ಉಪ್ಪಿನಂಗಡಿ: ‘ಹಲಸು ಹಬ್ಬ- 24’ರ ಸಮಾರೋಪ ಸಮಾರಂಭ

0

ರೈತನ ಬದುಕು ಸಂತೃಪ್ತವಾದಾಗ ದೇಶದ ಅಭಿವೃದ್ಧಿ: ಸಂಜೀವ ಮಠಂದೂರು


ಉಪ್ಪಿನಂಗಡಿ: ರೈತ ಈ ದೇಶದ ಸಂಪತ್ತಾಗಿದ್ದು, ಸಂತೃಪ್ತ ಜೀವನ ಅವನದ್ದಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಹಲಸಿಗೆ ಮಾರುಕಟ್ಟೆ ಮೌಲ್ಯ ತಂದುಕೊಡಲು ಜೇಸಿಐಯು ಎಲ್ಲರನ್ನೂ ಕ್ರೂಢೀಕರಿಸಿಕೊಂಡು ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಉತ್ತಮ ವಿಚಾರವೆಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.


ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್, ಜೇಸಿಐ ಉಪ್ಪಿನಂಗಡಿ, ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಉಪ್ಪಿನಂಗಡಿಯ ಎಚ್.ಎಂ. ಅಡಿಟೋರಿಯಂನಲ್ಲಿ ಎರಡು ದಿನಗಳ ಕಾಲ ನಡೆದ ‘ಹಲಸು ಹಬ್ಬ- ೨೪’ರ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.


ರೈತ ಬೆಳೆದ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ದೊರೆಯಬೇಕು. ಬದಲಾದ ಈ ಕಾಲಘಟ್ಟದಲ್ಲಿ ಸುಲಭವಾಗಿ ಸಿಗುವಂತದ್ದನ್ನು ತಿನ್ನುವ ಹವ್ಯಾಸ ರೂಢಿಯಾಗಿದೆ. ಆದ್ದರಿಂದ ತಿನ್ನುವ ವಿಚಾರವನ್ನು ಈ ಕಾಲಕ್ಕೆ ಜೋಡಿಸಬೇಕು. ಹಲಸಿನ ನಾನಾ ವಿಧದ ಖಾದ್ಯಗಳನ್ನು ತಯಾರಿಸಿ ಮಾರಾಟ ಮಾಡಬೇಕು. ಆಗ ತಿನ್ನುವವರ ಸಂಖ್ಯೆಯೂ ಜಾಸ್ತಿಯಾಗುತ್ತದೆ. ಹಲಸಿಗೂ ಮೌಲ್ಯವರ್ಧನೆ ಬರುತ್ತದೆ. ಉದ್ಯೋಗವೂ ಸೃಷ್ಟಿಯಾಗುತ್ತದೆ. ಈ ನಿಟ್ಟಿನಲ್ಲಿ ಇಂತಹ ಹಬ್ಬಗಳು ಸಹಕಾರಿಯಾಗುತ್ತವೆ ಎಂದರು.


ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ ಮಾತನಾಡಿ, ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಮೌಲ್ಯ ಬಂದಾಗ ಕೃಷಿಯು ಉದ್ಯಮವಾಗಲು ಸಾಧ್ಯ. ಇಂತಹ ಮೇಳಗಳನ್ನು ಆಯೋಜಿಸುವ ಜೊತೆಗೆ ಮೌಲ್ಯವರ್ಧನೆ ಮಾಡುವ ಬಗ್ಗೆ ವಿಶೇಷ ತರಬೇತಿಯನ್ನೂ ಆಯೋಜಿಸಬೇಕು ಎಂದರಲ್ಲದೆ, ನಮ್ಮಲ್ಲಿ ಈಗ ನೀರಿನ ಅಭಾವ ಇಲ್ಲದಿರಬಹುದು. ಆದರೆ ಮುಂದಕ್ಕೆ ಬರಬಹುದು. ಆದ್ದರಿಂದ ಜೇಸಿಐಯಂತಹ ಸಂಸ್ಥೆಗಳು ಮಳೆ ಕೊಯ್ಲಿನ ಬಗ್ಗೆ ಆಂದೋಲನ ಮಾಡಬೇಕಾಗಿದೆ. ಹರಿದು ಹೋಗುವ ನೀರನ್ನು ಕಾಪಾಡುವ ಬಗ್ಗೆ ಜಾಗೃತಿಯನ್ನು ಮೂಡಿಸುವ ಮೂಲಕ ಪ್ರತಿಯೋರ್ವರ ಬಾಳಿಗೆ ಬೆಳಕಾಗಬೇಕಿದೆ ಎಂದರು.


