ಉಪ್ಪಿನಂಗಡಿ: ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಹಾಗೂ ನೇತ್ರಾವತಿ- ಕುಮಾರಧಾರ ನದಿಗಳ ಉಗಮ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಶಾಂತವಾಗಿಯೇ ಹರಿಯುತ್ತಿದ್ದ ನದಿಗಳ ನೀರಿನ ಮಟ್ಟ ಜು.19ರ ಮಧ್ಯಾಹ್ನದಿಂದ ಏರಿಕೆಯಾಗತೊಡಗಿದ್ದು, ಪ್ರವಾಹದ ಭೀತಿ ತಂದೊಡ್ಡಿವೆ. ಹಲವು ಕಡೆ ನದಿ ಪಾತ್ರದ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ನದಿ ಪಾತ್ರದ ಜನತೆಯ ಮನದಲ್ಲಿ ಆತಂಕದ ಛಾಯೆ ಮೂಡಿದ್ದರೆ, ನದಿ ನೋಡಲೆಂದು ತಂಡೋಪತಂಡವಾಗಿ ಆಗಮಿಸುವ ಪ್ರವಾಹ ಪೀಡಿತವಲ್ಲದ ಪ್ರದೇಶದ ಜನರಲ್ಲಿ ಸೆಲ್ಫಿಯ ಸಂಭ್ರಮ ಮನೆಮಾಡಿದೆ.
ಮಧ್ಯಾಹ್ನ ಏರಿಕೆಯಾದ ನದಿ ನೀರು:
ಇಲ್ಲಿನ ನದಿಗಳ ಅಪಾಯದ ಮಟ್ಟ 31.05 ಆಗಿದ್ದು, ಜು. 18 ರಂದು ರಾತ್ರಿ ಏಳೂವರೆಯ ಸುಮಾರಿಗೆ ನೇತ್ರಾವತಿ ನದಿ ನೀರಿನ ಮಟ್ಟ 28.05 ಆಗಿತ್ತು. ಈ ಸಂದರ್ಭ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿಯ ಸ್ನಾನಘಟ್ಟದಲ್ಲಿ ನದಿಗಿಳಿಯಲು ಇರುವ 36 ಮೆಟ್ಟಿಲುಗಳಲ್ಲಿ ಏಳು ಮೆಟ್ಟಿಲುಗಳಷ್ಟೇ ಕಾಣುತ್ತಿತ್ತು. ಜು.19ರ ನಸುಕಿನ ಜಾವ ಎರಡು ಗಂಟೆಯ ಸುಮಾರಿಗೆ 4 ಮೆಟ್ಟಿಲು ಕಾಣುತ್ತಿದ್ದರೆ, ಮುಂಜಾನೆ 4 ಗಂಟೆಯಷ್ಟು ಹೊತ್ತಿಗೆ ಮತ್ತೆ ನೀರಿನ ಮಟ್ಟ ಸ್ವಲ್ಪ ಇಳಿಕೆಗೊಂಡಿದ್ದು, 5 ಮೆಟ್ಟಿಲುಗಳು ಕಾಣತೊಡಗಿದವು. ಬೆಳಗ್ಗೆ 7ರ ಸುಮಾರಿಗೆ ಏಳು ಮೆಟ್ಟಿಲುಗಳು ಕಾಣುವಷ್ಟು ನದಿ ನೀರು ಇಳಿದಿತ್ತು. ಆದರೆ ಮಧ್ಯಾಹ್ನ 11 ಬಳಿಕ ಒಮ್ಮೆಲೇ ನದಿ ನೀರಿನ ಮಟ್ಟ ಏರಿಕೆ ಕಂಡಿದ್ದು, 36 ಮೆಟ್ಟಿಲುಗಳಲ್ಲಿ 2 ಮೆಟ್ಟಿಲುಗಳಷ್ಟೇ ಕಾಣತೊಡಗಿದವು. ಆಗ ನೀರಿನ ಮಟ್ಟ 29.09 ಮೀ. ಇತ್ತು. ರಾತ್ರಿ ಏಳು ಗಂಟೆಯ ಸುಮಾರಿಗೆ ಒಂದು ಮೆಟ್ಟಿಲು ನೀರು ಇಳಿಕೆಯಾಗಿದ್ದು, ಈಗ ಮೂರು ಮೆಟ್ಟಿಲುಗಳು ಕಾಣತೊಡಗಿವೆ. ನೀರಿನ ಮಟ್ಟ 29.08 ದಾಖಲಾಗಿದೆ.
