ಉಪ್ಪಿನಂಗಡಿ: ಕಳೆದ ಎರಡು ವರ್ಷದಿಂದ ಬೇಸಿಗೆಯಲ್ಲಿ ಬತ್ತುತ್ತಿರುವ ಬಂದಾರು ಗ್ರಾಮದಲ್ಲಿರುವ ಬಿಸಿ ನೀರ ಹಳ್ಳ ಈ ಬಾರಿ ಮಳೆಗಾಲದಲ್ಲಿ ಮತ್ತೆ ಚೇತರಿಸಿಕೊಂಡಿದ್ದು, ಬಂಡೆಗಳ ನಡುವಿನಿಂದ ಮತ್ತೆ ಬಿಸಿ ನೀರು ಹರಿದು ಬರಲು ಆರಂಭವಾಗಿದೆ. ವಿಶೇಷವೆಂದರೆ ಲಭ್ಯ ಇತಿಹಾಸದ ಪ್ರಕಾರ ಜೂ.25ರಂದು ಬೆಳಗ್ಗೆ ಮೊದಲ ಬಾರಿಯೆಂಬಂತೆ ಈ ನೀರಿನ ತಾಪಮಾನ 40.3 ಡಿಗ್ರಿ ಸೆಲ್ಸಿಯಸ್ ಆಗಿದೆ ಎನ್ನುತ್ತಾರೆ ಈ ಜಾಗದ ಮಾಲಕ ಮುಹಮ್ಮದ್ ಬಂದಾರು.
ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಅಂಕರಮಜಲಿನ ಬಟ್ಲಡ್ಕ ಎಂಬಲ್ಲಿ ಮುಳುಗು ತಜ್ಞರಾದ ಮುಹಮ್ಮದ್ ಬಂದಾರು ಅವರ ಜಾಗದಲ್ಲಿ ಬಿಸಿನೀರಿನ ಚಿಲುಮೆಯೊಂದಿದ್ದು, ಬಿಸಿನೀರು ಬಂದು ಬೀಳುವ ಜಾಗದಲ್ಲಿ ಆಯತಾಕರಾರವಾಗಿ ಕಲ್ಲುಗಳನ್ನು ಜೋಡಿಸಿ ಕೆರೆಯಂತೆ ಮಾಡಲಾಗಿದೆ. ಇದು 10 ರಿಂದ 12 ಅಡಿ ಉದ್ದ, ಏಳು ಅಡಿ ಅಗಲ, ಐದು ಅಡಿ ಆಳವಿದ್ದು, ಇದರ ಮೇಲ್ಗಡೆ ಇರುವ ಕಲ್ಲುಗಳ ಸಂಧಿನಿಂದ ಸುಮಾರು ಅರ್ಧ ಇಂಚಿನಷ್ಟು ಬಿಸಿನೀರು ಬಂದು ಇದಕ್ಕೆ ಬೀಳುತ್ತದೆ. ಇದರ ಕೆಳಗಡೆ ತಗ್ಗು ಪ್ರದೇಶದಲ್ಲಿ ಗದ್ದೆಯಿದ್ದು, ಇದಕ್ಕಿಂತ ಸುಮಾರು 10 ಮೀ. ದೂರದಲ್ಲಿ ನೇತ್ರಾವತಿ ನದಿ ಹರಿಯುತ್ತಿದೆ.
