ಸುಳ್ಯ : ಕಾಂತಮಂಗಲದಲ್ಲಿ  ವ್ಯಕ್ತಿಯ ಕೊಲೆ ಪ್ರಕರಣ- ಆರೋಪಿ ಎಡಮಂಗಲ ನಿವಾಸಿಯ ಬಂಧನ

0

ಪುತ್ತೂರು:ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಕಾಂತಮಂಗಲ ಶಾಲಾ ಜಗಲಿಯಲ್ಲಿ ಕೊಲೆಗೈದ ಸ್ಥಿತಿಯಲ್ಲಿ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾಗಿದ್ದ ಪ್ರಕರಣವನ್ನು ಭೇದಿಸಿರುವ ಪೊಲೀಸರು ಇದೊಂದು ಕೊಲೆ ಎನ್ನುವುದನ್ನು ಪತ್ತೆ ಮಾಡಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ವಿರಾಜಪೇಟೆ ನಿವಾಸಿ ವಸಂತ(45ವ.)ಕೊಲೆಯಾದವರು,ಕಡಬ ತಾಲೂಕಿನ ಎಡಮಂಗಲದ ಲೆಕ್ಕೆ ಶ್ರೀಮಜಲು ನಿವಾಸಿ ಉದಯ ಕುಮಾರ್ ನಾಯ್ಕ್ (35ವ.)ಕೃತ್ಯವೆಸಗಿದ ಆರೋಪಿಯಾಗಿದ್ದು ಪೊಲೀಸರು ಆತನನ್ನು ಬಂಽಸಿದ್ದಾರೆ.ಜೂ.16ರ ರಾತ್ರಿ ವಸಂತ ಅವರ ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆಗೈಯಲಾಗಿತ್ತು.ಜೂ.17ರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.


ವಸಂತ ಅವರು ವಿರಾಜಪೇಟೆಯಿಂದ ಕೆಲಸಕ್ಕೆಂದು ಬಂದಿದ್ದು ಸುಳ್ಯ,ಕಡಬ,ಕಾಣಿಯೂರು ಹೀಗೇ ಕರೆದಲ್ಲಿಗೆ ಹೋಗಿ ಕೆಲಸ ಮಾಡಿಕೊಂಡಿದ್ದರು.ಜೂ.16ರಂದು ಕಾಣಿಯೂರು ಭಾಗದಲ್ಲಿ ಕೆಲಸ ಮಾಡಿದ್ದ ಅವರು ಸಂಬಳ ಪಡೆದುಕೊಂಡು ಅಲ್ಲಿಂದ ಸುಳ್ಯಕ್ಕೆ ಬಂದಿದ್ದರು.ಸುಳ್ಯದಲ್ಲಿ ಬಾರೊಂದಕ್ಕೆ ಹೋಗಿ ಬಂದಿದ್ದ ಅವರು ಅಲ್ಲಿನ ಬಸ್ ತಂಗುದಾಣವೊಂದಕ್ಕೆ ಬಂದಿದ್ದರು.


ಬಸ್ ತಂಗುದಾಣದಲ್ಲಿ ಜೊತೆಯಾದರು:
ವಸಂತ ಅವರು ಸುಳ್ಯದ ಬಸ್ ತಂಗುದಾಣಕ್ಕೆ ಬಂದಿದ್ದ ವೇಳೆ ಆರೋಪಿ ಉದಯ ಕುಮಾರ್ ಕೂಡಾ ಬಂದಿದ್ದ.ಅಲ್ಲಿ ಪರಸ್ಪರ ಮಾತನಾಡಿಕೊಂಡ ಅವರೊಳಗೆ ಒಂದು ರೀತಿಯ ಪರಿಚಯ ಬೆಳೆದು ಇಬ್ಬರೂ ಪಕ್ಕದಲ್ಲಿರುವ ಸನ್ನಿಧಿ ಬಾರ್‌ಗೆ ಹೋಗಿ ಪೆಗ್ ಹಾಕಿ ಮತ್ತೆ ಬಸ್ ತಂಗುದಾಣಕ್ಕೆ ಬಂದಿದ್ದರು.ಈ ವೇಳೆ ವಸಂತ ಅವರು, ನನಗೇಕೋ ಸ್ವಲ್ಪ ಮಲಗಬೇಕೆಂದನಿಸುತ್ತಿದೆ ಎಂದು ಉದಯ ಕುಮಾರ್ ಬಳಿ ಹೇಳಿಕೊಂಡರು.


