ವಿದ್ಯಾರ್ಥಿಗಳ ಭೇಟಿ, ಬಸ್ ವ್ಯವಸ್ಥೆಯ ಬಗ್ಗೆ ಚರ್ಚೆ- ಸಿಟಿ ಬಸ್ ಬೇಡಿಕೆ ನೀಡಿದ ವಿದ್ಯಾರ್ಥಿಗಳು
ಪುತ್ತೂರು: ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಶಾಸಕ ಅಶೋಕ್ ರೈಗಳು ದಿಢೀರನೆ ಭೇಟಿ ನೀಡಿ ಬಸ್‌ಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳನ್ನು ಭೇಟಿಯಾಗಿ ರೂಟ್ ಬಸ್ ಸಂಚಾರದ ವ್ಯವಸ್ಥೆ ಮತ್ತು ಅವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಸರಕಾರಿ ಬಸ್ ಸರಿಯಾದ ಸಮಯಕ್ಕೆ ಬರುತ್ತಿಲ್ಲ, ಕೆಲವೊಂದು ಭಾರಿ ಬಸ್ಸೇ ಇರುವುದಿಲ್ಲ, ಬಸ್ ಖಾಲಿ ಇದ್ದರೂ ನಿಲ್ಲಿಸುವುದಿಲ್ಲ, ಬಸ್ ಸಮಯ ಪಾಲನೆಯಿಲ್ಲ, ನಾವು ಬಸ್ ನಿಲ್ದಾಣದಲ್ಲೇ ಬಸ್‌ಗಾಗಿ ಕಾಯುತ್ತಿದ್ದರೂ ಬಸ್ ಇಲ್ಲ ಎಂಬ ಬಗ್ಗೆ ಸಂಬಂಧಿಸಿದವರು ಯಾವುದೇ ಮಾಹಿತಿ ನೀಡುವುದಿಲ್ಲ. ಬೆಳಿಗ್ಗೆ ತಡವಾಗಿ ಬಸ್ ಬರ‍್ತದೆ, ಸಂಜೆ ಮನೆಗೆ ಹೋಗುವ ವೇಳೆ ಬಸ್ ಇರುವುದಿಲ್ಲ, ಇದ್ದರೂ ರಶ್ ಇರುತ್ತದೆ ಎಂಬ ದೂರುಗಳನ್ನು ಶಾಸಕರ ಬಳಿ ವಿದ್ಯಾರ್ಥಿಗಳು ಹೇಳಿದರು. ವಿದ್ಯಾರ್ಥಿಗಳು ಈ ಆರೋಪ ಮಾಡುವಾಗ ಸ್ಥಳೀಯ ಕೆಎಸ್‌ಆರ್‌ಟಿಸಿ ಅಧಿಕಾರಿಗಳೂ ಶಾಸಕರ ಜೊತೆಗಿದ್ದರು. ವಿದ್ಯಾರ್ಥಿಗಳು ಬಸ್ ಸಮಸ್ಯೆ ಬಗ್ಗೆ ಶಾಸಕರಲ್ಲಿ ಹೇಳುತ್ತಿರುವಾಗಲೇ ಅಧಿಕಾರಿಗಳು ಆ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದರು.