ತಾ.ಪಂ. ಮಾಜಿ ಸದಸ್ಯ ಎನ್. ಉಮೇಶ್ ಶೆಣೈ ಮಾತನಾಡಿ, ಈ ಹಲಸಿನ ಹಬ್ಬವೆನ್ನುವುದು ಮಳೆಗಾಲದ ಜಾತ್ರೆ. ಜಾತಿ-ಮತ ಭೇದವಿಲ್ಲದೆ ಪ್ರತಿಯೋರ್ವರಿಗೂ ಇದರಲ್ಲಿ ಪಾಲ್ಗೊಳ್ಳುವ ಅವಕಾಶವಿದೆ. ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಲಿ ಎಂದು ಶುಭ ಹಾರೈಸಿದರು.
ತಾ.ಪಂ. ಮಾಜಿ ಸದಸ್ಯ ಮುಕುಂದ ಗೌಡ ಬಜತ್ತೂರು ಮಾತನಾಡಿ, ಒಂದು ಕಾಲದಲ್ಲಿ ಹಲಸಿನಲ್ಲೇ ನಮ್ಮ ಹಿರಿಯರ ಜೀವನ ಹೋಗುತ್ತಿತ್ತು. ಆದರೆ ಈಗ ಅದೇ ಹಲಸಿಗೆ ಕೊಳೆತು ಬಿಸಾಡುವ ಸ್ಥಿತಿ ಬಂದಿದೆ. ಆದರೆ ಈಗ ಇಂತಹ ಕಾರ್ಯಕ್ರಮಗಳಿಂದ ಹಲಸಿಗೆ ಮತ್ತೆ ಮೌಲ್ಯವರ್ಧನೆ ಸಿಗುವಂತಾಗಿದೆ ಎಂದರು.


ಜೇಸಿಐ ವಲಯ ೧೫ರ ಜೆಎಸಿ ವಲಯ ನಿರ್ದೇಶಕ ಲೊಕೇಶ್ ರೈ ಮಾತನಾಡಿ, ಹಲಸಿನ ಮರದಿಂದ ಹಿಡಿದು ಅದರ ಹಣ್ಣು, ಬೀಜದವರೆಗೆ ಎಲ್ಲವೂ ಉಪಯೋಗಕ್ಕೆ ಬರುವಂತವುಗಳೇ. ಆದರೆ ಹಲಸಿನ ಉಪಯೋಗವನ್ನು ನಾವು ಅರಿತುಕೊಳ್ಳುವಲ್ಲಿ ಎಡವಿದ್ದೇವೆ. ಪರ್ಯಾಯ ಬೆಳೆಯಾಗಿ ಕೂಡಾ ಹಲಸನ್ನು ಬೆಳೆಸಬಹುದು ಎಂದರು.
ದಂತ ವಿನ್ಯಾಸ ವೈದ್ಯ ಡಾ. ಆಶಿತ್ ಎಂ.ವಿ. ಮಾತನಾಡಿ, ಕೃಷಿಕರಿಗೆ ಹಾಗೂ ಅದರ ಉತ್ಪನ್ನ ತಯಾರಿಕರಿಗೆ ಮತ್ತು ಗ್ರಾಹಕರಿಗೆ ಇದೊಂದು ಗ್ರಾಮೀಣ ಮಟ್ಟದ ಉತ್ತಮ ವೇದಿಕೆಯಾಗಿದೆ. ಇನ್ನಷ್ಟು ಇಂತಹ ಕಾರ್ಯಕ್ರಮಗಳು ಮೂಡಿಬರಲಿ ಎಂದರು.


ಜೇಸಿಐ ವಲಯ 15ರ ಉಪಾಧ್ಯಕ್ಷ ಶಂಕರ ರಾವ್ ಮಾತನಾಡಿ, ಜೇಸಿಐ ಸಂಸ್ಥೆಯಿಂದ ವ್ಯಕ್ತಿತ್ವ ವಿಕಸನ ಸಾಧ್ಯವಾಗಿದ್ದು, ರಾಜ್ಯ ರಾಷ್ಟ್ರ ಮಟ್ಟದ ನಾಯಕರನ್ನು ಸೃಷ್ಟಿ ಮಾಡುತ್ತದೆ. ಈ ಬಾರಿ ಎರಡು ದಿನಗಳ ಕಾಲ ನಡೆದ ಈ ಹಲಸಿನ ಹಬ್ಬವು ಮುಂದಿನ ಬಾರಿ ಇನ್ನಷ್ಟು ದಿನ ಆಯೋಜನೆಯಾಗಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಜೇಸಿಐ ಉಪ್ಪಿನಂಗಡಿ ಅಧ್ಯಕ್ಷೆ ಲವೀನಾ ಪಿಂಟೋ ಮಾತನಾಡಿ, ಈ ಕಾರ್ಯಕ್ರಮವು ಯಶಸ್ವಿಯಾಗಿದ್ದು, ನಮ್ಮೆಲ್ಲರ ಬಾಂಧವ್ಯ ಬಲಗೊಂಡಿದೆ. ಹೃದಯಕ್ಕೆ ಸಂತೋಷವಾಗಿದೆ ಎಂದರು.


ವೇದಿಕೆಯಲ್ಲಿ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ, ಪೋಟೋಗ್ರಾಫರ್ ಅಸೋಸಿಯೇಶನ್ಸ್ ಪುತ್ತೂರು ವಲಯದ ಅಧ್ಯಕ್ಷ ರಘು ಶೆಟ್ಟಿ, ಜೇಸಿಐ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಎ.ವಿ. ಕುಲಾಲ್, ಜೇಸಿಐ ಉಪ್ಪಿನಂಗಡಿ ಕಾರ್ಯದರ್ಶಿ ಸುರೇಶ್ ಉಪಸ್ಥಿತರಿದ್ದರು.
ಜೇಸಿಐ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪ್ರಶಾಂತ್ ಕುಮಾರ್ ರೈ ಸ್ವಾಗತಿಸಿದರು. ನಿಕಟಪೂರ್ವಾಧ್ಯಕ್ಷ ಶೇಖರ ಗೌಂಡತ್ತಿಗೆ ವಂದಿಸಿದರು. ಪೂರ್ವಾಧ್ಯಕ್ಷ ಮೋಹನಚಂದ್ರ ತೋಟದಮನೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here