ತಗ್ಗು ಪ್ರದೇಶಗಳು ಜಲಾವೃತ:
ನದಿಯಲ್ಲಿ ಪ್ರವಾಹದ ಮುನ್ಸೂಚನೆ ಇರುವಾಗ ಮೊದಲಾಗಿ ಮುಳುಗುವ ಮಠದ ಹಳೆಗೇಟು ಬಳಿಯ ನೇತ್ರಾವತಿ ನದಿ ಪಾತ್ರದ ನಿವಾಸಿ ಐತ ಮುಗೇರ ಅವರ ಮನೆಯ ಬಳಿ ಅವರ ನದಿ ನೀರು ಆಗಮಿಸಿದ್ದು, ನದಿಯಲ್ಲಿ ನೀರು ಹೆಚ್ಚಾಗುವ ಹೊತ್ತಿನಲ್ಲಿ ಇಲ್ಲಿಂದ ಸ್ಥಳಾಂತರಕ್ಕೆ ಕಂದಾಯಾಧಿಕಾರಿಗಳು ಸೂಚಿಸಿದ್ದರಿಂದ ಅವರ ಕುಟುಂಬವು ವರ್ಷಂಪ್ರತಿಯಂತೆ ಈ ಬಾರಿಯೂ ಅವರ ಸಂಬಂಧಿಗಳ ಮನೆಯಲ್ಲಿ ಆಶ್ರಯ ಪಡೆದುಕೊಂಡಿದೆ. ಪ್ರವಾಹದ ಸಂದರ್ಭ ಮೊದಲಾಗಿ ರಾಷ್ಟ್ರೀಯ ಹೆದ್ದಾರಿಗೆ ನೀರು ನುಗ್ಗುವ ತಗ್ಗು ಪ್ರದೇಶವಾದ ಪಂಜಳ ಎಂಬಲ್ಲಿ ಹೆದ್ದಾರಿ ಬದಿಯ ಸ್ವಲ್ಪ ಕೆಳಗೆ ನದಿ ನೀರು ಹರಿಯುತ್ತಿದೆ. ಕುಮಾರಧಾರ ನದಿಯ ನೀರಿನಿಂದಾಗಿ ನಟ್ಟಿಬೈಲ್ನ ಪ್ರದೇಶದಲ್ಲಿ ಕಳೆದ ನಾಲ್ಕು ದಿನಗಳಿಂದ ಜಲಾವೃತವಾಗಿರುವ ಕೃಷಿ ತೋಟಗಳು ಹಾಗೆಯೇ ಇವೆ. ಇಲ್ಲಿ ಪ್ರವಾಹ ಭೀತಿ ಇರುವ ಶ್ರೀ ದೇವಾಲಯದ ವಠಾರ, ರಥಬೀದಿ, ಪಂಜಳ, ಹಿರ್ತಡ್ಕ- ಮಠ, ಹಳೆಗೇಟು, ಕಡವಿನ ಬಾಗಿಲು, ಸೂರಪ್ಪ ಕೌಂಪೌಂಡ್, ಕೆಂಪಿಮಜಲು ಹೀಗೆ ನದಿ ಪಾತ್ರದ ಪರಿಸರ, ನದಿಯನ್ನು ಸಂಪರ್ಕಿಸುವ ತೋಡುಗಳುಳ್ಳ ಪ್ರದೇಶಗಳ ಜನತೆಯಲ್ಲಿ ಆತಂಕ ಮನೆ ಮಾಡಿದೆ. ಉಪ್ಪಿನಂಗಡಿಯ ಸಂಗಮ ಕ್ಷೇತ್ರದ ಬಳಿ ನದಿಗಳ ವೀಕ್ಷಣೆಗೆ ತಂಡೋಪತಂಡವಾಗಿ ಜನರು ಆಗಮಿಸುತ್ತಿದ್ದು, ನದಿಯ ಪೋಟೋ, ಸೆಲ್ಫಿ, ವಿಡಿಯೋ ತೆಗೆಯುವ ಸಂಭ್ರಮದಲ್ಲಿ ತಲ್ಲೀನರಾಗುತ್ತಿದ್ದಾರೆ.