ಸಿಟಿ ಬಸ್ ಬೇಡಿಕೆ
ಪುತ್ತೂರು ಆಸುಪಾಸಿನ ವಿದ್ಯಾರ್ಥಿಗಳು ಸಿಟಿ ಬಸ್ ಬೇಡಿಕೆಯನ್ನು ಸಾಸಕರ ಮುಂದಿಟ್ಟಿದ್ದಾರೆ. ಸುಳ್ಯದಿಂದ ಬರುವ ಬಸ್ಸುಗಳು ಸಂಪ್ಯ ತಲುಪುವಾಗ ಬಸ್ ಫುಲ್ ಆಗುತ್ತದೆ ನಾವು ಕೈ ಹಿಡಿದರೆ ಬಸ್ಸು ನಿಲ್ಲಸುವುದಿಲ್ಲ. ಬಸ್ ನಿಲ್ಲಿಸದೇ ಇದ್ದರೆ ನಾವು ಏನು ಮಾಡುವುದು ಇದಕ್ಕಾಗಿ ನಮಗೆ ಸಿಟಿ ಬಸ್ ವ್ಯವಸ್ಥೆ ಮಾಡಿ ಎಂದು ಸಂಪ್ಯ, ಕಬಕ, ಕೋಡಿಂಬಾಡಿ, ಪುರುಷರಕಟ್ಟೆ ಸೇರಿದಂತೆ ನಗರದಿಂದ 5ಕಿ ಮೀ ವ್ಯಾಪ್ತಿಯ ಶಾಲಾ ವಿದ್ಯಾರ್ಥಿಗಳು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕರು ಈಗಾಗಲೇ ಸಿಟಿ ಬಸ್ ವ್ಯವಸ್ಥೆ ಬಗ್ಗೆ ಆಲೋಚನೆ ಇದೆ. ಕುಂಬ್ರಕ್ಕೆ ಸಿಟಿ ಬಸ್ ವ್ಯವಸ್ಥೆ ಮಾಡುವ ಮೂಲಕ ಆ ಭಾಗದ ವಿದ್ಯಾರ್ಥಿಗಳ ಸಮಸ್ಯೆಯನ್ನು ಪರಿಹರಿಸಲಾಗಿದೆ. ಸದ್ಯಕ್ಕೆ ಬಸ್ ಕೊರತೆ ಇದೆ ಮುಂದಿನ 15 ದಿನದೊಳಗೆ ವ್ಯವಸ್ಥೆ ಸರಿಪಡಿಸುವುದಾಗಿ ಭರವಸೆ ನೀಡಿದರು. ಈಗಾಗಲೇ ಪುತ್ತೂರು ಡಿಪೋದ 9 ಬಸ್ಸುಗಳು ಗುಜಿರಿಗೆ ಹಾಕಲಾಗಿದೆ. ಹೊಸ ಬಸ್ಸುಗಳ ವ್ಯವಸ್ಥೆ ಮಾಡುವಂತೆ ಸಚಿವರ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು.
ಖಾಲಿ ಇದ್ದರೂ ನಿಲ್ಲಿಸುವುದಿಲ್ಲ ಸರ್
ನಾವು ಸ್ಕೂಲ್‌ಗೆ ಬರಲು ಬೆಳಿಗ್ಗೆಯೇ ಮನೆಯಿಂದ ಹೊರಡುತ್ತೇವೆ ಆದರೆ ಶಾಲೆಗೆ ತಲುಪುವಾಗ ತಡವಾಗುತ್ತದೆ ಇದಕ್ಕೆ ಕಾರಣ ಕೆಎಸ್‌ಆರ್‌ಟಿಸಿ ಬಸ್ ಚಾಲಕರು. ಕೆಲವೊಮ್ಮೆ ಬಸ್ ಖಾಲಿ ಇದ್ದರೂ ನಮ್ಮನ್ನು ಕಂಡರೆ ಸಾಕು ನಿಲ್ಲಿಸದೆ ಹೋಗುತ್ತಾರೆ. ಅವರಿಗೆ ಸಬ್ ನಿಲ್ಲಿಸುವಂತೆ ಹೇಳಿ ಸರ್ ಎಂದು ವಿದ್ಯಾರ್ಥಿಗಳು ಶಾಸಕರಲ್ಲಿ ಮನವಿ ಮಾಡಿದರು. ಯಾಕೆ ಬಸ್ ನಿಲ್ಲಿಸುವುದಿಲ್ಲ? ನಿಲ್ಲಿಸದ ಬಸ್ ಯಾವುದು ಎಂದು ಬಸ್ಸಿನ ನಂಬರ್ ಬರೆದು ಕೊಡಿ ಆ ಬಗ್ಗೆ ನಾನು ವಿಚಾರಿಸುತ್ತೇನೆ. ಎಲ್ಲಾ ಚಾಲಕರಿಗೂ ವಿದ್ಯಾರ್ಥಿಗಳನ್ನು ಕಂಡರೆ ಬಸ್ ನಿಲ್ಲಿಸುವಂತೆ ಸೂಚನೆ ನೀಡುವಂತೆ ಅಧಿಕಾರಿಗೆ ಶಾಸಕರು ಸೂಚನೆ ನೀಡಿದ್ದಾರೆ.