ಈ ಬಿಸಿನೀರ ಚಿಲುಮೆಯ ಬಗ್ಗೆ ಮಾಹಿತಿ ನೀಡುವ ಮುಹಮ್ಮದ್ ಬಂದಾರು ಅವರು, ಈ ಬಿಸಿ ನೀರಿನ ಚಿಲುಮೆ ನನ್ನ ತಾತನ ಕಾಲದಿಂದಲೂ ಹೀಗೆ ಇತ್ತು. ಇದು ಸುಮಾರು 500 ವರ್ಷಕ್ಕಿಂತಲೂ ಹಳೆಯದು ಎಂದು ಹೇಳುತ್ತಾರೆ. ನಾನು ಕಂಡಾಗೆ ವರ್ಷದ 365 ದಿನವೂ ಇದು ಬತ್ತುತ್ತಿರಲಿಲ್ಲ. ನೇತ್ರಾವತಿ ನದಿಯು ಬೇಸಿಗೆಯಲ್ಲಿ ಬತ್ತಿದರೂ, ಇದರಲ್ಲಿ ದಿನದ 24 ಗಂಟೆಯೂ ಬಿಸಿನೀರು ಬಂಡೆಗಳೆಡೆಯಿಂದ ಬಂದು ಇದಕ್ಕೆ ಬೀಳುತ್ತಿತ್ತು. ಆದರೆ ಕಳೆದ ಎರಡು ವರ್ಷದಿಂದ ಇದು ಬೇಸಿಗೆಯಲ್ಲಿ ಬತ್ತುತ್ತಿದೆ. ಈ ನೀರು ಬಂದು ಬೀಳುವ ಕೆರೆಯಂತಹ ಜಾಗದ ಅಡಿಗೆ ಕಾಂಕ್ರೀಟ್ ಹಾಕಿದ್ದು, ಕೆರೆಯ ಬದಿಯ ಬಂಡೆಗಳಿಗೆ ಬಣ್ಣ ಹಚ್ಚಿದ್ದು ಹಾಗೂ ಬಿಸಿ ನೀರು ಬರುವ ಬಳಿ ಪೈಪೊಂದನ್ನು ಸಿಕ್ಕಿಸಿದ್ದು ಬಿಟ್ಟರೆ, ಇದರ ಮೂಲ ಸ್ವರೂಪವನ್ನು ಬದಲಾಯಿಸಿಲ್ಲ. 10 ವರ್ಷಗಳಿಂದ ವಿಜ್ಞಾನಿಗಳ ತಂಡವೊಂದು ಇಲ್ಲಿಗೆ ಆಗಮಿಸಿ, ಅಧ್ಯಯನ ನಡೆಸುತ್ತಿದ್ದಾರೆ. ಮೊದಲು ಚೆನ್ನೈಯಿಂದ ಬರುತ್ತಿದ್ದರು. ಈಗ ಕೇರಳದ ತಿರುವನಂತಾಪುರದಿಂದ ಕೇಂದ್ರ ಸರಕಾರದ ಭೂ ವಿಜ್ಞಾನ ಸಚಿವಾಲಯದ ವಿಜ್ಞಾನಿಗಳ ತಂಡವೊಂದು ಆರು ತಿಂಗಳಿಗೊಮ್ಮೆ ಇಲ್ಲಿಗೆ ಭೇಟಿ ನೀಡಿ ಅಧ್ಯಯನ ನಡೆಸುತ್ತಿದ್ದಾರೆ. ಅವರಿಗೆ ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ನಾನು ಈ ನೀರಿನ ತಾಪಮಾನವನ್ನು ಪರೀಕ್ಷಿಸಿ ವರದಿ ಕಳುಹಿಸಬೇಕಿದೆ. ಅದಕ್ಕೆ ಬೇಕಾದ ಥರ್ಮಾಮೀಟರ್‌ಗಳನ್ನು ನನಗೆ ನೀಡಿದ್ದಾರೆ. ನನಗೆ ಗೊತ್ತಿರುವ ಹಾಗೆ ಈವರೆಗೆ ಈ ನೀರಿನ ತಾಪಮಾನ 36.6 ಡಿಗ್ರಿ ಸೆಲ್ಸಿಯಷ್ಟು ಹೋಗುತ್ತಿತ್ತು. ಆದರೆ ಈ ಇಂದು ಬೆಳಗ್ಗೆ ಮಾತ್ರ 40.3 ಡಿಗ್ರಿ ಸೆಲ್ಸಿಯಸ್ ಇತ್ತು. ನಮ್ಮ ಸುತ್ತಲಿನ ವಾತಾವರಣ ತಂಪಿದ್ದಾಗ ಈ ನೀರಿನ ತಾಪಮಾನ ಬಿಸಿಯಿರುತ್ತದೆ. ಮಳೆಗಾಲದಲ್ಲಿ ಬಂಡೆಗಳೆಡೆಯಿಂದ ಬರುವ ನೀರಿನ ಪ್ರಮಾಣವೂ ಸ್ವಲ್ಪ ಜಾಸ್ತಿಯಿರುತ್ತದೆ. ಇಲ್ಲಿಗೆ ಆಗಮಿಸುವ ವಿಜ್ಞಾನಿಗಳ ತಂಡ ನೀರು ಬಿಸಿಯಾಗಲು ನಿಖರ ಕಾರಣ ಹೇಳದಿದ್ದರೂ, ಭೂಮಿಯ ಒಳಗಡೆ ಈ ನೀರು ಇನ್ನಷ್ಟು ಬಿಸಿ ಇರುತ್ತದೆ. ಅದು ಹೊರಗೆ ಬಂದಂತೆ ಅದರ ತಾಪಮಾನ ಕಡಿಮೆಯಾಗುತ್ತದೆ ಎನ್ನುತ್ತಾರೆ. ಅಲ್ಲದೆ, ಈ ಬಿಸಿನೀರ ಚಿಲುಮೆ ಈಗ ದಕ್ಷಿಣ ಭಾರತದಲ್ಲಿ ಏಕೈಕ ಚಿಲುಮೆಯಾಗಿದೆ ಎಂದು ವಿಜ್ಞಾನಿಗಳ ತಂಡ ತಿಳಿಸಿದೆ ಎನ್ನುತ್ತಾರೆ.