ಕಾಳಜಿ ಕೇಂದ್ರದ ವ್ಯವಸ್ಥೆ:
ಸರಕಾರಿ ಪದವಿ ಪೂರ್ವ ಕಾಲೇಜು, ಪುಳಿತ್ತಡಿ ಮಠದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದ್ದು, ಉಪ್ಪಿನಂಗಡಿ ಕಂದಾಯ ಹೋಬಳಿಯ ಉಪತಹಶೀಲ್ದಾರ್ ಚೆನ್ನಪ್ಪ ಗೌಡ, ಕಂದಾಯ ನಿರೀಕ್ಷಕ ಚಂದ್ರ ನಾಯ್ಕ ನೇತೃತ್ವದಲ್ಲಿ ನಾಡ ಕಚೇರಿಯಲ್ಲಿ ದಿನದ 24 ಗಂಟೆ ಕಂಟ್ರೋಲ್ ರೂಂ ಕಾರ್ಯಾಚರಿಸುತ್ತಿದೆ. ಜು.೧೯ರಂದು ರಾತ್ರಿ ಪಾಳಿಯಲ್ಲಿ ಗ್ರಾಮಕರಣಿಕರಾದ ಜಯಚಂದ್ರ, ನರಿಯಪ್ಪ, ಗ್ರಾಮ ಸಹಾಯಕರಾದ ಯತೀಶ್, ಪುರುಷೋತ್ತಮ ಇಲ್ಲಿ ಬೀಡು ಬಿಟ್ಟಿದ್ದಾರೆ.
ಜಿಲ್ಲಾಧಿಕಾರಿ ಸಹಿತ ಅಧಿಕಾರಿಗಳ ತಂಡ ದೌಡು
ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗುತ್ತಿದ್ದಂತೆಯೇ ದ.ಕ. ಜಿಲ್ಲಾಧಿಕಾರಿ ಮುಲೈಮುಗಿಲನ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಆನಂದ, ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಪುತ್ತೂರು ಸಹಾಯಕ ಆಯುಕ್ತರಾದ ಜುಬಿನ್ ಮಹೋಪಾತ್ರ, ಪುತ್ತೂರು ತಹಶೀಲ್ದಾರ್ ಪುರಂದರ ಹೆಗ್ಡೆ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಎನ್ಡಿಆರ್ಎಫ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಧಿಕಾರಿಗಳಿಂದ ಹಾಗೂ ಗೃಹ ರಕ್ಷಕದಳ ಸಿಬ್ಬಂದಿಯನ್ನೊಳಗೊಂಡ ಪ್ರವಾಹ ರಕ್ಷಣಾ ತಂಡದಿಂದ ಅಗತ್ಯ ಮಾಹಿತಿ ಪಡೆದು, ಸಲಹೆ- ಸೂಚನೆ ನೀಡಿದ್ದಾರೆ.
