter your comment!
Please enter your name here