ಭೂಗರ್ಭದಲ್ಲಿರುವ ಕೆಲವು ಖನಿಜಾಂಶಗಳು ಬಿಸಿಯಾಗುವುದರಿಂದ ನೀರು ಬಿಸಿಯಾಗಲು ಕಾರಣ. ಅಧ್ಯಯನ ನಡೆಸದೇ ಈ ಬಗ್ಗೆ ನಿಖರವಾಗಿ ಏನನ್ನು ಹೇಳಲು ಸಾಧ್ಯವಿಲ್ಲ. ಆದರೂ ಹೆಚ್ಚಾಗಿ ಈ ರೀತಿಯ ಬಿಸಿನೀರು ಗಡಸು ನೀರಾಗಿದ್ದು, ಬಾವಿ ನೀರಿಗಿಂತ ಗುಣಮಟ್ಟದಲ್ಲಿ ಬದಲಾವಣೆ ಹೊಂದಿರುತ್ತದೆ. ಭೂಗರ್ಭದಲ್ಲಿರುವ ಶಿಲಾವಲಯದಲ್ಲಿ ಬೇರೊಂದು ಕಲ್ಲಿನ ಸಂಪರ್ಕವಿದ್ದಾಗ ಆಗ ಪರಸ್ಪರ ಘರ್ಷನೆಯಿಂದ ಸುಣ್ಣದ ಕಲ್ಲು (ಲೈಮ್ ಸ್ಟೋನ್) ಸೇರಿದಂತೆ ಭೂಗರ್ಭದಲ್ಲಿರುವ ಕೆಲವೊಂದು ಖನಿಜಾಂಶಗಳು ಕರಗಿ ನೀರು ಬಿಸಿಯಾಗಲು ಕಾರಣವಾಗುತ್ತದೆ. ಖನಿಜಾಂಶದ ಸಾಂದ್ರತೆ ಹೆಚ್ಚಿರುವಲ್ಲಿ ಮಾತ್ರ ನೀರು ಬಿಸಿಯಾಗಲು ಸಾಧ್ಯ. ಕೆಲವು ಕಡೆ ಇಂತಹ ಬಿಸಿನೀರುಗಳು ಚರ್ಮ ವ್ಯಾಧಿಗೆ ಉತ್ತಮ ಔಷಧಿಯೂ ಆಗಿದೆ ಎನ್ನುತ್ತಾರೆ ಹೆಸರು ಹೇಳಲಿಚ್ಚಿಸದ ಚಿತ್ರದುರ್ಗದ ಭೂಗರ್ಭಶಾಸ್ತ್ರಜ್ಞ ಹಾಗೂ ಅಂತರ್ಜಲ ತಜ್ಞರೋರ್ವರು.
ಹೀಗೆ ಹಲವು ನಿಗೂಢತೆಗಳನ್ನು ಬಟ್ಟಿಟ್ಟುಕೊಂಡಿರುವ ಈ ಬಿಸಿ ನೀರಿನ ಚಿಲುಮೆಯ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆಯಬೇಕಾಗಿದ್ದು, ಇದು ಪ್ರವಾಸಿತಾಣವಾಗಿಯೂ ಅಭಿವೃದ್ಧಿಯಾಗಬೇಕಿದೆ.
ಚರ್ಮರೋಗಕ್ಕೆ ಉತ್ತಮ: ಕೃಷಿಗೆ ಗೊಬ್ಬರ !