ಇಲ್ಲಿ ಬೇಡ..ಕಾಂತಮಂಗಲಕ್ಕೆ ಹೋಗೋಣ:
ನನಗೆ ಮಲಗಬೇಕೆಂದನಿಸುತ್ತಿದೆ ಎಂದು ವಸಂತ ಅವರು ಹೇಳಿದಾಗ ಪ್ರತಿಕ್ರಿಯಿಸಿದ್ದ ಉದಯ ಕುಮಾರ್ ನಾಯ್ಕ್ ಇಲ್ಲಿ ಮಲಗಿದರೆ ಪೊಲೀಸರು ಬಂದು ನಮ್ಮನ್ನು ಕೊಂಡು ಹೋಗುತ್ತಾರೆ.ಆದ್ದರಿಂದ ಇಲ್ಲಿ ಮಲಗೋದು ಬೇಡ.ನಾವು ಕಾಂತಮಂಗಲಕ್ಕೆ ಹೋಗೋಣ ಎಂದು ಹೇಳಿದ್ದ.ಬಳಿಕ ಅವರೀರ್ವರೂ ಮತ್ತೆ ಅಲ್ಲಿಂದ ಬಾರ್‌ಗೆ ಹೋಗಿ ಅಲ್ಲಿಂದ ರಿಕ್ಷಾವೊಂದರಲ್ಲಿ ಕಾಂತಮಂಗಲ ಶಾಲಾ ಬಳಿಗೆ ಬಂದು ಇಬ್ಬರೂ ಶಾಲೆಯ ಜಗಲಿಗೆ ಮಲಗಲೆಂದು ಹೋಗಿದ್ದರು.


ಸಣ್ಣ ಜಗಳ..ಕೊಲೆಯೊಂದಿಗೆ ಅಂತ್ಯ:
ತಾವು ಬರುವಾಗಲೇ ಬಾರ್‌ನಿಂದ ತಂದಿದ್ದ ಎರಡು ಸ್ಯಾಚೆಟ್‌ಗಳಲ್ಲಿದ್ದ ಮದ್ಯವನ್ನು ಕುಡಿದು ಇನ್ನೇನು ಕಾಂತಮಂಗಲ ಶಾಲೆಯ ಜಗಲ್ಲಿಯಲ್ಲಿ ಮಲಗಲು ಸಿದ್ಧತೆ ನಡೆಸುತ್ತಿದ್ದ ವೇಳೆ ವಸಂತ ಮತ್ತು ಉದಯ ಕುಮಾರ್ ನಾಯ್ಕ್ ಮಧ್ಯೆ ಸಣ್ಣ ಜಗಳವೊಂದು ನಡೆದಿದೆ.ಈ ವೇಳೆ ವಸಂತ ಅವರು ಉದಯ ಕುಮಾರ್ ಕೆನ್ನೆಗೊಂದು ಏಟು ಕೊಟ್ಟರು.ಇದರಿಂದ ಸಿಟ್ಟುಗೊಂಡ ಉದಯ ಕುಮಾರ್ ನಾಯ್ಕ್ ಕಲ್ಲೊಂದನ್ನು ಎತ್ತಿ ವಸಂತ ಅವರ ತಲೆಗೆ ಹಾಕಿ ಬಳಿಕ ದೊಡ್ಡ ಕಲ್ಲೊಂದನ್ನು ತಲೆಗೆ ಎತ್ತಿ ಹಾಕಿ ಮಲಗಿದ್ದ.ಕಲ್ಲೇಟಿನಿಂದ ತಲೆಗೆ ತೀವ್ರ ಗಾಯಗೊಂಡಿದ್ದ ವಸಂತ ಅವರು ಮೃತಪಟ್ಟಿದ್ದರು ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ವಸಂತರಲ್ಲಿದ್ದ 800 ರೂ.ಗಳನ್ನು ಆರೋಪಿಯು ಕಸಿದುಕೊಳ್ಳಲು ಯತ್ನಿಸಿದ ವೇಳೆ ಅವರೊಳಗೆ ಜಗಳ ಆರಂಭಗೊಂಡಿತ್ತು ಎನ್ನಲಾಗಿದೆ.


ಕೃತ್ಯದ ಬಳಿಕ ಅಲ್ಲೇ ಮಲಗಿದ್ದ ಆರೋಪಿ:
ವಸಂತ ಅವರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿದ್ದ ಆರೋಪಿ ಉದಯ ಕುಮಾರ್ ನಾಯ್ಕ್ ಬಳಿಕ ಅಲ್ಲೇ ವಸಂತರ ಬಳಿಯೇ ಮಲಗಿದ್ದ.ಜೂ.17೭ರಂದು ಬೆಳಿಗ್ಗೆ ನೋಡಿದಾಗ ವಸಂತ ಅವರು ಮೃತಪಟ್ಟಿದ್ದ ವಿಚಾರ ತಿಳಿದು ಅಲ್ಲಿಂದ ಹೊರಟು ಬಂದಿದ್ದ.


ಸಿಸಿ ಟಿವಿಯಲ್ಲಿ ಸೆರೆಯಾಗಿದ್ದ ದೃಶ್ಯ:
ವಸಂತ ಮತ್ತು ಆರೋಪಿ ಉದಯ ಕುಮಾರ್ ನಾಯ್ಕ್ ಜೊತೆಯಾಗಿ ಬಾರ್‌ಗೆ ಹೋಗಿ ವಾಪಸ್ ಬಂದು ಮತ್ತೆ ಬಾರ್‌ಗೆ ಹೋಗಿ ಅಲ್ಲಿಂದ ರಿಕ್ಷಾದಲ್ಲಿ ಹೋಗಿದ್ದ ದೃಶ್ಯಗಳೆಲ್ಲವೂ ಸುಳ್ಯ ವಿವೇಕಾನಂದ ಸರ್ಕಲ್‌ನಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.