ಈ ಸಂದರ್ಭ ಪರಿಸರದ ನೆರೆ ಪೀಡಿತ ಪ್ರದೇಶ ಮತ್ತಲ್ಲಿನ ನಿವಾಸಿಗರ ಬಗೆಗೆ ವಿಸ್ತೃತ ಮಾಹಿತಿಯೊಂದಿಗೆ ಪ್ರಶ್ನೆಗೆ ಉತ್ತರಿಸಿದ ಸ್ಥಳೀಯ ಕಂದಾಯ ಇಲಾಖಾಧಿಕಾರಿಗಳ ಕಾರ್ಯಶೈಲಿಯನ್ನು ಶ್ಲಾಘಿಸಿದ ಜಿಲ್ಲಾಧಿಕಾರಿಯವರು ಈ ಎಲ್ಲಾ ಮಾಹಿತಿಯನ್ನು ಜಿಲ್ಲಾಡಳಿತದ ವಿದ್ಯುನ್ಮಾನ ವ್ಯವಸ್ಥೆಗೆ ಅಪಲೋಡ್ ಮಾಡಬೇಕೆಂದು ಪಿಡಿಒ ರವರಿಗೆ ನಿರ್ದೆಶನ ನೀಡಿದರು. ಸತತ ಸೂಚನೆಯ ಹೊರತಾಗಿಯೂ ಅಪಾಯಕಾರಿ ಮರಗಳ ತೆರವಿಗೆ ಅರಣ್ಯ ಇಲಾಖೆ ಸ್ಪಂದಿಸುತ್ತಿಲ್ಲ ಎಂಬ ಸ್ಥಳೀಯರ ದೂರಿಗೆ ಸ್ಪಂದಿಸಿದ ಅವರು, ಅರಣ್ಯ ಇಲಾಖಾಧಿಕಾರಿಗಳಿಗೆ ನಾಳೆಯೊಳಗಾಗಿ ತೆರವಿನ ದಾಖಲೆಯೊಂದಿಗೆ ವರದಿ ಮಾಡಲು ನಿರ್ದೇಶನ ನೀಡಿದರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ದ.ಕ. ಜಿಲ್ಲಾಧಿಕಾರಿ ಮುಲೈಮುಗಿಲನ್ ಅವರು, ಇವತ್ತು ನದಿಗಳ ನೀರಿನ ಮಟ್ಟ 30 ಮೀಟರ್ನ ಹತ್ತಿರಕ್ಕೆ ಬಂದಿತ್ತು. ಆದ್ದರಿಂದ ಮುಂಜಾಗೃತ ಕ್ರಮವಾಗಿ ನಮ್ಮ ತಂಡವನ್ನು ಕ್ರಿಯಾಶೀಲಗೊಳಿಸಲು ನಾವು ಭೇಟಿ ನೀಡಿದ್ದೇವೆ. ಸಂಗಮ ಕ್ಷೇತ್ರದ ಬಳಿಯೇ ಪ್ರವಾಹ ರಕ್ಷಣಾ ತಂಡದ ಸ್ಟೇಶನ್ ಇದ್ದು, ಇದರೊಂದಿಗೆ ಕಂದಾಯ ಇಲಾಖೆ, ಗ್ರಾ.ಪಂ. ಹಾಗೂ ಪೊಲೀಸ್ ಇಲಾಖೆ ಮತ್ತು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ತಂಡಕ್ಕೆ ಪ್ರವಾಹ ಬಂದ ಸಂದರ್ಭದಲ್ಲಿ ಜನರ ಸ್ಥಳಾಂತರಕ್ಕೆ ವ್ಯವಸ್ಥೆ ಮಾಡಲು ಸೂಚಿಸಿದ್ದೇನೆ. ಮುಂಜಾಗೃತ ಕ್ರಮವಾಗಿ ಇಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಪ್ರವಾಹ ಜಾಸ್ತಿಯಾದರೆ ಜನರೂ ಸ್ಥಳಾಂತರಕ್ಕೆ ನೆರವು ನೀಡಬೇಕು ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಉಪ್ಪಿನಂಗಡಿ ನದಿಗಳ ಸಂಗಮ ಪ್ರದೇಶವಾದ್ದರಿಂದ ಪ್ರತಿವರ್ಷ ತಗ್ಗು ಪ್ರದೇಶದ ಕೃಷಿ ಭೂಮಿಗಳು ಇಲ್ಲಿ ಮುಳುಗಡೆಯಾಗುತ್ತವೆ. ಅದಕ್ಕೆ ಕ್ರಮೇಣ ಪರಿಹಾರದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈಗ ಮುಖ್ಯವಾಗಿ ಜನರ ಸುರಕ್ಷತೆಗೆ ನಾವು ಮೊದಲ ಆದ್ಯತೆ ನೀಡಿದ್ದೇವೆ ಎಂದರು.