ಈ ನೀರು ಕುಡಿಯಲು ಯೋಗ್ಯವಲ್ಲ. ಇದು ಗಡಸು ನೀರಾಗಿದ್ದು, ಇದರಲ್ಲಿ ಸ್ನಾನ ಮಾಡಿದಾಗ ಸಾಬೂನಿನಲ್ಲಿ ನೊರೆಯೇ ಬರುವುದಿಲ್ಲ. ಮತ್ತೆ ಕೂದಲೂ ಕೂಡಾ ದಪ್ಪವಾಗುತ್ತದೆ. ಈ ನೀರಿನಲ್ಲಿ ಮೀನುಗಳನ್ನು ಹಾಕಿ ನೋಡಿದ್ದೇನೆ. ಆದರೆ ಅದು ಬದುಕುವುದಿಲ್ಲ. ಇದರಲ್ಲಿ ಒಂದು ರೀತಿಯ ಪಾಚಿ ಬರುತ್ತದೆ. ಈ ನೀರು ಚರ್ಮ ರೋಗಕ್ಕೆ ಉತ್ತಮವಂತೆ. ತುಂಬಾ ಜನ ಚರ್ಮ ರೋಗ ಇದ್ದವರು ಇಲ್ಲಿಗೆ ಬಂದು ಸ್ನಾನ ಮಾಡಿಕೊಂಡು ಹೋಗಿದ್ದಾರೆ. ಇದರಿಂದ ನಮಗಿದ್ದ ಚರ್ಮ ರೋಗ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ. ಚರ್ಮ ವ್ಯಾಧಿ ಇದರಿಂದ ಗುಣವಾಗುತ್ತದೆ ಎಂದಿದ್ದವರು ಇಲ್ಲಿಗೆ ಬಂದು ಸ್ನಾನ ಮಾಡಿಕೊಂಡು ಹೋಗುವುದಕ್ಕೆ ನಮ್ಮದೇನೂ ಆಕ್ಷೇಪವಿಲ್ಲ. ಅವರಿಗೆ ಬೇಕಾದ ಬಕೆಟ್ ಮತ್ತಿತರ ವ್ಯವಸ್ಥೆಗಳನ್ನು ನಾನೇ ಮಾಡಿಕೊಡುತ್ತೇನೆ. ನಾನು ಕಂಡಂತೆ ಈ ನೀರು ಕೃಷಿಗೆ ಉತ್ತಮ ಗೊಬ್ಬರ. ನನ್ನ ತಂದೆಯವರ ಕಾಲದಲ್ಲಿ ಇದರ ಕೆಳಗಡೆ ಇರುವ ಗದ್ದೆಯಲ್ಲಿ ಮೂರು ಬೆಳೆ ಮಾಡುತ್ತಿದ್ದೆವು. ವಿಶೇಷವಾದ ಬಾಸ್ಮತಿ ಅಕ್ಕಿಯ ತಳಿಯನ್ನು ಬೆಳೆಸುತ್ತಿದ್ದರು. ಆಗ ಭತ್ತದ ಗದ್ದೆಗೆ ಈ ನೀರನ್ನು ಹರಿಸುವುದು ಬಿಟ್ಟರೆ, ಬೇರಾವುದೇ ಗೊಬ್ಬರ ಕೊಡುತ್ತಿರಲಿಲ್ಲ. ಗೊಬ್ಬರ ಕೊಡದೆಯೂ ಉತ್ತಮ ಫಸಲು ನಮಗೆ ಸಿಗುತ್ತಿತ್ತು. ಈಗ ಹಡೀಲು ಗದ್ದೆಯಲ್ಲಿ ಒಬ್ಬರು ತರಕಾರಿ ಬೆಳೆಯುತ್ತಿದ್ದಾರೆ. ಅವರು ಕೂಡಾ ಅದಕ್ಕೆ ಯಾವುದೇ ಗೊಬ್ಬರ ನೀಡುತ್ತಿಲ್ಲ. ಈ ನೀರಿನ್ನೇ ಹರಿಸಿ ಉತ್ತಮ ಇಳುವರಿ ಪಡೆಯುತ್ತಿದ್ದಾರೆ ಎನ್ನುತ್ತಾರೆ ಮುಹಮ್ಮದ್ ಬಂದಾರು.
ಜಾಗ ಕೊಡಲ್ಲ: ಅಭಿವೃದ್ಧಿಗೆ ಆಕ್ಷೇಪವಿಲ್ಲ
ಈ ಜಾಗವನ್ನು ಬಿಟ್ಟುಕೊಡಿ. ನಾವು ಇದನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ಸರಕಾರ ಕೇಳಿತ್ತು. ಆದರೆ ಜಾಗವನ್ನು ಮಾತ್ರ ನಾನು ಬಿಟ್ಟು ಕೊಡುವುದಿಲ್ಲ. ಇಲ್ಲಿ ಅಭಿವೃದ್ಧಿ ನಡೆಸುವುದಾದರೆ ನನ್ನದೇನೂ ಆಕ್ಷೇಪವಿಲ್ಲ ಎನ್ನುತ್ತಾರೆ ಜಾಗದ ಮಾಲಕ ಮುಹಮ್ಮದ್ ಬಂದಾರು.