ಆರೋಪಿಯ ಮಗಳು ಕಾಂತಮಂಗಲ ಹಾಸ್ಟೆಲ್‌ನಲ್ಲಿದ್ದು ವಿದ್ಯಾಭ್ಯಾಸ ಮಾಡುತ್ತಿದ್ದರು.ಆರೋಪಿಯು ಆಗಾಗ ಹಾಸ್ಟೆಲ್‌ಗೆ ಹೋಗಿ ಬರುತ್ತಿದ್ದುದರಿಂದ ಕಾಂತಮಂಗಲ ವ್ಯಾಪ್ತಿಯ ಸಂಪೂರ್ಣ ಮಾಹಿತಿ ಹೊಂದಿದ್ದರಿಂದ ವಸಂತ ಅವರನ್ನು ಕಾಂತಮಂಗಲಕ್ಕೆ ಕರೆದೊಯ್ದಿದ್ದ ಎನ್ನುವುದೂ ತನಿಖೆಯಿಂದ ತಿಳಿದು ಬಂದಿದೆ.ಜಿಲ್ಲಾ ಪೊಲೀಸ್ ಅಽಕ್ಷಕ ಸಿ.ಬಿ.ರಿಷ್ಯಂತ್, ಅಡಿಷನಲ್ ಎಸ್ಪಿ ರಾಜೇಂದ್ರ ಡಿ.ಎಸ್., ಪುತ್ತೂರು ಡಿವೈಎಸ್ಪಿ ಅರುಣ್‌ನಾಗೇ ಗೌಡ ಮಾರ್ಗದರ್ಶನದಲ್ಲಿ ಸುಳ್ಯ ವೃತ್ತ ನಿರೀಕ್ಷಕ ಸತ್ಯನಾರಾಯಣ ನೇತೃತ್ವದಲ್ಲಿ ಪುತ್ತೂರು ನಗರ ಠಾಣೆ ಇನ್ಸ್‌ಪೆಕ್ಟರ್ ಸತೀಶ್ ಜಿ.ಜೆ.,ಸುಳ್ಯ ಎಸ್.ಐ.ಮಹೇಶ್, ಸುಬ್ರಹ್ಮಣ್ಯ ಎಸ್.ಯ.ಕಾರ್ತಿಕ್,ಸಿಬ್ಬಂದಿಗಳಾದ ಉದಯ್ ಗೌಡ,ಪ್ರಕಾಶ್,ಉದಯ್ ಅನಿಲ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


ಸುಳಿವು ನೀಡಿದ ಮದ್ಯದ ಸ್ಯಾಚೆಟ್…
ಕಾಂತಮಂಗಲ ಶಾಲೆಯ ಜಗಲಿಯಲ್ಲಿ ಮದ್ಯದ ಎರಡು ಸ್ಯಾಚೆಟ್‌ಗಳು ಬಿದ್ದಿತ್ತು.ಈ ಸ್ಯಾಚೆಟ್‌ನಲ್ಲಿದ್ದ ಕ್ಯೂಆರ್‌ಕೋಡ್ ಮೂಲಕ, ಮದ್ಯದ ಸ್ಯಾಚೆಟ್‌ಗಳನ್ನು ಯಾವ ಮದ್ಯದಂಗಡಿಯಿಂದ ಪಡೆದುಕೊಂಡದ್ದು ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಸ್ಯಾಚೆಟ್‌ಗಳನ್ನು ಪುತ್ತೂರಿನಲ್ಲಿರುವ ಪಾನೀಯ ನಿಗಮಕ್ಕೆ ಕಳುಹಿಸಿಕೊಟ್ಟಿದ್ದರು.ಕ್ಯೂಆರ್‌ಕೋಡ್ ತಪಾಸಣೆ ಮಾಡಿದಾಗ ಅದು ಸನ್ನಿಧಿ ಬಾರ್‌ನಿಂದ ಖರೀದಿ ಮಾಡಿದ್ದ ಸ್ಯಾಚೆಟ್ ಎನ್ನುವುದು ಖಚಿತವಾಗಿತ್ತು.ಇದರ ಆಧಾರದಲ್ಲಿ ತನಿಖೆ ಮುಂದುವರಿಸಿದ ಪೊಲೀಸರು, ಸಿಸಿಟಿವಿಯಲ್ಲಿ ಸೆರೆಯಾಗಿದ್ದ ದೃಷ್ಯಗಳು ಹಾಗೂ ಇತರ ಕೆಲವೊಂದು ಸುಳಿವುಗಳ ಆಧಾರದಲ್ಲಿ ಉದಯ ಕುಮಾರ್ ನಾಯ್ಕರೇ ಕೊಲೆ ಆರೋಪಿ ಎಂದು ಖಚಿತಪಡಿಸಿಕೊಂಡು ಆತನನ್ನು ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here