ಕಾಲ್ನಡಿಗೆ ಮೂಲಕ ಹಜ್‌ ಯಾತ್ರೆ ಪೂರೈಸಿದ ಅಬ್ದುಲ್‌ ಖಲೀಲ್‌ ನೌಶದ್‌ ನಾಳೆ ಊರಿಗೆ ವಾಪಸ್-ಪೆರಿಯಡ್ಕದಲ್ಲಿ ಸ್ವಾಗತ ಕಾರ್ಯಕ್ರಮ

0

ಉಪ್ಪಿನಂಗಡಿ: ಕರ್ನಾಟಕ ರಾಜ್ಯದಿಂದ ಪ್ರಥಮವಾಗಿ ಕಾಲು ನಡಿಗೆ ಮೂಲಕ ಮೆಕ್ಕಕ್ಕೆ ತೆರಳಿ ಹಜ್ ಕರ್ಮ ಪೂರೈಸಿದ ಉಪ್ಪಿನಂಗಡಿ ಸಮೀಪದ ಪೆರಿಯಡ್ಕದ ಅಬ್ದುಲ್ ಖಲೀಲ್ ಯಾ ನೌಶಾದ್ ಜೂ. 20ರಂದು ತನ್ನ ನಾಡು ಪೆರಿಯಡ್ಕಕ್ಕೆ ತಲುಪಲಿದ್ದು ಅವರಿಗೆ ಪೆರಿಯಡ್ಕ ಮೊಹಿಯುದ್ದೀನ್ ಜುಮಾ ಮಸೀದಿ ಮತ್ತು ಉಪ್ಪಿನಂಗಡಿ ಎಸ್.ಕೆ.ಎಸ್.ಎಸ್.ಎಫ್. ವತಿಯಿಂದ ಆದರ ಪೂರ್ವಕ ಸ್ವಾಗತ ಕಾರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪೆರಿಯಡ್ಕ ಮೊಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಕೆ.ಪಿ. ಬಶೀರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ಉಪ್ಪಿನಂಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ ಮಾತನಾಡಿ ಪೆರಿಯಡ್ಕ ಮಸೀದಿ ಜಮಾಅತ್‌ನ ಅಬ್ದುಲ್ ಖಲೀಲ್ 2023 ಜನವರಿ 30ರಂದು ಮಸೀದಿಯಲ್ಲಿ ಪ್ರಾರ್ಥನೆ ನೆರವೇರಿಸಿ ಹೊರಟಿದ್ದರು. ಅವರು ನಡಿಗೆ ಮೂಲಕ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ್, ಹರಿಯಾಣ, ಡೆಲ್ಲಿ, ಉತ್ತರ ಪ್ರದೇಶ, ಪಂಜಾಬ್ ದಾಟಿ ಪಾಕಿಸ್ತಾನದ ಗಡಿ ವಾಗಾ ಮೂಲಕ ಪಾಕಿಸ್ತಾನ ಪ್ರವೇಶ ಮಾಡಿದ್ದರು.


ಆ ಬಳಿಕ ಓಮನ್, ಯು.ಎ.ಇ., ಸೌದಿ ಅರೇಬಿಯಾದ ಮೂಲಕ ಒಟ್ಟು ಸುಮಾರು 8130 ಕಿಲೋ ಮೀಟರ್ ದೂರವನ್ನು ನಡಿಗೆ ಮೂಲಕ 1 ವರ್ಷ 2 ದಿವಸದಲ್ಲಿ ಕ್ರಮಿಸಿ 2024 ಫೆಬ್ರುವರಿ 8ರಂದು ಮೆಕ್ಕ ಪ್ರವೇಶಿಸಿದ್ದರು. ಅಲ್ಲಿ 4 ತಿಂಗಳು 26 ದಿವಸ ಅಲ್ಲಿಯೇ ಇದ್ದು, ಜೂ.16ರಂದು ಪವಿತ್ರ ಹಜ್ ಕರ್ಮವನ್ನು ಮುಗಿಸಿರುತ್ತಾರೆ. ಜೂ.19ರಂದು ರಾತ್ರಿ ಅಲ್ಲಿಂದ ಹೊರಟು ಜೂ.20ರಂದು ಬೆಳಿಗ್ಗೆ ಮಂಗಳೂರು ವಿಮಾನ ನಿಲ್ದಾಣ ತಲುಪಲಿದ್ದಾರೆ ಎಂದು ಅಬ್ದುಲ್ ಖಲೀಲ್ ಪಯಣದ ಬಗ್ಗೆ ಕೆ.ಪಿ. ಬಶೀರ್ ವಿವರಿಸಿದರು.


ಅಬ್ದುಲ್ ಖಲೀಲ್ ಆರ್ಥಿಕವಾಗಿ ಬಲಿಷ್ಠವಾಗಿ ಇಲ್ಲವಾದರೂ ಹೆಜ್ಜೆ ಹಾಕಿದ ಭಾರತದ ರಾಜ್ಯಗಳಲ್ಲಿ ಇತರೇ ದೇಶಗಳಲ್ಲಿ ಜಾತಿ, ಧರ್ಮವನ್ನು ಲೆಕ್ಕಿಸದೆ ಅವರಿಗೆ ಅಭೂತ ಪೂರ್ವವಾದ ಸಹಕಾರ ನೀಡಿದ್ದಾರೆ. ಇವರ ಯಾತ್ರೆಯ ಸಂದರ್ಭದಲ್ಲಿ ಸಹಕರಿಸಿದವರಿಗೆ ಪೆರಿಯಡ್ಕ ಜಮಾಅತ್ ಅಭಾರಿ ಆಗಿದ್ದು, ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.


ಜೂ. 20ರಂದು ಮಸೀದಿಯಲ್ಲಿ ಸನ್ಮಾನ:
ಜೂ. 20ರಂದು ಬೆಳಿಗ್ಗೆ ಮಂಗಳೂರು ವಿಮಾನ ನಿಲ್ದಾಣ ತಲುಪಿಲಿರುವ ಅಬ್ದುಲ್ ಖಲೀಲ್ ಅವರನ್ನು ಪೆರಿಯಡ್ಕ ಜಮಾಅತ್ ಪದಾಧಿಕಾರಿಗಳು ಬರಮಾಡಿಕೊಳ್ಳಲಿದ್ದಾರೆ. ಉಪ್ಪಿನಂಗಡಿ ಮಸೀದಿ ಬಳಿಯಲ್ಲಿ ಉಪ್ಪಿನಂಗಡಿ ಎಸ್.ಕೆ.ಎಸ್.ಎಸ್.ಎಫ್. ವತಿಯಿಂದ ಸ್ವಾಗತ ಕಾರ‍್ಯಕ್ರಮ ನಡೆಯಲಿದ್ದು, ಆ ಬಳಿಕ ಪೆರಿಯಡ್ಕದಲ್ಲಿ ಮಸೀದಿ ಮತ್ತು ಎಸ್.ಕೆ.ಎಸ್.ಎಸ್.ಎಫ್. ಪೆರಿಯಡ್ಕ ಸಮಿತಿ ವತಿಯಿಂದ ಸ್ವಾಗತ ಕಾರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜೂ. ೨೬ರಂದು ಅತೂರುನಲ್ಲಿ ಎಸ್.ಕೆ.ಎಸ್.ಎಸ್.ಎಫ್. ವತಿಯಿಂದಲೂ ಸನ್ಮಾನ ಕಾರ‍್ಯಕ್ರಮ ನಡೆಯಲಿದೆ ಎಂದು ಕೆ.ಪಿ. ಬಶೀರ್ ತಿಳಿಸಿದರು.


ಪತ್ರಿಕಾಗೋಷ್ಟಿಯಲ್ಲಿ ಎಸ್.ಕೆ.ಎಸ್.ಎಸ್.ಎಫ್. ಉಪ್ಪಿನಂಗಡಿ ಕ್ಲಸ್ಟರ್ ಕಾರ‍್ಯದರ್ಶಿ ಇಸ್ಮಾಯಿಲ್ ತಂಙಳ್, ಪೆರಿಯಡ್ಕ ಘಟಕದ ಅಧ್ಯಕ್ಷ ಶರೀಫ್, ಆತೂರು ಕ್ಲಸ್ಟರ್ ಅಧ್ಯಕ್ಷ ಸಿದ್ದಿಕ್ ಎಸ್.ಕೆ., ಪೆರಿಯಡ್ಕ ಮೊಹಿಯುದ್ದೀನ್ ಜುಮಾ ಮಸೀದಿ ಸದಸ್ಯ ಅಬ್ದುಲ್ ರಹಿಮಾನ್, ನೌಫಲ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here